ಹೋಮ್ ವರ್ಕ್, ಅಸೈನ್ ಮೆಂಟ್ ಗಳು ಪುಟ್ಟ ಮಕ್ಕಳ ಮನಸ್ಸಿನ ಮೇಲೆ ಭಯ, ಆತಂಕಗಳನ್ನು ಸೃಷ್ಟಿಸುತ್ತಿವೆ. ಒಮ್ಮೆ ಪಟಪಟನೆ ಇಂಗ್ಲಿಷಿನಲ್ಲಿ ಮಾತನಾಡುವ ಡಾಕ್ಟರ್, ಸಾಫ್ಟ್‌ವೇರ್ ವ್ಯಕ್ತಿಗಳು ತಮ್ಮ ಮಗುವಿಗೆ ಉತ್ತಮ ಸಂಸ್ಕಾರ, ಧೃತಿವಂತರನ್ನಾಗಿ ಮಾಡುತ್ತಿದ್ದೇವೆಯೇ? ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಂಡರೆ ಒಳಿತು. ಮಕ್ಕಳ ತಜ್ಞರಾದ ಡಾ. ಕೆ. ಬಿ. ರಂಗಸ್ವಾಮಿ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಬಹಳ ದಿನಗಳ ನಂತರ ನಾನು ನೋಡಿದ ಒಂದು ಅತ್ಯುತ್ತಮ ಚಿತ್ರವೆಂದರೆ ‘ಕಾಳಿದಾಸ ಕನ್ನಡ ಮೇಷ್ಟ್ರು’. ಲಘುಹಾಸ್ಯ, ಪರಿಸ್ಥಿತಿಯ ವಿಡಂಬನೆ, ಮುಗ್ಧ ಮಗುವಿನ ಕನಸುಗಳು, ತಮ್ಮ ಮಕ್ಕಳು ಏನನ್ನೋ ಸಾಧಿಸಿಬಿಡಬೇಕೆಂಬ ಮಧ್ಯಮ ವರ್ಗದವರ ಮನೋಭಾವ, ಹತಾಶೆ, ನೋವು, ವ್ಯವಸ್ಥೆಯ ವಿರುದ್ಧದ ಆಕ್ರೋಶ, ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿ ಮುಂತಾದ ಹತ್ತು ಹಲವು ಸಂಗತಿಗಳನ್ನು ಒಳಗೊಂಡ ಈ ಚಿತ್ರ, ಪ್ರೇಕ್ಷಕನನ್ನು ಬಹಳ ಹೊತ್ತಿನವರೆಗೆ ಕಾಡುವುದಷ್ಟೇ ಅಲ್ಲದೆ ನನ್ನಂಥವರನ್ನು ಅದೇ ಗುಂಗಿನಲ್ಲಿ ಗಾಢ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.
ನನ್ನ ವಿಷಯಕ್ಕೆ ಬಂದರೆ, ನಾನು ಹತ್ತನೇ ತರಗತಿಯವರೆಗೆ ಓದಿದ್ದು ಕನ್ನಡ ಮಾಧ್ಯಮದಲ್ಲೇ. ಅದೂ ಸರ್ಕಾರಿ ಶಾಲೆಗಳಲ್ಲಿ. ಕಷ್ಟಕೋಟಲೆಗಳ ನಡುವೆಯೂ ಹೊಳೆ, ಬೆಟ್ಟ, ಕಾಡು, ಮಾವಿನತೋಪು, ಗೋಲಿ, ಬುಗುರಿ, ಚಿನ್ನಿದಾಂಡು….. ಎಂದು ಬಾಲ್ಯದ ಎಲ್ಲಾ ಖುಷಿಗಳನ್ನು ಅನುಭವಿಸಿದ ಸಂತೃಪ್ತಿ ನನಗಿದೆ. ಪ್ರಾಥಮಿಕ ಶಾಲೆಯ ಸಹಪಾಠಿಯೊಬ್ಬ ಅಮೆರಿಕಾದ ನಾರ್ವಿಚ್ ನಲ್ಲಿ ಸುಪ್ರಸಿದ್ಧ ಮಕ್ಕಳ ತಜ್ಞನಾಗಿದ್ದಾನೆ. ಅಮೆರಿಕನ್ನರ ಧಾಟಿಯಲ್ಲೇ ಲೀಲಾಜಾಲವಾಗಿ ಇಂಗ್ಲಿಷ್ ನಲ್ಲಿ ಮಾತನಾಡುವುದಷ್ಟೇ ಅಲ್ಲದೆ ಕನ್ನಡದಲ್ಲಿ ಮಾತನಾಡುವ ಮತ್ತು ಬರೆಯುವ ತುಡಿತವನ್ನು ಇಂದಿಗೂ ಉಳಿಸಿಕೊಂಡಿದ್ದಾನೆ. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ ಹಲವಾರು ಸಹಪಾಠಿಗಳು ವೈದ್ಯರು, ಎಂಜಿನಿಯರ್ ಗಳು, ಪಶು ವೈದ್ಯರು, ಕಾಲೇಜ್ ಪ್ರಾಂಶುಪಾಲರು, ಉನ್ನತ ಸರ್ಕಾರಿ ಉದ್ಯೋಗಿಗಳು ಮುಂತಾದ ಹಲವು ಸ್ತರಗಳಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡಿದ ಗೆಳೆಯನೊಬ್ಬ ಅಮೆರಿಕಾದಲ್ಲಿ ಸುಪ್ರಸಿದ್ಧ ರಾಸಾಯನ ಶಾಸ್ತ್ರದ ಹಿರಿಯ ಸಂಶೋಧಕನಾಗಿದ್ದಾನೆ.

ಫೋಟೋ ಕೃಪೆ : google
ನಾನು ಇಂಗ್ಲಿಷ್ ನಲ್ಲಿ ಮಾತನಾಡಲು ಕಲಿತದ್ದು ವೈದ್ಯಕೀಯ ವ್ಯಾಸಂಗಕ್ಕೆ ಸೇರಿಕೊಂಡ ನಂತರ. ಇವೊತ್ತು ಗಂಟೆಗಟ್ಟಲೆ ಇಂಗ್ಲಿಷ್ ನಲ್ಲಿ ಕ್ಲಾಸ್ ತೆಗೆದುಕೊಳ್ಳಬಲ್ಲೆ ಮತ್ತು ಸಮ್ಮೇಳನಗಳಲ್ಲಿ ಮಾತನಾಡಬಲ್ಲೆ. ನನ್ನ ವಿದ್ಯಾರ್ಥಿಗಳನೇಕರು ‘ಸರಳ ಭಾಷೆಯಲ್ಲಿ ಮನದಟ್ಟಾಗುವಂತೆ ಹೇಳಿಕೊಡುತ್ತೀರಿ’ ಎಂದಾಗ ಖುಷಿಯಾಗುತ್ತದೆ. ಏಕೆಂದರೆ ನನಗೆ ತುಂಬಾ ಕ್ಲಿಷ್ಟಕರ ಇಂಗ್ಲಿಷ್ ಪದಗಳು ಬರುವುದಿಲ್ಲ ಮತ್ತು ಆ ಕೊರತೆಯೆಂದಿಗೂ ನನ್ನ ವೃತ್ತಿ ಬದುಕಿಗೆ ತೊಡಕೆನಿಸಲಿಲ್ಲ. ಹಾಗೆಯೇ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನನಗಾಗಿರುವ ಬಹು ದೊಡ್ಡ ಲಾಭವೆಂದರೆ ಅಷ್ಟೋ ಇಷ್ಟೋ ಬರೆಯುವಂಥ ನೈಪುಣ್ಯತೆ ಪಡೆದಿರುವುದು. ಇದೆಲ್ಲವನ್ನೂ ನಾನಿಲ್ಲಿ ಬಡಾಯಿ ಕೊಚ್ಚಿಕೊಳ್ಳಬೇಕೆಂಬ ಉಮೇದಿನಿಂದ ಹೇಳುತ್ತಿಲ್ಲ. ನಿನ್ನೆ ಸಿನಿಮಾ ನೋಡಿಕೊಂಡು ಬಂದಮೇಲೆ ಇಲ್ಲಿ ಹೇಳಿಕೊಳ್ಳಬೇಕೆನಿಸಿತು.
ನನ್ನ ವಯೋಮಾನದ ಬಹುತೇಕರು ಶಾಲೆಯ ಮೆಟ್ಟಿಲು ತುಳಿದದ್ದು ಐದು ವರ್ಷ ಹತ್ತು ತಿಂಗಳುಗಳು ತುಂಬಿದ ನಂತರವೇ. ಎಷ್ಟೋ ಜನರ ನಿಜವಾದ ಹುಟ್ಟಿದ ತಾರೀಖು ಗೊತ್ತಿಲ್ಲದೆ, ಬಲಗೈಯಿಂದ ಎಡ ಕಿವಿ ಮುಟ್ಟಿಸಿಯೋ, ಅಂದಾಜು ಜನ್ಮ ದಿನಾಂಕ ನಮೂದಿಸಿಯೋ ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಆದರಿಂದು ಮಗುವಿನ ಎರಡನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದಂತೆ ಪ್ರತಿಷ್ಠಿತ ಶಾಲೆಯೊಂದನ್ನು ಪತ್ತೆ ಹಚ್ಚಿ, ಅಲ್ಲಿನವರ ಇಷ್ಟಾರ್ಥಗಳನ್ನೆಲ್ಲಾ ಪೂರೈಸಿ, ಯಾವುದೋ ಮಹತ್ಸಾಧನೆ ಮಾಡಿದವರಂತೆ ಬೀಗುವ ಹೆತ್ತವರನ್ನು ಕಂಡಾಗ ಖೇದವೆನಿಸುತ್ತದೆ. ಸಿಂಬಳ ಒರೆಸಿಕೊಳ್ಳಲೂ ಬಾರದ ಆ ಮುದ್ದು ಮಕ್ಕಳೋ…. ಆ ವಯಸ್ಸಿನ ಸಹಜ ಬೆಳವಣಿಗೆಯ ಮೈಲಿಗಲ್ಲಿಗನುಗುಣವಾಗಿ ಹೇಳಿಕೊಟ್ಟಿದ್ದನ್ನು ಚಾಚೂತಪ್ಪದೆ ಪುನರುಚ್ಚರಿಸುತ್ತವೆ. ಕಂಠ ಪಾಠ ಮಾಡಿದ ರೈಮ್ ಒಂದನ್ನೋ ಮತ್ತೇನನ್ನೋ ಪರಿಚಯದವರೆದುರು ಗಿಣಿಮರಿಯಂತೆ ಒಪ್ಪಿಸಿದುದನ್ನು ಕಂಡು ಬೀಗುವ ಹೆತ್ತವರು, ಹೋಮ್ ವರ್ಕ್, ಅಸೈನ್ ಮೆಂಟ್ ಎಂದು ಆ ಪುಟ್ಟ ಮಗುವಿನ ಮನಸ್ಸಿನಲ್ಲಿ ಓದಿನ ಬಗ್ಗೆ ಭಯ, ಆತಂಕಗಳನ್ನು ಬಿತ್ತತೊಡಗುತ್ತಾರೆ. ಇದರಿಂದ ತಮ್ಮ ಕಂದಮ್ಮಗಳನ್ನು ಎಂಥ ಅನಾಹುತಕ್ಕೊಡ್ಡುತ್ತಿದ್ದೇವೆ ಎಂಬುದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ.

ಫೋಟೋ ಕೃಪೆ : google
ನನ್ನಲ್ಲಿ ಚಿಕಿತ್ಸೆಗೆಂದು ಕರೆತರುವ ಬಹುತೇಕ ಪುಟಾಣಿಗಳು ಪದೇ ಪದೇ ಶೀತ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳಿಂದ ಬಳಲುತ್ತವೆ. ಅದಕ್ಕಾಗಿ ಹೆತ್ತವರ ಆತಂಕವನ್ನು ಹೇಳತೀರದು. ಐದು ವರ್ಷದ ಒಳಗಿನ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಒಂದು ಮಗುವಿಗೆ ಬಂದ ಸೋಂಕು ಆ ಕ್ಲಾಸ್ ರೂಮ್ ಎಂಬ ನಿರ್ಬಂಧಿತ ಕೊಠಡಿಯೊಳಗೆ ಮಿಕ್ಕೆಲ್ಲಾ ಮಕ್ಕಳಿಗೆ ಚಕಚಕನೆ ಹರಡುತ್ತದೆ ಎಂಬ ಸಂಗತಿಯನ್ನು ಅವರಿಗೆ ಮನದಟ್ಟು ಮಾಡಿಸುವುದಾದರೂ ಹೇಗೆ?
ಪಟಪಟನೆ ಇಂಗ್ಲಿಷಿನಲ್ಲಿ ಮಾತನಾಡಬಲ್ಲ ಒಬ್ಬ ಡಾಕ್ಟರ್ ನನ್ನೋ ಸಾಫ್ಟ್‌ವೇರ್ ನನ್ನೋ ತಮ್ಮ ಮಗುವಿನಲ್ಲಿ ಕಲ್ಪಿಸಿಕೊಂಡು ಆನಂದಿಸುವ ಹೆತ್ತವರು ‘ಅದನ್ನು ಭವಿಷ್ಯದಲ್ಲಿ ಒಬ್ಬ ಸಂಸ್ಕಾರವಂತ, ಧೃತಿವಂತ ನಾಗರಿಕನಾಗುವಂತೆ ರೂಪಿಸುತ್ತಿದ್ದೇವೆಯೇ?’ ಎಂದು ಪ್ರಶ್ನಿಸಿಕೊಳ್ಳುವುದೊಳಿತು. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಗುರುತಿಸಿ ಪ್ರೋತ್ಸಾಹಿಸಿದರೆ ಒಬ್ಬ ವಿಜ್ಞಾನಿ, ಕಲಾವಿದ, ಗಾಯಕ, ಕ್ರೀಡಾಪಟು, ಸಾಹಿತಿ ಮುಂತಾದವರು ಹೊರಹೊಮ್ಮಬಹುದಾದ ಸಾಧ್ಯತೆಯಿರುತ್ತದೆ. ಮಕ್ಕಳ ಬಗ್ಗೆ ಕಾಳಜಿಯಿರುವ ಹೆತ್ತವರು, ಶಿಕ್ಷಕರು, ಮನೋಚಿಕಿತ್ಸಕರು, ಸಾಮಾಜಿಕ ಕಾರ್ಯಕರ್ತರು, ವ್ಯವಸ್ಥೆಯ ಭಾಗಿಗಳಾಗಿರುವವರು ಅಥವಾ ಮತ್ಯಾರಾದರೂ ಆಗಿರಲಿ, ಅವರೆಲ್ಲರೂ ಒಮ್ಮೆ ಈ ಚಿತ್ರ ನೋಡಿದರೆ ಸಮಾಜದಲ್ಲಿ ಕೊಂಚವಾದರೂ ಬದಲಾವಣೆ ಮೂಡಬಹುದೆಂಬ ಆಶಯದೊಂದಿಗೆ.
- ಡಾ. ಕೆ. ಬಿ. ರಂಗಸ್ವಾಮಿ – ಮಕ್ಕಳ ತಜ್ಞರು, ತುಮಕೂರು.
