ಭಾರತ ಒಂದು ಸುಂದರ ಮತ್ತು ಪವಿತ್ರ ತಪೋಭೂಮಿ.ಇಲ್ಲಿನ ಪವಿತ್ರ ನೆಲಕ್ಕೆ ತನ್ನದೇ ಮಹತ್ವವಿದೆ. ಒಂದೊಂದು ದೇಗುಲಗಳು ಅದ್ಭುತ, ಸ್ಥಳ ಪುರಾಣಗಳು ಅನನ್ಯವಾಗಿವೆ. ಇಲ್ಲಿ ದೇವಾನು ದೇವತೆಗಳ ಕಥೆಗಳು, ಋಷಿ ಮುನಿಗಳ ತಪಸ್ಸಿನ ಗಾಥೆಗಳು ಕೇಳ ಸಿಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ಮೂಲೆ ಮೂಲೆಗಳಲ್ಲಿಯೂ ಅದ್ಭುತ ಪ್ರಾಚೀನ ದೇವಾಲಯಗಳು ಇಂದಿಗೂ ತನ್ನ ವೈಭವ, ಮಹತ್ವ, ಹೆಗ್ಗಳಿಕೆಯ ಕಾರಣದಿಂದ ಗಮನ ಸೆಳೆಯುತ್ತವೆ. ದೇವಾಲಯಗಳ ವೈಭವವನ್ನು ಸೌಮ್ಯ ಸನತ್ ಅವರು ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣದ ಮೂಲಕ ಓದುಗರಿಗೆ ಪರಿಚಯಿಸಲಿದ್ದಾರೆ, ತಪ್ಪದೆ ಓದಿ ‘ಕ್ಷೇತ್ರದೊಳ್ ಸಾನಿಧ್ಯದೊಳ್’ ಅಂಕಣ…
ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟುಪ್ರಭಾವವನ್ನು ಬೀರುತ್ತವೆ. ನಾಗದೋಷವಿದ್ದವರು ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ ಎಂಬ ಪ್ರತೀತಿ ಇದೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳು ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆ, ಶಾಂತಿಗಳನ್ನು ಮಾಡುತ್ತಾರೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳಲ್ಲಿ ಪ್ರಮುಖವಾದ ಸುಬ್ರಹ್ಮಣ್ಯ ಕ್ಷೇತ್ರ ನಾಗಲ ಮಡಿಕೆ. ಈ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರನ್ನು ನಾಗರೂಪದಲ್ಲಿ ಆರಾಧಿಸಲಾಗುತ್ತೆ.

ಅಂತ್ಯ ಸುಬ್ರಹ್ಮಣ್ಯ ಎಂದೇ ಜನಪ್ರಿಯವಾಗಿರುವ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ “ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿಯ” ಆರಾಧನೆಗಾಗಿ ನಿತ್ಯ ನೂರಾರು ಭಕ್ತರು ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಸುಬ್ರಹ್ಮಣ್ಯನ ಅನುಗ್ರಹವೇ ಪರಿಹಾರ ಎಂಬ ನಂಬಿಕೆಯಿಂದ ಈ ದೇವಸ್ಥಾನಕ್ಕೆ ಬರುತ್ತಾರೆ.
ತುಮಕೂರು ಜಿಲ್ಲೆಯ ಪಾವಗಡಕ್ಕೆ ಕೇವಲ 15 ಕಿಲೋ ಮೀಟರ್ ದೂರದಲ್ಲಿರುವ ನಾಗಲಮಡಿಕೆ ಸುಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರ. ಕರ್ನಾಟಕದಲ್ಲಿರುವ ಪ್ರಮುಖ ಮೂರು ಸುಬ್ರಹ್ಮಣ್ಯ ಕ್ಷೇತ್ರಗಳ ಪೈಕಿ ನಾಗಲಮಡಿಕೆಯ ಈ ದೇವಾಲಯವೂ ಒಂದು.
ನಮ್ಮ ಹಿರಿಯರು ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯವನ್ನು “ಆದಿ ಸುಬ್ರಹ್ಮಣ್ಯ”ಎಂದೂ, ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಯಕ್ಕೆ “ಮಧ್ಯ ಸುಬ್ರಹ್ಮಣ್ಯ” ಎಂದೂ ನಾಗಲಮಡಿಕೆ ಸುಬ್ರಹ್ಮಣ್ಯಕ್ಕೆ “ಅಂತ್ಯ ಸುಬ್ರಹ್ಮಣ್ಯ” ಎಂದೂ ಕರೆದಿದ್ದಾರೆ.

ಫೋಟೋ ಕೃಪೆ : google
ಉತ್ತರ ಪಿನಾಕಿನಿ ನದಿಯ ದಂಡೆಯಲ್ಲಿರುವ ಈ ಸುಬ್ರಹ್ಮಣ್ಯ ದೇವಾಲಯ ನಿರ್ಮಾಣದ ಹಿಂದೆ ಒಂದು ಕಥೆ ಇದೆ. ಹಿಂದೆ ಅಗ್ರಹಾರವಾಗಿದ್ದ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸಿಸುತ್ತಿದ್ದರು. ಅವರ ಮನೆದೇವರು ಕುಕ್ಕೆ ಸುಬ್ರಹ್ಮಣ್ಯ ಹೀಗಾಗಿ ಪ್ರತಿವರ್ಷ ಅವರು ಕುಕ್ಕೆ ರಥೋತ್ಸವಕ್ಕೆ ಹೋಗುತ್ತಿದ್ದರಂತೆ. ಹಲವು ವರ್ಷಗಳ ಬಳಿಕ ವಯೋವೃದ್ಧರಾದ ಅನ್ನಂಭಟ್ಟರು ಕುಕ್ಕೆಗೆ ಹೊರಟರಾದರೂ, ರಥ ಎಳೆಯುವ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗದೆ ನೊಂದರು, ಸುಬ್ರಹ್ಮಣ್ಯನಿಗೆ ನನ್ನ ಸೇವೆ ಬೇಡವಾಗಿತ್ತೆ ಎಂದು ಮರುಗಿದರು. ಭಕ್ತನ ಮೊರೆ ಕೇಳಿದ ಸುಬ್ರಹ್ಮಣ್ಯ ಇತ್ತ ಕುಕ್ಕೆಯಲ್ಲಿ ಎಷ್ಟೇ ರಥ ಎಳೆದರು ರಥ ಚಲಿಸದಂತೆ ಮಾಡಿದ. ವಟುರೂಪದಲ್ಲಿ ಕಾಣಿಸಿಕೊಂಡು, ಭಕ್ತಶ್ರೇಷ್ಠರೊಬ್ಬರು ಬರುತ್ತಿದ್ದಾರೆ. ಅವರು ಬಂದು ಹಗ್ಗ ಹಿಡಿಯುವ ತನಕ ರಥ ಚಲಿಸದು ಎಂದನಂತೆ.
ಅನ್ನಂಭಟ್ಟರು ಬಂದು ಹಗ್ಗ ಹಿಡಿಯುತ್ತಿದ್ದಂತೆ ರಥ ಚಲಿಸಿತು. ಆಗ ಅದೇ ವಟುರೂಪಿ ಸುಬ್ರಹ್ಮಣ್ಯ, ನಿಮಗೆ ವಯಸ್ಸಾಗಿದೆ ಇನ್ನು ಮುಂದೆ ನೀವು ಇಲ್ಲಿಗೆ ಬರುವುದು ಬೇಡ, ನೀವಿರುವಲ್ಲಿಗೆ ನಾನು ಬರುತ್ತೇನೆ ಅಲ್ಲೇ ರಥೋತ್ಸವ ಮಾಡಿ ಎಂದು ಅಪ್ಪಣೆ ಕೊಡಿಸಿದನಂತೆ. ಜೊತೆಗೆ ಕುಕ್ಕೆ ದೇವಾಲಯದಲ್ಲಿದ್ದ ನಾಗಾಭರಣವನ್ನು ಸಹ ಕೊಡಿಸಿದನಂತೆ. ಊರಿಗೆ ಬಂದ ಅನ್ನಂಭಟ್ಟರು ಉತ್ತರ ಪಿನಾಕಿನಿ ತೀರದಲ್ಲಿ ಉಳುಮೆ ಮಾಡಿಸುತ್ತಿದ್ದಾಗ ನೇಗಿಲು ಅಲ್ಲೇ ನಿಂತಿತಂತೆ. ಅಗೆದು ನೋಡಿದಾಗ ಅಲ್ಲಿ ನಾಗರ ಕಲ್ಲು ಸಿಕ್ಕಿತು. ಅನ್ನಂಭಟ್ಟರು ಆ ಕಲ್ಲನ್ನೇ ಸುಬ್ರಹ್ಮಣ್ಯ ಎಂದು ಪ್ರತಿಷ್ಠಾಪಿಸಿದರು. ತೆಲುಗಿನಲ್ಲಿ ಮಡಕ ಎಂದರೆ ನೇಗಿಲು, ನೇಗಿಲಿಗೆ ನಾಗರ ಕಲ್ಲು ಸಿಕ್ಕ ಕಾರಣ ಈ ಊರಿಗೆ ನಾಗಲಮಡಿಕೆ ಎಂಬ ಹೆಸರು ಬಂದಿದೆ.

ಫೋಟೋ ಕೃಪೆ : google
ಸುಬ್ರಹ್ಮಣ್ಯಅನ್ನಂಭಟ್ಟರು ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿದ್ದ ಈ ದೇವಾಲಯಕ್ಕೆ ವರ್ತಕರಾದ ರೊದ್ದಂ ಬಾಲಸುಬ್ಬಯ್ಯ ಅವರು ದೇವಪ್ರೇರಣೆಯಿಂದ ಇಲ್ಲಿ ದೇವಸ್ಥಾನ ಕಟ್ಟಿಸಿದರೆಂದು ತಿಳಿದುಬರುತ್ತದೆ. ಇಂದಿಗೂ ನಾಗಲಮಡಿಕೆಯಲ್ಲಿ ರಥೋತ್ಸವ ಕಾಲದಲ್ಲಿ ಅನ್ನಂಭಟ್ಟರು ಕುಕ್ಕೆಯಿಂದ ತಂದ ನಾಗಾಭರಣ ಬಳಸಲಾಗುತ್ತದೆ. ರೊದ್ದಂ ಬಾಲಸುಬ್ಬಯ್ಯ ಅವರ ವಂಶಸ್ಥರು ಇಂದಿಗೂ ಅನ್ನಸಂತರ್ಪಣೆ ಮಾಡಿಸುತ್ತಾರೆ ಎನ್ನುತ್ತಾರೆ ಪುರೋಹಿತರು.

ಫೋಟೋ ಕೃಪೆ : google
ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಅಂದರೆ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಾಗಲಮಡಿಕೆಯ ಸುಬ್ರಹ್ಮಣ್ಣೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.
ತೀಟೆನಾಗಪ್ಪದೇವಾಲಯ: ನಾಗಲ ಮಡಿಕೆಯಲ್ಲಿ ಎತ್ತರದ ಕಲ್ಲುಬಂಡೆಯ ಮೇಲೆ ಏಳು ಹೆಡೆಯ ನಾಗರನಂತೆಯೇ ಇರುವ ಬಂಡೆಯೊಂದಿದೆ. ಇದನ್ನು ಉದ್ಭವ ನಾಗ ಎಂದೂ ತೀಟೆ ನಾಗಪ್ಪ ಎಂದೂ ಕರೆಯುತ್ತಾರೆ. ತೀಟೆ ಎಂದರೆ ಗಂದೆ, ಚರ್ಮವ್ಯಾಧಿ ಎಂದರ್ಥ.ಚರ್ಮರೋಗಿಗಳು ಪೂಜೆ ಸಲ್ಲಿಸಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಗೆ ಕಿವಿ ಸೋರುತ್ತಿದ್ದರೆ, ಮೈಮೇಲೆ ಗಂದೆ, ಬೊಕ್ಕೆಗಳಾದರೆ ಇಲ್ಲಿ ಎಂಜಲು ಎಲೆ ತೆಗೆಯುವ ಹರಕೆ ಹೊರುತ್ತಾರೆ. ಮಕ್ಕಳಾಗದವರು ಇಲ್ಲಿ ಬಂದು ಹರಕೆ ಹೊರುತ್ತಾರೆ. ದೋಷ ನಿವಾರಣೆಗಾಗಿ ನಾಗರಕಲ್ಲು ಪ್ರತಿಷ್ಠಾಪನೆ, ಸರ್ಪ ಸಂಸ್ಕಾರ ಇತ್ಯಾದಿ ದೋಷ ಪರಿಹಾರ ಪೂಜೆ ಮಾಡಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ವಿವಾಹ ಮಹೋತ್ಸವಗಳು ಕೂಡ ನಡೆಯುತ್ತವೆ.
ನೊಳಂಬರು, ಪಲ್ಲವರು, ಚೋಳರು, ಹೊಯ್ಸಳರು, ವಿಜಯನಗರದರಸರು ಮತ್ತು ಹೈದರಲಿ, ಟಿಪ್ಪೂ ಆಳ್ವಿಕೆಗೆ ಒಳಪಟ್ಟಿದ್ದ ಈ ಪುಣ್ಯಕ್ಷೇತ್ರದ ಸುತ್ತಮುತ್ತಲ ಊರುಗಳಲ್ಲಿ ಹಲವು ಸಿದ್ಧಪುರುಷರ ಸಮಾಧಿಗಳಿವೆ. ಶಿರಡಿ ಸಾಯಿಬಾಬಾ ಅವರ ಗುರುಗಳಾದ ವೆಂಕಾವಧೂತರು ಇಲ್ಲಿ ನೆಲೆಸಿದ್ದರೆಂದು ಹೇಳುತ್ತಾರೆ.

ನಾಗಲಮಡಕ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮಯ:
ಮಂಗಳವಾರದಿಂದ ಶನಿವಾರದವರೆಗೆ: ಬೆಳಗ್ಗೆ 8:15 ನಿಂದ 11:00ವರೆಗೂ
ಮತ್ತು ಸಂಜೆ 6:00 ರಿಂದ 7:00 ವರೆಗೂ
ಭಾನುವಾರ ಮತ್ತು ಸೋಮವಾರ: ಬೆಳಗ್ಗೆ 8:15 ನಿಂದ 12:00 ವರೆಗೂ
ಮತ್ತು ಸಂಜೆ 6:00 ರಿಂದ 7:00 ವರೆಗೂ
ಜಾತ್ರಾ ಸಮಯದಲ್ಲಿ ದೇವಸ್ಥಾನ 24 ಗಂಟೆಗಳ ಕಾಲ ತೆರೆದಿರುತ್ತದೆ.
*****
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸೇವೆ:
1. ಸರ್ಪ ದೋಷ ಶಾಂತಿ (ಕಾಲಸರ್ಪ ದೋಷ, ಸರ್ಪ ದೋಷ ನಿವಾರ, ರಾಹು ಕೇತು ಶಾಂತಿ )
2. ನಾಗ ಪ್ರತಿಷ್ಠಾ ಪೂಜೆ.
3. ಆಶ್ಲೇಷ ಬಲಿ ಪೂಜೆ.
4. ಸರ್ಪ ಸಂಸ್ಕಾರ ಪೂಜೆ.
5. ಶಾಂತಿ ಭಾಗಗಳ ಪೂಜೆ.

ಫೋಟೋ ಕೃಪೆ : google
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಿಳಾಸ:
ಶ್ರೀ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ,
ನಾಗಲಮಡಿಕೆ ಪೋಸ್ಟ್,
ನಾಗಲಮಡಿಕೆ ಹೋಬಳಿ,
ಪಾವಗಡ ತಾಲ್ಲೂಕು,
ತುಮಕೂರು ಜಿಲ್ಲೆ,
ಕರ್ನಾಟಕ.
ಪಿನ್ – 572136.
ದೂರವಾಣಿ ಸಂಖ್ಯೆ: 9448747746, 9741921046
- ಸೌಮ್ಯ ಸನತ್
