‘ಕೃಷ್ಣ ಬಂದ’ ಕವನ – ಶಿವದೇವಿ ಅವನೀಶಚಂದ್ರ

ಮುದ್ದು ಕೃಷ್ಣ ಏನು ತುಂಟ ಗೋಕುಲದ ಮನೆಮನೆಯ ಬಂಟ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಓದಿ…

ಕೃಷ್ಣಬಂದ ಕೃಷ್ಣ ಬಂದ
ಬೆಣ್ಣೆ ತಿನ್ನಲು
ಕೃಷ್ಣ ಬಂದ ಕೃಷ್ಣ ಬಂದ
ಹಾಲ ಗಡಿಗೆ ಒಡೆಯಲು

ಮುದ್ದು ಕೃಷ್ಣ ಏನು ತುಂಟ
ಗೋಕುಲದ ಮನೆಮನೆಯ ಬಂಟ
ಗೊಲ್ಲ ಹುಡುಗರ ನಂಟ
ಇವನ ಕೀಟಲೆಗೆ ಪಾರವುಂಟ

ಸುರುಳಿ ಕೂದಲಿಗೆ ನವಿಲುಗರಿ
ಕೆನ್ನೆ ತುಂಬ ಬೆಣ್ಣೆ ಮೆತ್ತಿದ ಪರಿ
ಮೊಗದ ತುಂಬ ನಗೆಯ ಸಿರಿ
ಕೊಳಲ ತುಟಿಯ ನಾದ ಸಿರಿ

ಸಾಟಿ ಯಾರು ಇವನ ಬಲಕೆ
ಅರಿಗಳೆಲ್ಲ ಇವನ ಕಾಲ ಕೆಳಕೆ
ಕಾಳಿಂಗನೂ ಗತಪ್ರಾಣ ಪದಕೆ
ಕಂಸನೇ ಬಲಿ ಇವನ ಆಕ್ರೋಶಕೆ

ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಗೋವರ್ಧನ ಗಿರಿ ಎತ್ತಿ ಆಶ್ರಯ ನೀಡಿದ
ಕುಚೇಲನ ಕಷ್ಟಕೆ ಸಿರಿವರವ ನೀಡಿದ
ನರಪೀಡಕರಿಗೆ ನರಕದರ್ಶನ ಮಾಡಿಸಿದ

ಯಮುನಾ ತೀರ ವಿಹಾರಿ
ಇವ ರಾಧೆಯ ಮನೋಹಾರಿ
ನಂಬಿದವರಿಗೆ ಆಶ್ರಯಕಾರಿ
ಪಾಂಡವ ಪಕ್ಷದ ಸಿರಿ ಮುರಾರಿ

ಮನದ ತಮಕೆ ಭಾನು ಸದೃಶನಿವ
ನಗುತಲೆ ಕೌರವನ ಗರ್ವ
ಭಂಜಿಸಿದವ
ದುರಿತರಾಶಿಗೆ ಪಾವಕನೇ ಇವ
ಪತಿತೋದ್ಧಾರ ಪಾವನ ಚರಿತನಿವ

ಹರೇ ಮುರಾರಿ ಭಕ್ತೋದ್ಧಾರಿ
ಕೃಷ್ಣ ಗೋವಿಂದ ಗೀತಾಚಾರ್ಯ
ಹರೇಕೃಷ್ಣ ಕೃಷ್ಣ ಹರೇ
ಗೋವಿಂದ ಗೋಪಾಲ ಮುಕುಂದ ಶೌರೇ…


  • ಶಿವದೇವಿ ಅವನೀಶಚಂದ್ರ – ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading