ಸಂಭಾಷಣಾ ಬ್ರಹ್ಮ ಕುಣಿಗಲ್ ನಾಗಭೂಷಣ್

ಮನರಂಜನೆಗಾಗಿ ನಾವುಗಳು ನೋಡುವ ಚಲನಚಿತ್ರಗಳಾಗಲಿ, ಧಾರಾವಾಹಿಗಳಾಗಲಿ
ಯಶಸ್ವಿಯಾಗಬೇಕಾದರೆ ಅದರಲ್ಲಿ ತೆರೆಯ ಹಿಂದೆ ಕೆಲಸ ಮಾಡುವವರ ಪರಿಶ್ರಮ ತುಂಬಾ ಮುಖ್ಯವಾಗಿರುತ್ತದೆ. ”ಬೆಳೆಯುವ ಗಿಡಕ್ಕೆ, ಕಣ್ಣಿಗೆ ಕಾಣದಿರುವ ಬೇರುಗಳು ಎಷ್ಟು ಮುಖ್ಯವೋ” ಹಾಗೆಯೇ ಒಂದು ಚಿತ್ರದ ಬೆಳವಣಿಗೆಯಲ್ಲಿ ತೆರೆಯ ಮರೆಯಲ್ಲಿ ಕೆಲಸ ಮಾಡುವವರು ಅಷ್ಟೆ ಮುಖ್ಯ. ಅದರಲ್ಲೂ ಜನಗಳನ್ನು ಹುರಿದುಂಬಿಸಿ ಚಪ್ಪಾಳೆ ತಟ್ಟುವಂತೆ ಮಾಡಿ ಮೆಚ್ಚಿಸುವುದು ಉತ್ತಮ ಚಿತ್ರಕಥೆ – ಸಂಭಾಷಣೆಯ ಕೆಲಸ. ಅದು ಸಂಭಾಷಣಾ ಬರಹಗಾರರ ಹೊಣೆಯಾಗಿರುತ್ತದೆ. ಒಂದು ಚಿತ್ರಕಥೆ ಯಶಸ್ವಿಯಾಗಬೇಕಾದರೆ ಅದರಲ್ಲಿ ಸಂಭಾಷಣಾಕಾರ ಕೂಡ ಮುಖ್ಯವಾಗಿರುತ್ತಾನೆ. ಅಂತಹ ಯಶಸ್ವಿ ಸಂಭಾಷಣಾಕಾರರಲ್ಲೊಬ್ಬರು ಅಂದಿನ ಕಾಲದ ನಮ್ಮ ಬೆಳ್ಳಿತೆರೆಯ ಹಸನ್ಮುಖಿ ಬರಹಗಾರರಾದ “ಕುಣಿಗಲ್ ನಾಗಭೂಷಣ್” ರವರು.

ಮೂಲತಃ ನಾಗಭೂಷಣ್ ರವರು ತುಮಕೂರಿನ ಕುಣಿಗಲ್ ನವರು ಎನ್ನುವುದು ಅವರ ಹೆಸರೇ ಹೇಳುತ್ತದೆ. ಸಹಾಯಕರಾಗಿ, ನಟರಾಗಿ, ಉತ್ತಮ ಸಂಭಾಷಣಕಾರರಾಗಿ ಜೊತೆಗೆ ನಿರ್ದೇಶಕರಾಗಿ ಕೂಡ ಗುರಿತಿಸಿಕೊಂಡಿದ್ದಾರೆ. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ಇವರಿಗೆ ನವರಸ ವಿಶಾರದ, ಸಂಭಾಷಣಾ ಚತುರ, ಸಂಭಾಷಣಾ ಬ್ರಹ್ಮ ಎಂಬ ಹೆಸರುಗಳು ಇವರ ಉತ್ತಮ ಸಂಭಾಷಣಾ ಚತುರತೆಗೆ ಅಭಿಮಾನಿಗಳು ಕೊಟ್ಟಿದ್ದು.

amma

ಫೋಟೋ ಕೃಪೆ : filmiBeat

ನಾಗಭೂಷಣ್ ರವರು ಬಾಲ್ಯದಲ್ಲಿ ತುಂಬಾ ನೋವುಗಳನ್ನು ಕಂಡಂತಹವರು. ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ ಅವರು ಅಂದಿನ ಕಾಲದಲ್ಲಿಯೇ ನೆಹರುರವರ ಮುಂದೆ ‘ಮೂಡಲ್ ಕುಣಿಗಲ್ ಕೆರೆ’ ಹಾಡನ್ನು ಹಾಡಿ ಬಹುಮಾನವನ್ನು ಪಡೆದಂತಹವರು. ನಂತರದ ದಿನಗಳಲ್ಲಿ ಚಿತ್ರರಂಗದ ಮೇಲೆ ಆಸಕ್ತಿಯುಂಟಾಗಿ 1964 ರಲ್ಲಿ ಬಂದಂತಹ ಕಿವುಡರ-ಮೂಗರ ಸಮಸ್ಯೆಗಳ ಕುರಿತಾದ ‘ನಾಂದಿ’ ಎಂಬ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಬೆಳ್ಳಿತೆರೆಯಲ್ಲಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಡಾ.ರಾಜ್ ಕುಮಾರರವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಹೀಗೆ ಐದಾರು ವರ್ಷಗಳ ಕಾಲ ಸಹಾಯಕರಾಗಿ, ಕಥೆಗಾರರಾಗಿ,  ಸಂಭಾಷಣಾಕಾರರಾಗಿ ಗುರುತಿಸಿಕೊಂಡ ಮೇಲೆ ತಾವೇ ಸ್ವತಂತ್ರವಾಗಿ 1975ರಲ್ಲಿ ‘ಆಶೀರ್ವಾದ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ. ನಂತರ ‘ಬಾಳು-ಜೇನು’ ಇವರ ನಿರ್ದೇಶನದ ಎರಡನೇ ಚಿತ್ರ ಹಾಗೂ ಇಂದಿನ ‘ಸೂಪರ್ ಸ್ಟಾರ್ ರಜನಿಕಾಂತ’ ರವರು ಬಣ್ಣ ಹಚ್ಚಿದ ಮೊದಲ ಚಿತ್ರ ಕೂಡ ಹೌದು. ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಬೆಳ್ಳಿತೆರೆಯಲ್ಲಿ ಮೊದಲು ಅವಕಾಶ ಕೊಟ್ಟಂತಹ ಹೆಮ್ಮೆ ನಾಗಭೂಷಣ್ ರವರಿಗೆ ಸಲ್ಲುತ್ತದೆ. ಇವರ ನಿರ್ದೇಶನದ ಚಿತ್ರಗಳು ಅಷ್ಟೆನೂ ಇವರಿಗೆ ಹೆಸರು ತಂದು ಕೊಡಲಿಲ್ಲ. ಅದಕ್ಕಾಗಿ ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂದಿನ ದಿಗ್ಗಜರಾದಂತಹ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್,ಪ್ರಭಾಕರ್ ರಂತಹ ‘ಎವರ್ ಗ್ರೀನ್ ಸ್ಟಾರ್’ ಚಿತ್ರಗಳಿಗೆ ಉತ್ತಮ ಸಂಭಾಷಣಗಾರರಾಗಿ ಕೆಲಸ ಮಾಡುತ್ತಾರೆ.

ಒಂದು ಕಾಲದಲ್ಲಿ ನಾಗಭೂಷಣ್ ಎಷ್ಟೊಂದು ಬೇಡಿಕೆಯ ಸಂಭಾಷಣಾಕಾರರೆಂದರೆ ದಿನದ 23 ಗಂಟೆಗಳ ಕಾಲ ಹಗಲು-ರಾತ್ರಿಯೆನ್ನದೆ ಬರವಣೆಗೆಯಲ್ಲಿ ನಿರತರಾಗಿದ್ದರಂತೆ, ಅಷ್ಟೊಂದು ಚಿತ್ರಗಳು ಅವರ ಕೈಲ್ಲಿದ್ದವು. ಒಂದು ಸಂದರ್ಶನದಲ್ಲಿ ಅವರೆ ಸ್ವತಃ ಹೇಳುತ್ತಿದ್ದರು. ವಾರಕ್ಕೆ ಅವರದೆ 4 ಚಿತ್ರಗಳು ಬಿಡುಗಡೆಯಾದಂತಹ ದಾಖಲೆಗಳು ಇದೆಯಂತೆ. ಅವರು ಕೆಲಸ ಮಾಡಿದಂತಹ ಹೆಚ್ಚಿನ ಚಿತ್ರಗಳು ಯಶಸ್ವಿ ಚಿತ್ರಗಳೆ. ಇವತ್ತಿಗೂ ಮರೆಯದಂತಹ ಚಿತ್ರಗಳೆ. ಸ್ನೇಹಿತರ ಸವಾಲ್, ಸಾಹಸಸಿಂಹ, ಮರೆಯದ ಮಾಣಿಕ್ಯ, ಟೈಗರ್, ಸಾಂಗ್ಲಿಯಾನ, ಸಿ.ಬಿ.ಐ ಶಂಕರ್, ಗೌರಿ ಗಣೇಶ ಹೀಗೆ ತುಂಬಾ ಚಿತ್ರಗಳು ಪಟ್ಟಿಯಲ್ಲಿದೆ.

ಅವರಿಗೆ ಗೌರಿ ಗಣೇಶ ಹಾಗೂ ಯಾರಿಗೂ ಹೇಳ್ಬೇಡಿ ಚಿತ್ರದ ಸಂಭಾಷಣೆಗೆ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಕೂಡ ದೊರಕಿದೆ. ನಟನೆಯಲ್ಲೂ ಸಹ ನಾಗಭೂಷಣ್ ರವರು ಅದ್ಭುತ ಕಲಾವಿದರೆ, ಹಾಸ್ಯ ಪಾತ್ರವಾಗಲಿ, ಗಂಭೀರವಾದ ಪಾತ್ರವಾಗಲಿ ಯಾವುದೇ ಪಾತ್ರಕ್ಕದಾರೂ ಜೀವ ತುಂಬುತ್ತಿದ್ದರು. ಅವರು ಅಭಿನಯಿಸಿದ ಹೆಚ್ಚಿನ ಪಾತ್ರಗಳು ಚಿಕ್ಕ-ಚಿಕ್ಕ ಪಾತ್ರಗಳೆ. ಒಂದು ಚಿತ್ರದಲ್ಲಿ ಒಂದು ಸನ್ನಿವೇಶಕ್ಕೆ ಇಲ್ಲವೆ ಎರಡು- ಮೂರು ದೃಶ್ಯಗಳಿಗೆ ಅಷ್ಟೆ ಅವರ ಪಾತ್ರ ಸೀಮಿತವಾಗಿರುತ್ತಿತ್ತು. ಚಿಕ್ಕ ಪಾತ್ರವಾದರೂ ಸಹ ಅದನ್ನು ಚೊಕ್ಕವಾಗಿ ಅಭಿನಯಿಸುವ ಚಾಣಾಕ್ಷತನ ಅವರಲ್ಲಿತ್ತು. ಇವತ್ತು ಎಷ್ಟೋ ಜನಕ್ಕೆ ಇವರೆ ನಾಗಭೂಷಣ್ ಎನ್ನುವುದು ಗೊತ್ತಿಲ್ಲದಿರಬಹುದು. ಆದರೆ ಅವರ ಚಿತ್ರಗಳು, ಪಾತ್ರಗಳು ಮಾತ್ರ ಇವತ್ತಿಗೂ ನೆನಪಿಲ್ಲಿರುತ್ತದೆ. ಉದಾ : ಜಗ್ಗೇಶರವರೊಂದಿಗೆ ‘ಬಲ್ ನನ್ ಮಗ’ ಚಿತ್ರದಲ್ಲಿ ಮಾಡಿದ ಮ್ಯಾನೇಜರ್ ಆಗಿ ಹಾಸ್ಯಪಾತ್ರ, ‘ಲಾಕಪ್ ಡೆತ್’ ಚಿತ್ರದ ಕೊನೆಯ ದೃಶ್ಯದಲ್ಲಿ ಸಮಾಜದ ದೌರ್ಬಲ್ಯಗಳ ಬಗ್ಗೆ ಪ್ರತಿವಾದಿಸುವ ಲಾಯರ್ ಆಗಿ, ‘ನಮ್ಮೂರ ರಾಜ’ ಚಿತ್ರದಲ್ಲಿ ಪೂಜಾರಿಯಾಗಿ ಹೀಗೆ ಅವರು ಮಾಡಿದಂತಹ ಹಲವಾರು ಪಾತ್ರಗಳು ಮರೆಯಲು ಸಾಧ್ಯವಿಲ್ಲಾ.ಅಧಕೆ ಇರಬಹುದು ಅವರನ್ನು ‘ನವರಸ ವಿಶಾರದ’ ಎಂದು ಕರೆಯುತ್ತಿದ್ದರು.

amma

ಫೋಟೋ ಕೃಪೆ : You Tube

ಆದರೆ ಇವತ್ತು “ಕುಣಿಗಲ್ ನಾಗಭೂಷಣ್ ” ರವರು ನಮ್ಮೊಂದಿಗಿಲ್ಲಾ. ಅನಾರೋಗ್ಯದಿಂದ 23 ಜೂನ್ 2013ರಲ್ಲಿ ನಮ್ಮಿಂದ ದೂರವಾಗಿದ್ದಾರೆ ಇವತ್ತಿಗೆ 7 ವರ್ಷಗಳಾಯ್ತು. ತುಂಬಾ ನೋವಿನ ಸಂಗತಿಯೆಂದರೆ ಅವರ ಕೊನೆಯ ದಿನಗಳು ಮಾತ್ರ ಅಷ್ಟೆನೂ ಚೆನ್ನಾಗಿರಲಿಲ್ಲಾ. ಕೇಳಿದಾಗ ತುಂಬಾ ದುಃಖಕರವಾಗಿರತ್ತೆ. ಕಾಲಿನಲ್ಲಾದ ಗ್ಯಾಂಗ್ರಿನ್ ನಿಂದ ತಮ್ಮ ಒಂದು ಕಾಲನ್ನು ಕಳೆದುಕೊಳ್ಳುತ್ತಾರೆ.

ಅದು ಸದಾ ಹಸನ್ಮುಖಿಯಾದ ಅವರ ಜೀವನದ ನಗುವನ್ನೆ ಕಸಿದುಕೊಳ್ಳುತ್ತದೆ. ಎಷ್ಟೋ ಚಿತ್ರಗಳಿಗೆ ಬಿಡುವಿಲ್ಲದೆ ಕೆಲಸ ಮಾಡಿದ ನಾಗಭೂಷಣ್ ರವರಿಗೆ ಕೊನೆ ಸಮಯದಲ್ಲಿ ನಮ್ಮ ಚಿತ್ರರಂಗದ ಕೆಲವು ಆಪ್ತರು, ನಟರು, ನಿರ್ದೇಶಕರು ಅಷ್ಟೆ ಸಹಾಯಕ್ಕೆ ಬಂದವರು. ಅವರಿಂದ ಕೆಲಸ ಮಾಡಿಸಿಕೊಂಡ ನಿರ್ಮಾಪಕರಾಗಲಿ, ಅವರ ಸಂಭಾಷಣೆಯಿಂದ ಚಪ್ಪಾಳೆ ಗಿಟ್ಟಿಸಿಕೊಂಡವರಾಗಲಿ, ಸಂಘಗಳಾಗಲಿ ನೆರವಿಗೆ ಬರಲಿಲ್ಲಾ ಎಂದು ಕೇಳಿದಾಗ ತುಂಬಾ ನೋವಾಗುತ್ತದೆ. ಅವರ ಜೀವನದ ಕೊನೆಯ ದಿನಗಳನ್ನು ಟಿ.ವಿಯಲ್ಲಿ ನೋಡಿದಾಗ ಕಣ್ಣಲ್ಲಿ ನೀರು ಬರುವುದು ಖಂಡಿತ.

  • ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ) 

amma

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW