ಶ್ರೀ ದುರ್ಗಾದೇವಿಯ ಗುಡಿ ಇಡೀ ಸೂಪಾದಲ್ಲಿ ಹೆಣ್ಣು ದೇವರ ಗುಡಿ ಇದ್ದದ್ದು ಅಂದರೆ ಇದೊಂದೇ. ರಾತ್ರಿ ಹೊತ್ತು ಅಲ್ಲಿಯ ಪೌಳಿಯಲ್ಲಿ ಯಾರೋ ಮಲಗುತ್ತಿದ್ದರು. ಯಾರೋ ಎದ್ದು ನಸುಕಿನಲ್ಲಿ ಎದ್ದು ಹೋಗುತ್ತಿದ್ದರು. ಬೆಳಿಗ್ಗೆ ನೋಡಿದರೆ ಹೆಂಗಸರ ಉದ್ದ ಕೂದಲು ಅಲ್ಲಿಲ್ಲಿ ಬಿದ್ದದ್ದನ್ನು ನೋಡಿ ಪೂಜಾರಿ ಶಪಿಸಿಕೊಂಡು ದಾಟಿ ಹೋಗುತ್ತಿದ್ದ.
ಚಾಂದೇವಾಡಿ ಕಾಡಿನ ನದಿಯ ತಟದಲ್ಲಿ ಉಸುಕಿನ ಗಣಿ ಶೋಧನೆಯತ್ತ…
ಇಲ್ಲಿಯವರೆಗೆ – [ಈಗ ನಮ್ಮ ಶಿಬಿರವನ್ನು ಕ್ಯಾಸ್ಟಲ್ ರಾಕ್ ಮತ್ತು ಚಾಂದೇವಾಡಿ ಅರಣ್ಯದಲ್ಲಿ ಹಾಕಿದೆವು. ಆಫೀಸಿನವರು ಕೊಟ್ಟಿದ್ದ ಗುಡಾರದಂಥ ದೊಡ್ಡ ಟೆಂಟನ್ನು ಒಂದು ಅನುಕೂಲಕರ ಜಾಗ ನೋಡಿ ಹೂಡಿದೆವು. ಒಳಗೆ ಕಾಡು ಪ್ರಾಣಿಗಳು ಮತ್ತು ಹಾವು ಚೇಳುಗಳು ಪ್ರವೇಶಿಸದಂತೆ ವ್ಯವಸ್ಥೆ ಮಾಡಿಕೊಂಡೆವು. ನಮ್ಮ ತಂಡಕ್ಕೆ ಅಡುಗೆ ಮಾಡುತ್ತಿದ್ದ ಅಪ್ಪೂ ಕುಟ್ಟಿ ಅಲ್ಲಿ ನಮಗೆ ಥರಾವರಿ ಅಡುಗೆ ಮಾಡುತ್ತಿದ್ದ. ನಾವೆಲ್ಲ ಅವನಿಗೆ ಅಡುಗೆ ಸಹಾಯಕರಾಗಿಯೂ ನೆರವಾಗುತ್ತಿದ್ದೆವು. ಹಾಲೇ ಇಲ್ಲದಚಹ ಕುಡಿದು ನಮ್ಮೆಲ್ಲರ ತಲೆ ಕೆಟ್ಟು ಹೋಗಿತ್ತು. ಅಂಥ ಹೊತ್ತಿನಲ್ಲಿ ಟೆಂಟಿನ ಹತ್ತಿರ ಕಾಡಿನ ದಾರಿ ಹಿಡಿದು ಬಂದ ಒಬ್ಬ ಗೌಳಿಯ ದರ್ಶನ ಅಲ್ಲಿ ಆಯಿತು. ಅವನು ನಮ್ಮ ಟೆಂಟಿಗೆ ದಿನವೂ ಹಾಲು ತಂದು ಕೊಡಲು ಒಪ್ಪಿದ. ಒಂದು ಕ್ವಾರ್ಟರ್ ಬಾಟಲಿ ಹಾಲಿಗೆ ಆರು ರೂಪಾಯಿ ಎಂದು ಒಪ್ಪಿಸಿದೆವು. ನಮ್ಮ ತಂಡದಲ್ಲಿದ್ದ ಮರಾಠಿ ಹುಡುಗ ಹನುಮಂತ್ಯಾನ ಕತೆ ಇಲ್ಲಿ ಬಿಚ್ಚಿಕೊಂಡಿತು.
ಹನುಮಂತ್ಯಾ ಅಪ್ಪ-ಅಮ್ಮ ಇಲ್ಲದ ಹುಡುಗ ಅವನು ನಮ್ಮ ಸರ್ವೇ ತಂಡಕ್ಕೆ ಬಂದು ಸೇರಿಕೊಂಡದ್ದೇ ಒಂದು ಕೌತುಕದ ಸಂಗತಿ. ಸಿನಿಮಾದ ಕತೆಯ ಹಾಗೆ ಹನುಮಂತ್ಯಾನ ಕತೆಯಿತ್ತು. ಮುಂದೆ ಓದಿ….]
ಬ್ರಿಟಿಷ್ ಬಂಗಲೆ ಮುಂದೆ ಅಲೆಮಾರಿ ಹನುಮಂತ್ಯಾ
ಸೂಪಾದ ಶ್ರೀಧರ ಕಾಣಕೋಣಕರ ಅವರ ಒಣ ಮೀನು ಅಂಗಡಿಯಿಂದ ಹೊರದೂಡಲ್ಪಟ್ಟ ಹನುಮಂತ್ಯಾ ಸೀದಾ ನದಿಯ ಬಲ ದಂಡೆಯ ಕಡೆಗಿದ್ದ ಶ್ರೀ ದುರ್ಗಾದೇವಿಯ ಗುಡಿಯ ಕಡೆಗೆ ಹೋದ. ಇಡೀ ಸೂಪಾದಲ್ಲಿ ಹೆಣ್ಣು ದೇವರ ಗುಡಿ ಇದ್ದದ್ದು ಅಂದರೆ ಇದೊಂದೇ. ಪೂಜಾರಿ ಪ್ರತಿ ದಿನ ರಾತ್ರಿ ಹೊತ್ತು ಗುಡಿಯ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗುತ್ತಿದ್ದ. ರಾತ್ರಿ ಹೊತ್ತು ಅಲ್ಲಿಯ ಪೌಳಿಯಲ್ಲಿ ಯಾರೋ ಮಲಗುತ್ತಿದ್ದರು. ಯಾರೋ ಎದ್ದು ನಸುಕಿನಲ್ಲಿ ಎದ್ದು ಹೋಗುತ್ತಿದ್ದರು. ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ನೋಡಿದರೆ ಹೆಂಗಸರ ಉದ್ದ ಕೂದಲು ಅಲ್ಲಿಲ್ಲಿ ಬಿದ್ದದ್ದನ್ನು ನೋಡಿ ಪೂಜಾರಿ ಶಪಿಸಿಕೊಂಡು ದಾಟಿ ಹೋಗುತ್ತಿದ್ದ.
ಹತ್ತಿರದಲ್ಲಿಯೇ ಬ್ರಟಿಷ್ ಬಂಗಲೆ. ಬ್ರಿಟಿಷರ ಕಾಲದಲ್ಲಿ ಅದಕ್ಕೆ ‘ಇನಸ್ಪೆಕ್ಶನ್ ಬಂಗ್ಲೋ’ ಅನ್ನುತ್ತಿದ್ದರು. ಈಗ ಅಲ್ಲೊಬ್ಬ ಮೇಟಿ ಕಮ್ ಅಡುಗೆಯವನಿದ್ದ. ವಾಚಮನ್‌ನೂ ಅವನೇ ಅನ್ನಿ. ಡಿ’ಸೋಜ ಕ್ಸೇವಿಯರ್ ಅಂತ ಅವನ ಹೆಸರು. ಮಾಂಸದ ಅಡುಗೆಯನ್ನು ಪೊಗದಸ್ತಾಗಿ ಮಾಡುತ್ತಿದ್ದನಂತೆ. ಮೀನು ಅಡುಗೆಯನ್ನೂ ಜಬರದಸ್ತಾಗಿ ಮಾಡುತ್ತಿದ್ದ ಎಂದ ನಮ್ಮ ಇಂಜನಿಯರ್ ನಾಗೇಶ ಶಿರೋಡ್ಕರ ಹೇಳಿದ ನೆನಪು ನನಗೆ. ಕಾಡಿನಿಂದ ಮೊಲ, ಕಾಡು ಹಂದಿ, ಜಿಂಕೆ, ಕಾಡುಕೋಳಿಗಳ ಮಾಂಸವನ್ನು ಕಳ್ಳ ಮಾರ್ಗದಲ್ಲಿ ಯಾರೋ ಅಲ್ಲಿಗೆ ಸರಬರಾಜು ಮಾಡುತ್ತಿದ್ದರಂತೆ. ಸರಕಾರದ ನಿಷೇಧ ಗೊತ್ತಿದ್ದರೂ ಕಾಳೀ ಕಣಿವೆಯಲ್ಲಿ ಕಾಡಿನ ಈ ಬಲಿ ಪ್ರಾಣಿಗಳ ಹತ್ಯೆ ಸಾಮಾನ್ಯವಾಗಿತ್ತು. ಹಾಗೆಂದು ಮುಂದೆ ಒಂದು ದಿನ ಹನುಮಂತ್ಯಾನೇ ವಿವರಿಸಿ ಹೇಳಿದನೆನ್ನಿ.
ಫೋಟೋ ಕೃಪೆ – ಚಂದ್ರು ಹೊನ್ನಳ್ಳಿ
ಗೋವಾದ ಮದ್ಯಗಳಾದ ಫೆನ್ನಿ, ಕಾಜೂ, ಮಾಡ್ [ತೆಂಗಿನ ಮರದಿಂದ ತಗೆದ ಸೆರೆ] ಇನ್ನೂ ಅನೇಕ ಥರಾವರಿ ಗೋವಾ ಮಾಲುಗಳನ್ನು ಕಾಡಿನ ಒಳದಾರಿಯಲ್ಲಿ ಕದ್ದು ತಂದು ಇಲ್ಲಿ ಬಚ್ಚಿಡುತ್ತಿದ್ದರಂತೆ. ಬಂಗ್ಲೆಗೆ ಊಟಕ್ಕೆ ಬರುವವರಿಗೆ ಅದು ಸರಬರಾಜು ಆಗುತ್ತಿತ್ತಂತೆ. ಬಂಗ್ಲೆಯ ಮೇಟಿಯ ಹೆಂಡತಿ ಗೋವಾ ಸರಹದ್ದಿನವಳಾದದ್ದೂ, ಆಕೆಯೇ ಅದರ ಉಸ್ತುವಾರಿ ಮಾಡುತ್ತಿದ್ದುದೂ ಅದಕ್ಕೆ ಕಾರಣವಾಗಿತ್ತಂತೆ. ಮೇಟಿ ಡಿಸೋಜ ಲೋಕೋಪಯೋಗಿ ಇಲಾಖೆಯ ಡಿ ದರ್ಜೆಯ ನೌಕರ. ಅವನ ಚಿಕ್ಕ ಸಂಸಾರ ಬಂಗ್ಲೆಯ ಹಿಂದಿನ ಆವರಣದಲ್ಲಿಯೇ ಇತ್ತು. ಅಡುಗೆಯ ಸಹಾಯಕ್ಕೆ ಅವನ ಹೆಂಡತಿಯೇ ನಿಲ್ಲುತ್ತಿದ್ದಳು. ಬೇರೆ ಯಾರನ್ನೂ ಅಲ್ಲಿ ಸೇರಿಸುತ್ತಿರಲಿಲ್ಲ. ಅದು ಡಿಸೋಜನ ವ್ಯವಹಾರದ ಗುಟ್ಟು.
ರಾತ್ರಿ ಎಂಟಾದರೆ ಸಾಕು. ಬ್ರಿಟಿಷ ಬಂಗ್ಲೋದ ಬಣ್ಣವೇ ಬದಲಾಗಿ ಬಿಡುತ್ತಿತ್ತು. ಊರಿನ ಬೇರೆ ಯಾರೂ ಆ ಕಡೆಗೆ ಸುಳಿಯುತ್ತಿರಲಿಲ್ಲ. ಯಾರೋ ಬರುತ್ತಿದ್ದರು. ಯಾರೋ ಹೋಗುತ್ತಿದ್ದರು. ಅರಣ್ಯ ಇಲಾಖೆಯ ಜೀಪುಗಳು, ಕಂತ್ರಾಟುದಾರರ ಹಳೇ ಅಂಬಾಸಿಡಾರ್ ಕಾರುಗಳೂ ಬರುತ್ತಿದ್ದವು. ಮೇಟಿ ಡಿಸೋಜ ಅವರಿಗೆಲ್ಲ ಭಾರೀ ಮರ್ಯಾದೆ ಕೊಡುತ್ತಿದ್ದ. ಈ ಮೇಟಿಯನ್ನು ನೋಡಿದಾಗೊಮ್ಮೆ ತಾನೂ ಹೀಗೆ ಇಂಥ ಬಂಗ್ಲೆಯಲ್ಲಿ ಇರಬೇಕೆಂದು ಹನುಮಂತ್ಯಾ ಕನಸು ಕಾಣುತ್ತಿದ್ದ. ಆದರೆ ಸಧ್ಯ ತಾನೀಗ ಅಲೆಮಾರಿ. ಯಾರೋ ಕೊಟ್ಟ ಲಂಡ ಚೊಣ್ಣ. ಇನ್ಯಾರೋ ಕೊಟ್ಟ ಪಿಸಿದುಕೊಂಡಿದ್ದ ಅಂಗಿ. ಕೈಯಲ್ಲಿ ಬಿಡಿಗಾಸೂ ಇಲ್ಲ.
ಸೂಪಾ ಊರ ಮಧ್ಯದಲ್ಲಿಯೇ ಕಾಳಿ ಮತ್ತು ಪಾಂಡ್ರಿ ನದಿಗಳ ಸಂಗಮ
ಈ ಬ್ರಿಟಿಷ್ ಬಂಗ್ಲೆಯ ಹಿಂದೆಯೇ ಕಾಳಿ ಮತ್ತು ಪಾಂಡ್ರಿ ನದಿಗಳು ದಟ್ಟ ಕಾಡಿನಿಂದ ಹರಿದು ಬಂದು ಸಂಗಮವಾಗುತ್ತವೆ. ಇಲ್ಲಿಂದ ನದಿ ಪೂರ್ವಾಭಿಮುಖವಾಗಿ ಹರಿದು ದಾಂಡೇಲಿ ಅರಣ್ಯದತ್ತ ಸಾಗುತ್ತದೆ. ಸೂಪಾದಿಂದ ಪೂರ್ವಕ್ಕೆ ಒಂದೂವರೆ ಕೀ.ಮೀ. ಹರಿದ ನದಿ ಅಲ್ಲಿ ಎರಡು ಗುಡ್ಡಗಳನ್ನು ಶೀಳಿಕೊಂಡು ಮುಂದೆ ಸಾಗುತ್ತದೆ. ನದಿಯ ಎರಡೂ ದಡದಲ್ಲಿ ದಟ್ಟಾರಣ್ಯ. ಆ ಸ್ಥಳದಲ್ಲಿಯೇ ಸೂಪಾ ಆಣೆಕಟ್ಟನ್ನು ಕಟ್ಟಲು ಸ್ಥಳ ನಿರ್ಧಾರವಾಗಿದೆ. ಕಾಳಿ-ಪಾಂಡ್ರಿ ನದಿಗಳ ಸಂಗಮ ಸ್ಥಳವು ಸೂಪಾ ಭಾಗದ ಜನರಿಗೆ ಪವಿತ್ರವೂ ಆಗಿತ್ತು. ಎರಡೂ ನದಿಗಳು ಕೂಡುವ ಜಾಗದಲ್ಲಿ ಒಂದು ಅಚ್ಚರಿಯಿದೆ. ಏನಂದರೆ ಎರಡೂ ನದಿಗಳು ಇಲ್ಲಿ ಸೇರಿದಾಗ ಕಾಳೀ ನದಿಯ ನೀರು ಕಪ್ಪಗೆ ಇದ್ದರೆ ಪಾಂಡ್ರಿ ನದಿಯ ನೀರು ಬಿಳಿಯ ಬಣ್ಣದ್ದಾಗಿ ಒಡೆದು ಕಾಣುತ್ತಿತ್ತು.
ಈ ನದಿಗಳ ಸಂಗಮದ ಮಧ್ಯ ನೀರಿನ ಮಧ್ಯದಲ್ಲಿಯೇ ಒಂದು ದೊಡ್ಡ ದೇವರ ಕಟ್ಟೆಯನ್ನು ಯಾವುದೋ ಕಾಲದಲ್ಲಿ ನಿರ್ಮಿಸಿದ್ದರು. ಆ ಕಟ್ಟೆಯ ಮೇಲೆ ಮೂರು ಉದ್ದ ಕಲ್ಲುಗಳನ್ನು ನೆಡಲಾಗಿತ್ತು. ಸ್ಥಳೀಯ ಜನರು ಅವುಗಳಿಗೆ ಸೀತಾ- ರಾಮ-ಲಕ್ಷ್ಮಣ ಎಂದು ಕರೆದು ಪ್ರತಿ ಸೋಮವಾರ ಅಲ್ಲಿ ಪೂಜೆ ಮಾಡುತ್ತಿದ್ದರು. ಈ ಕಟ್ಟೆಗೆ ಹೋಗಬೇಕೆಂದರೆ ತೆಪ್ಪದಲ್ಲಿಯೇ ಹೋಗಬೇಕಾಗಿತ್ತು. ಪ್ರತಿ ವರ್ಷ ಊರಿನ ರಾಮಮಂದಿರದ ಜಾತ್ರೆಯ ಸಮಯದಲ್ಲಿ ಈ ನದಿಯ ಸಂಗಮದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಜನ ತೆಪ್ಪದಲ್ಲಿ ಹೋಗಿ ಅಲ್ಲಿಯ ಕಲ್ಲಿನ ದೇವರುಗಳಿಗೆ ಹಣ್ಣು-ಕಾಯಿ-ಹೂ ಅರ್ಪಿಸಿ, ಪೂಜೆ ಸಲ್ಲಿಸಿ ಬರುತ್ತಿದ್ದರು. ಮತ್ತು ರಾತ್ರಿ ಹೊತ್ತು ಶ್ರೀ ರಾಮನು ರಾವಣನನ್ನು ಕೊಂದ ನೆನಪಿಗೆ ಇಲ್ಲಿ ತಮಿಳು ನಾಡಿನಿಂದ ಕರೆಸಲ್ಪಡುತ್ತಿದ್ದ ಮದ್ದಿನವರು ಎರಡು ಗಂಟೆಗಳ ಕಾಲ ಪಟಾಕಿ ಸಿಡಿಸಿ ಹೋಗುತ್ತಿದ್ದರು. ಅದನ್ನು ನೋಡಲು ಇಡೀ ಸೂಪಾದ ಜನರೇ ಅಲ್ಲದೆ ನೆರೆಯ ಜಗಲಬೇಟ, ಕುಂಬಾರವಾಡಾ, ಜೋಯಿಡಾ, ಗುಂದ, ಪಾಟೋಲಿ ಕಡೆಯಿಂದ ಬಂದು ಸೇರುತ್ತಿದ್ದರು. ಊರಲ್ಲಿ ಅದು ದೊಡ್ಡ ಜಾತ್ರೆಯೇ ಆಗಿರುತ್ತಿತ್ತು.
ಫೋಟೋ ಕೃಪೆ – ಚಂದ್ರು ಹೊನ್ನಳ್ಳಿ
ಸೂಪಾದಲ್ಲಿದ್ದ ಬ್ರಿಟಿಷ್ ಬಂಗಲೆ
ತನ್ನದೆನ್ನುವ ಮನೆಯೂ ಇಲ್ಲ. ಯೋಚಿಸಿದ ಹನುಮಂತ್ಯಾನಿಗೆ ಪರಿಹಾರ ಹೊಳೆಯಿತು. ನದಿಯ ಎಡಭಾಗದಲ್ಲಿ ವಸಂತ ಸುಂಠಣಕರರ ಅಂಗಡಿಯ ಹತ್ತಿರ ಇದ್ದ ರಾಮಮಂದಿರ, ಇಲ್ಲಾ ಬ್ರಿಟಿಷ್ ಬಂಗ್ಲೋ ಬಳಿ ಇರುವ ದುರ್ಗಾ ಗುಡಿಯ ಪೌಳಿಗಳೇ ರಾತ್ರಿ ಹೊತ್ತು ಕ್ಷೇಮ ಅನ್ನಿಸಿತು. ಯಾಕಂದರೆ ಭಕ್ತರು ದೆವ್ವಗಳಿಗೆ ಹೆದರುತ್ತಾರೆ. ಕುಡುಕರು ದೇವರುಗಳಿಗೆ ಹೆದರುತ್ತಾರೆ ಎಂದು ಅವನು ತಿಳಿದಿದ್ದ. ಈ ಬ್ರಿಟಿಷ್ ಬಂಗ್ಲೆಯ ಹತ್ತಿರದಲ್ಲಿಯೇ ಹಳೇ ಕಾಲದ ಒಂದು ಪೋಲೀಸ ಚೌಕಿ. ಅದರ ಆವರಣದಲ್ಲಿಯೇ ಸೂಪಾ ತಾಲೂಕು ತಹಶೀಲದಾರರ ಕಚೇರಿ ಮತ್ತು ಜೇಲುಖಾನಾ ಇದ್ದವು. ಫಾರೆಸ್ಟು ಕಚೇರಿಯೂ ಅದರ ಸರಹದ್ದಿನಲ್ಲೇ ಇತ್ತು. ಇದರ ಮುಂದೆ ಕೆಂಪು ಮಣ್ಣಿನ ಎಂಟು ಅಡಿ ಅಗಲದ ಬೆಳಗಾವಿ –ಕಾರವಾರ ರಸ್ತೆಯಿತ್ತು. ಊರಲ್ಲಿ ಇದೇ ದೊಡ್ಡ ರಸ್ತೆ. ಈ ರಸ್ತೆಯಾಚೆ ನಮ್ಮ ಇಲಾಖೆಯ [ಹೆಚ್.ಇ.ಸಿ.ಪಿ.] ಸಬ್ ಡಿವಿಜನ್ ಆಫೀಸೊಂದಿತ್ತು. ಅಲ್ಲಿ ನರಸಿಂಹಯ್ಯ [ಕೋಳೀ ನರಸಿಂಹಯ್ಯ] ಎಂಬ ಸಹಾಯಕ ಕಾರ್ಯಪಾಲಕ ಇಂಜನಿಯರು ಇದ್ದರು. ಅವರು ಲೋಕೋಪಯೋಗಿ ಇಲಾಖೆಯ ನೇಮಕಾತಿಯ ಖಾಯಂ ಸಿಬ್ಬಂದಿ. ಸೂಪಾದಲ್ಲಿ ಆಗ ಇಲ್ಲಿದ್ದ ದುರ್ಗಾದೇವಿ ಎಲ್ಲರ ಆರಾಧನೆಯ ಪರಮ ದೇವರು. ಎಲ್ಲರೂ ಆಕೆಯ ಗುಡಿಗೆ ಹೋಗಿ ಹರಕೆ ತೀರಿಸಿ ಬರುತ್ತಿದ್ದುದರಿಂದ ತುಸು ಆದಾಯವೂ ಈ ಗುಡಿಗೆ ಇತ್ತು. ಆಣೆಕಟ್ಟು ಕಟ್ಟಿದ ಮೇಲೆ ಇವೆಲ್ಲ ಈಗ ಮುಳುಗಿ ಹೋಗಿವೆಯೆನ್ನಿ. ಸುಮಾರು ಇನ್ನೂರು ಅಡಿ ನೀರಿನ ಆಳದಲ್ಲಿ ಇವೆಲ್ಲ ಮುಳುಗಿ ಹೋದದ್ದು ಆನಂತರದ ಕತೆ. ಇದರ ಬಗ್ಗೆ ಮುಂದೆ ಹೇಳುತ್ತೇನೆ.
ದುರ್ಗಾ ಗುಡಿಯಲ್ಲಿ ಹನುಮಂತ್ಯಾ ತೀರ್ಥ ಕುಡಿದದ್ದು…
ಕಾಣಕೋಣಕರ ಮನೆಯಿಂದ ಹೊರಬಿದ್ದ ಹನುಮಂತ್ಯಾ ಅವತ್ತು ರಾತ್ರಿ ದುರ್ಗಾ ಗುಡಿಯ ಬಳಿ ಮಲಗಲು ಬಂದ. ಆಗ ಸೂಪಾದಲ್ಲಿ ಬೀದಿ ದೀಪಗಳಿರಲಿಲ್ಲ. ಕಂಬಗಳಿದ್ದವು ಅಷ್ಟೇ. ನಡೆದುಕೊಂಡು ಗುಡಿಯತ್ತ ಬಂದ. ಅನತಿ ದೂರದಲ್ಲಿದ್ದ ಬ್ರಿಟಿಷ ಬಂಗ್ಲೋದಲ್ಲಿ ಬೆಳಗಿಸಿದ್ದ ಗ್ಯಾಸ್ ಬೆಳಕು ಹೊರಗೂ ಚೆಲ್ಲಿತ್ತು. ಅದರ ಮಿಣುಕು ಬೆಳಕು ಗುಡಿಯ ಮುಂದಿನ ರಸ್ತೆಯ ಮೇಲೂ ಬಿದ್ದಿತ್ತು. ನಡೆದು ಬರುತ್ತಿದ್ದ ಹನುಮಂತ್ಯಾನ ಮುಂದೆಯೇ ಹಾದು ಒಂದೆರಡು ಫಾರೆಸ್ಟು ಜೀಪುಗಳು ಭುರ್ರೆಂದು ಬಂಗ್ಲೆ ಕಡೆಗೆ ಹೋದವು. ಹನುಮಂತ್ಯಾ ಗುಡಿಯ ಪೌಳಿ ಹೊಕ್ಕ. ಸುಟ್ಟ ಬೀಡಿಯ ವಾಸನೆ ಮೂಗಿಗೆ ಬಡಿಯಿತು. ಗರ್ಭಗುಡಿಯ ಬಾಗಿಲು ಹಾಕಿತ್ತು. ಒಳಗೆ ದೀಪವೂ ಇರಲಿಲ್ಲ. ಮಂದಗತ್ತಲಲ್ಲಿ ಪೌಳಿಯ ಗೋಡೆಯ ಮರೆಯಲ್ಲಿ ಯಾವನೋ ಒಬ್ಬ ದರಬೇಸಿ ಕುಡಿಯುತ್ತ ಕುಳಿತಿದ್ದ. ಕೆಂಪು ಧೂಳಿನ ಕಮಟು ಅಂಗಿ. ಕೆಳಗೆ ಖಾಕೀ ಲಂಡ ಚೊಣ್ಣ ಧರಿಸಿದ್ದ. ಯಾರೋ ಕೂಲಿಯವ ನಿರಬೇಕು. ಮನೆಯಲ್ಲಿ ಇರಲಾರದೆ ಇಲ್ಲಿ ಮಲಗಲು ಬಂದಿರಬೇಕು ಅಂದುಕೊಂಡ ಹನುಮ್ಯಾ.
ಫೋಟೋ ಕೃಪೆ – ಚಂದ್ರು ಹೊನ್ನಳ್ಳಿ
ಕೋತೋ…? ನಾವ ಕಾಯ್…?
ಇವನನ್ನು ಕಂಡು ಆತ ಕೊಂಕಣಿಯಲ್ಲಿ ಹಾಡತೊಡಗಿದ. ಮೆದು ಮಾತಿನಲ್ಲಿ ಉದಾರಿಯಾದ. ಕುಡುಕರು ಯಾವತ್ತೂ ಉದಾರಿಗಳೇ.
‘ಕೋನ ತೋ? ನಾವ ಕಾಯ್?’ [ಯಾರದೂ? ಹೆಸರೇನು? ]
ಅಂದ. ಹನುಮಂತ್ಯಾ ಮಾತಾಡಲಿಲ್ಲ. ಹುಡುಗನನ್ನು ನೋಡಿದ ಆತ ಹತ್ತಿರ ಕರೆದು ಇವನಿಗೂ ಒಂದು ಗ್ಲಾಸಿನಲ್ಲಿ ಒಂದಷ್ಟು ಗೋವಾ ಮಾಲು ಸುರಿದು ಕೊಟ್ಟ.
‘ನೀ ಯಾವನಾದ್ರೂ ಆಗಿರು. ತಕ್ಕೋ… ಕುಡೀ.’
ಎಂದು ಈಗ ಕನ್ನಡದಲ್ಲಿ ಹೇಳಿದ. ಇನ್ನೂ ಮೀಸೆಯೂ ಮೂಡದ ಹದಿನಾಲ್ಕರ ಹನುಮಂತ್ಯಾ ಹಿಂದು ಮುಂದೆ ನೋಡದೆ ಕೊಟ್ಟದ್ದನ್ನು ಗಂಟಲಕ್ಕೆ ಇಳಿಸಿಯೇ ಬಿಟ್ಟ. ಹೀಗೆ ಕುಡಿಯುವುದು ಅವನಿಗೆ ಹತ್ತನೇ ವಯಸ್ಸಿಗೇ ಅಭ್ಯಾಸ ಆಗಿ ಬಿಟ್ಟಿದೆ. ಮೀನದಂಗಡಿ ಮುದುಕಿಯ ಬಾಟ್ಲಿಯಲ್ಲಿದ್ದ ಗೋವಾ ಫೆನ್ನಿಯನ್ನು ಹಲವಾರು ಬಾರಿ ಕದ್ದು ಕುಡಿದಿದ್ದ. ಕಾಮತಿ ಅಂಗಡಿಯಲ್ಲೂ ಹೀಗೆ ಕಳ್ಳ ಮಾಲು ಕುಡಿಯುದಕ್ಕೆ ಸಿಗುತ್ತಿತ್ತು. ಹುರಿದ ಮೀನು ಸಿಗದಿದ್ದಾಗ ಲಕ್ಕೀ ಹೊಟೆಲ್ಲು ಇಲ್ಲಾ ಹೊಳೆ ದಂಡೆ ಮೇಲಿದ್ದ ಬ್ರಿಟಿಷ್ ಬಂಗ್ಲೋದ ಅಡುಗೆ ಮನೆ ಹೊಕ್ಕು ಕಳ್ಳಬೆಕ್ಕಿನಂತೆ ಕದ್ದು ಹೊರಬೀಳುವುದನ್ನೂ ಅಭ್ಯಾಸ ಮಾಡಿಕೊಂಡ.
ಬಿಡಾಡಿ ಕುಡುಕನ ಕೈಗೆ ಸಿಕ್ಕ ಹನುಮಂತ್ಯಾ…
ಆದರೆ ರಾತ್ರಿ ಹೊತ್ತು ಗುಡಿಯಲ್ಲಿ ಮಲಗುವುದೂ ಅಪಾಯಕಾರಿಯೇ ಎಂಬುದು ಗೊತ್ತಾಯಿತು. ಮತ್ತೆ ಊರಲ್ಲಿ ಯಾರದಾದರೂ ಮನೆಯ ಜಗುಲಿ ಹುಡುಕಿಕೊಳ್ಳುವುದೇ ಸರಿ ಅಂದುಕೊಂಡ. ಒಮ್ಮೆ ಹಾಗೆ ದೇಸಾಯಿಯವರ ದೊಡ್ಡ ಮನೆಯ ಹತ್ತಿರದ ಕಾಂಪೌಂಡ ಬಳಿ ಮಲಗಿದ್ದಾಗ ಮಧ್ಯೆ ರಾತ್ರಿ ಯಾವನೋ ಬಿಡಾಡಿ ಕುಡುಕನೊಬ್ಬ ಅಮಲಿನಲ್ಲಿ ಇವನ ಮೇಲೆ ಬಿದ್ದು ಅಮುಕಿ ಹಿಡಿದ. ಆಗ ಹೆದರಿಕೊಂಡ ಹನುಮಂತ್ಯಾ ಕುಂಯ್ಯೋ… ಕುಂಯ್ಯೋ…ಅನ್ನುತ್ತ ಬಾಲ ಮುದುರಿದ ನಾಯೀ ಕುನ್ನಿಯಂತೆ ಅಲ್ಲಿಂದ ಓಡಿ ಹೋದ. ರಾತ್ರಿ ಹೊತ್ತು ಈ ಕುಡುಕರ ಕಣ್ಣಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸಿದ.
ಆದರೆ ಕಪ್ಪು ಹಂಚಿನ ಮನೆಗಳ ಮುಂದೆ ಮಲಗುವಂತಿಲ್ಲ. ಯಾಕಂದರೆ ಒಳಗಿದ್ದ ಗಂಡಸರೂ-ಹೆಂಗಸರೂ ರಾತ್ರಿಯಾದರೆ ಸಾಕು. ಗೋವಾ ಸಾರಾಯಿ ಕುಡಿದೇ ನಿದ್ದೆಗೆ ಹೋಗುವುದು. ಸೂಪಾದಲ್ಲಿ ಕೊಂಕಣಿ ಮತ್ತು ಮರಾಠಿ ಮಾತಾಡುವವರು ಜಾಸ್ತಿ. ಅವರಿಗೆಲ್ಲ ಮಾದಲಿನಿಂದಲೂ ಗೋವಾದ ನಂಟು ತುಸು ಹೆಚ್ಚೇ. ಅದರಿಂದ ಅಲ್ಲಿಯ ಸಂಸ್ಕಾರ ಬಹಳ ಜನರಿಗೆ ತಾನಾಗಿಯೇ ಬಂದಿತ್ತು. ಹಾಗಾಗಿ ಗೋವಾ ಮದ್ಯ ಕಾಡಿನ ಕಳ್ಳ ದಾರಿ ಮೂಲಕ ಯತ್ಥೇಚ್ಛವಾಗಿ ಸೂಪಾಕ್ಕೆ ಬರುತ್ತಿತ್ತು.
ಲಕ್ಕು ಇಲ್ಲದ ಮೂಸಾ ಕಾಕಾನ ಲಕ್ಕೀ ಹೊಟೆಲ್ಲು
ಸೂಪಾದಲ್ಲಿ ಆಗಲೇ ‘ಲಕ್ಕೀ ಹೊಟೆಲ್’ ಎಂಬ ಮಲಯಾಳೀ ಹೊಟೆಲ್ ಒಂದಿತ್ತು. ಈ ಮಲಯಾಳಿಗಳು ಹಿಮಾಲಯದ ತುದಿಯಲ್ಲೂ ಬೇಕಾದರೆ ಚಹ ಮಾರುತ್ತಾರೆ ಎಂದು ಕೇಳಿದ್ದೆ. ಮಲಯಾಳೀ ಶೈಲಿಯ ಪರೋಟಾ ಮತ್ತು ಸೇರ್‌ವಾ- ಬೇಯಿಸಿದ ಮೊಟ್ಟೆ, ಕುಸುಬಲಕ್ಕಿ ಅನ್ನ-ಸಾಂಬಾರಕ್ಕೆ ಈ ಹೊಟೆಲ್ಲು ಪ್ರಸಿದ್ಧವಾಗಿತ್ತು. ಸೂಪಾ ಊರಿಗೇ ಇದು ಸ್ಟಾರ್ ಹೊಟೆಲ್ಲು. ಹನುಮಂತ್ಯಾ ಹೇಗೋ ಅಲ್ಲಿ ಪಾತ್ರೆ ತೊಳೆಯುವ ಕೆಲಸ ಸಂಪಾದಿಸಿಕೊಂಡ. ಮತ್ತು ರಾತ್ರಿ ಹೊತ್ತು ಟೇಬಲ್ ಕೆಳಗೆ ಮಲಗಲು ಒಂದಷ್ಟು ಜಾಗ, ಹಾಗೂ ಊಟ ಕೊಡುವ ಮಾತಿನೊಂದಿಗೆ ಹನುಮಂತ್ಯಾ ಅಲ್ಲಿ ತನ್ನ ಇನ್ನೊಂದು ಇನ್ನಿಂಗ್ಸ ಸುರು ಮಾಡಿದ. ಮೂರು ತಿಂಗಳು ಕೆಲಸ ಮಾಡಿದ. ದುರಾದೃಷ್ಟ ಅಲ್ಲಿಯೂ ಅವನನ್ನು ಇರಗೊಡಲಿಲ್ಲ. ಒಂದು ದಿನ ಗಿರಾಕಿಗಳಿಗೆಂದು ಇಟ್ಟಿದ್ದ ಕುದಿಸಿದ ಮೊಟ್ಟೆಯೊಂದನ್ನು ಆಸೆಯಿಂದ ಕದ್ದು ತಿಂದುಬಿಟ್ಟ. ಅಂಗಡಿಯ ಮಾಲೀಕ ಮೂಸಾ ಕಾಕಾನಿಗೆ ಅದು ಗೊತ್ತಾದದ್ದೇ ತಡ. ಕೋಪದಿಂದ ಭುಸ್ ಅಂದ. ತನ್ನ ಬಿಳಿಯ ಲುಂಗಿಯನ್ನು ಮೇಲೆತ್ತಿ ಕಟ್ಟಿಕೊಂಡ. ಸೊಂಟದಲ್ಲಿ ಕಟ್ಟಿಕೊಂಡಿದ್ದ ಅಗಲದ ದಪ್ಪ ಬೆಲ್ಟು ಬಿಚ್ಚಿದವನೇ ‘ಎಂದಡಾ ಮೈರಾ… ಚೋರೀಸೇ ಮೊಟ್ಟೇ ತಿಂತೀಯಾ?‘ ಅಂದವನೇ ನಾಲ್ಕು ಬಿಟ್ಟ. ಅದೇ ಹೊತ್ತಿನಲ್ಲಿ ಅವನ ಸೊಂಟದಲ್ಲಿದ್ದ ಗೇಣುದ್ದದ ಹೊಳೆಯುವ ಚಾಕು ಇವನ ಕಣ್ಣಿಗೆ ಬಿತ್ತು. ಅದನ್ನು ಕಂಡದ್ದೇ ತಡ. ‘ಕುಯ್ಯೋ- ಮರ್ಯೋ’ ಅನ್ನುತ್ತ ಬಾಗಿಲು ಕಡೆಗೆ ಓಡಿದವನು ಮತ್ತೆ ಅದರತ್ತ ತಿರುಗಿಯೂ ನೋಡಲಿಲ್ಲ. ಫಾರೆಸ್ಟು ಗಾರ್ಡ್ ಸದಾನಾಯಕ ಮಾಮಾನ ಮನೆ ಹಿಂದಿನಿಂದ ಓಡಿ ನದೀ ದಂಡೆಯ ಕುಮುರಿಯಲ್ಲಿ ಮರೆಯಾದ. ಮತ್ತೆ ಯಾವತ್ತೂ ಆ ಮಲಯಾಳೀ ಹೊಟೆಲ್ಲು ಕಡೆ ತಿರುಗಿಯೂ ನೋಡಲಿಲ್ಲ.
ಯಾರೀಕೆ ಮಿಣುಕು ಕಣ್ಣಿನ ಕುಣಿಲಾಬಾಯಿ …?
ಇಂಥ ಸ್ಥಿತಿಯಲ್ಲಿಯಲ್ಲೇ ಹನುಮಂತ್ಯಾ ಸೂಪಾದಲ್ಲಿಯೇ ಜಗತ್ ಪ್ರಸಿದ್ಧಳಾಗಿದ್ದ ಮಿಣುಕು ಕಣ್ಣಿನ ಕುಣಿಲಾಬಾಯಿಯ ಕಣ್ಣಿಗೆ ಬಿದ್ದ. ಕುಣಿಲಾಬಾಯಿಗೆ ಹೆಚ್ಚೆಂದರೆ ಮೂವತೈದರ ಪ್ರಾಯ. ಗಿಡ್ಡ ತಳಿಯ ಹೆಣ್ಣು. ಬಿಳೀ ಬಣ್ಣ. ಹುಬ್ಬಿನ ತುದಿಯಲ್ಲಿ ಮತ್ತು ಹಣೆಯ ಕೆಳಗೆ ನೀಲೀ ಅಚ್ಚು ಹಾಕಿಸಿಕೊಂಡಿದ್ದಳು. ಮೂಗಿನಲ್ಲಿ ದೊಡ್ಡದೇ ಆದ ನತ್ತು. ಯಾವಾಗಲೂ ಸಾದಾ ನೂಲಿನ ಕಚ್ಚೆ ಸೀರೆಯನ್ನು ಮರಾಠೀ ಶೈಲಿಯಲ್ಲಿ ಉಡುತ್ತಿದ್ದಳು. ಕಿವಿಗೆ ಓಲೆಗಳು. ಎರಡೂ ಕೈಗಳಲ್ಲಿ ಗಾಜಿನ ಬಳೆಗಳು. ಬೆನ್ನ ಹಿಂದೆ ಉದ್ದ ಸೆರಗು. ಎರಡೂ ಕಾಲಿಗೆ ಬೆಳ್ಳೆಯ ಗೆಜ್ಜೆಯ ಸರ. ಪುಗುಡೀ ನೃತ್ಯ ಮಾಡುವುದಕ್ಕೆ ಸಜ್ಜಾಗಿ ಇರುವವಳಂತೆ ಮುಖದಲ್ಲಿ ಸದಾ ನಸು ನಗುವಿನ ಛಾಯೆ. ಕಣ್ಣ ಕೆಳಗೆ ಕಪ್ಪು ಕಾಡಿಗೆಯ ಗೆರೆಗಳು ಆಕೆ ಇನ್ನಷ್ಟು ಅಂದವಾಗಿ ಕಾಣುವಂತೆ ಮಾಡಿದ್ದವು. ‘ಸೊಂಗಾಡ್ಯಾ’ ಎಂಬ ಮರಾಠೀ ಸಿನಿಮಾದ ನಾಯಕಿಯಂತೆ ಕಾಣುತ್ತಿದ್ದಳು.
ಫೋಟೋ ಕೃಪೆ : pinterest
ಆಗ ಸೂಪಾದಲ್ಲಿದ್ದ ಫಾರೆಸ್ಟಿನವರು, ಕಾರವಾರೀ ಪೋಲೀಸು ಹೈಕಳುಗಳು, ಊರಿನ ಕೆಲವು ಪಡ್ಡೆಗಳು ಆಕೆಯ ಬೆನ್ನ ಹಿಂದೆ ತಿರುಗುತ್ತಿದ್ದರೆಂಬುದು ಸದ್ದಿಲ್ಲದ ಗುಲ್ಲು ಆಗಿತ್ತು. ಆಕೆ ಸೂಪಾದ ಬಯಲು ಪಾರಿನಲ್ಲಿ ಗುಡಿಸಲು ಹಾಕಿಕೊಂಡು ಅಲ್ಲಿ ಗುಟ್ಟಾಗಿ ಗೋವಾ ಮದ್ಯದ ಬಾಟ್ಲಿ ಮಾರಾಟ ಮಾಡುತ್ತಿದ್ದಳು. ಗೋವಾದಿಂದ ಸೂಪಾಕ್ಕೆ ಕಾಡಿನಲ್ಲಿ ಒಂದು ಕಳ್ಳ ದಾರಿಯಿದೆಯಂತೆ. ರಾತ್ರಿ ಹೊತ್ತು ಈ ದಾರಿಯಲ್ಲಿ ಮದ್ಯ ತರುವವರ ಓಡಾಟ ಇರುತ್ತದಂತೆ. ಅವರೆಲ್ಲರ ಸಂಪರ್ಕ ಈ ಕುಣಿಲಾಬಾಯಿಗೆ ಇತ್ತು ಅನ್ನೋದೇ ಗುಟ್ಟಿನ ವಿಚಾರ. ಈಕೆ ಇವನ ಆಯಿಯ ವಯಸ್ಸಿನವಳು. ಪಗಾರ ಇಲ್ಲ. ಊಟ ಮಾತ್ರ ಹಾಕುತ್ತೇನೆ. ರಾತ್ರಿ ಹೊತ್ತು ಬರುವ ಬಾಟ್ಲೀ ಚೀಲ ತಂದು ಗುಡಿಸಲು ಹಿಂದೆ ಮುಚ್ಚಿಡುವ ಕೆಲಸ ನಿನ್ನದು. ಯಾರ ಹತ್ತಿರವೂ ಉಸಿರೆತ್ತಬಾರದು ಅನ್ನುವ ಎಚ್ಚರಿಕೆ. ಅಲ್ಲಿ ಊಟದ ಜತೆಗೆ ಹುರಿದ ಮೀನು ಮತ್ತು ತಳದಲ್ಲಿ ಉಳಿದಿರುತ್ತಿದ್ದ ಫೆನ್ನಿ ಡ್ರಿಂಕ್ಸು ಕುಡಿಯಲು ಸಿಗುತ್ತಿತ್ತಂತೆ ಹುಡುಗನಿಗೆ. ಕುಣಿಲಾಬಾಯಿ ಸದಾ ಅಮಲಿನಲ್ಲಿ ಇರುತ್ತಿದ್ದಳು.
ಆದರೆ ಆಕೆ ಚಾಲಾಕಿ ಹೆಣ್ಣು. ಬಾಟ್ಲಿಯ ಲೆಕ್ಕ ತಪ್ಪದಂತೆ ವ್ಯವಹಾರ ನೋಡುತ್ತಿದ್ದಳು. ಆಕೆ ಈ ಹಿಂದೆ ಹನುಮಂತ್ಯಾನ ಆಯಿಯ ಗೆಳತಿಯೂ ಆಗಿದ್ದಳು. ಅವನ ಆಯಿ ಗೋವಾಕ್ಕೆ ಹೋಗಲು ದಾರಿ ತೋರಿಸಿದವಳೂ ಅವಳೇ ಆಗಿದ್ದಳಂತೆ. ‘ವಯಸ್ಸು ಕರಗಲಿ. ನಿನ್ನ ಆಯಿ ಇಲ್ಲಿಗೇ ಮತ್ತೆ ಬರುತ್ತಾಳೆ ಬಿಡು’ ಎಂದು ಆಗಾಗ ಚಟಾಕಿ ಹಾರಿಸುತ್ತಿದ್ದಳು. ಗೋವಾದಲ್ಲಿ ಆಯಿಯ ಕತೆ ಏನಾಯಿತು ಎಂದು ಕೊನೆಗೂ ಕುಣಿಲಾಬಾಯಿ ಹೇಳಲಿಲ್ಲ. ಅಂತೂ ಹನುಮಂತ್ಯಾ ದೊಡ್ಡವನಾದ. ಜಗತ್ತನ್ನು ಕಂಡ. ಗೋವಾಕ್ಕೆ ಹೋಗಿದ್ದ ಅವನ ಆಯಿಯಂತೂ ಬರಲಿಲ್ಲ. ಕೊನೆಗೆ ಅದೆಲ್ಲ ಅರ್ಥವಾಗಿ ಬೇಸರ ಅನಿಸಿ ಕುಣಿಲಾಬಾಯಿಯನ್ನೂ ತೊರೆದು ಬಂದ. ಯಾಕಂದರೆ ಕುಣಿಲಾಬಾಯಿಗೂ ಈಗ ವಯಸ್ಸು ಇಳಿದು ಆಕೆಯ ವ್ಯಾಪಾರ ಕಡಿಮೆಯಾಗಿತ್ತು. ನಮ್ಮ ಸರ್ವೇ ತಂಡದಲ್ಲಿ ದಿನಕ್ಕೆ ಒಂದೂವರೆ ರೂಪಾಯಿ ದಿನಗೂಲಿ ಸಂಬಳಕ್ಕೆ ಹನುಮಂತ್ಯಾ ಸೇರಿಕೊಂಡ. ಅವನನ್ನು ಕೆಲಸಕ್ಕೆ ಸೇರಿಸಿಕೊಂಡವರು ನಮ್ಮ ಇಂಜನಿಯರ ಶಿರೋಡ್ಕರರು. ಅವರು ಕಾರವಾರದವರಾದ್ದರಿಂದ ಅವರಿಗೆ ಆಗಾಗ ಮೀನು ಊಟ ಮತ್ತು ಗುಟುಕರಿಸಲು ಗೋವಾ ಫೆನ್ನಿ ತಂದುಕೊಡುತ್ತಿದ್ದವ ಇದೇ ಹನುಮಂತ್ಯಾ. ಆ ಸಂಬಂಧವೇ ಅವನು ನಮ್ಮ ತಂಡ ಸೇರಲು ಕಾರಣವಾಯಿತು. ಮುಂದುವರೆಯುತ್ತದೆ…
[ಮುಂದಿನ ಭಾಗದಲ್ಲಿ – ಹನುಮಂತ್ಯಾನ ಕತೆಯಿಂದ ವಾಸ್ತವಕ್ಕೆ ಬಂದದ್ದು. ನೌವಲೂ ಗೌಳಿಯ ಜತೆಗೆ ಕಾಡಿನ ಹಾದಿ ಹಿಡಿದು ಚಾಂದೇವಾಡಿಯ ಕಡೆಗೆ ಹೊರಟದ್ದು. ದಾರಿಯಲ್ಲಿ ನೌವಲೂ ಗೌಳಿ ಹೇಳಿದ ಹುಲಿ ಮತ್ತು ಕರಡಿಯ ಕತೆ…. ಬಂಡೆಯ ಮೇಲೆ ಕಂಡ ಹುಲಿಯ ಚಿತ್ರ. ಅರಣ್ಯ ಮಧ್ಯದಲ್ಲಿ ಗೋವಾ ಚೋರರ ಕೈಗೆ ಸಿಕ್ಕಿಹಾಕಿಕೊಂಡದ್ದು]
– ಹೂಲಿಶೇಖರ್
(ರಾಜ್ಯೋತ್ಸವ ಪ್ರಶಸ್ತಿ ವಿಜೇತ, ನಾಟಕಕಾರ ಮತ್ತು ಚಿತ್ರಕತೆ-ಸಂಭಾಷಣಾಕಾರ )