ಲತಿಕಾ ಭಟ್ ಶ್ರೀಮಂತ ಮನೆತನದಲ್ಲಿ ಹುಟ್ಟಿ, ಓಳ್ಳೆಯ ಮನೆಗೆ ಮದುವೆ ಆಗಿ ಯಾವ ಕೊರತೆ ಕಾಣದ ಜೀವನ. ಬೆಲೆ ಬಾಳುವ ಸೀರೆಗಳು, ಒಡವೆಗಳ ಮಧ್ಯೆ ಐಷಾರಾಮಿ ಜೀವನ ಮಾಡುವ ಅವಕಾಶ ಇದ್ದಾಗ, ಜೀವನದಲ್ಲಿ ನೆಮ್ಮದಿ ಎಂದರೆ ಏನು? ಪ್ರಶ್ನೆಯೊಂದು ಪ್ರಾರಂಭವಾಯಿತು. ಬದುಕಿನ ಗುರಿ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಡುವ ಮನಸ್ಸು ಮಾಡಿದರು. ಮುಂದೆ ಏನಾಯಿತು ಓದಿ…

ಕಟ್ಟಡದ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭ ಮಾಡಿದರು. ಆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಪಾಸಾಗಿರುವದನ್ನು ಬಂದು ಹೇಳಿದಾಗ ಆದ ಸಂತೋಷ ಯಾವ ಒಡವೆ, ಸೀರೆ ಹಾಕಿಕೊಂಡಾಗಲೂ ಅವರಿಗೆ ಆಗಿರಲಿಲ್ಲ. ಹೀಗೆ ಸಣ್ಣದಾಗಿ ಪ್ರಾರಂಭ ಮಾಡಿದ ಸೇವಾಕಾರ್ಯ ಇಂದು ಬೃಹುದಾಕಾರವಾಗಿ ಬೆಳೆದಿದೆ.
ಬಡ ಮಕ್ಕಳಿಗೆ ಮನೆ ಪಾಠ, ಆಹಾರ, ಸೂರು, ಮಹಿಳಾ ಸಬಲೀಕರಣ, ಉದ್ಯೋಗದ ಗಳಿಸುವಲ್ಲಿ ನೆರವು, ಮದುವೆಗೆ ಸಹಾಯ, ಹೀಗೆ ಅವರ ಸೇವಾ ಕಾರ್ಯ ವಿಸ್ತಾರವಾಗುತ್ತದೆ. ಆಗ ಪ್ರಾರಂಭವಾಗಿದ್ದು ವೃದ್ಧರ ಆಶ್ರಮ. ಅತ್ಯಂತ ದಯನೀಯ ಸ್ಥಿತಿಯಲ್ಲಿ ಇರುವ ಸುಮಾರು 60ಕ್ಕೂ ಹೆಚ್ಚು ಆಶಕ್ತ ವೃದ್ದರಿಗೆ ಇವರ ಸುಯೋಗಾಶ್ರಯ ಆಶ್ರಯ ಕೊಟ್ಟಿದೆ . ಮೊದಲು ಬಾಡಿಗೆ ಮನೆಯೊಂದರಲ್ಲಿ ವೃದ್ದರ ಆಶ್ರಮ ಪ್ರಾರಂಭ ಮಾಡುತ್ತಾರೆ. ನಂತರ ಶಿರಶಿಯಿಂದ ಒಂದು ಕಿಲೋಮೀಟರ್ ದೂರ ಇರುವ ಮುಂಡಿಗೇಸರದಲ್ಲಿ ಜಾಗ ತೆಗೆದುಕೊಂಡು ಅಲ್ಲಿ ವೃದ್ದರ ಆಶ್ರಮ ಕಟ್ಟಿಸುತ್ತಿದ್ದಾರೆ.
ಇದೆಲ್ಲ ಮಾಡುತ್ತಿರುವವರು ಶಿರಸಿಯ ಶ್ರೀಮತಿ ಲತಿಕಾ ಭಟ್. ಆಗಸ್ಟ್ ೧೫, ೧೯೭೨ ರಲ್ಲಿ ಹುಟ್ಟಿದ ಇವರು ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ. ಎಲೆಕ್ಟ್ರಾನಿಕ್ನಲ್ಲಿ ಡಿಪ್ಲೊಮಾ ಪದವಿ, ಸಂಸ್ಕೃತದಲ್ಲಿ ಎಂ.ಎ., ಮಾರ್ಕೆಟಿಂಗ್ ನಲ್ಲಿ ಎಮ್.ಬಿ.ಎ. ಮಾಡಿ, ಶ್ರೀಮಂತ ಜೀವನದಲ್ಲಿ ಕಾಲ ಕಳೆಯುವ ಅವಕಾಶವನ್ನು ಬಿಟ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಎಲ್ಲಾ ಸೇವಾ ಕಾರ್ಯಗಳಿಗೆ ಇವರ ಮನೆಯಲ್ಲಿ ಎಲ್ಲರ ಸಹಕಾರ ದೊರೆತಿದೆ.
ಮಾನವೀಯ ಸಂಬಂಧಗಳ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಕಂಡು ಕೇಳರಿಯದ ಆಶಕ್ತರಿಗೆ ” ಸುಯೋಗ ದತ್ತಿನಿಧಿ ಸಂಸ್ಥೆಯ” ಅಡಿಯಲ್ಲಿ ಸ್ಥಾಪಿಸಿರುವ “ಸುಯೋಗಾಶ್ರಯ”ದಲ್ಲಿ ಆಶ್ರಯ ನೀಡಿದ್ದಾರೆ.
ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭ ಮಾಡಿದ ಶ್ರೀಮತಿ ಲತಿಕಾ ಭಟ್ ರವರು ಇಂದು ಸಾವಿರಾರು ಆಶಕ್ತರ ಆಶಾಕಿರಣ ಆಗಿದ್ದಾರೆ. ಕುಟುಂಬದ ಜವಾಬ್ದಾರಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆ, ಶಿರಶಿಯ ಶ್ರೀಮತಿ ಲತಿಕಾ ಭಟ್ ರವರು ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ. ಸಾಮಾಜಿಕ ಸೇವಾ ಕಾರ್ಯದಲ್ಲಿ ಜೀವನದ ನೆಮ್ಮದಿಯ ಅರ್ಥ ಕಂಡು ಹಿಡಿದುಕೊಂಡಿದ್ದಾರೆ. ಇವರು ನಮ್ಮ ಕರ್ನಾಟಕದ ಹೆಮ್ಮೆ.
(ಫೋಟೋ ಕೃಪೆ : oneindia)
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
