ಕಣ್ಮರೆಯತ್ತಾ ‘ಕಲಾಯಿ’ ಕಲೆ – ಟಿ.ಶಿವಕುಮಾರ್

ಕಲಾಯಿ ವೃತ್ತಿಯಲ್ಲಿ ಒದಗಿ ಬರುವ ಲೋಕಾನುಭವ ವಿಶೇಷತರವಾದದ್ದು.ಈ ವೃತ್ತಿಯವರಿಗೆ ಶಾಶ್ವತವೆಂಬ ನೆಲೆಯೂ ಇಲ್ಲ ಕೆಲಸವನ್ನರಸುತ್ತಾ ಊರಿಂದೂರಿಗೆ ಗುಳೇ ಹೊರಡುವುದೇ ಇವರದೊಂದು ಕಾಯಕ. ಕಲಾಯಿ ವೃತ್ತಿಕಾರರ ಕುರಿತು ಟಿ.ಶಿವಕುಮಾರ್ ಅವರು ಬರೆದ ಒಂದು ಲೇಖನ ತಪ್ಪದೆ ಮುಂದೆ ಓದಿ…

“ ಕಲಾಯಿ” ಎನ್ನುವುದು ಒಂದು ವಿಶಿಷ್ಟ ಕಲೆ ಆದರೆ ಈಗಿನ ಮಕ್ಕಳಿಗೆ ಇದು ತಿಳಿಯದು, ನಾವು ಚಿಕ್ಕವರಿದ್ದಾಗೆ ಇವರು ಬಂದರೆ ಅವರು ಮಾಡುವ ಕಲಾಯಿ ಕಲೆಯನ್ನು ನೋಡುತ್ತಾ ನಿಂತು ಅವರು ಮಾಡುವ ಕೆಲಸವನ್ನು ನೋಡುತ್ತಾ ಅನಂದವನ್ನು ಸವಿಯುತ್ತಿದ್ದೆವು ಆದರೆ ಈಗ ಅನಂದವನ್ನು ಸವಿಯುವ ಕಾಲ ಇಲ್ಲ ಈಗ ಏನಿದ್ದರೂ ಮೋಬೈಲ್ ಕಾಲ.

ದೈಹಿಕ ಶ್ರಮ ಬುದ್ಧಿವಂತಿಕೆ ಎರಡೂ ಬೇಕಾಗುವ ಶ್ರಮದಾಯಕ ವೃತ್ತಿ ಈ ಕಲಾಯಿ ಕೆಲಸದವರದು ಬೆಸುಗೆ ಹಾಕುವರು ಎಂದೂ ಚಿರಪರಿಚಿತ ಹಿತ್ತಾಳೆ ಕಂಚು, ಕಬ್ಬಿಣ, ಅಲ್ಯುಮೀನಿಯಂನಿಂದ ತಯಾರಾದ ನಿತ್ಯಪಯೋಗಿ ವಸ್ತುಗಳನ್ನು ರಿಪೇರಿ ಮಾಡುವುದು ಇಲ್ಲವೇ ತಾವೇ ಕರಗಿಸಿ ಅಚ್ಚಿನಲ್ಲಿ ಸುರಿದು ಜನರಿಗೆ ಬೇಕಾದ ಆಕಾರದ ವಸ್ತುಗಳನ್ನು ಮಾಡಿಕೊಡುವುದೇ ಕಲಾಯಿಯವರ ಕೆಲಸದ ತಿರುಳು.

ಕಲಾಯಿ ವೃತ್ತಿಯಲ್ಲಿ ಒದಗಿ ಬರುವ ಲೋಕಾನುಭವ ವಿಶೇಷತರವಾದದ್ದು. ಈ ವೃತ್ತಿಯವರಿಗೆ ಶಾಶ್ವತವೆಂಬ ನೆಲೆಯೂ ಇಲ್ಲ ಕೆಲಸವನ್ನರಸುತ್ತಾ ಊರಿಂದೂರಿಗೆ ಗುಳೇ ಹೊರಡುವುದೇ ಇವರದೊಂದು ಕಾಯಕ. ಅಥವಾ ಜೀವನ ಶೈಲಿ ವಂಶ ಪಾರಂಪರ್ಯವಾಗಿ ಈ ವೃತ್ತಿಯನ್ನು ಅವಲಂಭಿಸುವವರೇ ಹೆಚ್ಚು. ಹಾಗಾಗಿ ಈ ವೃತ್ತಿಗೆ ಬೇಕಾದ ಅನುಭವ ತರಬೇತಿ ಕುಶಲತೆ ಪೀಳಿಗೆಯಿಂದ ಪೀಳಿಗೆಗೆ ತಾನಾಗಿಯೇ ಹರಿದು ಬರುತ್ತದೆ.

ಮನೆಯಲ್ಲಿನ ಹಂಡೆ,ಪಾತ್ರೆ, ತಂಬಿಗೆ ಮುಂತಾದವುಗಳಿಗೆ ಮೋಕ್ಷ ಒದಗಿಸುವವರು ಕಲಾಯಿಗಳೇ ಎಂಬ ಮಾತನ್ನು ತೆಗೆದು ಹಾಕುವಂತಿಲ್ಲ ಕಲಾಯಿ ಮಾಡುವವರ ಪಡೆಯೊಂದು ಊರಿಗೆ ಬಂದರೆ ಸಾಕು ಆ ಊರಿನ ಜನರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಪುಕ್ಕಟ್ಟೆ ಮನರಂಜನೆಯ ವಸ್ತು ಸಿಕ್ಕಿದಂತಾಗುತ್ತಿತ್ತು ‘ ಹಳೆ ಹಂಡೆ ಕೊಡ ರಿಪೇರಿ.. .. ಎಂದು ಅವರು ಊರೆಲ್ಲಾ ಸುತೋವಾಗ ಮಕ್ಕಳ ದಂಡೆ ಅವರ ಹಿಂದಿರುತ್ತಿತ್ತು ಹೀಗೆ ಊರೆಲ್ಲಾ ಅಡ್ಡಾಡಿ ಸುತ್ತಿ ಕಿಲುಬಿದ ಒಡೆದ ಮತ್ತಿನ್ನೇನೋ ಆದ ಲೋಹದ ಸಾಮಾನನ್ನು ರಿಪೇರಿಗೆಂದು ಹೊತ್ತು ತರುತ್ತಾರೆ. ಕೆಲವೊಮ್ಮೆ ಜನರೇ ಇವರು ಇದ್ದಲ್ಲಿಗೆ ಬಂದು ತಂದು ಕೊಡುತ್ತಾರೆ, ಮೊಕ್ಷಾರ್ತವಾಗಿ ತಮ್ಮಲ್ಲಿಗೆ ಬಂದ ಸೊಟ್ಟ ಮೂತಿಯ ಕಿಲುಬಿದ

ಹೊಟ್ಟೆಯ ಆಕರಾಳ ವಿಕರಾಳ ಆಕಾರಗಳೆಲ್ಲಾ ಇವರ ಸುತ್ತಿಗೆ ಏಟಿಗೆ ನಲುಗಿ ಇವರು ನೀಡುವ ಬಿಸಿಗೆ ಬಳಲಿ ಹಾಕುವ ಬೆಸುಗೆ ಅಂಟಿ ಕೆಲ ಕ್ಷಣದಲ್ಲಿ ಹೊಸ ರೂಪ ತಳೆದು ಹಿಂದೆ ಚನ್ನಾಗಿಲ್ಲ ಎಂದು ಅಣಕಿಸಿದ್ದವರ ಎದುರಿಗೆ ಎದೆ ಸೆಟೆದು ನಿಂತು ಮನೆಯಲ್ಲಿ ಮತ್ತೆ ಗೌರವದ ಸ್ಥಾನ ದೊರಕಿಸಿಕೊಳ್ಳುತ್ತಿದ್ದವು ಹೀಗಾಗಿ ಕಲಾಯಿ ಮಾಡುವವರು ಒಂದು ರೀತಿಯಲ್ಲಿ ‘ಲೋಹಬ್ರಹ್ಮ ಎಂದರೂ ತಪ್ಪಾಗಲಾರದು. ಇಷ್ಟೆಲ್ಲಾ ಕೌಶಲಪೂರ್ಣವಾಗಿ ಹಳೆಯದಕ್ಕೆ ಹೊಸ ರೂಪ ಕೊಡುವ ಕಲಾಯಿಯವರ ಬದುಕು ಮಾತ್ರ ಅತಂತ್ರ.

ಇವರು ಒಟ್ಟಿಗೆ ಆರು-ಏಳು ಜನರು ಬರುವ ಇವರು ಅಂದು ರಿಪೇರಿಗಾಗಿ ವಸ್ತುಗಳು ಏನಾದರೂ ಸಿಕ್ಕರೆ ಮಾತ್ರ ಅಂದಿನ ಊಟ ಇಲ್ಲ ಅಂದರೆ ಇವರ ಹೊಟ್ಟೆಯೂ ಖಾಲಿ ಇದ್ದಂತೆ. ಬಿಸಿಲಿಗೆ ಮೈಯೊಡ್ಡಿ ಬೆಂಕಿಗೆ ಮುಖವೊಡ್ಡಿ ಕಲಾಯಿ ಒಲೆಯ ರಾಟೆ ತಿರುಗಿಸುತ್ತಾ ಸುತ್ತಿಗೆ ಹಿಡಿದು ಟಕ ಟಕಾ ಎಂದು ಕುಟ್ಟುತ್ತಲೇ ದಿನ ಕಳೆದರೂ ಇವರಿಗೆ ತೃಪ್ತಿಯಾಗುವಷ್ಟು ಹಣ ದೊರೆಯುವುದಿಲ್ಲ ಎಂಬ ಕೊರಗು ಇವರದು.

ಮೊದಲೆಲ್ಲಾ ಮನೆ ಬಳಕೆಗೆ ಕಂಚು, ಹಿತ್ತಾಳೆ, ತಾಮ್ರದಿಂದ ಮಾಡಿದ ವಸ್ತುಗಳದ್ದೇ ಕಾರುಬಾರು ಆಗಾ ಕಲಾಯಿಯವರಿಗೆ ಸಾಕೆನ್ನುವಷ್ಟು ಕೆಲಸ ದೊರೆಯುತ್ತಿತ್ತು. ದವಸ, ದಾನ್ಯ, ಬಟ್ಟೆ ಕೂಲಿಯ ರೂಪದಲ್ಲಿ ಹಣವು ಸಿಗುತ್ತಿತ್ತು ಆದರೆ ಈಗ ಆಧುನಿಕತೆಯ ಬಿರುಗಾಳಿ ಮನೆ ಬಳಕೆಯ ವಸ್ತುಗಳ ಮೇಲು ತಟ್ಟಿದೆ ಲೋಹದ ಸಾಮಾನುಗಳ ಜಾಗದಲ್ಲಿ ಸ್ಟೀ¯,ï ಪ್ಲಾಸ್ಟಿಕ್, ಸಾಮಾನುಗಳು ಅತಿಕ್ರಮಿಸಿವೆ, ತಮ್ಮ ಥಳುಕು ಬಳುಕಿನ ಹೊಳಪಿನಿಂದ ಜನರ ಕಣ್ಣು ಆಕರ್ಷಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಒಮ್ಮೆ ಬಿದ್ದರೇ ಹಳತಾಗುವ ಈ ವಸ್ತುಗಳು ಪರೋಕ್ಷವಾಗಿ ಕಲಾಯಿಯವರ ಬದುಕಿನ ಸಮೃದ್ಧಿಯನ್ನೂ ಕಡಿಮೆ ಮಾಡಿ ಅವರ ಉದರ ಪೋಷಣೆಗೆ ಸಂಚಕಾರ ತಂದಿವೆ.

ಇದೆಲ್ಲದರ ಪರಿಣಾಮವಾಗಿ ತಲೆ ತಲೆಮಾರಿಗಳಿಂದಲೂ ಕಲಾಯಿ ಮಾಡುವುದನ್ನೇ ವೃತ್ತಿ ಮಾಡಿಕೊಂಡು ಬಂದಿದ್ದ ಮನೆ ಮಂದಿ ಹೊಟ್ಟೆಪಾಡಿಗಾಗಿ ಈಗೀಗ ಬೇರೆ ಬೇರೆ ವೃತ್ತಿಗಳತ್ತಾ ಕಣ್ಣಾಯಿಸಿದ್ದಾರೆ. ಹೀಗೆ ಆಳಿವಿನ ಅಂಚಿನತ್ತ ಸರಿಯುತ್ತಿರುವ ಕಲಾಯಿ ಕಲೆಯನ್ನು ಉಳಿಸುವ ಬೆಳೆಸುವ ಮುಂದಿನ ಪೀಳಿಗೆಗೆ ಪರಿಚಯಿಸಿ ಹೊಸ ಬೆಳಕು ಚಲ್ಲುವ ಪ್ರಯತ್ನ ಆಗಬೇಕಿದೆ.


  • ಟಿ.ಶಿವಕುಮಾರ್ –  ಸ.ಹಿ.ಪ್ರಾ. ಶಾಲೆ ಅರಳೇಶ್ವರ, (ತಾ)ಹಾನಗಲ್ಲ (ಜಿ) ಹಾವೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading