‘ಲಾಕ್ ಅನ್ಲಾಕ್’ ಸಣ್ಣಕತೆ – ಶೋಭಾ ನಾರಾಯಣ ಹೆಗಡೆ

ಶ್ರೀಕರನಿಗೆ ತನ್ನ ಹೆಂಡತಿಯ ಮೇಲೆ ಅನುಮಾನ.. ಯಾಕೋ ಈಗೀಗ ಶುರುವಾಗ್ತಿದೆ..ಯಾವಾಗಲೂ ಮೊಬೈಲ್ ಕೈಯಲ್ಲಿ ಹಿಡಿದೇ ಇರ್ತಾಳೆ.. ಅದ್ಯಾರೊಂದಿಗೆ ಚಾಟ್ ಮಾಡ್ತಾಳೋ.ಏನೋ ..ಒಂದು ದಿನ ಮೊಬೈಲ್ ಚೆಕ್ ಮಾಡಲೇಬೇಕು. ಈ ಸಾಮಾಜಿಕ ಜಾಲತಾಣ ಹೆಣ್ಣು ಮಕ್ಕಳಿಗೆ ಅಷ್ಟೊಂದು ಸೇಫ್ ಅಲ್ಲ..ಆಮೇಲೆ ಕೈಮೀರಿದ ಮೇಲೆ ಯೋಚನೆ ಮಾಡಿದರೆ ಪ್ರಯೋಜನ ಇಲ್ಲ ಎಂದು ತನ್ನೊಳಗೇ ಅಂದುಕೊಂಡ. – ಮುಂದೇನಾಯಿತು ಓದಿ ಶೋಭಾ ನಾರಾಯಣ ಹೆಗಡೆ ಅವರ ಸಣ್ಣ ಕತೆ…

ಆವತ್ತು ಭಾನುವಾರ ಆದ್ದರಿಂದ ಆಫೀಸಿಗೆ ರಜಾ.

ಸುಮತಿ ಹಾಲಿನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ,ಅಡುಗೆ ಮನೆಯಲ್ಲಿ ತಿಂಡಿ ರೆಡೀ ಮಾಡ್ತಾ ಇದ್ಲು. ಇದೇ ಸರೀಯಾದ ಸಮಯ ಅಂತ ಶ್ರೀಕರ ಮೊಬೈಲ್ ಚೆಕ್ ಮಾಡಲು ತೆಗೆದುಕೊಂಡ…ಓಪನ್ ಮಾಡಿದ …ಮೊಬೈಲ್ ಏನೋ ಆನ್ ಆಯಿತು.. ಆದರೆ, ವಾಟ್ಸಾಪ್, ಪೇಸ್ಬುಕ್,ಮೆಸೆಂಜರ್ ಎಲ್ಲಾ ಲಾಕ್.. ಹ್ಮ..ಹೀಗಿದೆ ವಿಷಯ.ತಾನು ನೋಡಬಹುದು ಅಂತಾನೇ ಲಾಕ್ ಮಾಡಿದಾಳೆ ಅನ್ಕೊಂಡ.ಮನಸ್ಸಿಗೆ ತುಂಬಾ ಬೇಜಾರು ಅನಿಸಿತು.ಹೆಂಡತಿಯ ನಡುವಳಿಕೆ ನೋಡಿ.. ತಿಂಡಿಗೆ ಕರೆದಳು ಸುಮತಿ..ಅನ್ಯಮನಸ್ಕನಾಗೇ
ತಿಂಡಿ ತಿನ್ನಲು ಕುಳಿತುಕೊಂಡ ಶ್ರೀಕರ…ಮೂರು ವರ್ಷದ ಪಾಪು ಅಗಸ್ತ್ಯ ರಚ್ಚೆ ಹಿಡಿದಿದ್ದ,ಬೆಳಬೆಳಗ್ಗೆಯೇ..ಅವನನ್ನು ಸುಧಾರಿಸಲು,ಯೂ ಟ್ಯೂಬ್ ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡ ಮಕ್ಕಳ ವೀಡಿಯೊ ಹಾಕಿಕೊಟ್ಟಳು ಸುಮತಿ..ಗಪ್ ಚುಪ್ ಆಗಿ ಮೊಬೈಲ್ ನೋಡುತ್ತಾ ಕುಳಿತಿತು ಆ ಮಗು.

ಕೆದಕಿ ಕೆದಕಿ ತಿನ್ನುತ್ತಿದ್ದ ಗಂಡನ ನಡುವಳಿಕೆ ವಿಚಿತ್ರ ಎನಿಸಿತು ಸುಮತಿಗೆ.ಯಾಕ್ರೀ,ಹುಷಾರಿಲ್ವಾ?ಎಂದು ಕಾಳಜಿಯಿಂದ ಗಂಡನ ಹಣೆ ಮುಟ್ಟಿ ನೋಡಿದಳು ಸ್ವಲ್ಪ ಗಾಬರಿಯಿಂದ.ಇಲ್ಲ, ಏನೂ ಆಗಿಲ್ಲ.. ಮತ್ಯಾಕೆ ಇವರು ಹೀಗಿದಾರೆ?ಯೋಚನೆಗಿಟ್ಟುಕೊಂಡಿತು ಸುಮತಿಯ ಮನಸ್ಸು. ರೀ,ಏನಾಯ್ತು?ಯಾಕೆ ಹೀಗಿದೀರಾ?ಆಫೀಸಿನಲ್ಲಿ ಏನಾದರೂ ಪ್ರಾಬ್ಲಂ ಆಗಿದೆಯಾ?ಎಂದು ಕಕ್ಕುಲತೆಯಿಂದ ವಿಚಾರಿಸಿಕೊಂಡಳು.ಏನೂ ಆಗಿಲ್ಲ, ನಾನು ಆರಾಂ ಇದೀನಿ ಎಂದು ಮುಗುಮ್ಮಾಗಿ ಹೇಳುತ್ತಾ,ತಿಂಡಿ ಪೂರ್ತಿ ತಿನ್ನದೇ ಎದ್ದು ಹೋದ.ಇಲ್ಲ, ಇವರಿಗೆ ಏನೋ ಆಗಿದೆ..ಹೀಗೇ ಬಿಟ್ಟರೆ ಇನ್ನೇನಾದರೂ ಆದೀತು,ಮನಸ್ಸು ಕೆಟ್ಟಷ್ಟೂ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎಂದು ಯೋಚಿಸಿದ ಸುಮತಿ,ಗಂಡ ಕುಳಿತಲ್ಲಿಗೆ ಬಂದು ಅವನ ಪಕ್ಕದಲ್ಲಿ ಕುಳಿತು, ಮತ್ತೆ ಕೇಳಿದಳು.ರೀ,ಏನಾಗಿದೆ ನಿಮಗೆ?ಯಾಕೆ ಇಷ್ಟೊಂದು ಅಪ್ಸೆಟ್ ಆಗಿದೀರಾ? ಮತ್ತೆ ಕೇಳಿದಳು..ಈಗ ಶ್ರೀಕರನಿಗೆ ಕೋಪ ತಡೆಯಲಾಗಲಿಲ್ಲ. ಎಲ್ಲಾ ನಿನ್ನಿಂದ್ಲೇ ಆಗಿದ್ದು.ಎಂದು ಕೂಗಿದ.ಅವನ ಕೋಪ ನೋಡಿ ಒಮ್ಮೆ ಬೆಚ್ಚಿ ಬಿದ್ದಳು ಸುಮತಿ.. ನನ್ನಿಂದ್ಲಾ?ಏನು ತಪ್ಪಾಯ್ತು?ದುಗುಡದಿಂದ ಕೇಳಿದಳು.

ಫೋಟೋ ಕೃಪೆ : freepik

ಯಾವಾಗ ನೋಡಿದರೂ ಮೊಬೈಲ್ ಒಳಗೇ ಇರ್ತಿ..ಯಾರೊಂದಿಗೆ ಅಷ್ಟೊಂದು ಚಾಟ್ ಮಾಡೋದು ನೀನು? ಮೊಬೈಲ್ ಬೇರೆ ಲಾಕ್ ಮಾಡಿ ಇಡ್ತೀ.ಯಾಕೆ?ನಾನು,ನೋಡಬಾರದು ಅಂತಾ ಅಲ್ವಾ?ಎಂದ ಕೋಪದಿಂದ..ನೋಡು ,ಮೊದಲೇ ಹೇಳ್ತಿದೀನಿ,ಸೋಷಿಯಲ್ ಮೀಡಿಯಾದ ಸಹವಾಸ ಬೇಡ.ತುಂಬಾ ಕೆಟ್ಟದ್ದು ಅದು.ಎಂದು ಚೀರಾಡಿದ.

ಈಗ ಅರ್ಥ ಆಯಿತು ಸುಮತಿಗೆ.. ಗಂಡನ ಕೋಪದ ಮೂಲ… ನಗು ತಡೆಯಲಾರದೇ ನಗತೊಡಗಿದಳು…ಅವಳ ನಗು ನೋಡಿ,ಏನು ಹುಚ್ಚಾ ನಿನಗೆ ಎಂದ ವ್ಯಂಗ್ಯದಿಂದ..
ಮತ್ತೆ, ಸುಮತಿ ನಗುತ್ತಲೇ, ನನಗಲ್ಲ, ನಿಮಗೆ ಎಂದು ನಕ್ಕಳು.. ಅಲ್ಲಾರೀ, ನಾನೂ ಸುಸಂಸ್ಕೃತ ಕುಟುಂಬದಿಂದಲೇ ಬಂದಿದ್ದು. ಹಾಗೇ ನಾ ಬಂದ ಕುಟುಂಬ ಕೂಡ ಸುಸಂಸ್ಕೃತ ಮನೆತನದ್ದು. ದಾರಿ ತಪ್ಪುವ ಕೆಟ್ಟ ಕೆಲಸಕ್ಕೆ ನಿಮ್ಮ ಹೆಂಡತಿ ಇಳಿಯುತ್ತಾಳೆ ಅಂತ, ಅದು ಹೇಗೆ ಯೋಚನೆ ಮಾಡಿದ್ರಿ ನೀವು?. ಹೌದು, ಯಾವಾಗಲೂ ನನ್ನ ಕೈಯಲ್ಲಿ ಮೊಬೈಲ್ ಇರುತ್ತೆ. ಅಂದ ಮಾತ್ರಕ್ಕೆ ಯಾರೊಂದಿಗೋ ಚಾಟ್ ಮಾಡ್ತಾ ಇರ್ತೀನಿ ಅಂತಲ್ಲ. ನನಗೆ ಬರೆಯುವ ಘೀಳು ತುಂಬಾ. ಹಲವಾರು ಗ್ರೂಪ್ ಗಳು ಇವೆ. ನನಗೆ ತೋಚಿದ್ದು ಕಥೆ, ಕವನ, ಲೇಖನ ಅಂತ, ಬರೀತಾ ಇರ್ತೀನಿ. ಬರೆದ ಬರಹಕ್ಕೆ ಹಲವಾರು ಓದುಗರ ಮೆಚ್ಚುಗೆ, ಪ್ರಶಂಸೆಗಳ ಪ್ರತಿಕ್ರಿಯೆ ಬಂದಾಗ, ಆ ಕ್ಷಣಕ್ಕೆ ಅವರಿಗೊಂದು ಕೃತಜ್ಞತೆ ತಿಳಿಸುವುದು ನನ್ನ ಕರ್ತವ್ಯ. ಇನ್ನು, ಮೊಬೈಲ್ ಲಾಕ್ ಯಾಕೆ ಮಾಡ್ತೀನಿ ಅಂತ ಅಂದ್ರೆ, ನಮ್ಮ ಮಗ ಅಗಸ್ತ್ಯ, ಮೊಬೈಲ್ ನೋಡ್ತಾನೆ…ಯೂಟ್ಯೂಬ್, ಫೇಸ್ಬುಕ್ ಗಳನ್ನು ಓಪನ್ ಮಾಡಿದ್ರೆ ಸಾಕು. ಸಾಕಷ್ಟು ಅಶ್ಲೀಲ ವೀಡಿಯೊಗಳು ಬರುತ್ತೆ. ಅದಕ್ಕೆ ಎಲ್ಲಾ App ಗಳನ್ನು ಲಾಕ್ ಮಾಡಿ, ಮೊದಲೇ ಡೌನ್ಲೋಡ್ ಮಾಡಿಟ್ಟುಕೊಂಡ ಮಕ್ಕಳ ವೀಡಿಯೊ ಅವನಿಗೆ ನೋಡುವಂತೆ ಮಾಡಿಕೊಡುತ್ತೇನೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗುತ್ತಾ ಇಲ್ವಾ ಅಲ್ವಾ? ಹಾಗೇ ವಾಟ್ಸಾಪ್ ಲ್ಲಿ ನನಗೆ ಸೋಷಿಯಲ್ ಮೀಡಿಯಾದಿಂದ ಸಿಕ್ಕಿದ ಅನೇಕ ಸಹೋದರ, ಸಹೋದರಿಯರು ..ಮೆಸೇಜ್ ಮಾಡ್ತಾರೆ..ಪ್ರೀತಿಯಿಂದ ಹಾರ್ಟ್ ಸಿಂಬಲ್ , ಹಾಕಿರ್ತಾರೆ. ಅದನ್ನು ಇನ್ಯಾರೋ ಮನೆ ಮಂದಿ ನೋಡಿ ಇನ್ನೇನೋ ತಿಳಿಯೋದು ಚೆನ್ನಾಗಿ ಇರಲ್ಲ ಅಂತ ಲಾಕ್ ಮಾಡ್ತೀನಿ ಅಷ್ಟೇ… ಯಾಕೆಂದರೆ ಹೆಣ್ಣಿನ ಮೇಲೆ ಜವಾಬ್ದಾರಿ ಮೂಟೆಯೇ ಇರುತ್ತದೆ. ತನ್ನ ಗೌರವದೊಂದಿಗೆ ,ಗಂಡ ಮತ್ತೆ ಮನೆಯವರ ಗೌರವ ಕಾಪಾಡುವ ಮಹತ್ತರ ಜವಾಬ್ದಾರಿ… ಅದನ್ನು ಚಾಚೂತಪ್ಪದೇ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ ಎಂಬ ಹೆಮ್ಮೆ ನನಗಿದೆ…ಲಾಕ್ ಮಾಡುವುದು ತಪ್ಪು ಅಂತಾದರೆ,ನಿಮಗೆ ಸರಿ ಬರುವುದಿಲ್ಲ ಅಂತಾದರೆ, ಮೊಬೈಲ್ ಅನ್ ಲಾಕ್ ಮಾಡಿಯೇ ಇಡುತ್ತೇನೆ..ನನಗೇನೂ ಅಭ್ಯಂತರವಿಲ್ಲ ಎಂದಳು ತಗ್ಗಿದ ಧ್ವನಿಯಲ್ಲಿ ಸುಮತಿ.

ಫೋಟೋ ಕೃಪೆ : stock.adobe

ಹೆಂಡತಿಯ ಬಗ್ಗೆ ತಪ್ಪಾಗಿ ಯೋಚನೆ ಮಾಡಿದ್ದ ಶ್ರೀಕರ ನಿಜಕ್ಕೂ ಮುಜುಗರದಿಂದ ತತ್ತರಿಸಿದ್ದ. ಸ್ವಾರೀ ಕಣೋ ಬಂಗಾರ… ಇಷ್ಟು ತಿಳುವಳಿಕೆ ಹೊಂದಿದ ನನ್ನ ಹೆಂಡತಿಯನ್ನು ನಾನೇ ತಪ್ಪಾಗಿ ಅರ್ಥೈಸಿಕೊಂಡು ಬಿಟ್ಟೆ ಒಮ್ಮೆ. ನನ್ನ ಮೇಲೆ ನನಗೇ ಬೇಜಾರು ಎಂದ ದುಃಖದಿಂದ… ಇಲ್ಲ ಸುಮತಿ, ಅನ್ ಲಾಕ್ ಬೇಡ…ಲಾಕ್ ಆಗೇ ಇರಲಿ ಎಂದ ಬಳಿಯಲ್ಲಿ ಬಂದು..ನಿರಾಳ ಎನಿಸಿತು ಸುಮತಿಗೆ… ಕವಿದ ಕಾರ್ಮೋಡ ಕರಗಿ ಶುಭ್ರ ಆಕಾಶ ಕಂಡಂತೆ ಅನಿಸಿತು ಒಮ್ಮೆ… ಹೌದು..ನನಗೂ ಲಾಕ್ ಮಾಡಲ್ವಾ ಎಂದು ತುಂಟ ನಗೆಯೊಂದಿಗೆ ಹೆಂಡತಿಯ ಮೊಗದ ಬಳಿ ಬಂದ…ಥೂ ಹೋಗೀಪ್ಪಾ ಎಂದಳು ಲಜ್ಜೆಯಿಂದ ಸುಮತಿ…


  • ಶೋಭಾ ನಾರಾಯಣ ಹೆಗಡೆ, ಕವಿಯತ್ರಿ, ಕತೆಗಾರ್ತಿ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW