ಗೂಗಲ್ ಮಾಹಿತಿಯ ಪ್ರಕಾರ ನಮ್ಮ ದೇಶದ ಜನಸಂಖ್ಯೆ ಸುಮಾರು ೧೪೦ ಕೋಟಿ. ಅಂದರೆ ಪ್ರತಿಯೊಬ್ಬರ ಮೇಲೂ ಸುಮಾರು ಮೂವತ್ತೆಂಟು ಸಾವಿರ ರೂಪಾಯಿಗಳ ಸಾಲವಿದೆಯಂತೆ.ಮುಂದಿನ ದಿನಗಳಲ್ಲಿ ಬಡ್ಡಿ ಕಟ್ಟುವುದು ಅಸಾಧ್ಯದ ಮಾತು.ಒಂದು ಚಿಂತನ ಲೇಖನ ದೇವರಾಜಾಚಾರ್ ಅವರ ಸಾಲದ ಕುರಿತು ಬರೆದ ಲೇಖನವಿದು, ಮುಂದೆ ಓದಿ…
“ಸಾಲ ಮಾಡಿಯಾದರೂ ತುಪ್ಪ” ತಿನ್ನು ಎನ್ನುವ ಗಾದೆಯಂತೆ; ವೈಯುಕ್ತಿಕ, ಖಾಸಗಿ, ಸರ್ಕಾರಿ ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಸಾಲ ಮಾಡಿದ್ದಾರೆ. ಮಾಡುತ್ತಲೇ ಇರುತ್ತಾರೆ.
ಗಾದೆಯಂತೆ ತುಪ್ಪ ತಿನ್ನುವುದಕ್ಕಾಗಿ ಸಾಲ ಮಾಡಿದರೆ, ಅದನ್ನು ತೀರಿಸುವ ವಿವೇಚನೆ ಇರಬೇಕು. ತುಪ್ಪ ತಿನ್ನಿಸುವುದು ಯಾಕಾಗಿ ? ಮಕ್ಕಳು, ಯುವಕರು ದಷ್ಟಪುಷ್ಠರಾಗಿ ಬೆಳೆಯಲಿ ಅಂತ. ಮುಂದಿನ ದಿನಗಳಲ್ಲಿ ಕುಟುಂಬಕ್ಕೆ, ಸಮಾಜಕ್ಕೆ ತಮ್ಮ ಕೊಡುಗೆಯನ್ನು ಕೊಡಲಿ ಎಂದು.
ಸಾಲ ಮಾಡಿ ತುಪ್ಪ ತಿಂದು, ತೇಗಿ, ಏನೂ ಪ್ರತಿಫಲವಿಲ್ಲದಿದ್ದರೆ, ಸಾಲ ದುಪ್ಪಟ್ಟು ಆಗಿ ಕಷ್ಟಕ್ಕೆ ಸಿಲುಕಬೇಕಾಗುತ್ತೆ ತಾನೆ?.
ವಿವಿಧ ರೀತಿಯ ಸಾಲಗಳು ಇವೆ. ಅವುಗಳು :
ಮನೆ ಕಟ್ಟಲು ಸಾಲ, ವಿದ್ಯಾಭ್ಯಾಸಕ್ಕೆ ಸಾಲ, ರೈತ ವ್ಯವಸಾಯಕ್ಕಾಗಿ ಸಾಲ, ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಸಾಲ, ಇನ್ನೂ ಸರಕಾರಿ ಸಂಸ್ಥೆಗಳು ತನ್ನ ಅಸ್ತಿತ್ವ ಉಳಿಸಿಕೊಳ್ಳಲು, ರಾಜ್ಯ ಸರ್ಕಾರಗಳು ರಾಜ್ಯದ ಅಭಿವೃದ್ಧಿಗಾಗಿ, ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸಾಲ ಮಾಡುತ್ತಲೇ ಇರುತ್ತವೆ.
ವೈಯುಕ್ತಿಕವಾಗಿ ಸಾಲ ಮಾಡಿದವರು ಮತ್ತು ಸಾಲಕ್ಕೆ ಹೆದರುವವರು, ಸಾಲ ತೀರಿಸುತ್ತಾರೆ. ಕೆಲವು ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರಕಾರಿ ಸಂಸ್ಥೆಗಳು ಸಾಲ ತೀರಿಸಲಾಗದೆ ರೋಗಗ್ರಸ್ತ ಸಂಸ್ಥೆಯಾಗಿ ಸರಕಾರಕ್ಕೆ ಭಾರವಾಗಿ ಮುಂದೊಂದು ದಿನ ಮುಚ್ಚುವ ಸ್ಥಿತಿ ತಲುಪಬಹುದು. ಇನ್ನು ರಾಜ್ಯ ಸರ್ಕಾರಗಳು ಪೈಪೋಟಿಯ ಮೇಲೆ, ಹಿಂದಿನ ಸರ್ಕಾರ ಇಷ್ಟು ಸಾಲ ಮಾಡಿದ್ದರು. ನಾವೇನು ಕಡಿಮೆ ಅಂತ, ದೇಸಿ ಉದ್ಯಮಿಗಳಿಂದ, ವಿದೇಶಿ ಉದ್ದಿಮೆಗಳಿಂದ, ಬ್ಯಾಂಕ್ಗಳಿಂದ, ಇತರ ಸಂಸ್ಥೆಗಳಿಂದ ಕೋಟಿ ಕೋಟಿ ಸಾಲ ಮಾಡುತ್ತಾರೆ.
ಈ ವಿವರಗಳನ್ನು ಖಾಸಗಿ ಸುದ್ದಿವಾಹಿನಿಗಳು ಇಂತಹವರ ಸರ್ಕಾರದಲ್ಲಿ ಇಷ್ಟು ಕೋಟಿ, ಮತ್ತೊಬ್ಬರ ಸರ್ಕಾರದಲ್ಲಿ ಇಷ್ಟು ಕೋಟಿಯಂತೆ ಖುಷಿಯಿಂದ ಹೇಳುತ್ತಾರೆ .ಕೇಂದ್ರ ಸರ್ಕಾರವಂತೂ ತನ್ನ ಆದಾಯ ವೆಚ್ಚ ಸರಿದೂಗಿಸಲು ಹೆಚ್ಚಿನ ವಿದೇಶಿ ಸಾಲ ಮಾಡುತ್ತಾರೆ. ಮಾಡುತ್ತಲೇ ಇರುತ್ತದೆ. ಹೀಗೆ ಸಾಲ ಮಾಡಿದಾಗ ಯಾರೂ ಗ್ಯಾರಂಟಿ ಇಲ್ಲದೆ ಸಾಲ ಕೊಡುವುದಿಲ್ಲ.

ಫೋಟೋ ಕೃಪೆ : DNA india
ವೈಯಕ್ತಿಕ ಸಾಲಕ್ಕಾಗಿ ತನ್ನ ಆಸ್ತಿಯನ್ನು ಅಡಮಾನ ಇಡುತ್ತಾನೆ. ಸಂಸ್ಥೆಗಳು ತನ್ನ ಆಸ್ತಿ ದಾಖಲೆಗಳನ್ನು ಕೊಡುತ್ತವೆ. ರಾಜ್ಯ ಸರಕಾರಗಳು ತನ್ನ ಆಸ್ತಿಯನ್ನು ಅಡಮಾನ ಇಡುತ್ತವೆ. ಹೀಗಾಗಿ ಸರಕಾರದ ಸಾಕಷ್ಟು ಆಸ್ತಿ ಸರಕಾರದ ವಶದಲ್ಲಿ ಇರುವುದೇ ಇಲ್ಲ. ಅದೇ ರೀತಿ ಕೇಂದ್ರ ಸರ್ಕಾರ ಅಭಿವೃದ್ಧಿಗಾಗಿ ಸಾಲ ಮಾಡುತ್ತೆ. ರಸ್ತೆಗಳನ್ನು, ಯೋಜನೆಗಳನ್ನು, ಕಟ್ಟಡಗಳನ್ನು ಅಡಮಾನ ಇಡ ಬೇಕು.
ಕೇಂದ್ರ ಸರ್ಕಾರ ತನ್ನ ಅಂದಾಜು ಆಯ – ವ್ಯಯವನ್ನು 2022/2023 ನೇ ವರ್ಷಕ್ಕೆ 21-02-2022 ರಂದು ಮಂಡಿಸಿರುತ್ತಾರೆ. ಅದನ್ನು ಎಲ್ಲರೂ ನೋಡಿರುತ್ತಾರೆ. ಹೆಚ್ಚಾಗಿ ಯಾರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.
ಪತ್ರಿಕೆಗಳಲ್ಲಿ ಅಂದಾಜು ಆದಾಯ -ವೆಚ್ಚ ಪ್ರಕಟಿಸಿರುತ್ತಾರೆ. ಪ್ರಜಾವಾಣಿಯ 22-02-2022 ರ ಪತ್ರಿಕೆಯಿಂದಿ ಈ ಕೆಳಗಿನ ವಿವರಗಳನ್ನು ಕಲೆಹಾಕಿ ಮುಂದೆ ಕೊಡುತ್ತಿದ್ದೇನೆ .
ಈ ಅಂದಾಜು ವೆಚ್ಚ ಪಟ್ಟಿ ಯಲ್ಲಿ 1ರೂ ಅಂದರೆ 100 ಪೈಸೆ. 100 ಪೈಸೆ ಆದಾಯದಲ್ಲಿ ಎಷ್ಟೆಷ್ಟು ಪೈಸೆ ಖರ್ಚು ಮಾಡಬೇಕಾಗುತ್ತೆ ಎನ್ನುವ ಅಂದಾಜು ಪಟ್ಟಿ ಕೊಟ್ಟಿರುತ್ತಾರೆ. ಆ 1 ₹ ಎಷ್ಟು ಲಕ್ಷ ಕೋಟಿಗೆ ಸಮವುಾ ಗೊತ್ತಿಲ್ಲ.
1 ರೂ ಆದಾಯ ಯಾವ ರೀತಿ ಬರುತ್ತೆ ಅಂತ ನೋಡೋಣ.
35 ಪೈಸೆ ಸಾಲದಿಂದ.
2 ಪೈಸೆ ಸಾಲಯೆತರ ಬಂಡವಾಳ.
5 ಪೈಸೆ ತೆರಿಗೆಯೇತರ ಆದಾಯ .
16 ಪೈಸೆ ಜಿಎಸ್ ಟಿ ಯಿಂದ .
7 ಪೈಸೆ ಸೆಂಟ್ರಲ್ ಎಕ್ಸೈಸ್ ದಿಂದ .
5 ಪೈಸೆ ಕಸ್ಟಮ್ಸ್ ನಿಂದ .
15 ಪೈಸೆ ಇನ್ ಕಮ್ ಟ್ಯಾಕ್ಸ್ ನಿಂದ .
15ಪೈಸೆ ಕಾರ್ಪೊರೇಷನ್ ಟ್ಯಾಕ್ಸ್.
————————
ಒಟ್ಟು ನೂರು ಪೈಸೆ
————————-
ಈ ರೀತಿಯಾಗಿ ಬಂದ 1 ರೂ ಅಂದರೆ ನೂರು ಪೈಸೆಯನ್ನು ಯಾವ ರೀತಿ ಖರ್ಚು ಮಾಡಲಾಗುತ್ತೆ.
ಖರ್ಚಿನ ಪಟ್ಟಿ :
8 ಪೈಸೆ – ರಕ್ಷಣೆಗಾಗಿ.
20 ಪೈಸೆ – ಸಾಲದ ಮೇಲಿನ ಬಡ್ಡಿ ಗಾಗಿ .
8 ಪೈಸೆ – ಸಹಾಯಧನಕ್ಕಾಗಿ .
10 ಪೈಸೆ – ಹಣಕಾಸು ಆಯೋಗಕ್ಕೆ .
15 ಪೈಸೆ – ಕೇಂದ್ರೀಯ ವಲಯ ಯೋಜನೆಗಾಗಿ .
9 ಪೈಸೆ – ಕೇಂದ್ರ ಪ್ರಾಯೋಜಿತ ಯೋಜನೆಗಾಗಿ .
9 ಪೈಸೆ – ಇತರೆ .
4 ಪೈಸೆ – ಪಿಂಚಣಿಗಾಗಿ .
17 ಪೈಸೆ – ರಾಜ್ಯಗಳಿಗಾಗಿ .
————————
ಒಟ್ಟು ನೂರು ಪೈಸೆ.
————————
ಬಜೆಟ್ ಮಂಡನೆಯಾದಾಗ ಹಣಕಾಸಿನ ತಜ್ಞರು ವಾಹಿನಿಗಳಲ್ಲಿ ಚರ್ಚೆ ಮಾಡುತ್ತಾರೆ. ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಮೀಸಲಿಟ್ಟಿದ್ದಾರೆ. ಯಾವ ರೀತಿ ಹೊಂದಾಣಿಕೆ ಮಾಡುತ್ತಾರೆ ಅಂತ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ.

ಫೋಟೋ ಕೃಪೆ : DNA india
ಅವರು ಮಾತಾಡುವುದೆಲ್ಲಾ ಲಕ್ಷ ಲಕ್ಷ ಕೋಟಿಗಳಲ್ಲಿ. ನಿಜವಾದ ಒಟ್ಟು ಆದಾಯ ಎಷ್ಟು ಅಂತ ಹೇಳುವುದೇ ಇಲ್ಲ. ಎಷ್ಟು ಲಕ್ಷ ಕೋಟಿ ಸಾಲ ಮಾಡುತ್ತಾರೆ ಅನ್ನುವುದು ಚರ್ಚೆಗೆ ಬರುವುದೇ ಇಲ್ಲ .
ಈ ಆದಾಯ ವ್ಯಯ ಪಟ್ಟಿಯನ್ನು ನೋಡಿದಾಗ ಮೂವತ್ತೈದು ಪೈಸೆ ಸಾಲದಿಂದ ಅಂತ ತೋರಿಸಿದ್ದಾರೆ.
ಈ ಹಣಕಾಸಿನ ವರ್ಷಕ್ಕೆ ಸಂಬಂಧಪಟ್ಟಿದ್ದು 35 ಪೈಸೆ ಸಾಲ ಅಂದರೆ ಒಟ್ಟು ಎಷ್ಟು ಲಕ್ಷ ಕೋಟಿ ಗೊತ್ತಿಲ್ಲ. ಈ ಹಿಂದೆ ಮಾಡಿರುವ ಒಟ್ಟು ಸಾಲವೆಷ್ಟು ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಸಾಲದ ಮೇಲಿನ ಬಡ್ಡಿ ಗಾಗಿ ಈ ವರ್ಷ ಇಪ್ಪತ್ತು ಪೈಸೆ ಮೀಸಲಿಡುತ್ತಾರಂತೆ. ಬಡ್ಡಿ ಇಪ್ಪತ್ತು ಪೈಸೆ ಆಗುವುದಾದರೆ ಒಟ್ಟು ಎಷ್ಟು ಸಾಲವಿದೆ ಅಂತ ವಿಚಾರ ಮಾಡಬೇಕು .
ಈ ವರ್ಷದ ರಕ್ಷಣಾ ವೆಚ್ಚ 5 ಲಕ್ಷ ಕೋಟಿ ಅಂತ ಪತ್ರಿಕೆಯಲ್ಲಿ ನೋಡಿದೆ. 8 ಪೈಸೆ ಗೆ 5 ಲಕ್ಷ ಕೋಟಿಯಾದರೆ ನೂರು ಪೈಸೆಗೆ ಎಷ್ಟು? ಸುಮಾರು 65 ಲಕ್ಷ ಕೋಟಿಯೆಂದು ಅರ್ಥಮಾಡಿಕೊಳ್ಳಬೇಕು .
ಈ ರೀತಿಯಾಗಿ ಬಂದ 65 ಲಕ್ಷ ಕೋಟಿಯನ್ನು ವಿವಿಧ ಯೋಜನೆಗಳಿಗಾಗಿ ಖರ್ಚು ಮಾಡುವ ಅಂದಾಜು. ಆದಾಯ ಪಟ್ಟಿಯ ಪ್ರಕಾರ ಮೂವತ್ತೈದು ಪೈಸೆಯನ್ನು ಸಾಲದಿಂದ ಅಂತ ಹೇಳಿದ್ದಾರೆ. 35 ಪೈಸೆ ಅಂದರೆ 23 ಲಕ್ಷ ಕೋಟಿಗೆ ಸಮ. ಖರ್ಚಿನ ಪಟ್ಟಿಯಲ್ಲಿ ಸಾಲದ ಮೇಲಿನ ಬಡ್ಡಿಗಾಗಿ ಇಪ್ಪತ್ತು ಪೈಸೆ ಅಂತ ಹೇಳಿದ್ದಾರೆ. ಇಪ್ಪತ್ತು ಪೈಸೆ ಅಂದರೆ ಸುಮಾರು 13 ಲಕ್ಷ ಕೋಟಿ . ಇದರ ಅರ್ಥ 23 ಲಕ್ಷ ಕೋಟಿ ಸಾಲ ಮಾಡಿ, 13 ಲಕ್ಷ ಬಡ್ಡಿಯನ್ನು ಹಿಂದಿನ ಸಾಲಕ್ಕೆ ಕೊಡುತ್ತಾರೆ ಅಂತ ಅರ್ಥ ಮಾಡಿಕೊಳ್ಳಬೇಕು. ಇದು ಸಾರ್ವಜನಿಕರಿಗೆ ತಿಳಿದಿರಲಿ ಅಂತ ದಾಖಲಿಸುತ್ತಿದ್ದೇನೆ.
ಗೂಗಲ್ ಪ್ರಕಾರ ಇದುವರೆಗೆ ಇದ್ದ ಸಾಲ 620 ಬಿಲಿಯನ್ $, ಅಂದರೆ ನಲವತ್ತ ತೊಂಬತ್ತು ಲಕ್ಷ ಕೋಟಿ ರೂಪಾಯಿಗಳು.

ಫೋಟೋ ಕೃಪೆ : Thestreet
ಈ ವರ್ಷ 23 ಲಕ್ಷ ಕೋಟಿ ಸಾಲ ಸೇರ್ಪಡೆಯಾದರೆ, ಮುಂದಿನ ವರ್ಷಕ್ಕೆ ಸುಮಾರು ಎಪ್ಪತ್ತೆರಡು ಲಕ್ಷ ಕೋಟಿ ಸಾಲ ಎಂದು ತಿಳಿದುಕೊಳ್ಳಬೇಕು. ಗೂಗಲ್ ಮಾಹಿತಿಯ ಪ್ರಕಾರ ನಮ್ಮ ದೇಶದ ಜನಸಂಖ್ಯೆ ಸುಮಾರು ನೂರ ನಲವತ್ತು ಕೋಟಿ. ಅಂದರೆ ಪ್ರತಿಯೊಬ್ಬರ ಮೇಲೂ ಸುಮಾರು ಮೂವತ್ತೆಂಟು ಸಾವಿರ ರೂಪಾಯಿಗಳ ಸಾಲವಿದೆ ಅಂತ ಅರ್ಥ.
ದೇಶದ ವಿದ್ಯಮಾನಗಳು ಈ ರೀತಿಯ ಇದ್ದರೆ, ಮುಂದಿನ ದಿನಗಳಲ್ಲಿ ಬಡ್ಡಿ ಕಟ್ಟುವುದು ಅಸಾಧ್ಯದ ಮಾತು. ಉದಾಹರಣೆಗೆ ಒಂದು ಕೋಟಿ ಸಾಲ ಮಾಡಿ ಒಂದು ರಸ್ತೆ ಅಥವಾ ಕಟ್ಟಡ ನಿರ್ಮಿಸಿದರೆ ಅದು ಸುಮಾರು ನಲವತ್ತು ಲಕ್ಷ ಬೆಲೆಬಾಳಬಹುದು .ದಿನ ಕಳೆದಂತೆ ಅದರ ಬೆಲೆ ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ. ಕಾರಣ ವದಂತಿಯಂತೆ ನಲವತ್ತು ಲಕ್ಷ ಯಾರ್ ಯಾರ ಕೈಗೆ ಹೋಗುತ್ತದೆ ಅನ್ನುವ ಮಾತು ಮತ್ತು ಇಪ್ಪತ್ತು ಲಕ್ಷ ಯೋಜನೆಯನ್ನು ನಿರ್ಮಿಸಿದ ಗುತ್ತಿಗೆದಾರನಿಗೆ ಹೋಗುತ್ತೆ .
ಕುಟುಂಬ ರಾಜಕಾರಣ, ಲಂಚಗುಳಿತನ, ಮಿತಿಮೀರಿದ ವೈಯುಕ್ತಿಕ ಆಸ್ತಿ, ಉಚಿತ ಸೇವೆಗಳು, ವಸೂಲಿ ಮಾಡಲಾಗದ ಕೋಟಿ ಕೋಟಿ ರೂ ಗಳ ಸಾಲ, ವಸೂಲಿ ಮಾಡಲಾಗದ ಸೇವಾ ಬಿಲ್ಲುಗಳು, ಜವಾಬ್ದಾರಿಯಿಲ್ಲದ, ಸರ್ಕಾರದ ಸಾಲಕ್ಕೆ ಯಾರು ಹೊಣೆಗಾರರು ಆಗದಿರುವುದು, ಏನೇ ಲೂಟಿ ಮಾಡಿದರೂ ಶಿಕ್ಷೆ ಆಗದಿರುವುದು, ಮುಷ್ಕರಗಳಿಂದ ಆಗುವ ನಷ್ಟ, ಅನಾವಶ್ಯಕ ಸಮಾರಂಭಗಳು, ಧರ್ಮದ ಹೆಸರಿನಲ್ಲಿ ಬಂಡವಾಳ ಹೂಡಿಕೆ, ಅಭಿವೃದ್ಧಿಯಲ್ಲಿ ನೆರೆ ರಾಜ್ಯಗಳ ಅಸಹಕಾರ ಇತ್ಯಾದಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು, ಪಕ್ಷಾತೀತವಾಗಿ ರಾಜಕೀಯ ಮುತ್ಸದ್ದಿಗಳು, ಚಿಂತಕರು ಚರ್ಚೆ ಮಾಡಬೇಕು. ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಂಬಿಸುವ ನಿಯತಕಾಲಿಕೆಗಳು, ಸಾರ್ವಜನಿಕರ ಕೈ ಸೇರಬೇಕು ಸಾರ್ವಜನಿಕರಿಗೆ ಈ ವಿಚಾರದಲ್ಲಿ ತಿಳುವಳಿಕೆ ಕೊಡಬೇಕು. ಶ್ರೀಲಂಕಾದಲ್ಲಿನ ಪರಿಸ್ಥಿತಿ, ಅವ್ಯವಸ್ಥೆಗೆ, ಮಿತಿಮೀರಿದ ವಿದೇಶೀ ಸಾಲ, ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಇತ್ಯಾದಿ ಕಾರಣವಾಗಿದೆಯೆಂದು ವಿಶ್ಲೇಷಣೆ ಮಾಡಿದ್ದಾರೆ.
- ದೇವರಾಜಾಚಾರ್ (ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು)ಮೈಸೂರು
