‘ಕೃಷ್ಣೋಪದೇಶ’ ಸಣ್ಣಕತೆ

ಬಡವನಾಗಿ ಹುಟ್ಟಿದ ಮಾತ್ರಕ್ಕೆ ಜೀವನ ಪೂರ್ತಿ ಬಡವರಾಗಿ ಬದುಕಬೇಕಾಗಿಲ್ಲ. ನಮ್ಮಲ್ಲಿ ಛಲ, ಆತ್ಮವಿಶ್ವಾಸ ಇದ್ದರೇ ಗೆಲ್ಲಬಹುದು ಒಂದು ಒಳ್ಳೆಯ ನೀತಿಕತೆಯನ್ನು ಕತೆಗಾರ ಅಪ್ಪಯ್ಯ ಯು ಯಾದವ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪಾಪ ರಾಜು ಆ ಪಾರ್ಕಿನಲ್ಲಿ ಅಷ್ಟೇನೂ ಜನ ಸಂಚಾರವಿಲ್ಲದ ಒಂದು ಮರದ ಬುಡದಲ್ಲಿ ಸ್ಥಾಪಿಸಿದ್ದ ಕಲ್ಲು ಮಂಚದಲ್ಲಿ ಕೂತು ಏನನ್ನೋ ಯೋಚಿಸುತ್ತ ಸುಮ್ಮನೆ ಉಗುರು ಕಚ್ಚುತ್ತ ಕುಳಿತಿದ್ದ.

ಅವನ ಮನಸ್ಸಿನಲ್ಲಿ ಅಲೆ ಅಲೆಯಾಗಿ ಎದ್ದ ಯಾವುದೋ ಯೋಚನಾ ಲಹರಿಯೊಂದು ತನ್ನ ಮನಸಿನ ಸ್ಥಿಮಿತವನ್ನು ಕಳೆದುಕೊಳ್ಳುವಂತೆ ಮಾಡಿತ್ತು. ನಾನ್ಯಾಕೆ ಹೀಗೆ, ಇಷ್ಟೊಂದು ಜನ ಗಂಡು ಮಕ್ಕಳು, ಹೆಣ್ಣು ಮಕ್ಕಳು, ಮುದುಕರು ಈ ಪಾರ್ಕಿನೊಳಗೆ ಎಷ್ಟು ಸಂತೋಷದಿಂದ ಒಬ್ಬರಿಗೊಬ್ಬರು ಹರಟುತ್ತ ನಗುತ್ತ ಖುಷಿ ಖುಷಿಯಾಗಿ ಸುತ್ತಾಡುತ್ತಿದ್ದಾರೆ. ನಾನ್ಯಾಕೆ ಮಾತ್ರ  ಹೀಗೆ ?? ನಾನ್ಯಾಕೆ ಬಡವನಾಗಿ ಹುಟ್ಟಿದೆ, ನನ್ನೊಂದಿಗೆ ಕಲಿಯುವ ಮಕ್ಕಳೆಲ್ಲ ಶ್ರೀಮಂತರ ಮಕ್ಕಳು, ದಿನಾ ಶಾಲೆಗೆ ಅವರ ಸ್ವಂತ ಕಾರಲ್ಲೆ ಬರುತ್ತಾರೆ. ಪರ್ಸ್ ತುಂಬ ಹಣ ಇಟ್ಟಿರುತ್ತಾರೆ, ಬೇಕಾದ್ದು ತಗೊಂಡು ತಿಂತಾರೆ, ಅವರ ಬಟ್ಟೆ ಬರೆಕೂಡ ಎಷ್ಟು ದುಬಾರಿಯವು, ನಾನು ಮಾತ್ರ ಹೀಗೇಕೆ? ಅವರ ಜತೆ ಇರುವುದಕ್ಕೆ ಆತನಿಗೆ ಮುಜುಗರವಾಗುತ್ತಿತ್ತು. ದಿನಾ ಶಾಲೆಯಲ್ಲೂ ಕ್ಲಾಸಲ್ಲೂ ಇದೇ ಸಮಸ್ಯೆಯಿಂದ ನೊಂದಿದ್ದ ರಾಜು. ಎಲ್ಲ ಮಕ್ಕಳೆದುರು ತನ್ನ ಪರಿಸ್ಥಿತಿಯನ್ನು ನೆನೆದು ರಾಜು ಇಂದು ಪಾರ್ಕ್ ಕಡೆ ಮುಖ ಮಾಡಿದ್ದ, ಆದರೆ ಇಲ್ಲೂ ಅದೇ ಬೇಸರ ಏಕಾಂತತೆ!!?

ಅದೇ ದಿನ ರಾಜುವಿನ ಕನ್ನಡ  ಮೇಸ್ಟ್ರು ಅವರ ಕುಟುಂಬ ಸಮೇತ ಆ ಪಾರ್ಕ್ ನಲ್ಲಿ ಸುತ್ತಾಡಿ ಒಂದು ಮರದ ನೆರಳಿರುವ ವಿಶಾಲ ಜಾಗದಲ್ಲಿ ಛಾದರ ಹಾಸಿ ಮನೆಯಿಂದ ತಂದ ಆಹಾರವನ್ನು ತಿನ್ನಲು ಸುರು ಹಚ್ಚಿಕೊಂಡಿದ್ದರು. ಇವರ ಸ್ವಲ್ಪ ದೂರದಲ್ಲೇ ಕುಳಿತ ಹುಡುಗನನ್ನು ಗಮನಿಸಿದ ಮೇಸ್ಟ್ರು ಯಾರೆಂದು ಅನುಮಾನಗೊಂಡವರಂತೆ ಅತ್ತ ಕಡೆ ಗಮನಹರಿಸಿದಾಗ ನನ್ನ ಕ್ಲಾಸಿನ ಹುಡುಗ ರಾಜುನೇ ಇರಬೇಕೆಂದುಕೊಂಡು ಊಟ ಬದಿಗಿಟ್ಟು ಅವನ ಬಳಿ ಅನುಮಾನದಿಂದಲೇ ನಡೆದರು.

ಅರೇ… ರಾಜು, ಏನಪ್ಪ ಏನು ಪಾರ್ಕಿಗೆ ಬಂದಿದ್ಯಾ?… ನಿನ್ನನ್ನು ದೂರದಿಂದಲೆ ನೋಡಿದೆ, ನಾವು ಊಟಕ್ಕೆ ಕೂಂತಿದ್ವಿ, ನಮ್ಮ ಮನೆಯಿಂದ ತಂದ ತಿಂಡಿಗಳನ್ನು ತಿಂತಾ ಇದ್ದೆವು, ನಿನ್ನನ್ನು ಕಂಡೆ. ಬಾ…ನೀನೂ ನಮ್ಮ ಜತೆ ಕೂತು ತಿನ್ನುವಿಯಂತೆ ಎಂದು ಬೆನ್ನು ತಟ್ಟಿ ಒತ್ತಾಯ ಪೂರ್ವಕ ಪ್ರೀತಿಯಿಂದ ಕರೆದರು. ಬೇಡ ಸರ್, ನಾನು ಈಗತಾನೆ ಊಟ ಮುಗಿಸಿ ಬಂದೆ. ನೀವು ಊಟ ಮಾಡಿ ಸರ್ ಎಂದು ಪಕ್ಕಕ್ಕೆ ಸರಿಯಲು ನೋಡಿದ. ರಾಮುಗೆ ಅವರ ಜತೆ ತಿನ್ನಲು ಸುತರಂ ಇಷ್ಟವಿರಲಿಲ್ಲ. ಮೇಸ್ಟ್ರು ಬಿಡಬೇಕಲ್ಲ, ಕರೆದುಕೊಂಡು ತನ್ನ ಕುಟುಂಬ ಕೂತುಕೊಂಡು ಊಟ ಮಾಡುತ್ತಿದ್ದ ಜಾಗಕ್ಕೆ ಬಂದರು. ಬಾ ಕೂತ್ಕೊ. ಅವನಿಗೂ ಸ್ವಲ್ಪ ತಿಂಡಿಯನ್ನು ಬಡಿಸಿದರು.

ರಾಜು ಮಾತ್ರ ಮನಸ್ಸಿಲ್ಲದ ಮನಸ್ಸಿಂದ ಸರ್ ಒತ್ತಾಯಕ್ಕೆ ಜತೆಯಲ್ಲಿ ಕೂತು ತಿನ್ನಲೇ ಬೇಕಾಯ್ತು. ಏನೋ ರಾಮು, ನಾ ಆಗಿಂದ ನಿನ್ನ ಗಮನಿಸುತ್ತಿದ್ದೇನೆ. ನಿನ್ನ ಮನದಲ್ಲಿ ಯಾವುದೋ ಬೇಡವಾದ ಯೋಚನೆಯೊಂದು ಹೊಕ್ಕು ನಿನ್ನ ಮನಸ್ಸನ್ನು ಕಾಡುತ್ತಿದೆ ಅಲ್ವಾ? ಆವಾಗಿಂದ ನಿನ್ನನ್ನು ಗಮನಿಸುತ್ತಿದ್ದೆ, ಚೆನ್ನಾಗಿ ಓದುವ ಹುಡುಗ ಈ ರೀತಿಯೆಲ್ಲ ಯೋಚಿಸಿದರೆ ಯಾವುದೂ ತಲೆಯೊಳಗೆ ತೂರಲ್ಲ ಕಣೊ. ನನ್ನ ಒಳ್ಳೆ ವಿದ್ಯಾರ್ಥಿ ಅಂತ ಹೇಳುತ್ತಿದ್ದೇನೆ ನೋಡು ಯಾರು ಹೇಗಿದ್ದರೇನು? ನಿನ್ನ ಗುರಿಯೇನು, ಈ ವಯಸ್ಸಲ್ಲಿ ಚೆನ್ನಾಗಿ ಓದಿಲ್ಲ ಅಂದರೆ ನಿನ್ನ ಮುಂದಿನ ಜೀವನ ಕಷ್ಟವಾಗಬಹುದು. ನಿನ್ನ ತಂಗಿ, ಅಮ್ಮ ಎಲ್ಲ ನಿನ್ನನ್ನೇ ಮುಂದೆ ನಂಬಿರುವವರು. ಮನುಷ್ಯರು‌ ಅಂದಮೇಲೆ ಹಲವು ಸಮಸ್ಯೆಗಳು ಬರುತ್ತವೆ. ಅದನ್ನೆಲ್ಲ ಹಿಂದೆ ತಳ್ಳಿ ನಾವು ಮುಂದೆ ಸಾಗಬೇಕು. ಧೈರ್ಯದಿಂದಿರಬೇಕು ಎಲ್ಲವನ್ನೂಎದುರಿಸುತ್ತೇನೆಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅದೂ ಅಲ್ಲದೆ ನೀನೊಬ್ಬ ನನ್ನ ಬೆಸ್ಟ್ ಸ್ಟೂಡೆಂಟ್, ಪಠ್ಯಪುಸ್ತಕದಲ್ಲಿ ಹಲವಾರು ಮಹಾಪುರುಷರ ಕಥೆಯನ್ನು ಓದಿದ್ದೀಯ. ಆದರೂ ನೆನಪಿಸುತ್ತೇನೆ. ನಮ್ಮ ಮಿಸೈಲ್ ಮೇನ್ ಅಬ್ದುಲ್ ಕಲಾಂ ಅವರು ಕಡು ಬಡತನದಲ್ಲಿ ಬೆಳೆದವರು. ಮುಂಜಾನೆಯೇ ಎದ್ದು ಮನೆಮನೆಗೆ ಪೇಪರ್ ಕಾಕಿ ಅದರಲ್ಲಿ ಬಂದ ಹಣದಿಂದ ಶಾಲೆ ಮುಂದುವರಿಸಿದವರು, ಹಾಗೆ ನಮ್ಮ ರತನ್ ಟಾಟಾ ಬಿಲ್ಗೇಟ್ ಎಲ್ಲರ ಬಗ್ಗೆಯೂ ನಿಮಗೆ ನಾನೆ ಕ್ಲಾಸನಲ್ಲಿ ಪಾಠ ಮಾಡುವಾಗ ಉದಾಹರಣೆ ಸಮೇತ ಹೇಳಿಕೊಟ್ಟಿದ್ದೆ. ಅವರೆಲ್ಲ ಉದಾಹರಣೆ ಮಾತ್ರ. ಅವರಂತೆ ಏನಾದರೂ ಸಾಧಿಸುವ ಛಲ ನಿನ್ನಲ್ಲೂ ಬರಬೇಕು.

ಯಾರೂ ಹುಟ್ಟುವಾಗ ಶ್ರೀಮಂತರಲ್ಲ. ನೋಡು, ನಮ್ಮ ಸಂವಿಧಾನ ಶಿಲ್ಪಿ ಡಾ ಅಂಬೆಡ್ಕರ್ ಅವರು ಸಣ್ಣವರಿದ್ದಾಗ ಗುಡಿಸಲಲ್ಲಿ ಬೆಳೆದವರು. ಮನೆಯಲ್ಲಿ ವಿದ್ಯುತ್ ದೀಪದ ಬೆಳಕಿರಲಿಲ್ಲ, ಆದರೂ ಅವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಕರೆಂಟು ಕಂಬದ ದೀಪದ ಬೆಳಕಲ್ಲಿ ಓದಿದವರು. ಅದಕ್ಕೆ ನಾನು ಪದೇ ಪದೇ ಹೇಳುವುದು ಆತ್ಮ ವಿಶ್ವಾಸ ಬೆಳೆಸಿಕೊ ಎಂದು. ಮಳೆ ಬಂದಾಗ ಹರಿಯುವ ನೀರು ಚಿಕ್ಕ ಚಿಕ್ಕ ತೊರೆಯಾಗಿ ಕೊಳಕು ನೀರನ್ನೆಲ್ಲ ಸೇರಿಸಿ ಹರಿಯುತ್ತಾ ಹಳ್ಳ ದಿಣ್ಣೆಗಳನ್ನೆಲ್ಲ ದಾಟಿ ಸಾಗುವಾಗ ಅದು ಕಡೆಗೆ ಏನಾಗುತ್ತೆ ಎಂದು ಅದಕ್ಕೇ ಗೊತ್ತಿರುವುದಿಲ್ಲ. ಆದರೂ ಅದು ತನ್ನ ಗುರಿಯಿಂದ ಹಿಂದೆ ಸರಿಯುವುದಿಲ್ಲ.

ಅದೇ ತೊರೆ ಕೃಷ್ಣರಾಜ ಸಾಗರದಲ್ಲಿ ವಿಲೀನವಾದಾಗ ಅದಕ್ಕೆ ಕೊಳಚೆಯಿಂದ ಮುಕ್ತಿ ದೊರಕಿ ಬೃಹದಾಕಾರದ ನದಿಯಾಗಿ ಹರಿದು ಹಲವಾರು ರೈತರ ಜೀವನಾಡಿಯಾಗಿ ಮುಂದೆ
ಹರಿಯುತ್ತಿರುತ್ತದೆ. ಅದು ಎಷ್ಟೋ ಎಕರೆ ಬಂಜರು ಭೂಮಿಯನ್ನು ಫಲವತ್ತಾಗಿಸಿ ಆ ಪ್ರದೇಶವನ್ನೇ ಸುಭಿಕ್ಷ ಗೊಳಿಸುತ್ತದೆ. ಅದೇ ನದಿ ಮುಂದಕ್ಕೆ ಹರಿದು ಕನ್ನಂಬಾಡಿ ಅಣೆಕಟ್ಟಿನಲ್ಲಿ ಬಣ್ಣ ಬಣ್ಣದ ಬೆಳಕಿನೊಂದಿಗೆ ಸರಸವಾಡಿ, ಎಷ್ಟೋ ಜನರು ಆ ನೀರ ಝರಿಯ ಸೌಂದರ್ಯವನ್ನು ಆಸ್ವಾಧಿಸುತ್ತ ತನ್ನನ್ನು ತಾನು ಮರೆಯುತ್ತಾರೆ.

