ಬದುಕಿಗಾಗಿ ತತ್ವವೋ? ಅಥವಾ ತತ್ವಕ್ಕಾಗಿ ಬದುಕೋ?

ನಮ್ಮ ಯೋಚನಾ ಲಹರಿಯನ್ನೇ ಬದಲಾಯಿಸಿದವರು ಡಾಕ್ಟರ್ ಸ್ವಾಮೀಜಿ, ಅವರು ಹೇಳುವ ಕತೆಗಾಗಿ ಪ್ರತಿ ದಿನ ರಾತ್ರಿ ಕಾಯುತ್ತಿದ್ದೆವು. ಈ ಡಾಕ್ಟರ್‌ ಸ್ವಾಮೀಜಿ ಬೇರೆ ಯಾರೂ ಅಲ್ಲ. ಹದಿಮೂರು ಲಕ್ಷಕ್ಕೂ ಹೆಚ್ಚಿನ ಪ್ರತಿ ಮಾರಾಟವಾದ ʻಬದುಕಲು ಕಲಿಯಿರಿʼ ಪುಸ್ತಕ ಬರೆದ ಸ್ವಾಮಿ ಜಗದಾತ್ಮಾನಂದ. ಮುಂದೆ ಓದಿ ಪದಚಿಹ್ನ ಅವರ ನಾವು ಏಕೆ ಬದುಕಬೇಕು ? ಪುಸ್ತಕದ ಕುರಿತು ಪತ್ರಕರ್ತ ಮಾಕೋನಹಳ್ಳಿ ವಿನಯ್‌ ಮಾಧವ್ ಅವರ ದೃಷ್ಟಿಕೋನ…

ಪುಸ್ತಕ: ನಾವು ಏಕೆ ಬದುಕಬೇಕು ?
ಲೇಖಕರು: ಪದಚಿಹ್ನ
ಪ್ರಕಾಶನ : ಸಾವಣ್ಣ ಪ್ರಕಾಶನ
ಬೆಲೆ : 200

ನಾನು ರಾಮಕೃಷ್ಣ ವಿದ್ಯಾಶಾಲೆ ಸೇರಿದಾಗ ಹತ್ತು ವರ್ಷ ವಯಸ್ಸು. ಮೊದಲ ದಿನ ಸಮವಸ್ತ್ರ, ಹಾಸಿಗೆ, ತಟ್ಟೆ ಮತ್ತು ಲೋಟಗಳನ್ನು ಮಾತ್ರ ಕೊಟ್ಟಿದ್ದರು. ಮೊದಲ ಒಂದು ವಾರ ಪಠ್ಯ ಪುಸ್ತಕಗಳನ್ನು ಕೊಡುತ್ತಿರಲಿಲ್ಲ. ಮಕ್ಕಳಿಗೆ ವಸತಿ ಶಾಲೆಯ ಅಭ್ಯಾಸವಾಗಲಿ ಎಂದು.

ಆದರೆ, ಕೊನೆಯಲ್ಲಿ ಒಂದು ಪುಟ್ಟ ಪುಸ್ತಕ ಕೈಯಲ್ಲಿಟ್ಟು, ಅದನ್ನು ಓದಿಕೊಳ್ಳಲು ಹೇಳಿದರು. ಆ ಪುಸ್ತಕದ ಹೆಸರು ʻನನ್ನ ಏಳ್ಗೆಗೆ ನಾನೇ ಶಿಲ್ಪಿʼ. ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದವರಿಗೆ, ʻMa̧n the maker of his own Destiný ಎಂಬ ಹೆಸರಿನಲ್ಲಿ ಅದೇ ಪುಸ್ತಕ ಕೊಟ್ಟಿದ್ದರು. ನೂರು ಪುಟಗಳ ಒಳಗಿನ ಪುಸ್ತಕ.

ಕೆಲವು ಸಣ್ಣ, ಸಣ್ಣ ಘಟನೆಯಂಥಹ ಕಥೆಗಳನ್ನು ಒಳಗೊಂಡ ಪುಸ್ತಕವನ್ನು ಮೊದಲನೇ ದಿನವೇ, ಒಂದೆರೆಡು ಘಂಟೆಗಳಲ್ಲಿ ಓದಿ ಮುಗಿಸಿದ್ದೆ ಎನ್ನುವ ನೆನಪು. ತುಂಬಾ ಸರಳವಾಗಿದ್ದ ಆ ಪುಸ್ತಕದಲ್ಲಿ ನನಗೆ ಅರ್ಥವಾಗಿದ್ದು, ನನ್ನ ಏಳ್ಗೆಗೆ, ನನ್ನ ಕೆಲಸವನ್ನು, ಸ್ವಚ್ಚವಾಗಿ ನಾನೇ ಮಾಡಿಕೊಳ್ಳಬೇಕು. ಹಾಗೆಯೇ, ಪ್ರಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.

ಎಪ್ಪತ್ತರ ದಶಕದ ಕೊನೆಯಲ್ಲಿ, ಹತ್ತನೇ ವಯಸ್ಸಿನಲ್ಲಿ ʻಏಳ್ಗೆʼ ಎನ್ನುವುದಕ್ಕೆ ವ್ಯಾಖ್ಯಾನ ಏನಿತ್ತು? ಎನ್ನುವುದನ್ನು ತಿರುಗಿ ನೋಡಿದರೆ, ನಮ್ಮ ಕುಟುಂಬ, ಶಾಲೆಯಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆಯುವುದು. ಅದಕ್ಕಿಂತ ಹೆಚ್ಚು ತಿಳುವಳಿಕೆ ಬರಲು ಟೆಲಿವಿಷನ್‌ ಆಗಲೀ, ಕಂಪ್ಯೂಟರ್‌, ಇಂಟರ್‌ ನೆಟ್‌ ಗಳಾಗಲೀ ಇರಲೇ ಇಲ್ಲ. ದಿನ ಪತ್ರಿಕೆಗಳನ್ನು ಓದಿ, ಅರ್ಥಮಾಡಿಕೊಳ್ಳುವಷ್ಟು ದೊಡ್ಡವರೂ ಆಗಿರಲಿಲ್ಲ. ಕೈಗೆ ಸಿಕ್ಕ ಕಥೆ ಪುಸ್ತಕಗಳು, ದೊಡ್ಡವರು ಹೇಳಿದ ಕಥೆಗಳನ್ನು ಕೇಳಿಕೊಂಡು, ಅದನ್ನು ನಮಗರ್ಥವಾದಂತೆ ವಿಶ್ಲೇಷಿಸಿಕೊಳ್ಳುತ್ತಿದ್ದೆವು.

ಈ ಸಮಯದಲ್ಲಿ ನಮ್ಮ ಯೋಚನಾ ಲಹರಿಯನ್ನೇ ಬದಲಾಯಿಸಿದವರು ಡಾಕ್ಟರ್ ಸ್ವಾಮೀಜಿ. ರಾತ್ರಿ ನಾವು ಮಲಗುವುದಕ್ಕೆ ಮುಂಚೆ, ಇಂಟರ್‌ ಕಾಮ್‌ ಮೂಲಕ ಕಥೆಗಳನ್ನು ಹೇಳುತ್ತಿದ್ದರು. ಕೆಲವು ನೀತಿ ಕಥೆಗಳು, ಪುನರ್ಜನ್ಮ, ನರಭಕ್ಷಕ ಹುಲಿ, ಚಿರತೆಗಳ ಕಥೆ, ಪ್ರಪಂಚದ ನಿಗೂಢ ರಹಸ್ಯಗಳ ಕಥೆಗಳು….. ಪ್ರತಿ ದಿನ ರಾತ್ರಿ ಮಲಗುವ ಘಂಟೆ ಹೊಡೆಯುವುದನ್ನು ಕಾತುರದಿಂದ ಕಾಯುತ್ತಿದ್ದೆವು. ನಿದ್ರೆ ಬರುವ ಹೊತ್ತಿಗೆ, ಯಾವುದೋ ಲೋಕದಲ್ಲಿರುತ್ತಿದ್ದೆವು.

ಡಾಕ್ಟರ್‌ ಸ್ವಾಮೀಜಿ ನಮ್ಮ ಜೊತೆ ಇದ್ದದ್ದು ಮೂರು ವರ್ಷ ಮಾತ್ರ. ಅಲ್ಲಿಂದ ಮೈಸೂರು ಆಶ್ರಮಕ್ಕೆ ವರ್ಗವಾಗಿ ಹೋದ ಅವರು, ಮುಂದೆ ಈಶಾನ್ಯ ರಾಜ್ಯಗಳಿಗೆ ಹೋಗಿ, ಅಲ್ಲಿಂದ ಸಿಂಗಾಪುರದ ರಾಮಕೃಷ್ಣಾಶ್ರಮದಲ್ಲೂ ಕೆಲಸ ಮಾಡಿ, ಕೊನೆಯ ವರ್ಷಗಳಲ್ಲಿ ಕೊಡಗಿನ ಪೊನ್ನಂಪೇಟೆಗೆ ಹಿಂದುರುಗಿದರು. ಅಂದ ಹಾಗೆ, ಈ ಡಾಕ್ಟರ್‌ ಸ್ವಾಮೀಜಿ ಬೇರೆ ಯಾರೂ ಅಲ್ಲ. ಹದಿಮೂರು ಲಕ್ಷಕ್ಕೂ ಹೆಚ್ಚಿನ ಪ್ರತಿ ಮಾರಾಟವಾದ ʻಬದುಕಲು ಕಲಿಯಿರಿʼ ಪುಸ್ತಕ ಬರೆದ ಸ್ವಾಮಿ ಜಗದಾತ್ಮಾನಂದ.

ಈ ಪುಸ್ತಕವನ್ನು ಮೊದಲ ಬಾರಿಗೆ ಓದಿದಾಗ ನನಗೆ ಏನೂ ಅನ್ನಿಸಲಿಲ್ಲ. ಏಕೆಂದರೆ, ಹೆಚ್ಚಿನ ವಿಷಯಗಳನ್ನು ಡಾಕ್ಟರ್‌ ಸ್ವಾಮೀಜಿಯ ಬಾಯಿಯಿಂದಲೇ ಕೇಳಿದ್ದೆ. ಆದರೆ, ನಾನು ಮೊದಲು ಓದಿದ ʻನನ್ನ ಏಳ್ಗೆಗೆ ನಾನೇ ಶಿಲ್ಪಿʼ ಪುಸ್ತಕವನ್ನು ಇವರೇ ಬರೆದದ್ದು ಎನ್ನುವುದು ಖಾತ್ರಿಯಾಯಿತು. ಅಷ್ಟರಲ್ಲಾಗಲೇ ನಾನು ರಾಮಕೃಷ್ಣ ವಿದ್ಯಾಶಾಲೆಯಿಂದ ಹೊರ ಬಂದು, ಪ್ರಪಂಚವನ್ನು ನನ್ನದೇ ಆದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಆರಂಭಿಸಿದ್ದೆ. ಹತ್ತನೇ ವಯಸ್ಸಿನಲ್ಲಿದ್ದ ʻಏಳ್ಗೆʼ ಎನ್ನುವ ವ್ಯಾಖ್ಯಾನಕ್ಕೂ, ಈಗಿನ ವ್ಯಾಖ್ಯಾನಕ್ಕೂ ಬಹಳಷ್ಟು ವ್ಯತ್ಯಾಸವಿತ್ತು. ಬದುಕು ಹತ್ತನೇ ವಯಸ್ಸಿನಲ್ಲಿದ್ದಷ್ಟು ಸರಳವಾಗಿರಲಿಲ್ಲ. ಗೊಂದಲಗಳ ಗೂಡಾಗಲು ಆರಂಭಿಸಿತ್ತು. ಗೊಂದಲಗಳು ಹೆಚ್ಚಾದಾಗ ನಾನು ಸ್ವಾಮೀಜಿಯವರ ಪುಸ್ತಕವನ್ನು ಎರಡನೇ ಬಾರಿಗೆ ಓದಿದೆ. ಈ ಬಾರಿ, ಪುಸ್ತಕವು ನನಗೆ ಅರ್ಥವಾದ ಪರಿಯೇ ಬೇರೆಯದಾಗಿತ್ತು. ನನ್ನ ಎಷ್ಟೋ ಗೊಂದಲಗಳನ್ನು ಎದುರಿಸುವ ಧೈರ್ಯ ಮತ್ತು ದಾರಿಯನ್ನು ತುಂಬಿತ್ತು. ಆಗ ನಾನು ಡಾಕ್ಟರ್‌ ಸ್ವಾಮೀಜಿಯವರನ್ನು ಹುಡುಕಿಕೊಂಡು ಹೋದೆ. ಆದರೆ, ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮಾತನಾಡಿಸಿ ಹಿಂದುರುಗಿದೆ. ಡಾಕ್ಟರ್‌ ಸ್ವಾಮೀಜಿಯವರನ್ನು ಮುಂದೆ ಹಲವಾರು ಬಾರಿ ಭೇಟಿಯಾದೆ…. ಸರಿಯಾಗಿ ನಾಲ್ಕು ವರ್ಷದ ಹಿಂದೆ, ಅಂದರೆ ನವೆಂಬರ್‌ ಹದಿನೈದನೇ ತಾರೀಖು ಅವರು ಇಹಲೋಕವನ್ನು ತ್ಯಜಿಸುವವರೆಗೆ….

ಡಾಕ್ಟರ್‌ ಸ್ವಾಮೀಜಿ ಬರೆದ ಪುಸ್ತಕ ಒಂದು ಕಥೆ ಪುಸ್ತಕವೋ, ವ್ಯಕ್ತಿ ವಿಕಸನವೋ, ಆಧ್ಯಾತ್ಮವೋ ಅಥವಾ ವೈಜ್ಞಾನಿಕ ವಿಶ್ಲೇಷಣೆಯೋ ಎನ್ನುವುದು ನನಗಂತೂ ಜಿಜ್ಞಾಸೆಯಾಗಿಯೇ ಉಳಿದಿದೆ. ಸ್ವಾಮೀಜಿಯನ್ನು ಬಿಟ್ಟರೆ ನನಗೆ ಇಷ್ಟವಾಗಿದ್ದು ಓಶೋ. ಧರ್ಮ ಎನ್ನುವುದನ್ನು ತಾತ್ವಿಕ ಮತ್ತು ತಾರ್ಕಿಕ ನೆಲೆಗಟ್ಟಿನಲ್ಲಿ ವಿಶ್ಲೇಷಣೆ ಮಾಡಿ, ಮಾನವ ಜನ್ಮ ಮತ್ತು ಜೀವನಕ್ಕೆ ಹೊಸ ಭಾಷ್ಯ ಬರೆದವರು ಎನ್ನಿಸಿತು.

ದಿನ ಕಳೆದಂತೆ, ಈ ಆಧ್ಯಾತ್ಮ ಮತ್ತು ವ್ಯಕ್ತಿ ವಿಕಸನ ಎನ್ನುವುದು ಒಂದು ಉದ್ದಿಮೆಯಾಗಿ ಬೆಳೆಯಿತು ಎನ್ನುವುದು ನನ್ನ ಭಾವನೆ. ಮುಂಚೆ ಆಧ್ಯಾತ್ಮ ಹುಡುಕಿಕೊಂಡು ವಾರಣಾಸಿ, ಹಿಮಾಲಯಕ್ಕೆ ಹೋಗುತ್ತಿದ್ದರು ಅಥವಾ ಯಾವುದಾದರೂ ಪುರಾತನ ಮಠ ಸೇರುತ್ತಿದ್ದರು. ಈಗ ದಿನಕ್ಕೊಂಡು ಆಶ್ರಮ ಹುಟ್ಟಿಕೊಳ್ಳುತ್ತಿವೆ. ಉಸಿರಾಟದ ನಿಯಂತ್ರಣವನ್ನೇ ಬಂಡವಾಳ ಮಾಡಿಕೊಂಡ, ಅಥವಾ ಆಯುರ್ವೇದದ ಹೆಸರಿನಲ್ಲಿ ಹುಟ್ಟಿಕೊಂಡಿರುವ ಮಠಗಳೂ ಬಹಳಷ್ಟಿವೆ. ತಮ್ಮ ಶಿಷ್ಯಕೋಟಿಗೆ ಪಂಚತಾರಾ ವ್ಯವಸ್ಥೆ ಕಲ್ಪಿಸಿ, ವ್ಯಕ್ತಿ ವಿಕಸನ ಮತ್ತು ಮಾನಸಿಕ ಶಾಂತಿ ಪಡೆಯುವ ರೀತಿ ಹೇಳಿಕೊಡುತ್ತಾ, ಕೋಟಿಗಟ್ಟೆಲೆಯ ಉದ್ಯಮಗಳಾಗಿ ಬೆಳೆದಿವೆ. ಸಾಹಿತ್ಯದಲ್ಲೂ ಆಷ್ಟೆ. ವ್ಯಕ್ತಿ ವಿಕಸನದ ಬಗ್ಗೆ ಬಹಳಷ್ಟು ಪುಸ್ತಕಗಳು ಬರುತ್ತಿವೆ. ಅವುಗಳ ಆಧಾರ ನೋಡಿದರೆ, ಒಂದೋ ಧರ್ಮಗ್ರಂಥಗಳು, ಅಥವಾ ಜನಪದಗಳು. ಅದಕ್ಕಿಂತ ಮೀರಿದ್ದು ನನ್ನ ಗಮನಕ್ಕಂತೂ ಬಂದಿಲ್ಲ.

ಇವುಗಳನ್ನು ನೋಡುವಾಗ ನನಗೆ ಅನ್ನಿಸುವುದೇನೆಂದರೆ, ನಾವು ತತ್ವಕ್ಕಾಗಿ ಬದುಕಬೇಕೋ? ಅಥವಾ ನಮ್ಮ ಬದುಕಿಗಾಗಿ ತತ್ವಗಳು ಹುಟ್ಟಿಕೊಂಡಿದೆಯೋ ಎಂದು. ಏಕೆಂದರೆ, ಜೀವನದಲ್ಲಿ ತತ್ವ ಎನ್ನುವುದು ಬಹಳ ಪ್ರಮುಖವಾದ ಅಂಗ. ಪ್ರಾಣಿಗಳು ಮಾತನಾಡದಿದ್ದರೂ ಅವುಗಳದೇ ಆದ ತತ್ವದ ಪ್ರಕಾರ ಬದುಕುತ್ತವೆ. ಮಾಂಸಹಾರಿ ಪ್ರಾಣಿಗಳಾದರೂ ಸಹ, ತಮ್ಮ ಆಹಾರ, ಜೀವ ರಕ್ಷಣೆ ಅಥವಾ ತಮ್ಮ ಮರಿಗಳ ರಕ್ಷಣೆ ಹೊರತಾಗಿ ಯಾರನ್ನೂ ಕೊಲ್ಲುವುದಿಲ್ಲ. ಹೊಟ್ಟೆ ತುಂಬಿದ ಪ್ರಾಣಿಗಳಷ್ಟು ಸಾಧು ಮನುಷ್ಯ ಅಲ್ಲ. ಮನುಷ್ಯನಿಗೆ ಯಾವಾಗಲೂ ಭವಿಷ್ಯದ ಚಿಂತೆ ಇರುತ್ತದೆ. ಭವಿಷ್ಯಕ್ಕಾಗಿ ಏನೇನು ಸಿಗುತ್ತದೋ, ಅದನ್ನು ಕೂಡಿಡಲು ಹಾತೊರೆಯುತ್ತಿರುತ್ತಾನೆ. ಹಾಗಾಗಿ, ಮಾನಸಿಕ ಕ್ಷೋಬೆಯಲ್ಲೇ ಬದುಕುವ ಮನುಷ್ಯನಿಗೆ ತತ್ವಜ್ಞಾನದ ಅವಶ್ಯಕತೆ ಬಹಳಷ್ಟಿರುತ್ತದೆ. ಕೆಲವರು ತಾರ್ಕಿಕವಾಗಿ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಉಳಿದವರು ದೇವರ ಮೇಲೆ ಭಾರ ಹಾಕಿ ಪೂಜೆ, ಪುರಸ್ಕಾರಗಳನ್ನೇ ಆಧ್ಯಾತ್ಮಿಕತೆ ಎಂದು ನಂಬಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅದನ್ನು ʻವ್ಯಕ್ತಿ ವಿಕಸನʼ ಎಂಬ ಶೀರ್ಷಿಕೆಯ ಅಡಿಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಬಹಳಷ್ಟಿವೆ. ಇವು ಪುಸ್ತಕಗಳ ರೂಪದಲ್ಲಿರಬಹುದು ಅಥವಾ ಆನ್‌ ಲೈನ್‌ ಮಾಧ್ಯಮ, ಹೊಸ ಬಗೆಯ ಪಂಚತಾರಾ ಮಠಗಳಿರಬಹುದು. ಇತ್ತೀಚಿನ ದಿನಗಳಲ್ಲಿ ಇವು ಬಹಳಷ್ಟು ಜನಪ್ರಿಯಗೊಂಡಿವೆ. ಕಾರಣವಿಷ್ಟೆ. ಇಲ್ಲಿ ಜೀವನದ ಸಮಸ್ಥ ಸಮಸ್ಯೆಗಳನ್ನು ಎದುರಿಸುವ ಬಗೆಯನ್ನು ಒಂದು ಪ್ಯಾಕೇಜ್‌ ನಲ್ಲಿ ಕೊಡುತ್ತಾರೆ. ಇಲ್ಲಿಗೆ ಬರುವ ಬಹುತೇಕರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅದನ್ನು ʻhigh stresś ಕೆಲಸಗಳು ಎಂದು ಕರೆಯುತ್ತಾರೆ. ಅವರಿಗೆ ಮೊದಲು ಬೇಕಾಗುವುದು ಮನಃಶಾಂತಿ. ಇವುಗಳ ಮೂಲಕ ಮನಃಶಾಂತಿ ಸಿಕ್ಕರೂ ಸಿಗಬಹುದು. ನಾನು ಪ್ರಯತ್ನಿಸಿಲ್ಲ ಅಥವಾ ನನಗೆ ಎಂದೂ ಅಂತಹ ಅಗತ್ಯ ಬರಲಿಲ್ಲ ಎಂದೇ ಹೇಳಬಹುದು.

ಈ ಹೊಸ ಬಗೆಯ ಪ್ಯಾಕೇಜ್‌ ಡೀಲ್‌ ಗಳ ಬಗ್ಗೆ ನನಗೆ ಆಗಾಗ ಪ್ರಶ್ನೆಗಳು ಏಳುತ್ತಿದ್ದದ್ದು ಸುಳ್ಳಲ್ಲ. ತತ್ವ ಎನ್ನುವುದು ನಮಗೆ ಹೇಗೆ ಅರ್ಥವಾಗಬೇಕು? ಏಕೆಂದರೆ, ಹತ್ತು ವಯಸ್ಸಿನವನಾಗಿದ್ದಾಗ ನನಗೆ ʻಏಳ್ಗೆʼ ಎನ್ನುವುದು ಅರ್ಥವಾದ ಪರಿ, ಇಪ್ಪತ್ತನೇ ವಯಸ್ಸಿನಲ್ಲಿ ಇರಲಿಲ್ಲ. ಏಕೆಂದರೆ, ಜೀವನದ ಅನುಭವವೇ ಬೇರೆಯಾಗಿತ್ತು. ಮುಂದೆ ಅನುಭವ ಹೆಚ್ಚಾದಂತೆಲ್ಲ ʻಏಳ್ಗೆʼ ಎನ್ನುವುದರ ವ್ಯಾಖ್ಯಾನ ಬದಲಾಗುತ್ತಾ ಹೋಯಿತು.

ಕೊನೆಗೆ ನನಗೆ ಅರ್ಥವಾಗಿದ್ದು ಒಂದು. ಜೀವನದಲ್ಲಿ ತತ್ವಗಳು ಅನುಭವದ ಮೂಸೆಯಲ್ಲಿ ಅರ್ಥವಾಗುತ್ತಾ ಹೋಗಬೇಕೇ ಹೊರತು, ನಾವು ಓದಿ ಅಥವಾ ಕೇಳಿ ಅಲ್ಲ. ನಾವು ಓದುವುದ ಅಥವಾ ಕೇಳುವುದು ಒಂದು ಮಾನದಂಡ ಮಾತ್ರ. ಉಳಿದದ್ದು, ಅನುಭವದಿಂದ ಬರುವಂತಹದ್ದು.

ಇದೆಲ್ಲ ನೆನಪಾಗಿದ್ದು ನಮ್ಮ ಮೈಸೂರು ಪಾಕ್‌ ಹುಡುಗ ಪ್ರಮೋದ (ಪದಚಿಹ್ನ) ಬರೆದ ʻನಾವು ಏಕೆ ಬದುಕಬೇಕು?ʼ ಎನ್ನುವ ಪುಸ್ತಕ ಓದಿದಾಗ. ಕೇಶವಮೂರ್ತಿ ಎಂಬ ದಾರ್ಶನಿಕ ಮತ್ತು ಈ ಪುಟ್ಟ ಹುಡುಗನ ನಡುವೆ ನಡೆಯುವ ಸಂಭಾಷಣೆ. ಮುದ್ದಾಗಿ ಬರೆದುಕೊಂಡು ಹೋಗಿದ್ದಾನೆ.

ಆದರೆ, ಪ್ರಶ್ನೆ ಇರುವುದು, ಇದು ಯಾವ ವಯೋಮಾನದವರಿಗೆ, ಹೇಗೆ ಅರ್ಥವಾಗಬೇಕು? ಸಣ್ಣ ಹುಡುಗರು ಕೇಶವಮೂರ್ತಿಯವರ ಎತ್ತರಕ್ಕೆ ಏರಿ ಅರ್ಥ ಮಾಡಿಕೊಳ್ಳಬೇಕೇ? ಅಥವಾ ಪ್ರಮೋದ ಪ್ರತಿ ʻಮುಖ್ಯರಸ್ತೆʼ ಮತ್ತು ʻಅಡ್ಡರಸ್ತೆʼಗಳ ಕೊನೆಯಲ್ಲಿ ಕೊಡುವ ವ್ಯಾಖ್ಯಾನದಂತೆ ಅರ್ಥ ಮಾಡಿಕೊಳ್ಳಬೇಕೆ? ಹಾಗೆಯೇ, ಜೀವನದಲ್ಲಿ ಬಹಳಷ್ಟು ಅನುಭವ ಇರುವವರು ಇದನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ?

ಮೈಸೂರು ಪಾಕ್‌ ತಿಂದ ಮೇಲೆ, ಪ್ರಮೋದನಿಂದ ರವೆ ಉಂಡೆ, ಚಕ್ಕುಲಿ, ಕೋಡುಬಳೆ ನಿರೀಕ್ಷಿಸುತ್ತಿದ್ದವನಿಗೆ, ಯಾಕೋ ಡಯಾಬಿಟಿಸ್‌ ರೋಗಿಗಳಿಗೆ ಕೊಡುವ ತಿಂಡಿ ಕೊಟ್ಟಿದ್ದಾನೆ ಅನ್ನಿಸಿತು. ಏಕೆಂದರೆ, ಪುಸ್ತಕ ಓದಿದ ಮೇಲೆ, ಎರಡು ದಿನ ಯೋಚನೆಗೆ ಈಡು ಮಾಡಿತು. ಪುಸ್ತಕ ಚೆನ್ನಾಗಿದ್ದರೂ, ಪ್ರಮೋದ ಇದನ್ನು ಮುಂದೆ ಬರೆದಿದ್ದರೆ ಇನ್ನೂ ಚೆನ್ನಾಗಿತ್ತು ಎಂದೆನಿಸಿತು. ಆಗ ಪ್ರಮೋದ ಇನ್ನೂ ಪಕ್ವವಾಗಿರುತ್ತಿದ್ದ…….


  • ಮಾಕೋನಹಳ್ಳಿ ವಿನಯ್‌ ಮಾಧವ್ – ಪತ್ರಕರ್ತರು,ಲೇಖಕರು, ವಿಮರ್ಶಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW