ರಂಗದೊಳಗಿನ ಹೀಗೊಂದು ಕಥನ (ಭಾಗ- ೨)

ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕದಲ್ಲಿ ಚಿತ್ರಲೇಖೆ ಪಾತ್ರ ಮಾಡುವ ಕಲಾವಿದೆಯ ಹುಡುಕಾಟದಲ್ಲಿದ್ದೆ, ಮೇಕಪ್ ಶಂಕರಪ್ಪ ಒಂದು ಹುಡುಗಿಯನ್ನು ನನ್ನ ಬಳಿ ಕರ್ಕೊಂಡು ಬಂದರು, ಮುಂದೇನಾಯಿತು, ರಂಗಭೂಮಿ ನಿರ್ದೇಶಕ, ಸಂಘಟನಾಕಾರರು ಆದ ಸ್ವಾಮಿ ಮಹಾಮನೆ ಅವರ ‘ರಂಗದೊಳಗಿನ ಹೀಗೊಂದು ಕಥನ’ ದ ಮೂಲಕ ಓದುಗರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ, ತಪ್ಪದೆ ಮುಂದೆ ಓದಿ…

ಮೇಕಪ್ ಶಂಕರಪ್ಪ ಒಂದು ಹುಡುಗಿಯನ್ನು ನನ್ನ ಬಳಿ ಕರ್ಕೊಂಡು ಬಂದಿದ್ರು. ಆಗ ನನ್ನ ಬಳಿ ಬಂದವಳು ಇವಳು…

ನೋಡಿ ಸಾ ಈ ಹುಡ್ಗಿ ಆಗ್ಬಹುದಾ…ನಿಮ್ಗೆ ಹುಡ್ಗಿ ಹುಡ್ಕಿ ಹುಡ್ಕಿ ನಂಗೆ ಸಾಕಾಯ್ತು….ಹಹಹ.. ಎಂದೇಳುತ್ತಾ ನಕ್ಕರು ಶಂಕರಪ್ಪ..ನನ್ನ ಕಿಡಿ ನೋಟಕ್ಕೆ ಮಾತು ಬದುಲಿಸಿದ ಶಂಕರಪ್ಪ…ಹಂಗಲ್ಲ ಸಾ..ನಿಮ್ಮ ನಾಟ್ಕಕ್ಕೆ ಅಂದೆ , ತೆಪ್ತಿಳ್ಕೊಬ್ಯಾಡಿ ಬುದ್ದಿ…ಎನ್ನುತ್ತಾ ಮಾತು ಮುಂದುವರಿಸಿ…

ಪೌರಾಣಿಕ ನಾಟ್ಕದಲ್ಲಿ ಮಾಡಿ ಅನುಭವ ಅದೆ..ಹಳ್ಳಿಪಳ್ಳಿಲಿ ಸಾಮಾಜಿಕ ನಾಟ್ಕಕ್ಕೂ ಕರಿತರೆ ಇವ್ಳನಾ..ಅಲ್ಲೂ ಹೋತಳೆ…ನನ್ನ ಸ್ನೇಹಿತನ ಮಗ್ಳು..ಹವ್ಯಾಸಿ ತಂಡ್ದ ನಾಟ್ಕಗಳಲ್ಲಿ ಪಾಲ್ಟ್ ಮಾಡು…ಒಳ್ಳೊಳ್ಳೆ ಡೈರೆಕ್ಟರ್ ಕೈಕೆಳಗೆ ಪಳ್ಗುದ್ರೆ ಮುಂದಕ್ಕೆ ಒಳ್ಳೆದಾಯ್ತದೆ ಅಂತ ಹೇಳಿದ್ದಿನಿ ಸಾ..ಏನೋ ನಿಮ್ಮ ತಂಡ್ದಲ್ಲಿ ಇರ್ಲಿಸಾ..ಹುಡ್ಗಿಗೆ ಒಳ್ಳೆದಾಗ್ಲಿ ಅಂತ ಆರ್ಸೀವಾದ ಮಾಡಿ ಬುದ್ದಿ.. ಏಯ್ ಸಾಹಿ.. ಗುರ್ಗುಳ ಕಾಲಿಗ್ಬಿದ್ದು ನಮಸ್ಕಾರ ಮಾಡ್ಕೊ…ಅಂದರು ಶಂಕರಪ್ಪ..

ರೀ ಶಂಕ್ರಪ್ಪ ಅವೆಲ್ಲಾ ಬ್ಯಾಡ್ರಿ …ಅನ್ನುವಷ್ಟರಲ್ಲಿ ಆ ಹುಡ್ಗಿ ನನ್ನ ಕಾಲಿಗೆರಗಿದ್ದಳು..

ಏಯ್ ಏಯ್ ಏಳಮ್ಮ ಮೇಲೆ..ಒಳ್ಳೆದಾಗ್ಲಿ ..ಏನ್ರಿ ಶಂಕ್ರಪ್ಪ ನೀವು ಎನ್ನುತ್ತಾ..ಆ ಹುಡುಗಿಯ ಭುಜಗಳಿಡಿದು ಮೇಲೆ ನಿಲ್ಲಿಸಿದೆ..

ಅಷ್ಟರಲ್ಲಿ ದೇವಯಾನಿ ಪಾತ್ರ ಮಾಡುತ್ತಿದ್ದ ಲಕ್ಷ್ಮೀ ಹಾಗೂ ಶರ್ಮಿಷ್ಠೆ ಪಾತ್ರ ಮಾಡುತ್ತಿದ್ದ ಪದ್ಮಜಾ ನಮ್ಮ ಬಳಿ ಬಂದಾಗಿತ್ತು..

ಸೋ ಪ್ರಿಟಿ..ಎಷ್ಟು ಚಂದ ಇದ್ದಾಳಲ್ಲಾ ಲಕ್ಷ್ಮೀ ಈ ಹುಡ್ಗಿ…ಏನ್ ಬ್ಯೂಟಿ…ಅಂದ್ಹೇಳುತ್ತಾ ಪದ್ಮಜಾ , ಆ ಹುಡುಗಿಯ ಕೆನ್ನೆ ಸವರಿದರು..ಆ ಹುಡುಗಿ ಬೆರಗುಗಣ್ಣುಗಳಿಂದ ಇಡೀ ವಾತಾವರಣವನ್ನು ನೋಡುತ್ತಾ..ಬೆದರಿ..ನಾಚಿ..ಗಾಭರಿಗೊಂಡವಳ ಹಾಗೆ ಮುದುಡಿ ತಲೆಯ ಬಾಗಿಸಿ..ನನ್ನೆಡೆಗೆ ನೋಡುತ್ತಾ ಶಿಲಾಬಾಲಕಿಯಂತೆ ನಿಂತಳು…

ಮೀನ್ಗಣ್ಣುಗಳು..

ಕಮಲದ ಬಣ್ಣದ ಕಪೋಲಗಳು..

ಗುಲಾಬಿ ಎಸಳಿನಂತಾ ತುಟಿಗಳು..

ಚರ್ರೀ ಹಣ್ಣಿನಂತ ಗಲ್ಲ…

ತಿಳಿಗಾಳಿಗೆ ತೆರೆಏಳುವ ಕೊಳದ ಪನ್ನೀರಿನಂತೆ ತೇಲಾಡುವ ಕೇಶಧಾರೆ..

ಕಿರುತೊರೆಯೊಂದು ಕಪ್ಪು ಬಂಡೆಯ ಮೇಲಿಂದ ಜಾರುತ್ತಿರುವಂತೆ ಕಾಣುವ ಸುರುಳಿ ಮುಂಗುರುಳು..

ಬಿಳಿ ಮೋಡಗಳ ನಡುವೆ ಎದ್ದು ತೋರುವ ಸೂರ್ಯನಂತೆ ಕಾಣುವ ಹಣೆಬೊಟ್ಟು ಅವಳ ಇಡೀ ಸೌಂದರ್ಯವನ್ನು ಹೆಚ್ಚಿಸಿತ್ತು..

ಅಮೃತ ಶಿಲೆಯಲ್ಲಿ ಕಡೆದ ಶಿಲ್ಪದಂತೆ ಇದ್ದಳು…

ಬೆಳದಿಂಗಳನ್ನು ಹೊದ್ದು ಮಂದಗಾಳಿಯಲಿ ತೇಲುವ ಚಂದಿರನಂತೆ ಕಂಡಳು…

ಏನ್ಹೆಸರು ..ಎಂದೆ ನಾನು..

ಧ್ಯಾನದಿಂದ ಎಚ್ಚರಗೊಂಡವಳಂತೆ ಆ ಹುಡುಗಿ ನನ್ನತ್ತ ನೋಡಿ…

‘ ಸಾಹಿ ‘ ಎಂದಳು…

‘ ಸಾಹಿ ‘ ಅಂದ್ರೆ ಪ್ರಶ್ನಿಸಿದರು ಲಕ್ಷ್ಮೀ..

‘ ಸಾಹಿರಾ ‘ ಮೊಟಕಾಗಿ ಉತ್ತರಿಸಿದಳು ಆ ಹುಡುಗಿ..

ನಿನ್ನ ಪೂರ್ತಿ ಹೆಸರೇ ಸಾಹಿರಾ ಅಂತಾನಾ ಕೇಳಿದರು ಪದ್ಮಜಾ..

ಅಲ್ಲ…ಎಂದು ದನಿ ತಗ್ಗಿಸಿದಳು ಅವಳು…

ಮತ್ತೇನು..ಮರುಪ್ರಶ್ನೆ ಹಾಕಿದರು ಪದ್ಮಜಾ..

‘ಸಾಹಿರಾ ಭಾನು ‘…ಅಂತ ಮೆಲುದನಿಯಲಿ ಉತ್ತರಿಸಿದಳು…

ಸ್ಕ್ರಿಪ್ಟ್ ಹಿಡಿದು ಕುಳಿತಿದ್ದ ದಾಸಿ ಪಾತ್ರ ಮಾಡುತ್ತಿದ್ದ ಶಾಂತಮ್ಮ ನಮ್ಮ ಬಳಿಗೆ ಓಡೋಡಿ ಬರುತ್ತಾ..

‘ ಹೋ ಸಾಬ್ರಹುಡ್ಗಿನಾ ‘ ಎಂದು ಕೇಳಿದರು…

ಹಿಂದಿನ ಸಂಚಿಕೆಗಳು :

ಮುಂದುವರಿಯುವುದು…


  • ಸ್ವಾಮಿ ಮಹಾಮನೆ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading