ಉಳ್ಳವರ ಹುಚ್ಚು ದರ್ಬಾರು ಮಿತಿ ಮೀರುತ್ತಿದೆ, ಲಂಗು ಲಗಾಮು ಹಾಕುವ ಪ್ರಯತ್ನವು ಬೇಕಿದೆ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನದಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸೇವೆ ಎನ್ನುವುದು ಕಾಣೆಯಾಗುತ್ತಿದೆ
ಕೇವಲ ತೋರಿಕೆಯ ಭಾಗವಾಗುತ್ತಿದೆ
ಹಣ ಸಂಪಾದಿಸುವುದು ದಂಧೆಯಾಗುತ್ತಿದೆ
ಎಲ್ಲವನ್ನೂ ಹಣದಿಂದಲೇ ಅಳೆಯಲಾಗುತ್ತಿದೆ
ಶ್ರೀಮಂತಿಕೆಯು ಇಂದು ಜಗದೆಲ್ಲೆಡೆ ಹೆಚ್ಚುತ್ತಿದೆ
ನಮ್ಮೊಳಗಿನ ಮಾನವೀಯತೆಯು ಕ್ಷೀಣಿಸುತ್ತಿದೆ
ಮಜವಾದಿಗಳ ಸಂಖ್ಯೆಯು ಯಥೇಚ್ಛವಾಗಿದೆ
ವಾಸ್ತವದ ಬದುಕು ಮಾತೃ ಕಳಾಹೀನಗೊಳ್ಳುತ್ತಿದೆ
ಉಳ್ಳವರ ಹುಚ್ಚು ದರ್ಬಾರು ಮಿತಿ ಮೀರುತ್ತಿದೆ
ಲಂಗು ಲಗಾಮು ಹಾಕುವ ಪ್ರಯತ್ನವು ಬೇಕಿದೆ
ನಿರ್ಗತಿಕರ ನೋವು ಯಾರಿಗೂ ಕಾಣದಾಗಿದೆ
ನೈಜವಾದ ಕಾಳಜಿಯನ್ನು ನಾವು ತೋರಿಸಬೇಕಿದೆ
ಸಂಪತ್ತಿನ ಅಸಮಾನ ಹಂಚಿಕೆಯು ಕುಗ್ಗಬೇಕಿದೆ
ಸಮಾನ ಅವಕಾಶವು ಎಲ್ಲರಿಗೂ ಸಿಗಬೇಕಿದೆ
ಬಡವರ ಹಿತರಕ್ಷಣಾ ಕಾರ್ಯ ನಡೆಯಬೇಕಿದೆ
ಸಾಮಾಜಿಕ ಬದ್ಧತೆಯನ್ನು ಹೊಂದಬೇಕಿದೆ
ಕಿತ್ತುತಿನ್ನುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ
ಹಂಚಿಕೊಂಡು ತಿನ್ನುವ ಅಭ್ಯಾಸ ಹೆಚ್ಚಬೇಕಿದೆ
ಸಮಾಜದ ಏಳ್ಗೆಗೆ ಎಲ್ಲರೂ ದುಡಿಯಬೇಕಿದೆ
ಜಾತಿ ಧರ್ಮ ಪ್ರಾಂತಿಯತೆಯ ಮೀರಿನಿಲ್ಲಬೇಕಿದೆ
- ನಾಗರಾಜ ಜಿ. ಎನ್. ಬಾಡ
