ಕವಿ ಜಿ.ಕೆ ನಾಯಕ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಇವನಲ್ಲ ಅತಿಗಣ್ಯ ವ್ಯಕ್ತಿ
ನಗಣ್ಯ!
ಬೇಡ ಗುಂಡು ನಿರೋಧಕ ಅಂಗಿ
ನಿಸ್ಸಂಗಿ
ಸಾಕು ತೇಪೆ ಹಚ್ಚಿದ ಅಂಗಿ
ಕಾಣಲು ಕೃಶ- ಕಾಯ
ಹಸಿದಹೊಟ್ಟೆಗೆ ಅನ್ನ
ನೀಡುವ ಅತಿಕಾಯ!
ಹೆಸರಿಗೆ ದೇಶದ ಬೆನ್ನೆಲುಬು!
ನಿಜಾರ್ಥದಲ್ಲಿ ಈತ
ಬರೀ ಕ್ಲೀಷೆ, ಕಿಲುಬು!
ಕಷ್ಟಗಳಿಗೆ ಎಂದೂ ಸೋಲ
ನೇಣಿಗೆ ಏರಿಸುವುದು ಮಾತ್ರ
ಬ್ಯಾಂಕಿನಲಿರುವ ಕೃಷಿ ಸಾಲ!
ಕಾಯಕಕ್ಕೆ ಯಾರನ್ನೂ ಕಾಯ
ಮುಂಜಾವದೊಳೆದ್ದು ಕೆಸರಲಿ ಮಿಂದು
ಮಾಡುವನು ನಿತ್ಯ ಪೂಜೆ
ಹೆಸರು ಬೇಸಾಯ!
ಮನದಲ್ಲಿದ್ದರೂ ಆರದ ಗಾಯ
ಯಾರಿಗೂ ಮಾಡಲ್ಲ ಅಪಾಯ
ಹೂಡಲ್ಲ ಯಾವುದೇ ಸಂಪು ಮುಷ್ಕರ
‘ಬದು’ ಕಟ್ಟಿ ಬಚ್ಚಿಡುವ
ಬಿಚ್ಚಿಡಲ್ಲ ಮನದ ಅಭಿಪ್ರಾಯ.
ದೇಶದ ಶ್ರೇಯಾಭಿವೃದ್ಧಿಗೆ
ಕೃಷಿಯೇ ಏಕೈಕ ಹಾದಿ
ಎಂದು ಬಗೆದು ಮಣ್ಣಿನಲ್ಲಿ
ಬೆರೆಸಿ ತನ್ನ ದೇಹದ ಬೂದಿ
ಹಾಕುವನು ಭದ್ರ ಬುನಾದಿ
ಕೃಷಿಯಲ್ಲೇ ಕಾಣುವ ಖುಷಿ
ಈತ ಕೃಷಿಯ ಋಷಿ!
- ಜಿ.ಕೆ ನಾಯಕ್, ಪೆರ್ಮುದೆ