ಅದೇ ನೀರು ಪ್ರಪಾತಕ್ಕೆ ಧುಮ್ಮಿಕ್ಕಿ ಹರಿದು ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಸುವ ಸೌಂದರ್ಯ ಎಲ್ಲರನ್ನೂ ಉತ್ಸಾಹ ಗೊಳಿಸುತ್ತದೆ. ನಾವೆಲ್ಲರೂ ಹಾಗೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆಯುತ್ತೇವೆ. ದೇಶದ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕುತ್ತೇವೆ. ಬಡವ ನಿಕೃಷ್ಟನೂ ಅಲ್ಲ ಶ್ರೀಮಂತ ಉತ್ಕೃಷ್ಟನೂ ಅಲ್ಲ, ಅವರವರ ಪ್ರಯತ್ನದ ಫಲ ಅವರವರ ಭವಿಷ್ಯವನ್ನು ನಿರ್ಧರಿಸುತ್ತದೆ. ಅದ್ಯಾಪಕರು ಕೃಷ್ಣನು ಅರ್ಜುನನಿಗೆ ಮಾಡಿದ ಕೃಷ್ಣೋಪದೇಶದಂತೆ ರಾಜುವಿನ ಮನದಲ್ಲಿದ್ದ ಎಲ್ಲ ಕೀಳರಿಮೆಯೆಂಬ ಕೊಳೆಯನ್ನು ತೊಡೆದುಹಾಕಿ ಉತ್ಸಾಹವನ್ನು ತುಂಬಿದರು.

ಮೇಸ್ಟ್ರು ಇಷ್ಟು ಹೊತ್ತು ರಾಜುಗೆ ಮಾಡಿದ ಪಾಠ ಅವನ ಮನಸ್ಸನ್ನು ಸಂಪೂರ್ಣ ಬದಲಾಯಿಸಿತು.  ಹೊಸ ಉತ್ಸಾಹದ ಚಿಲುಮೆಯಂತೆ ಮೇಸ್ಟ್ರನ್ನು ಬೀಳ್ಕೊಟ್ಟ. ಆತನ ಮನದ ತುಮುಲತೆಯೆಲ್ಲ ಕಳೆದು ನವವಸಂತಕ್ಕೆ ಚಿಗುರಿದ ಹಸಿರೆಲೆಯಂತೆ ನಳ ನಳಿಸುವ ಹೂಬನದಂದದಿ ಮನಸ್ಸು ಪ್ರಫುಲ್ಲವಾಗಿ ಮನೆಕಡೆ ವೇಗವಾಗಿ ಹೆಜ್ಜೆ ಹಾಕಿದ. ಯೋಚನಾಲಹರಿಯ
ದಿಕ್ಕು ಬದಲಾದಂತೆ, ಕರಟಿ ಹೋಗಿದ್ದ ಕನಸು ಬಣ್ಣ ತುಂಬಿ ಕಣ್ಣೆದುರು ಹಲವಾರು ಬಣ್ಣಗಳು ತೇಲಿ ಬಂದು ತನ್ನ ಮನಸೇ ಒಂದು ಸಾಗರವಾಗಿ ಹಲವು ಬಣ್ಣಗಳ ಹೂರಣವಾಗಿ ಮನಸೊಮ್ಮೆ ಪುಟಿದೆದ್ದು ಬದುಕು ಇನ್ನೂ ಇದೆ. ಸಾಧಿಸುವ ಮನಸೇ ಇದುವರೆಗೆ ಇಲ್ಲವಾಗಿತ್ತು. ಕಳೆಗುಂದಿದ ಮನದ ಕೊಳೆ ಕೃಷ್ಣರಾಜ ಸಾಗರದ ಅಲೆಯಲ್ಲಿ ಕೊಚ್ಚಿ ಹೋದಂತಾಗಿ
ಮುಂದಿದೆಲ್ಲ ನನ್ನ ಬದುಕಿನಲ್ಲಿ ಹೊಸತೊಂದು ಕನಸಿನ ಬಣ್ಣತುಂಬುವೆನು ಎಂದು ಹೊಸ ಸಂಕಲ್ಪದೊಂದಿಗೆ ರಾಜು ತನ್ನ ಮನೆಸೇರಿದ.


  • ಅಪ್ಪಯ್ಯ ಯು ಯಾದವ್ – ಕಾಸರಗೋಡು.

2 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW