ಅತ್ತೆ ಸೊಸೆಯನ್ನು ಕಾಡಿದರೆ ವರದಕ್ಷಿಣೆ ಕಿರುಕುಳ ತಡೆಗಟ್ಟುವಿಕೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು, ಮಗಳು ತಾಯಿಯನ್ನು ಹಿಂಸಿಸಿದರೆ ಪೋಷಕರ ಮತ್ತು ಹಿರಿಯ ನಾಗರೀಕರ ಹಕ್ಕುಗಳ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪರಿಹಾರ ಪಡೆಯಬಹುದು, ಆದರೆ ಒಂದು ಕ್ಷಣ ಇವರುಗಳ ಪಾತ್ರವನ್ನು ಬದಲಾಯಿಸಿ ಪರಿಸ್ಥಿತಿಯನ್ನು ಊಹಿಸಿ ಕೊಳ್ಳೋಣ ಅಂತಹ ಹಿಂಸೆಗೆ ಏನಿದೆ ಪರಿಹಾರ?! ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರಾದ ಅಂಜಲಿ ರಾಮಣ್ಣ ಅವರ ಈ ಲೇಖನವನ್ನು ಪೂರ್ತಿ ಓದಿ…
ಒಂದು ದಿನ ಕುಸುಮ ಹೇಳದೆಯೆ ಆಫೀಸಿಗೆ ಬಂದು ಕಾಯುತ್ತಿದ್ದಳು. ಒಳಗೆ ಕರೆದೊಡನೆಯೇ ಅಳಲು ಶುರು ಮಾಡಿದವಳು. ಅರ್ಧ ಗಂಟೆಯಾದರೂ ಅಳುವನ್ನೂ ನಿಲ್ಲಿಸಲೊಲ್ಲಳು, ವಿಷಯವನ್ನೂ ಹೇಳಳು. 27 ವರ್ಷಗಳ ಮದುವೆ, ಪದವಿ ಓದುತ್ತಿದ್ದ ಇಬ್ಬರು ವಯಸ್ಕ ಹೆಣ್ಣು ಮಕ್ಕಳು, ತಾಯಿಯ ಮಾತನ್ನು ಮೀರದ, ಯಾವ ಕೆಲಸದಲ್ಲೂ ನಿಲ್ಲದ, ಸಂಪಾದನೆಯಿಲ್ಲದ ಗಂಡ, ಬಾಯಾಳಿ ಅತ್ತೆ, ಆ ಕೆಲಸ ಈ ಕೆಲಸ ಮಾಡುತ್ತಲೇ ಸಂಸಾರ ತೂಗಿಸುತ್ತಿದ್ದ ಮೃದು ಮಾತಿನ, ಯಾರಿಗೂ ಎದುರಾಡದ ಬಿಎ ಓದಿರುವ ಇವಳು. ನಾಲ್ಕು ವರ್ಷಗಳಿಂದ ಸರ್ಕಾರೀ ಯೋಜನೆಯಲ್ಲಿ ಸಾಲ ಪಡೆದು ತರಕಾರಿ ವ್ಯಾಪಾರ ಚೆನ್ನಾಗಿ ನಿಭಾಯಿಸುತ್ತಿದ್ದಾಳೆ.
‘ಮೇಡಂ ನೆನ್ನೆ ನಾನು ನನ್ನತ್ತೆಗೆ ಹೊಡೆದುಬಿಟ್ಟೆ’ ಎಂದವಳು, ಮತ್ತೆ ಅಳಲು ಶುರು ಮಾಡಿದಳು. ತನ್ನ ಅಸಭ್ಯ ಮಾತುಗಳಿಂದ ಆಗಾಗ್ಗೆ ತನ್ನ ಅಸಭ್ಯ ಮಾತುಗಳಿಂದಲೋ, ಕೆಲವೊಮ್ಮೆ ಕೈಯಿಂದಲೋ ಒಟ್ಟಿನಲ್ಲಿ ಯಾವಾಗಲೂ ದೌರ್ಜನ್ಯವನ್ನು ಹೊತ್ತು ತಂದು ಇವಳ ಮೇಲೆ ಸುರಿಯುತ್ತಿದ್ದ ಅತ್ತೆಯ ಮೇಲೆ ಒಂದು ದಿನವೂ ರೇಗದ, ಮಕ್ಕಳನ್ನೂ ಅಷ್ಟೇ ಸಭ್ಯರನ್ನಾಗಿ ಬೆಳೆಸಿದ್ದ ಕುಸುಮಳಿಗೆ ತನ್ನದೇ ಅನಿರೀಕ್ಷಿತ ನಡುವಳಿಕೆ ಆಘಾತವನುಂಟು ಮಾಡಿತ್ತು. ಚಿಕ್ಕಂದಿನಿಂದ ಮಕ್ಕಳನ್ನು ಸದಾಕಾಲವೂ ಮೂದಲಿಸುತ್ತಿದ್ದ, ಅವರ ಎಲ್ಲಾ ಸ್ವಾತಂತ್ರ್ಯಕ್ಕೂ ಅಡ್ಡಿ ಬರುತ್ತಿದ್ದ, ಅಜ್ಜಿ ನೆನ್ನೆ ಮೊದಲ ಬಾರಿಗೆ ಬಡಿಗೆ ತೆಗೆದುಕೊಂಡು ಆ ಯುವತಿಯರಿಗೆ ಬಾರಿಸಿದ್ದಳು. ಕುಸುಮಳ ಸಹನೆ ಮುಗಿದಿತ್ತು. ಮಕ್ಕಳ ಮೇಲಿನ ಮಮಕಾರದಲ್ಲಿ ಅತ್ತೆಗೆ ಕಪಾಲಕ್ಕೆ ಹೊಡೆದು ಬಿಟ್ಟಿದ್ದಳು. ಇದು ಕೌಟುಂಬಿಕ ದೌರ್ಜನ್ಯದ ಮಾದರಿಗೆ ಒಂದು ಉದಾಹರಣೆಯೇ ಹೌದು.

