ಇಂದಿನ ಉತ್ಸಾಹಕ್ಕೆ ಕಾರಣ ನೀನು…
ನಾಳೆಯ ಉಲ್ಲಾಸಕ್ಕೆ ತೋರಣ ನೀನು…
ಹೇಳಿಕೊಳ್ಳಲಾಗದ ನನ್ನ ಹೃದಯದಲ್ಲಿರುವ ಪ್ರೇಮದ ಪ್ರೇರಣೆ ನೀನು ಅಪ್ಪ…
ಹಿಂದಿನಿಂದಲೂ ಎಲ್ಲರೂ ಹೇಳುವಂತೆ ಮಕ್ಕಳಿಗೆ ತಾಯಿ ಪ್ರೇಮ ಸ್ವರೂಪ. ಅವಳ ನಿಷ್ಕಲ್ಮಶ ಪ್ರೀತಿ, ಆರೈಕೆಯ ಮುಂದೆ ಜಗತ್ತಿನಲ್ಲಿ ಮಿಕ್ಕಿದ್ದೆಲ್ಲವೂ ಶೂನ್ಯವೆನಿಸಿಬಿಡುತ್ತದೆ. ಆದರೆ ಒಮ್ಮೊಮ್ಮೆ ತನ್ನ ಜೀವನವನ್ನೇ ತನ್ನ ಮಕ್ಕಳಿಗೆಂದು ತನ್ನ ಪರಿವಾರಕ್ಕೆಂದು ತನ್ನ ಸರ್ವಸ್ವವನ್ನು ಸಮರ್ಪಿಸುವ ತ್ಯಾಗಮಯಿ ತಂದೆಯ ಪ್ರಾಮುಖ್ಯತೆಯನ್ನು ಮರೆತುಬಿಡುತ್ತೇವೆ.
ಮಕ್ಕಳು ಚಿಕ್ಕವರಿದ್ದಾಗ ತಾಯಿಯ ಪ್ರೀತಿಯ ಕೈ ತುತ್ತು, ಬೆಳೆಯುತ್ತಾ ಅವಳ ಆರೈಕೆ ಮತ್ತು ಕಾಳಜಿ ಮಕ್ಕಳ ಕಣ್ಣೆದುರಿರುತ್ತದೆ ಹಾಗಾಗಿ ಅಮ್ಮ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತದೆ. ಅದೇ ಅಪ್ಪ ಎಂದರೆ ಅವನು ಕೋಪಿಷ್ಠ ಯಾವಾಗಲೂ ಶಿಸ್ತು ಎಂದು ಗದರಿಸುವ ಸಿಡುಕ ಎಂದು ಅನ್ನಿಸುತ್ತದೆ. ಆದರೆ ಅವನು ಹಗಲಿರುಳು ತನ್ನ ಪರಿವಾರಕ್ಕಾಗಿ ಮತ್ತು ಮಕ್ಕಳ ಉತ್ತಮ ಭವಿಷ್ಯಕಾಗಿ ವಿರಾಮವಿಲ್ಲದೆ ದುಡಿದು ತನ್ನೆಲ್ಲಾ ಕಷ್ಟಗಳನ್ನು ಅವನೊಬ್ಬನೇ ನುಂಗಿ ನಮಗೆ ಸುಖದ ಹಾದಿ ತೋರುವ ಅವನ ಪರಿಶ್ರಮದ ಬೆವರ ಹನಿಗಳು ಅವನ ಶಿಸ್ತಿನ ಪಾಠದ ಮುಂದೆ ಮರೆಯಾಗಿರುತ್ತದೆ. ನಾವು ಜೀವನದ ಹೊರ ಪ್ರಪಂಚದಲ್ಲಿ ಕೆಲವು ಪಾಠಗಳನ್ನು ಕಲಿಯುವವರೆಗೂ ಮಕ್ಕಳಿಗೆ ತಾಯಿಯ ಪ್ರೀತಿ, ಆರೈಕೆ ಎಷ್ಟು ಮುಖ್ಯವೋ ಹಾಗೆಯೇ ತಂದೆಯ ಶಿಸ್ತು, ಸಂಯಮವು ಅಷ್ಟೇ ಮುಖ್ಯ ಎಂದು ತಿಳಿಯುವುದಿಲ್ಲ ಹಾಗೂ ಅವನ ಕೋಪದ ಹಿಂದಿನ ಕಾಳಜಿ, ಅವನು ಮಕ್ಕಳಿಗಾಗಿ ಜೀವನದಲ್ಲಿ ನೀಡಿರುವ ಭದ್ರತೆ ಭಾವ ತಿಳಿಯಲು ಬಹಳ ಸಮಯವೇ ಬೇಕಾಗುತ್ತದೆ. ಅಲ್ಲಿಯವರೆಗೆ ಅವನ ಶಿಸ್ತಿನಲ್ಲಿದ್ದ ಪ್ರೀತಿ ಮಕ್ಕಳಿಗೆ ಕಾಣುವುದೇ ಇಲ್ಲ.
