ಒಂದು ದಿನವೂ ನೀವು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿಲ್ಲ ನಾವು..ಕ್ಷಮಿಸಿ ಬಿಡಿ ಬಾಪು !! – ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಗಾಂಧಿಜಯಂತಿ ಪ್ರಯುಕ್ತ ಬರೆದ ಒಂದು ಕವನವನ್ನು ತಪ್ಪದೆ ಮುಂದೆ ಓದಿ…
ಎಲ್ಲ ಹಳ್ಳಿ ನಗರಗಳಲ್ಲಿ
ರಸ್ತೆಗಳನ್ನು ಮಾಡಿ
ನಿಮ್ಮ ಹೆಸರನ್ನು
ಇರಿಸಿದ್ದೇವೆ…!
ಆದರೆ ಒಂದು
ದಿನವೂ ನೀವು
ಹಾಕಿಕೊಟ್ಟ ಮಾರ್ಗದಲ್ಲಿ
ನಡೆಯುತ್ತಿಲ್ಲ ನಾವು..!!
ಕ್ಷಮಿಸಿ ಬಿಡಿ ಬಾಪು
ವರ್ಷಕೊಮ್ಮೆ ಎಲ್ಲೆಡೆಯೂ
ನಿಮ್ಮ ಜಯಂತಿ ಆಚರಿಸಿ
ಗಂಟೆಯಷ್ಟು
ಉದ್ದುದ್ದ ಭಾಷಣ
ಮಾಡಿ ಅನುಸರಿಸಲು
ಹೇಳಿ ಹೋಗುತ್ತೇವೆ..!
ಬದುಕಲ್ಲಿ ಆಚರಣೆಗೆ
ತರುವುದಿಲ್ಲ ನಾವು..!!
ಕ್ಷಮಿಸಿ ಬಿಡಿ ಬಾಪು
ಗ್ರಾಮಗಳ ಉದ್ಧಾರವೇ
ಭಾರತದ ಪ್ರಗತಿ
ಎಂದಿರಿ ನೀವು
ಗ್ರಾಮದಲ್ಲಿ ಹುಟ್ಟಿ
ಗ್ರಾಮದಲ್ಲಿಯೇ ಬೆಳೆದವರು
ಹೆಚ್ಚು..ಆದರೆ..!
ಎಲ್ಲೋ ಅಲ್ಲೊಬ್ಬರು
ಇಲ್ಲೊಬ್ಬರು
ಗ್ರಾಮ ಸ್ವರಾಜ್
ಕಲ್ಪನೆ ಇದ್ದವರು
ಬಿಟ್ಟು ಎಲ್ಲರೂ
ನಗರದತ್ತ ಮುಖ
ಮಾಡುತ್ತಿದ್ದೇವೆ ನಾವು..!!
ಕ್ಷಮಿಸಿ ಬಿಡಿ ಬಾಪು.
- ಮಲ್ಲಿಕಾರ್ಜುನ ಶೆಲ್ಲಿಕೇರಿ