ಕೌಟುಂಬಿಕ ದೌರ್ಜನ್ಯ ಎಂದರೆ ಕುಟುಂಬದ ಗಂಡಸರಿಂದ ಹೆಂಗಸರ ಮೇಲೆ ಮಾತ್ರ ಆಗುವಂಥದ್ದು ಎನ್ನುವ ನಂಬಿಕೆ ಬಹುಪಾಲು ಜನರದ್ದು. ಆದರೆ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ಸಂರಕ್ಷಿಸುವ ಕಾಯಿದೆ, 2005ರ ಅಡಿಯಲ್ಲಿ ಒಂದೇ ಕುಟುಂಬದ ಒಟ್ಟಿಗೆ ವಾಸಿಸುತ್ತಿರುವ ಅಥವಾ ವಾಸಿಸಲಾಗಿದ್ದ ಯಾವುದೇ ಮಹಿಳೆಯಿಂದ ಮತ್ತೊಬ್ಬ ಮಹಿಳೆಯ ಮೇಲೆ ಆಗುವ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆರ್ಥಿಕ ದೌರ್ಜನ್ಯವನ್ನೂ ಸಹ ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದ್ದು, ಮಹಿಳೆಯೂ ಸಹ ಅಪರಾಧಿ ಆಗಬಲ್ಲಳು. ಅಜ್ಜಿ, ಸೊಸೆ, ಅತ್ತೆ, ಮಗಳು, ಮೊಮ್ಮಗಳು, ಅಕ್ಕ, ತಂಗಿ, ವಾರೆಗಿತ್ತಿ, ಅತ್ತಿಗೆ, ನಾದಿನಿ ಹೀಗೆ ಯಾರೂ ಸಹ ಕುಟುಂಬದ ಮತ್ತೊಂದು ಮಹಿಳೆಯಿಂದ ತಮ್ಮ ಮೇಲೆ ಆಗುವ ದೌರ್ಜನ್ಯದಿಂದ ಈ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು.
2024ರಲ್ಲಿ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವಂತೆ ಇದು ಎಲ್ಲಾ ಧರ್ಮದ ಮತ್ತು ವರ್ಗದ ಮಹಿಳೆಯರಿಗೂ ಅನ್ವಯವಾಗಲಿದ್ದು ಎಫ್ಐಆರ್ ದಾಖಲಿಸಬಹುದಾಗಿರುತ್ತದೆ. 2023 ರಲ್ಲಿ ಕವಿತಾ ಎಂ Vs. ರಘು ಎನ್ನುವ ಪ್ರಕರಣದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯವು ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಿಕೆ ಕಾನೂನಿನ ಅಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದಾಖಲಾದ ದಿನದಿಂದ 60 ದಿನಗಳ ಒಳಗೆ ಇತ್ಯರ್ಥ ಪಡಿಸಬೇಕು ಎನ್ನುವ ನಿರ್ದೇಶನ ನೀಡಿದೆ. ನೊಂದ ಮಹಿಳೆಯೂ ಪೊಲೀಸ್ ಠಾಣೆಯಲ್ಲಿ ಅಥವಾ ನೇರವಾಗಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಬಹುದಾಗಿರುತ್ತದೆ. ವಕೀಲರ ಮೂಲಕವೂ ಸಹಾಯ ಪಡೆಯಬಹುದು. ಸರ್ಕಾರದಿಂದ ನಿಯೋಜಿತಗೊಂಡ ರಕ್ಷಣಾ ಅಧಿಕಾರಿಗಳು ಕೂಡಲೇ ದೌರ್ಜನ್ಯವು ಮುಂದುವರೆಯದಂತೆ ನೋಡಿಕೊಳ್ಳುವ, ಮಹಿಳೆಗೆ ಬೇಕಾದ ಸಹಾಯ ಒದಗಿಸಿಕೊಡಬೇಕಾದ ಜವಾಬ್ದಾರಿ ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಯನ್ನು ಪ್ರತೀ ಪೊಲೀಸ್ ಠಾಣೆಯಿಂದ, ಮಹಿಳೆ ಮತ್ತು ಮಕ್ಕಳ ಇಲಾಖೆಯಿಂದ, ವಿಶ್ವವಿದ್ಯಾಲಯಗಳಿಂದ, ಕಾನೂನು ಕಾಲೇಜುಗಳಲ್ಲಿ ಇರುವ ಲೀಗಲ್ ಕ್ಲಿನಿಕ್ಗಳಿಂದ, ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದಾಗಿರುತ್ತದೆ.
- ಅಂಜಲಿ ರಾಮಣ್ಣ – ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು
