ಕಾವ್ಯ ದೇವರಾಜ್ ಅವರು ಬರೆದ ನಾಲ್ಕೇ ನಾಲ್ಕು ಕತೆಗಳಾದರೂ ಸಾವಿರ ಜನರ ಹೃದಯವನ್ನು ತಟ್ಟಿದೆ.
ನದಿಯ ಮೂಲ ಯಾರು ಹುಡುಕಬಾರದು ಎನ್ನುತ್ತಾರೆ. ಅದೇ ರೀತಿ ಸಂಬಂಧಗಳ ಮೂಲವನ್ನು ಕೂಡ ಹುಡುಕಬಾರದು. ಎಷ್ಟೋ ರಕ್ತ ಸಂಬಂಧಗಳು ಕಷ್ಟಕ್ಕೂ ಆಗುವುದಿಲ್ಲ. ಕೊನೆ ಪಕ್ಷ ಸುಖದಲ್ಲಿಯೂ ಭಾಗಿಯಾಗದೆ ಹೊಟ್ಟೆ ಉರಿ, ಅಸೂಯೆಗಳ ನಡುವೆ ಜೀವನ ಕಳೆಯುತ್ತಾರೆ. ಅಂತಹ ಸಂಬಂಧಗಳಲ್ಲಿ ಕಟ್ಟು ಬೀಳುವುದಕ್ಕಿಂತ ಅವರನ್ನು ದಾಟಿ ಮುಂದೆ ನಡೆಯುವುದೇ ಒಳಿತು. ಆ ಸಂದರ್ಭದಲ್ಲಿ ಹುಟ್ಟುವ ಹೊಸ ಸಂಬಂಧಗಳು ಸಂತೋಷ ಕೊಡುತ್ತದೆ. ಹಾಗೆ ಹುಟ್ಟಿಕೊಂಡ ಹೊಸ ಸಂಬಂಧಗಳಲ್ಲಿ ಕಾವ್ಯ ದೇವರಾಜ್ ಅವರ ಗೆಳೆತನವು ಒಂದು.
ಕಾವ್ಯ ದೇವರಾಜ್ ಆಕೃತಿಕನ್ನಡದ ಲೇಖಕಿ ಮತ್ತು ಕತೆಗಾರ್ತಿ. ಅವರ ಬರವಣಿಗೆ ಆರಂಭವಾಗಿದ್ದೇ ಆಕೃತಿಕನ್ನಡದ ವೇದಿಕೆಯಲ್ಲಿ. ಬರೆದ ನಾಲ್ಕೇ ನಾಲ್ಕು ಕತೆಗಳಾದರೂ ಸಾವಿರ ಜನರ ಹೃದಯವನ್ನು ತಟ್ಟಿದೆ.
ಅವರೊಂದಿಗಿನ ಗೆಳೆತನ ಹೇಗೆ ಹುಟ್ಟಿತೋ ಎಂದು ನಾನು ಮೂಲ ಹುಡುಕಿಲ್ಲ. ಆದರೆ ಅವರೊಂದಿಗಿನ ಮಾತು, ಸಾಹಿತ್ಯ ಚಿಂತನೆ, ಲೋಕದ ಕಾಳಜಿಯ ಅಂತೇ-ಕತೆಗಳ ಹಾಳು ಹರಟೆ ಖುಷಿ ಕೊಡುತ್ತದೆ. ನನ್ನ ಹಾಗು ಅವರ ಆಲೋಚನೆ, ಅನುಭವಗಳು ಎಲ್ಲಿಯೋ ಒಂದು ಕಡೆ ಸೇರುತ್ತದೆ. ಏಕೆಂದರೆ ಅವರಿಗೂ ಅವಳಿ ಮಕ್ಕಳು. ಕಷ್ಟ-ಸುಖಗಳ ಅನುಭವಗಳ ಸಂಗಮ ನಮ್ಮ ಮಕ್ಕಳು ಎನ್ನಬಹುದು. ಜವಾಬ್ದಾರಿಯುತ ತಾಯಿ, ಜವಾಬ್ದಾರಿಯುತ ಅಕ್ಕ, ಜವಾಬ್ದಾರಿಯುತ ಅಪ್ಪನಿಗೆ ಅಮ್ಮ ಹೀಗೆ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಅದರ ಮಧ್ಯದಲ್ಲಿ ಸಾಹಿತ್ಯವನ್ನು ಕೂಡ ಪೋಷಣೆ ಮಾಡುತ್ತಿದ್ದಾರೆ.
ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಮನಸ್ಸು ಭಯ ಪಡುತ್ತಿದೆ. ಹುಟ್ಟುಹಬ್ಬ ಸಂತೋಷದ ವಿಚಾರ. ಆದರೆ ತನ್ನನ್ನು ಹುಟ್ಟಿಸಿದ ದಿನವೇ ತಾಯಿಯ ಅಂತ್ಯ ಸಂಸ್ಕಾರವಾದರೆ ಆ ಮಗಳಿಗೆ ಹುಟ್ಟು ….ಅಷ್ಟೇ …. ಹಬ್ಬ ದೂರವಾಗುತ್ತದೆ. ಕಷ್ಟಗಳನ್ನು ಎದುರಿಸಿ ತಮ್ಮನ್ನು ಸಾಹಿತ್ಯದಲ್ಲಿ ತೊಡಗಿಸಿಕೊಂಡು ಮುಂದೆ ನಡೆಯುತ್ತಿದ್ದಾರೆ ಕಾವ್ಯ.
ಎಲ್ಲರ ನೋವಿಗೂ ಮಿಡಿಯುವ ಹೃದಯುಳ್ಳ, ವಿಚಾರವಾದಿ ಸ್ನೇಹಿತೆ ಕಾವ್ಯ ದೇವರಾಜ್ ರನ್ನು ಈ ಭುವಿಗೆ ತಂದ ಆ ತಾಯಿಗೆ ಮೊದಲು ನಮನ ಸಲ್ಲಿಸುತ್ತೇನೆ. ಧೈರ್ಯದ ಪ್ರತೀಕವೇ ಕಾವ್ಯ ದೇವರಾಜ್. ಕಷ್ಟಗಳನ್ನು ಎದುರಿಸುವ ಶಕ್ತಿ ಕೊಟ್ಟ ಆ ಭಗವಂತನಿಗೆ ನಾನು ಕೇಳುವುದು ನಿಮಗೆ ಆಯಸ್ಸು, ಅರೋಗ್ಯ ಮತ್ತು ನಿಮ್ಮ ಜೋಳಿಗೆ ತುಂಬಾ ಸಂತೋಷ ತುಂಬಿ ತುಳುಕಲಿ.
ಆಕೃತಿ ಕನ್ನಡದ ಪರವಾಗಿ ಕಾವ್ಯ ದೇವರಾಜ್ ಗೆ ಹುಟ್ಟುಹಬ್ಬದ ಶುಭಾಶಯಗಳು…
- ಶಾಲಿನಿ ಹೂಲಿ ಪ್ರದೀಪ್