ಮೂಲತಃ ಕೊಡಗಿನವರಾದ ಬಿಟ್ಟೀರ ಚೋಂದಮ್ಮ (ಲಲಿತ), ಶಂಭು ಅವರ ‘ಲಲಿತ ಲಹರಿ’ ಪುಸ್ತಕದ ಕುರಿತು ತಮ್ಮ ಮನದಾಳದ ಮಾತನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಲಲಿತ ಲಹರಿ
ಲೇಖಕರು : ಬಿಟ್ಟೀರ ಚೋಂದಮ್ಮ (ಲಲಿತ), ಶಂಭು
ಪ್ರಕಾಶಕರು : ಎಚ್.ಎಸ್.ಆರ್.ಎ.ಪ್ರಕಾಶನ
ಬೆಲೆ : ೧೫೦.೦೦
ಕೊಡಗಿನ ಕಾವೇರಿ ತಾಯಿಯ ಮಡಿಲಲ್ಲಿ, ದಿವಂಗತ ಶ್ರೀ ಕೂಡಕಂಡೀರ ಪೂವಯ್ಯ ಮತ್ತು ಅಕ್ಕಮ್ಮ ದಂಪತಿಯ ಗರ್ಭಾಂಬುಧಿಯಲ್ಲಿ ಎರಡನೇ ಮಗಳಾಗಿ 1956ನೇ ಇಸವಿಯಲ್ಲಿ ಜನಿಸಿದ ನನಗೆ ಬಾಲ್ಯದಿಂದಲೇ ಅತ್ಯುತ್ತಮ ಗುರುಗಳಿಂದ ಒಳ್ಳೆಯ ವಿದ್ಯಾಭ್ಯಾಸ, ಸಂಸ್ಕಾರ ದೊರೆಯಿತು. ಚಿಕ್ಕಂದಿನಿಂದಲೂ ಬರೆವಣಿಗೆಯತ್ತ ಒಲವಿತ್ತು. ಹಾಗಾಗಿ ಕೊಡಗು ಸಂಗಾತಿ ಪಾಕ್ಷಿಕ ಪತ್ರಿಕೆಯಲ್ಲಿ ನಿರಂತರ ಕಥೆ, ಕವನ, ಲೇಖನ, ಮಕ್ಕಳ ಅಂಕಣ ಬರೆಹ ಪ್ರಸಾರವಾಗುತಿತ್ತು. ಕೋವಿಡ್ ಕಾಲದಲ್ಲಿ ಸಂಪೂರ್ಣವಾಗಿ ನನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡು ಹಿಂದೆ ತಿರುಗಿ ನೋಡದಂತೆ ಮುನ್ನುಗ್ಗಿದೆ. ಹಲವಾರು ಬಳಗಗಳಲ್ಲಿ ಛಂದಸ್ಸನ್ನು ಕಲಿಸುತ್ತಾ ಬರೆಯುತ್ತಿದ್ದೆ. ಅಂಥಹ ಬರೆವಣಿಗೆಯ ಫಲವೇ ಈ ಕವನ ಸಂಕಲನ.
ಮಾನವನು ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವೇ ಕಲೆ. ಭಾರತೀಯ ಪುರಾತನ ಗ್ರಂಥಗಳಲ್ಲಿ ಅರವತ್ತನಾಲ್ಕು ಕಲೆಗಳನ್ನು ತಿಳಿಸಿದ್ದಾರೆ. ಅವುಗಳಲ್ಲಿ ಲಲಿತ ಕಲೆಯೂ ಒಂದು. ಲಲಿತ ಕಲೆಯಲ್ಲೂ ಹಲವು ಪ್ರಕಾರಗಳಿವೆ. ಅವುಗಳಲ್ಲಿ ಒಂದು ಸಂಗೀತ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದದಿಂದ ಜನಿತವಾದುದೇ ಸಂಗೀತ.

ಪ್ರಕೃತಿಯಲ್ಲಿ ಅಡಗಿರುವ ಧ್ವನಿ ಮಾಧುರ್ಯಗಳನ್ನು ಅನುಕರಿಸಿ, ಸಪ್ತ ಸ್ವರಗಳನ್ನು ಗುರುತಿಸಿ, ಲಯ, ತಾಳ, ಗೇಯತೆಯೊಂದಿಗೆ ಭಕ್ತಿ ರಸ ಮಿಲನಗೊಳಿಸಿ ಶ್ರೋತೃಗಳ ಹೃದಯ ಮುಟ್ಟುವಂತೆ ಮಾಡುವುದು ಸಂಗೀತ. ಇಂತಹ ಗೇಯತೆಯುಳ್ಳ ರಚನೆಗಳೆ, ಗೀತೆಗಳು, ದೇವರ ನಾಮ, ಕೀರ್ತನೆಗಳು, ಕೃತಿಗಳು, ಸುಗಮ ಸಂಗೀತಕ್ಕೆ ಬೇಕಾದ ದಾಸರ ಪದಗಳು.
ಪ್ರಕೃತಿಯಲ್ಲಿ ಹುದುಗಿದ ಹಲವು ಗುಣವಿಶೇಷತೆಗಳನ್ನು, ದೃಶ್ಯ ವೈಭವಗಳನ್ನು ಹೊರಗೆಳೆದು ಕಣ್ಣಿಗೆ ಕಾಣುವಂತೆ ಹೃದಯವನ್ನು ಮುಟ್ಟುವಂತೆ ಭಾವವನ್ನು ಅಭಿವ್ಯಕ್ತಿಗೊಳಿಸುವ ಒಂದು ಕಲಾ ಮಾಧ್ಯಮವೇ ಕವನ. ಭಾವಗೀತೆಗಳು, ಕವನ, ಕವಿತೆ, ಕಾವ್ಯ, ಗದ್ಯ, ವಚನ ಮುಂತಾದವುಗಳು. ಹಲವು ಸಂದರ್ಭಗಳಲ್ಲಿ ಛಂದಸ್ಸು, ಅಥವಾ ಛಂದಸ್ಸಿನಿಂದ ಹೊರಬಂದು ಮಾನವನ ಮನಮುಟ್ಟಿ, ಹೃದಯ ತಟ್ಟುವುದರಲ್ಲಿ ಯಶಸ್ವಿಯಾಗಿದೆ. ಕವನ, ಕವಿತೆಗಳಲ್ಲಿ ಛಂದಸ್ಸನ್ನು ಬಿಟ್ಟರೂ ಮಾತ್ರಾ ಗಣನೆಯ ಮುಖಾಂತರ ಭಾವ, ಅಲಂಕಾರವನ್ನು ತುಂಬಿ, ಅರ್ಥವತ್ತಾದ ರಚನೆಗೆ ಗೇಯತೆ, ಲಯ, ತಾಳದ ಮಟ್ಟುಗಳು ಸಿಗುವಂತೆ ರಚಿಸಿದರೆ, ಅಂತಹ ರಚನೆಗಳು ಉತ್ಕೃಷ್ಟ ರಚನೆಯಾಗುತ್ತವೆ. ಈ ನಿಟ್ಟಿನಲ್ಲಿ ನನ್ನದೊಂದು ಸಣ್ಣ ಪ್ರಯತ್ನವೇ ಈ ಕವನ ಸಂಕಲನ. ತ್ರೈಮಾತ್ರಾ, ಚತುರ್ಮಾತ್ರಾ, ಪಂಚಮಾತ್ರಾ, ಚೌಕಟ್ಟಿನಲ್ಲಿ, ಉತ್ಸಾಹ , ಮಂದಾನಿಲ , ಲಲಿತ ಲಯ, ಮತ್ತು ಭಾಮಿನಿ ಲಯದೊಂದಿದೆ ತಮ್ಮ ಮುಂದಿಡಲು ಬಯಸಿರುವೆನು. ಓದುಗರ ಮನಮೆಚ್ಚಿಸಿದರೆ ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ.
ಮುನ್ನುಡಿ, ಬೆನ್ನುಡಿ, ಆಶಯನುಡಿಗಳನ್ನು ಬರೆದು ಕೊಟ್ಟ ಸಹೃದಯಿಗಳಿಗೆ ಅನಂತ ಧನ್ಯವಾದಗಳು. ಹಾಗು ನನ್ನೆಲ್ಲಾ ಶ್ರಮದ ಹಿಂದೆ ಪ್ರೋತ್ಸಾಹದಾಯಕವಾಗಿ ನಿಂತ, ಉತ್ಸಾಹಿ ತರುಣ ಚನ್ನಕೇಶವ ಜಿ ಲಾಳನಕಟ್ಟೆಯವರಿಗೂ ಈ ಸಂದರ್ಭದಲ್ಲಿ ಮನದುಂಬಿದ ಆಶೀರ್ವಾದದೊಂದಿಗೆ, ಧನ್ಯವಾದಗಳನ್ನು ಅರ್ಪಿಸುತಿದ್ದೇನೆ.
- ಬಿಟ್ಟೀರ ಚೋಂದಮ್ಮ (ಲಲಿತ), ಶಂಭು – ಬೆಂಗಳೂರು
