ಕವನ : ಶಿವಮನ್ಯು (ಎಸ್.ಎಚ್.ಪಾಟೀಲ ) ಮುದ್ದೇಬಿಹಾಳ
ಏಕೆ ನನ್ನೊಳಗೆ ನೆಲೆಯಾಗಿಹೆ
ಓ ನೆನಪೆ.
ದೂರ ಕೈಗೆ ಸಿಗದಂತೆ ಆ
ಗಗನ ತಾರೆಯಲಿ ಬೆರೆತುಬಿಡು
ಓ ಹೊಳಪೆ.
ನೆನಪು ಎನ್ನನ್ನು ಕಾಡುತಿದೆ
ವಾಸ್ತವಕೆ ಕಣ್ಣು ತೆರೆಯದೆ
ಮೊಡದಿಂದ ಸುರಿದ ಮಳೆಯ
ಹನಿಗಳು ಬೊಗಸೆಗೆ ಸಿಕ್ಕಷ್ಟೇ ದಕ್ಕಿದವು.
ಉಳಿದೆಲ್ಲವು ನೆಲವ ಸೇರಿ ಬತ್ತಿದವು.
ನನ್ನ ಒಲವ ಭಾವನೆ , ಕನಸುಗಳು.
ದಕ್ಕುದಷ್ಟೇ ನನ್ನೊಳಗೆ ಉಳಿದಿಹವು.
ನಾಳೆಗೆ ಸಾಗುವ ಬದುಕಿದು
ನಿನ್ನೆಯನೇ ಮತ್ತೆ ಮರಳಿಸಬೇಡ ನೆನಪೆ
ಒಲವಿನ ಕದವು ಮುಚ್ಚಿದ ಮೇಲೆ
ಮತ್ತೇಕೆ ಹೆಜ್ಜೆಯನ್ನು ಹಿಂದಕ್ಕೆ ಹೊರಳಿಸುತಿರುವೆ.
ಎಲ್ಲಾ ಮರೆತು ಎದೆಯೊಳು ಶಾಂತಿಯು
ಸುಳಿದಾಡುತಿರಲು
ಮತ್ತೇಕೆ ಸುಡುವ ಜ್ವಾಲೆಯಳೂ
ದಗದಗಿಸುತಿರುವೆ ನೆನಪೆ
ಮರೆವಿನ ಮಳೆಯ ಸುರಿಯದೆ
ಚೆಂದದ ಹೂವಿನಂತೆ ಎನ್ನೊಲವು
ಅಲ್ಪಾಯು ಪಡೆಯಿತೆ ?
ಅರಳುವ ಕ್ಷಣದ ಹೂ ನಗುವಿನಂತೆ
ಮೋಹಕ ಬಗೆಯೇ ನನ್ನೊಳಗೆ ಉಳಿಯಿತೆ ?
ದಿಕ್ಕು ತಪ್ಪಿತೆಂದು ನಾ ಹೇಳಲಾರೆ
ದಿಕ್ಕು ಬದಲಿಸಿ ನೀ ದೂರ ನಡೆದೆ.
ಬದುಕ ಪಯಣದಲ್ಲಿ ದಡವ ಸೇರಿಸು
ನೆನಪೆ ಮತ್ತೆ ಮತ್ತೆ ಸುಳಿಯದೆ
ನಾಳೆಗೆ ಹೊಸ ಹೆಜ್ಜೆಯ ಹಾಕಿ
ನಲಿವಿನ ತೀರಕೆ ಸಾಗಲು