ನನ್ನ ತಂದೆಗೆ ಕಷ್ಟನೂ ಸುಖಾನೋ ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು ಅನ್ನೋದು ಅವರ ಉದ್ದೇಶವಾಗಿತ್ತು. ಹಾಗೋ ಹೀಗೋ ಮಾಡಿ ಸ್ವಂತ ಮನೆಯನ್ನು ಕಟ್ಟಿಯೇ ಬಿಟ್ಟರು. ಆಗ ಬೆಂಗಳೂರು ಇಷ್ಟು ವೇಗವಾಗಿ ಬೆಳೆದಿರಲಿಲ್ಲ. ನಮ್ಮ ಮನೆ ಆಗ ಊರ ಆಚೆ, ಆದರೆ ಅದೇ ಮನೆ ಇಂದು ಊರ ಮಧ್ಯೆದಲ್ಲಿದೆ. ಆಗ ಮನೆ ಕಟ್ಟಿದಾಗ ಸರಿಯಾದ ವ್ಯವಸ್ಥೆಗಳಿರಲಿಲ್ಲ. ಬಸ್ ಸ್ಟಾಂಡ್ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರವಿತ್ತು. ಮನೆಯ ಸುತ್ತ ಬೇರೆ ಯಾವ ಮನೆಗಳಿರಲಿಲ್ಲ. ಅಲ್ಲೊಂದು ಇಲ್ಲೊಂದು ಮನೆಗಳಿತ್ತು. ಅಪ್ಪ ಕೆಲಸಕ್ಕೆ ಹೋದಾಗ, ನೀರು ಬೇಕೆಂದರೆ ಅಮ್ಮ ಪಂಪ್ ಮಾಡಿ ನೀರನ್ನು ಹೊತ್ತು ತರುತ್ತಿದ್ದರು. ನನ್ನ ಹಾಗು ನನ್ನ ಪುಟ್ಟ ತಂಗಿಯನ್ನು ಅಮ್ಮ ತುಂಬಾ ಜೋಪಾನ ಮಾಡುತ್ತಿದ್ದರು. ಮನೆಯ ಸುತ್ತಲೂ ಒಂದು ರೀತಿ ಭಯದ ವಾತಾವರಣವಾಗಿತ್ತು. ಅಪ್ಪನ ಅಮ್ಮ ಅಮ್ಮನಿಗೆ ಬಾಣಂತನ ಮಾಡಬೇಕೆಂದರೆ ನನ್ನ ಅತ್ತೆಗೆಗೂ ಹೆರಿಗೆಯಾಗಿತ್ತು. ಮಗಳ ಬಾಣಂತನಕ್ಕಾಗಿ ಅತ್ತೆಯ ಜೊತೆಯೇ ಅಜ್ಜಿ ಇದ್ದರು. ಇಂತಹ ಪರಿಸ್ಥಿಯಲ್ಲಿ ಅಮ್ಮನ ಅಪ್ಪ ಮಗಳನ್ನು ಒಂಟಿ ಮನೆಯಲ್ಲಿ ಬಿಡದೆ ಬಾಣಂತನವು ಆಯಿತೆಂದು ತಮ್ಮ ಊರು ತುಮಕೂರಿಗೆ ನಮ್ಮನೆಲ್ಲ ಕರೆದೊಯ್ದರು.
ದೊಡ್ಡದಾದ ಕುಟುಂಬ. ಮನೆ ತುಂಬ ಜನವೋ ಜನ ಮಕ್ಕಳು, ಮೊಮ್ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಎರಡು ಅಂತಸ್ತಿನ ಮನೆ. ಮೊದಲನೇ ಮಹಡಿ ಹೋಗುವುದಕ್ಕೆ ಮರದ ಮೆಟ್ಟಿಲುಗಳು. ಮನೆಯ ಸುತ್ತಲೂ ತಾತನ ಅಣ್ಣ -ತಂಮ್ಮದಿರ ಮನೆ. ಓಣಿ ತುಂಬಾ ಸಂಬಂಧಿಕರೆ ಇದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲ ಕಷ್ಟ-ಸುಖಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಒಂದು ಸುಂದರ ಮನೆತನ ನಮ್ಮದು.
ತಾತನ ಮನೆಯ ಹಾಲ್ ನ ಒಂದು ಮೂಲೆಯಲ್ಲಿ ಅಮ್ಮನಿಗೆ ಮಂಚ ಹಾಕಿ, ನನ್ನ ಪುಟ್ಟ ತಂಗಿ ಪಾಪುವಿಗೆ ಒಂದು ಸೀರೆಯಲ್ಲಿ ಜೋಕಾಲಿ ಕಟ್ಟಲಾಗಿತ್ತು. ಅವರಿಬ್ಬರನ್ನು ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಗಿತ್ತು . ಅಮ್ಮನ ತಮ್ಮ ಅಂದರೆ ನನ್ನ ಮಾವ ಇಂಜಿನಿಯರಿಂಗ್ ಓದುತಿದ್ದ ಕಾರಣ ಅವರಿಗೆ ಪ್ರತ್ಯೇಕ ಕೊಠಡಿ ಕೊಡಲಾಗಿತ್ತು. ನನ್ನ ಅಮ್ಮ ಅವರ ಅಕ್ಕನ ಮಗಳು ಲಕ್ಷ್ಮಿಯ ಜೊತೆ ನನ್ನನ್ನು ಶಾಲೆಗೆ ಸೇರಿಸಿದರು, ನಮ್ಮ ಅಕ್ಕ ಅಂದರೆ ನನ್ನ ದೊಡ್ಡಮ್ಮನ ಮನೆ ತಾತನಾ ಮನೆಯ ಪಕ್ಕದ ಬೀದಿಯಲ್ಲಿ ಇತ್ತು, ಆ ಕಾರಣ ಲಕ್ಷ್ಮಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಲು ತಾತನಾ ಮನೆಗೆ ಬರುತ್ತಿದ್ದಳು, ನನಗೆ ಶಾಲೆಗೆ ಹೋಗಲು ಚೂರು ಇಷ್ಟ ವಿಲ್ಲಾ, ಬರಿ ಅಳುವುದೇ ಕೆಲಸ, ನನ್ನ ತಾತ ಪಾಪ ಮಗುವಿಗೆ ಯಾಕೆ ಕಾಟ ಕೊಡುತ್ತೀಯ ಮುಂದೆ ಹೋಗೋದು ಇದ್ದೆ ಇದೆ ಅಂದರೆ, ನನ್ನ ಅಮ್ಮ ಶಾಲೆಗೆ ಹೋಗಬೇಕು ಅಂದರೆ ಹೋಗಬೇಕು ಅಷ್ಟೇ ಎಂದು ನನ್ನನ್ನು ಬಲವಂತವಾಗಿ ಕಳುಹಿಸುತ್ತಿದ್ದಳು, ನನ್ನ ಅಕ್ಕ ಲಕ್ಷ್ಮಿ ಧರ ಧರ ಎಂದು ಎಳೆದು ಕರೆದುಕೊಂಡು ಹೋಗುತ್ತಿದ್ದಳು, ಅವಳು ನನಗಿಂತ 2ವರ್ಷ ದೊಡ್ಡವಳು ಅಷ್ಟೇ, ಅವಳಿಗೂ ಏನೂ ತಿಳಿಯುತ್ತಿರಲಿಲ್ಲ, ದೊಡ್ಡವರು ಹೇಳೊ ಕೆಲಸ ಮಾಡಿ ಮುಗಿಸುವ ಹುಮಸ್ಸು ಅವಳದು. ನನಗೆ ನೆನಪಿರುವ ಹಾಗೆ ಒಂದು ಎತ್ತರ ಗಾತ್ರ ಜಾಸ್ತಿ ಇರುವ ಹೆಂಗಸು ಆ ಶಾಲೆಯಲ್ಲಿ ಯಾವ ಮಕ್ಕಳು ಆಚೆ ಹೋಗದಂತೆ ಶಾಲೆ ಬಾಗಿಲು ಹಾಕಿ ಕಾಯುತ್ತಿತ್ತರು. ಹೀಗೆ ನನ್ನ ಶಾಲೆಯ ದಿನಗಳು ಆರಂಭವಾಗಿತ್ತು.
ನನಗೆ ಅಜ್ಜಿಯದು ಅಷ್ಟು ನೆನಪಿಲ್ಲ. ತುಂಬಾ ದೊಡ್ಡ ಸಂಸಾರ ಆಗಿರುವುದರಿಂದ ಸದಾ ಅಡುಗೆ ಮನೆ, ಮಕ್ಕಳ- ಮೊಮ್ಮಕ್ಕಳ ಆರೈಕೆಯಲ್ಲಿಯೇ ಇರುತ್ತಿದ್ದರು. ಅಜ್ಜಿ ತುಂಬಾ ಶ್ರಮ ಜೀವಿ. ಬಾವಿಯಿಂದ ನೀರು ಸೇದಿ, ಒಲೆ ಒರಿ ಹಾಕಿ, ಏಳು ಜನ ಹೆಣ್ಣು ಮಕ್ಕಳ ಬಾಣಂತನ ಮಾಡಿ, ಗಂಡ – ಮಕ್ಕಳು- ಅಳಿಯಂದಿರಿಗೆ – ಸೊಸೆಯಂದಿರಿಗೆ ಅಡಿಗೆ ಉಪಚಾರ ಮಾಡಿ ಪುರುಸೊತ್ತೆ ಇಲ್ಲದೆ ದುಡಿಯುತ್ತಿದ್ದ ಹಿರಿ ಜೀವವದು. ಆದರೆ ತಾತನ ನೆನಪು ಚೆನ್ನಾಗಿದೆ. ಅವರ ಜೊತೆಗೆ ನನ್ನ ಒಡನಾಟ ತುಂಬಾ ಸ್ವಾರಸ್ಯವಾಗಿತ್ತು. ಮನೆಯ ಅಂಗಳದಲ್ಲಿ ದೊಡ್ಡ ಪಾರಿಜಾತ ಮರಬೆಳಿಗ್ಗೆಯ ಸಮಯ ಮನೆಯ ಅಂಗಳವೆಲ್ಲ ಹೂವಿನ ರಾಶಿ, ನಾನು ತಾತನಿಗೆ ಪ್ರತಿ ದಿನ ದೇವರ ಪೂಜೆಗೆ ಪಾರಿಜಾತದ ಹೂವು ಆರಿಸಿ ಕೊಡಬೇಕು. ತಾತನ ಕೋಲಿನ ಸಹಾಯದಿಂದ ಮರದ ಕೊಂಬೆಗಳನ್ನು ಅಲ್ಲಾಡಿಸಿದರೆ ಪಾರಿಜಾತ ಹೂವುಗಳು ಮರದಿಂದ ಉದುರಿ ನೆಲವು ಹೂವಿನ ಹಾಸಿಗೆ ಹಾಗೆ ಕಾಣುತ್ತಿತ್ತು. ಅದನ್ನು ಆರಿಸಿ ಅಡುಗೆ ಮನೆಯ ಒಂದು ಮೂಲೆಯಲ್ಲಿ ದೇವರ ಮಂಟಪದಲ್ಲಿನ ಹೂವಿನ ಬುಟ್ಟಿಯಲ್ಲಿ ಇಡುವುದು ನನ್ನ ಕೆಲಸವಾಗಿತ್ತು. ನನಗೆ ಅದು ಏನೋ ಸಾಧನೆ ಮಾಡಿದ ಖುಷಿ. ಬೆಳ್ಳಗೆ ಹೊತ್ತು ತಾತ ನನಗೆ ನಾಕಾಣೆ ಕೊಟ್ಟು, ಅಲ್ಲೇ ಇರುವ ಮೂಲೆ ಶೆಟ್ಟರ ಅಂಗಡಿಯಿಂದ ಬನ್ ತೊಗೊಂಡು ಬಾ ಅನ್ನುತಿದ್ದರು. ನಾನು ಓಡಿ ಹೋಗಿ ತಂದ ಮೇಲೆ ತಾತ ನನಗೂ ಸ್ವಲ್ಪ ಕೊಟ್ಟು, ಮಿಕ್ಕಿದು ಅವರು ಕಾಫಿಯ ಜೊತೆಗೆ ತಿನ್ನುತಿದ್ದರು. ಬಾಣಂತಿಯ ಮನೆ ಕೆಲಸ ಜಾಸ್ತಿ ಇದ್ದಿದ್ದರಿಂದ ತಿಂಡಿ ತಡ, ತಾತನಿಗೆ ಹಸಿವು, ಅವರ ಹೆಸರಲ್ಲಿ ನನಗೂ ಬನ್ ನಿನ ಸುಗ್ಗಿಯಾಗುತ್ತಿತ್ತು.
ಮತ್ತೆ ಶಾಲೆಯ ವಿಚಾರಕ್ಕೆ ಬಾರೋಣ. ಏನು ಕಲಿಯುತ್ತಿದ್ದೆನೋ ಗೊತ್ತಿಲ್ಲ ಯಾವುದು ನೆನಪಿಲ್ಲ. ಆದರೆ ಶಾಲೆಯೆಂದರೆ ಸಿಕ್ಕಾಪಟ್ಟೆ ಅಳುದಿದ್ದೆ. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅಮ್ಮನಿಗೆ ಏನಾದರು ಮಾಡಿಸಬೇಕು ಅನ್ನುವ ಆಸೆ. ಅಮ್ಮ ನನಗೆ ಚೆನ್ನಾಗಿ ಸೀರೆ ಉಡಿಸಿ, ತಲೆಗೆ ಗೊಂಡೆ ಹಾಕಿ, ಕಾಲಿಗೆ ಗೆಜ್ಜೆ ಕಟ್ಟಿ, ಕೈಯಿಗೆ ಒಂದು ಕೋಲು ಕೊಟ್ಟು ನೀನು ಈಗ ಕೊರವಂಜಿ “ಕಣಿ ಹೇಳ್ತಿನವಾ ಕಣಿ ” ಅಂತ ಹೇಳಬೇಕು ಅಂತ ಅಭ್ಯಾಸ ಮಾಡಿಸಿ ತಯಾರಿ ಮಾಡಿದ್ದರು. ಯಾರೊಬ್ಬರು ನನ್ನನು ನೋಡಿ ಎಷ್ಟು ಚಂದಾ ಕಾಣ್ತದೆ ಮಗು. ತುಟಿಗೆ ಏನಾದರು ಸ್ವಲ್ಪ ಕೆಂಪಗೆ ಹಚ್ಚಿ ಎಂದರು. ಅಮ್ಮ ಪೌಡರ್, ಕಾಡಿಗೆ, ಕೆಂಪು ಶೃಂಗಾರ್ ಬಿಟ್ಟರೆ ಹಚ್ಚುವುದಕ್ಕೆ ಅಮ್ಮನ ಹತ್ತಿರ ಏನೂ ಇರಲಿಲ್ಲ. ಸಾಕು ನಡಿ ಚನ್ನಾಗಿದೆ ಎಂದರು ಅಮ್ಮ. ಆದರೆ ನನಗೆ ಸಮಾಧಾನವಿಲ್ಲ. ಏನು ಮಾಡೋದು ಅಂತ ಯೋಚನೆ ಮಾಡುತಿದ್ದಾಗ ತಲೆಗೆ ತಟ್ಟನೆ ನೆನಪು ಆಗಿತ್ತು ಅಮ್ಮನ ವೀಳ್ಯದೆಲೆ ಡಬ್ಬ.
ಬಾಣಂತಿಯರು ಊಟವಾದ ಬಳಿಕ ವೀಳ್ಯದೆಲೆಗೆ ಸುಣ್ಣ ಹಚ್ಚಿ ಅಡಿಕೆಯ ಜೊತೆ ತಿನ್ನುತ್ತಿದಿದ್ದು ನೋಡಿದ್ದೆ. ವೀಳ್ಯದೆಲೆ ತಿನ್ನುವುದರಿಂದ ತಾಯಿ ತಿಂದಿದೆಲ್ಲ ಜೀರ್ಣವಾಗುತ್ತದೆ ಮತ್ತು ಮಗು ಹಾಲು ಕಕ್ಕುವುದಿಲ್ಲ. ತಾಯಿಗೆ ಕ್ಯಾಲ್ಸಿಯಂ ಸಿಗುತ್ತೆ ಎಂಬ ನಂಬಿಕೆ ಹಾಗಾಗಿ ತಾಯಿ ವೀಳ್ಯದೆಲೆ ಹಾಕುವುದು ವಾಡಿಕೆ. ಆದರೆ ನಾನು ಗಮನಿಸಿದ್ದು ಬೇರೆಯೇ ಅಮ್ಮ ವೀಳ್ಯದೆಲೆ ತಿಂದ ಮೇಲೆ ಅಮ್ಮನ ಬಾಯಿಯಲ್ಲಾ ಕೆಂಪಾಗಿತ್ತು. ಅದನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ನಾನು ಯಾರಿಗೂ ಕಾಣದಂತೆ ವೀಳ್ಯದೆಲೆಗೆ ಚೆನ್ನಾಗಿ ಸುಣ್ಣ ಸವರಿ ತಿಂದು ಶಾಲೆಗೆ ಓಡಿದ್ದೆ. ನನ್ನ ನೋಡಿ ಶಾಲೆಯಲ್ಲಿ ಪ್ರತಿಯೊಬ್ಬರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆ ನಕ್ಕಿದ್ದು. ಆದರೆ ನನಗೆ ಯಾಕೆ ಎಲ್ಲರೂ ಅಷ್ಟು ನಗುತ್ತಿದ್ದಾರೆ ಎಂದು ಅಂದು ಅರ್ಥವಾಗಿರಲಿಲ್ಲ. ನನ್ನ ಶಾಲೆಗೆ ಕರೆದೊಯ್ಯುತ್ತಿದ್ದ ಅಕ್ಕ ಲಕ್ಷ್ಮಿ ಇಂದು ಆ ದೃಶ್ಯ ನೆನೆದು ಈಗಲೂ ನಗುತ್ತಾಳೆ. ಬಾಲ್ಯದ ನೆನೆಪೇ ಹಾಗೆ ಸಣ್ಣ ಸಣ್ಣ ನೆನಪಿನಲ್ಲಿ ಎಷ್ಟೆಲ್ಲ ಸಂತೋಷವಿತ್ತು. ಆ ಸಂತೋಷ ಆ ಸಿಹಿ ನೆನಪುಗಳು ನನ್ನ ಲೇಖನದಲ್ಲಿ ಮೂಡಿ ಬಂದಿವೆ.
- ಭವಾನಿ ದಿವಾಕರ್
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)