ಮಳವಳ್ಳಿ ನಂಜುಂಡಸ್ವಾಮಿಯವರ ಪುಸ್ತಕಗಳ ಪರಿಚಯ



ಐ.ಜಿ.ಪಿ ಅಧಿಕಾರಿ ಶ್ರೀಯುತ ಮಳವಳ್ಳಿ ನಂಜುಂಡಸ್ವಾಮಿಯವರು ಬರೆದ ‘ಮಾಳವ ಜಾಣರು’ ಮತ್ತು ‘ಕೋಸೊವ ಜಾಣರು’ ಪುಸ್ತಕಗಳ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ಕಿರು ಪರಿಚಯವನ್ನು ಓದುಗರಿಗೆ ಮಾಡಿದ್ದು, ನೀವು ಕೂಡಾ ಪುಸ್ತಕವನ್ನು ಕೊಂಡು ಓದಿ…

ಕಥೆಗಳ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲುವ ಮತ್ತು ಆ ಮೂಲಕ ಜೀವನದ ನೀತಿ ತಿಳಿ ಹೇಳುವ ವಿಧಾನ ಬಹಳಷ್ಟು ಕಾಲದಿಂದ ನಡೆಯುತ್ತಿದೆ. ಅದರಲ್ಲೂ ಪ್ರಾಣಿಗಳ ಪ್ರಪಂಚದಲ್ಲಿ ಹಣೆದ ಪಂಚತಂತ್ರದ ಕಥೆಗಳು ಎಲ್ಲ ಮಕ್ಕಳ ಮನ ಆವರಿಸಿರುವುದು ಆ ಕಾರಣದಿಂದಲೇ. ಈ ನೀತಿ ಕಥೆಗಳನ್ನು ದೇಶಿ ಬಾಷೆಯಲ್ಲಿ ಮಕ್ಕಳು ಬೆಳೆದು ಬಂದ ಊರಿನಲ್ಲಿರುವ ಬಾಷೆಯ ಸೊಗಡನ್ನು ಉಳಿಸಿಕೊಂಡು ಹೇಳಿದರೆ ಅದು ಎಲ್ಲರ ಮನ ಮುಟ್ಟುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ಮನಂ ಎಂಬ ಕಾವ್ಯನಾಮದಿಂದ ಪರಿಚತರಾಗಿರುವ ಶ್ರೀಯುತ ಮಳವಳ್ಳಿ ನಂಜುಂಡಸ್ವಾಮಿಯವರು ಮಾಳವ ಜಾಣರು ಸಣ್ಣ ಕಥೆಗಳ ಸಂಗ್ರಹದಲ್ಲಿ ತಾವು ಜನಿಸಿದ ಮಳವಳ್ಳಿ ಜನಸಾಮಾನ್ಯರು ದಿನ ನಿತ್ಯ ಬಳಸುವ ಭಾಷೆಯಲ್ಲಿ ಕಥೆಗಳನ್ನು ಹಣೆದ್ದಿದ್ದಾರೆ. ಹಾಗಾಗಿ ಅದು ಎಲ್ಲರ ಮನಗೆದ್ದಿದೆ.

ಮನಂ ಗಣಿ ತಂತ್ರಜ್ಞಾನದಲ್ಲಿ ಪ್ರತಿಷ್ಠಿತ ಸುರತ್ಕಲ್ ಇಂಜನಿಯರಿಂಗ್ ಕಾಲೇಜ್ ಪದವಿ, ನಂತರ 1997ರಲ್ಲಿ ಅಖಿಲ ಭಾರತೀಯ ಸೇವೆಗೆ ಸೇರಿ #ಐ_ಪಿ_ಎಸ್_ಅಧಿಕಾರಿಯಾಗಿ ಕೆಲಸ ಮಾಡುತ್ತಾ ಈಗ ಐ.ಜಿ.ಪಿ (ಬಂದಿಖಾನೆ ಮತ್ತು ಸುಧಾರಣಾ ಸೇವೆಗಳು) ಆಗಿದ್ದಾರೆ. 2005 ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಪಡೆಯಲ್ಲಿ ಅಂತರಾಷ್ಟ್ರೀಯ ವೀಕ್ಷಕರಾಗಿ ಕೊಸೊವದಲ್ಲಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಮನಂರವರು ವಿಜ್ಞಾನದ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಯಾಗಿ ಬಂದಿರುವ ಅನ್ವೇಷಣೆ ಗುಣ, ಪೋಲಿಸ್ ಇಲಾಖೆಯ ಶಿಶ್ತು, ಸಮಾಜದ ಬಗ್ಗೆ ಮಿಡಿಯುವ ಹೃದಯಗಳ ತ್ರಿವೇಣಿ ಸಂಗಮ. ಈ ಮೂರು ಗುಣಗಳು ಅವರ ಬರಹಗಳಲ್ಲಿ ಪ್ರತಿಫಲನಗೊಂಡಿದೆ.

ಮನಂರವರ ಅನ್ವೇಷಣೆಯ ಗುಣ ಅವರು ಹುಟ್ಟಿದ ಸ್ಥಳದ ಇತಿಹಾಸ ತಿಳಿಯುವುದರ ಜೊತೆಗೆ ಅಲ್ಲಿಯ ಭಾಷೆ ಬೆಳೆದು ಬಂದ ಬಗ್ಗೆಯೂ ಹುಡುಕಾಟ ಮಾಡುತ್ತದೆ. ಜನ ಸಾಮಾನ್ಯರ ಜೊತೆ ಬೆರತು, ಅವರ ಭಾಷೆಯಲ್ಲೇ ಮಾತನಾಡುತ್ತಾ ಅವರ ಜೀವನ ಕ್ರಮವನ್ನು ಶಿಸ್ತಿನಿಂದ ತೆರೆದು ಇಟ್ಟಿದ್ದಾರೆ. ಇದು ಮಳವಳ್ಳಿಯಿಂದ ಕೊಸೊವೊದ ತನಕವು ವ್ಯಾಪಿಸಿದೆ.

ಮಳವಳ್ಳಿ ಮತ್ತು ಕೊಸೊವ ಭೌಗೋಳಿಕವಾಗಿ ದೂರ ಇರುವ ಪ್ರದೇಶ. ಭಾಷೆಗಳು ಬೇರೆ, ಬೇರೆ. ಆದರೆ ಇಲ್ಲಿರುವ ಎರಡು ಪುಸ್ತಕಗಳಲ್ಲಿ ಇರುವ ಕಥೆಗಳನ್ನು ಓದಿದಾಗ ಅಲ್ಲಿರುವ ಸಾಮ್ಯತೆ ಮತ್ತು ವೈವಿಧ್ಯತೆ ಬೆರಗುಗೊಳಿಸುತ್ತದೆ.

