ಸಿಖ್ಖ ಧರ್ಮದಲ್ಲಿ ಪಗಡಿಗೆ ವಿಶೇಷವಾದ ಗೌರವವಿದೆ. ನಮ್ಮ ಉತ್ತರಕರ್ನಾಟಕದ ಕಡೆಗೆ ಬಂದರೆ ಪಗಡಿಯನ್ನು ಪಟಗ ಅನ್ನುತ್ತೇವೆ. ಒಂದೊಂದು ಸ್ಥಳದಲ್ಲಿಯೂ ಒಂದೊಂದು ಹೆಸರಿನಿಂದ ಕರೆಯುತ್ತೇವೆ. ಆದರೆ ಸಿಖ್ ಧರ್ಮದಲ್ಲಿ ಸಣ್ಣವರಿದ್ದಾಗಿನಿಂದಲೇ ಪಗಡಿ ಕಟ್ಟುವುದು ಕಡ್ಡಾಯವಾಗಿರುತ್ತದೆ. ಅದು ಸಿಖ್ ಧರ್ಮದ ಸಂಕೇತ. ಆ ಪಗಡಿ ಬಣ್ಣ ಬಣ್ಣದಾಗಿರಬಹುದು, ಉದ್ದವಾಗಿರಬಹುದು ಅಥವಾ ಚಿಕ್ಕದಾಗಿರಬಹುದು ಅದು ಹೇಗೆಯೇ ಇರಬಹುದು. ಒಟ್ಟಿನಲ್ಲಿ ಅದು ತಲೆ ಮೇಲೆ ಇರಬೇಕು. ಆಗಲೇ ಅವರು ಸರ್ದಾರ್ ಜೀ ಎಂದು ಗುರುತಿಸಿಕೊಳ್ಳುತ್ತಾರೆ. ಪಗಡಿಗೂ ಮತ್ತು ಸಿಖ್ ರಿಗೂ ಒಂದು ಅನ್ಯೂನ್ಯವಾದ ನಂಟಿದೆ.
ಇದೇ ಪಗಡಿಯಿಂದಲೇ ಜಗತ್ ವಿಖ್ಯಾತರಾದ ಮತ್ತು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದ ವ್ಯಕ್ತಿಯೊಬ್ಬರು ಭಾರತದಲ್ಲಿದ್ದಾರೆ. ಅವರ ಹೆಸರೇ ಬಾಬಾ ಅವತಾರ ಸಿಂಗ್ ಮಹಾಕಾಲ್. ಅವರ ವಾಸಸ್ಥಳ ಪಟಿಯಾಲ.
ಅವರ ಪಗಡಿಯ ವಿಶೇಷತೆ ಏನೆಂದರೆ ಸಾಮಾನ್ಯವಾಗಿ ಸಿಖ್ ರು ಪಗಡಿಗಾಗಿ ಆರರಿಂದ ಏಳು ಮೀಟರ್ ವರೆಗೂ ಬಟ್ಟೆಯನ್ನು ಬಳುಸುತ್ತಾರೆ. ಆದರೆ ಈ ಸರ್ದಾರ್ ಜಿ ಬಳುಸುವ ಬಟ್ಟೆಯ ಉದ್ದ ೬೪೫ ಮೀಟರ್. ಕುತುಬ್ ಮಿನಾರ್ ಎತ್ತರಕ್ಕೆ ಹೋಲಿಸಿದರೆ ಕುತುಬ್ ಮಿನಾರ್ ೭೩ ಮೀಟರ್ ಉದ್ದವಾಗಿದ್ದರೆ, ಸರ್ದಾರ್ ಜಿ ಅವರ ಪಗಡಿ ಕುತುಬ್ ಮಿನಾರ್ ಗಿಂತ ಒಂಬತ್ತು ಪಟ್ಟು ಉದ್ದವಾಗಿದೆ ಎಂದರೆ ನೀವು ನಂಬಲೇ ಬೇಕು.
ಅವತಾರ ಸಿಂಗ್ ಜಿ ಅವರ ಪಗಡಿ ಜಗತ್ತಿನಲ್ಲಿಯೇ ಅತಿ ದೊಡ್ಡದಾಗಿದ್ದು, ಅದು ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರಿದೆ. ಅವರು ಅಷ್ಟು ಭಾರದ, ಎತ್ತರದ ಪಗಡಿ ಹೇಗೆ ಕಟ್ಟುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆ ಹಾಗು ಕುತೂಹಲ. ಪಗಡಿ ಕಟ್ಟುಲು ಅವರು ತಗೆದು ಕೊಳ್ಳುವ ಸಮಯ ಐದರಿಂದ ಆರು ತಾಸುಗಳು. ಮತ್ತು ಕಟ್ಟಿದ್ದನ್ನು ಬಿಚ್ಚಿಡಲು ಸುಮಾರು ಎರಡು ತಾಸುಗಳು ತಗೆದುಕೊಳ್ಳುತ್ತಾರೆ.
ಅವತಾರ ಸಿಂಗ್ ಜಿ ದೇಹದ ತೂಕ ೮೫ ಕೆಜಿಗಳಾದರೆ ಅವರ ಪಗಡಿಯ ತೂಕ ೧೦೦ ಕೆಜಿ ಮತ್ತು ಅದರಲ್ಲಿ ಬರೆಸುವ ಅಲಂಕಾರಿಕ ವಸ್ತುಗಳಾದ ಚಂದ್ರ, ಖಡ್ಗ, ಕೃಪಣ ಇತ್ಯಾದಿಗಳ ತೂಕ ೨೦ ಕೆಜಿಯಾಗಿದೆ. ಒಟ್ಟು ತೂಕ ೧೨೦ ಕೆಜಿಯಾಗಿದೆ. ಆ ಬ್ರಹ್ಮಾಂಡ ಭಾರವನ್ನು ತಲೆಯ ಮೇಲೆ ಹೊತ್ತುಕೊಂಡು ಬೈಕ್ ಮೇಲೆ ಸವಾರಿ ಹೊರಟರೆ ಜನ ತಬ್ಬಿಬಾಗಿ ನಿಂತು ನೋಡುತ್ತಾರೆ.
ಅವರ ಪಗಡಿಯನ್ನು ನೋಡಿ ಮಾರು ಹೋದವರಿಲ್ಲ. ಅವರೊಂದಿಗೆ ಫೋಟೋಕ್ಕಾಗಿ ಜನ ಮುಗೆ ಬೀಳುತ್ತಾರೆ. ಆ ಪಗಡಿ ನಿಮಗೆ ಭಾರವಾಗುವುದಿಲ್ಲವೇ? ಎಂದು ಜನ ಕೇಳುವ ಪ್ರಶ್ನೆಗೆ ಅವರು ಹೇಳುವುದೊಂದೇ ಅದು ಕಮಲದ ಹೂವಿನಂತೆ ಹಗುರವಾಗಿದೆ ಎನ್ನುತ್ತಾರೆ.
ಅವರತ್ತ ಸಿಂಗ್ ಜಿ ಅವರು ಆರಂಭದಲ್ಲಿ ೧೫೦ ಮೀಟರ್, ಅನಂತರ ೨೦೦ ಮೀಟರ್ ಆದನಂತರ ೩೬೫ ಮೀಟರ್ ಬಟ್ಟೆಗಳನ್ನು ಬಳಸಿ ಪಗಡಿಯನ್ನು ಕಟ್ಟಲು ಶುರು ಮಾಡಿದ್ದರು. ಅದು ಈಗ ೬೪೫ ಮೀಟರ್ ಗೆ ಬಂದು ನಿಂತಿದೆ ಎಂದು ನಗುತ್ತ ವಿವರಣೆ ಕೊಡುತ್ತಾರೆ. ಪಗಡಿಗಾಗಿ ಅವರು ಸುಮಾರು ೭೦,೦೦೦ ರಿಂದ ೮೦,೦೦೦ ರೂಪಾಯಿವರೆಗೂ ಹಣವನ್ನು ವ್ಯಹಿಸಿದ್ದಾರೆ.
ಈ ರೀತಿ ಪಗಡಿ ಕಟ್ಟುವ ಉದ್ದೇಶವೇನು ?ಎನ್ನುವ ಪ್ರಶ್ನೆಗೆ ಅವರು ಹೇಳುವ ಉತ್ತರ ನಾನು ಯಾವುದೇ ಧರ್ಮದ ವಿರೋಧಿಯಲ್ಲ. ತಲೆಯ ಮೇಲಿನ ಪಗಡಿ ಸಿಖ್ ಧರ್ಮದ ಸಂಕೇತ. ನಾನು ಸಿಖ್ ಧರ್ಮವನ್ನು ಉಳಿಸುವ ಅಭಿಯಾನ ಮಾಡುತ್ತಿದ್ದೇನೆ ಎನ್ನುತ್ತಾರೆ.
ಅದನ್ನು ತಾಸುಗಂಟಲೇ ಕಟ್ಟುವಾಗ ಅವತಾರ ಸಿಂಗ್ ಜಿ ಅವರಿಗೆ ಯಾವುದೇ ಸುಸ್ತಾಗಲಿ, ಬೇಸರವಾಗಲಿ ಇರುವುದಿಲ್ಲವಂತೆ. ಬದಲಾಗಿ ಅವರು ಅದನ್ನು ಕಟ್ಟುವಾಗ ನಿಂತು ನೋಡುವಾಗ ನೋಡುಗರಿಗೆಯೇ ಸುಸ್ತಾಗಬೇಕು ಎನ್ನುತ್ತಾರೆ.
ಅವತಾರ ಸಿಂಗ್ ಪಗಡಿಯನ್ನು ನೋಡುವುದೇ ಒಂದು ಸಂಭ್ರಮ. ಯಾವಾಗಾದರೂ ಪಟಿಯಾಲದ ಕಡೆ ಪ್ರಯಾಣ ಬೆಳೆಸಿದರೆ ಬಾಬಾ ಅವತಾರ ಸಿಂಗ್ ಮಹಾಕಾಲ್ ಅವರನ್ನು ತಪ್ಪದೆ ಭೇಟಿಯಾಗಿ, ಅವರೊಂದಿಗಿನ ಸೆಲ್ಫಿ ತಗೆಸಿಕೊಳ್ಳಿ ಮತ್ತು ಆ ಫೋಟೋವನ್ನು ನಮಗೆ ಕಳುಹಿಸುವುದನ್ನು ಮರೆಯಬೇಡಿ.
- ಶಾಲಿನಿ ಹೂಲಿ ಪ್ರದೀಪ್