ತಂದೆಗೆ ಮಕ್ಕಳೇ ಆಸ್ತಿ, ಕನಸು ಮತ್ತು ಭವಿಷ್ಯ ತನ್ನ ಎಲ್ಲಾ ಆಸೆ ಕನಸುಗಳನ್ನು ಮತ್ತು ತನ್ನ ಅಗತ್ಯಗಳನ್ನೆಲ್ಲಾ ತ್ಯಾಗ ಮಾಡಿ ತನ್ನ ನೋವನ್ನೆಲ್ಲ ಮಕ್ಕಳ ಭವಿಷ್ಯಕ್ಕಾಗಿ ತನ್ನ ಒಡಲೊಳಗೆ ಇರಿಸಿಕೊಂಡು ಸದಾ ಹಸನ್ಮುಖಿಯಾಗಿ ಇರಲು ಸಾಧ್ಯವಾಗುವ ಏಕೈಕ ಜೀವ ಅಪ್ಪ. ಮಕ್ಕಳು ಬೆಳೆದು ದೊಡ್ಡವರಾದರೂ ತನ್ನ ಮಕ್ಕಳಿಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳದೆ ಅವರಿಗೆ ಯಾವುದೇ ರೀತಿಯ ನೋವು ಕೊಡಲು ಬಯಸದ ಸ್ವಾಭಿಮಾನಿ ಈ ಅಪ್ಪ.
ಅವನ ಪ್ರೀತಿಯನ್ನು ಅರಿತ ನಂತರ ಅಪ್ಪ ಹೆಣ್ಣುಮಕ್ಕಳಿಗೆ ಹೀರೋ ಆಗಿಯೂ ಮತ್ತು ಗುಂಡು ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿಯೂ ಕಾಣಿಸುತ್ತಾನೆ. ಅಂದಿನಿಂದ ಅಪ್ಪ ಮಕ್ಕಳಿಗೆ ಸರ್ವಸ್ವವಾಗಿ ಬಿಡುತ್ತಾನೆ.
ಮುದ್ದಾಗಿ ಬೆಳೆಸಿದ ತನ್ನ ರಾಜಕುಮಾರಿಯಂಥ ಮಗಳನ್ನು ರಾಜಕುಮಾರನಂಥ ಹುಡುಗನನ್ನು ಹುಡುಕಿ ತನ್ನ ಶಕ್ತಿ ಮೀರಿ ಅವಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಸಂದರ್ಭದಲ್ಲಿ ತನ್ನ ಮಡದಿಗೆ ಸಮಾಧಾನ ಮಾಡಿ ಮಗಳಿಗೆ ಹೊಸ ಭವಿಷ್ಯದ ಕನಸು ಬಿತ್ತಿ ಅವಳಿಗೆ ಧೈರ್ಯ ನೀಡಿ ತನ್ನೆಲ್ಲ ದುಃಖವನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು ನಗುನಗುತ್ತಾ ಅವಳನ್ನು ಗಂಡನ ಮನೆಗೆ ಕಳುಹಿಸುತ್ತಾನೆ. ಮಗಳು ಹೋದ ನಂತರ ಅವಳು ಹೋದ ಹಾದಿಯನ್ನೇ ನೋಡುತ್ತಾ ಯಾರಿಗೂ ಕಾಣದಂತೆ ಬಿಕ್ಕಳಿಸಿ ಅಳುವ ಮಗಳ ಪಾಲಿನ ಕಿನ್ನರ ಈ ಅಪ್ಪ .
ಬೇಕಾದ ಅಗತ್ಯಗಳನ್ನೆಲ್ಲ ಒದಗಿಸಿ ಉತ್ತಮ ಮಾರ್ಗದರ್ಶನ ನೀಡಿ ಪ್ರೀತಿಯೊಂದಿಗೆ ಸ್ನೇಹದಿಂದ ಬೆಳೆಸಿದ ಮಗ ಮುಂದೊಂದು ದಿನ ಅಥವಾ ಅವನ ಮುಪ್ಪಿನ ಕಾಲದಲ್ಲಿ ಅದೇ ತಂದೆಯ ವಿರುದ್ಧ ತಿರಸ್ಕಾರದ ಮಾತನಾಡಿದರೂ ಅಥವಾ ಅವನನ್ನು ತಿರಸ್ಕರಿಸಿದರೂ ಅದನ್ನು ಮರುಪ್ರಶ್ನಿಸಿದೆ ಸಹಿಸಿಕೊಂಡು ತನ್ನ ಮಡದಿಗು ಸಮಾಧಾನ ಮಾಡುತ್ತಾ ಮಕ್ಕಳ ಏಳಿಗೆಯನ್ನೇ ಬಯಸುವ ಏಕೈಕ ನಿಸ್ವಾರ್ಥ ಹಿತೈಷಿ ಅಪ್ಪ.
ಆಕಸ್ಮಿಕವಾಗಿ ತಾಯಿಯ ಪ್ರೀತಿಯನ್ನು ಕಳೆದುಕೊಂಡ ಮಕ್ಕಳಿಗೆ ತಾಯಿಯ ನೆನಪು ಕಾಡದಂತೆ ಮತ್ತು ಅವಳ ಇಲ್ಲದಿರುವಿಕೆಯಿಂದ ಮಕ್ಕಳು ನೊಂದು ಕೊರಗದಂತೆ ಮಕ್ಕಳ ಜೀವನದ ಬಹು ಪ್ರಮುಖ ಸಂದರ್ಭಗಳಲ್ಲಿ ಅವನೇ ತಾಯಿಯಾಗಿ ಅವಳ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ ಮತ್ತು ಮಕ್ಕಳ ನಗುವಲ್ಲಿ ತನ್ನ ನೋವನ್ನು ಮರೆಯಲು ಪ್ರಯತ್ನಿಸುವ ಪ್ರೇಮಮಯಿ ಈ ಅಪ್ಪ .
ಮಕ್ಕಳ ಜೀವನದ ಸೋಲು ಗೆಲುವಿನ ಹಾದಿಯಲ್ಲಿ ಅವರ ನೆರಳಾಗಿ ಅವರ ಹಿಂದೆಯೇ ನಿಂತು ಅವರಿಗೆ ಆನೆ ಬಲವನ್ನು ನೀಡುತ್ತಾ ಪೋಷಿಸಿ, ಪ್ರೋತ್ಸಾಹಿಸಿ ಅವರಿಗೆ ಜೀವ ತುಂಬುವವನು ಈ ಅಪ್ಪ. ಇಂತಹ ದೇವರ ಸಮಾನನಾದ ಅಪ್ಪನಿಗೆ ಕೃತಜ್ಞತೆ ಸಲ್ಲಿಸಲೆಂದೇ ವಿಶೇಷ ದಿನವೊಂದು ಬಂದಿದೆ ಅದುವೇ ವಿಶ್ವ ಅಪ್ಪಂದಿರ ದಿನಾಚರಣೆ. ಇಂದು ವಿಶೇಷವಾಗಿ ನಾವೆಲ್ಲರೂ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿರುವ ನಮ್ಮ ತಂದೆಗೆ ಪ್ರೀತಿಯಿಂದ ಒಂದು ಕೃತಜ್ಞತೆಯನ್ನು ತಿಳಿಸಿ ಸಂಭ್ರಮಿಸೋಣ.
ಎಲ್ಲಾ ತಂದೆಯರಿಗೂ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು.
ಲೇಖನ : ಕಾವ್ಯ ದೇವರಾಜ್