ಫೋಟೋ ಕೃಪೆ : You tube

#ಕೊಸೊವ_ಜಾಣರು‘ ಪುಸ್ತಕದಲ್ಲಿ ಅಲ್ಬೇನಿಯರೇಕೆ ಒಗಟಾಗಿ ಮಾತನಾಡುತ್ತಾರೆ? ಎಂದುಕೇಳುತ್ತಾ ಅಲ್ಲಿಯ ಪರಕೀಯರ ಆಡಳಿತದ ಕಥೆ ಬಿಚ್ಚಿಡುತ್ತಾರೆ. ವಿವಿಧ ರೀತಿಯ ಜನಗಳ ಜೀವನದ ರೀತಿಯನ್ನು ಅನಾವರಣಗೊಳಿಸುತ್ತಾ, ಗೌರವವನ್ನು ಯಾವಾಗಲೂ ಕಾಪಾಡಿಕೊಳ್ಳುವ ಮಹತ್ವ ಹೇಳುತ್ತಾ, ಕೆಟ್ಟ ಮಗನನ್ನು ತಾಯಿ ಕೂಡ ಸಹಿಸುವುದಿಲ್ಲ ಎಂದು ಮಕ್ಕಳಿಗೆ ಎಚ್ಚರಿಸುತ್ತಾರೆ. ದೇವರು ಎಂದೂ ಮುಗ್ದ ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಹೇಳುತ್ತಾ, ಪರಕೀಯರ ಆಡಳಿತ ಕಮ್ಯೂನಿಸಂಗಿಂತ ಕೆಟ್ಟದು ಎಂದು ಹೇಳುತ್ತಾರೆ. ಒಂದೇ ದೇಶದ ಜನರು ಬೇರೆ, ಬೇರೆ ಪಕ್ಷದ ಹೆಸರಿನಲ್ಲಿ ಕಿತ್ತಾಡಿಕೊಂಡು ಕೆಲಸ ಮರೆತರೆ ಆಗುವ ತೊಂದರೆಯ ಬಗ್ಗೆ ಎಚ್ಚರಿಸುತ್ತಾ, ಊರು ಯಾವುದೇ ಆದರೂ ಹೆಂಡತಿಯನ್ನು ವಿರೋಧಿಸಲು ಆಗುವುದಿಲ್ಲ ಎಂದು ತಿಳಿಸುತ್ತಾ, ರಾಜನ ಕೆಲಸ ಮೇಲಲ್ಲ, ದನ ಮೇಯಿಸುವ ಕೆಲಸ ಕೀಳಲ್ಲ ಎಂದು ಹೇಳುತ್ತಾ ಕಾಯಕದ ಮಹತ್ವ ಸಾರಿದ್ದಾರೆ. ಅಲ್ಬೇನಿಯಾ ಬಗ್ಗೆ ಬರೆಯುವಾಗ ಮೂಲತಃ ಅಲ್ಬೇನಿಯಾ ಕುಟುಂಬದಿಂದ ಬಂದ ಸಂತ ಮದರ್ ಥೆರೇಸಾ ಬಗ್ಗೆ ಬರೆಯದಿದ್ದರೆ ಅದು ಅಪೂರ್ಣವೇ. 1989ರಲ್ಲಿ ಮಿಷನರಿಸ್ ಆಫ್ ಚಾರಿಟಿ ಸಂಸ್ಥೆಗೆ ಯಾರು ಅಧ್ಯಕ್ಷರಾಗ ಬೇಕೆಂದು ನಡೆದ ಚುನಾವಣೆಯಲ್ಲಿ ಥೇರೆಸಾರವರ ವಿರುದ್ಧ ಬಿದ್ದ ಒಂದೇ ಮತ ಥೇರೆಸಾರವರು ಹಾಕಿದ್ದೇ ಆಗಿರುವ ವಿಷಯ ತಿಳಿಸುತ್ತ ಸಂತ ಮಹಿಳೆಯ ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸುತ್ತಾರೆ. ಈ ಪ್ರಪಂಚದಲ್ಲಿ ಇರುವುದು ‘ಸುಧರ್ಮ’ ಮತ್ತು ‘ಕುಧರ್ಮ’ ಎನ್ನುವುದನ್ನು ‘ಎರಡೇ ಧರ್ಮಗಳು’ ಕಥೆಗಳಲ್ಲಿ ಸಾರಿದ್ದಾರೆ.

ಈ ಕಡೆ ‘#ಮಾವಳ_ಜಾಣರು‘ ಪುಸ್ತಕದಲ್ಲಿ ಮಳವಳ್ಳಿಯ ಓದುವಯ್ಯನವರ ಮೂಲಕ ಮುಗ್ಧ ಜನರ ಅನಾವರಣ ಮಾಡಿದರೆ, ದೇವರ ಹೆಸರಿನಲ್ಲಿ ಮೋಸ ಮಾಡುವವರ ಬಗ್ಗೆ ತಿಳುವಳಿಕೆ ಹೇಳುತ್ತಾ, ‘ಬೆಕ್ಕು ಅಡ್ಡ ಬಂದರೆ ದುರಾದೃಷ್ಟ’ ಕಥೆಯಲ್ಲಿ ಮೂಡನಂಬಿಕೆಗಳ ಬಗ್ಗೆ ಎಚ್ಚರಿಸುತ್ತಾರೆ. ಓದುವಯ್ಯನವರ ಮೂಲಕ ಕೆಟ್ಟ ಕೆಲಸ ಮಾಡಿದರೆ ಕೆಟ್ಟದ್ದು ಆಗುತ್ತೇ ಎಂದು ‘ಕುರುಡನ ದೊಣ್ಣೆಯ ಕಿತ್ತುಕೊಳ್ಳುತ್ತಿದ್ದವನ’ ಕಥೆಯ ಮೂಲಕ ಎಚ್ಚರಿಸುತ್ತಾರೆ. ‘ಕಾಣೆ ಎಂದರೆ ಒಂದೇ ಮಾತು, ಕಂಡಿ ಅಂದರೆ ನೂರು ಮಾತು’ ಕಥೆ ‘ಮಾತು ಬಲ್ಲದವನಿಗೆ ಜಗಳವಿಲ್ಲ’ ಗಾದೆ ಮಾತು ನೆನಪಿಸುತ್ತದೆ. ಶಾಲೆಯಲ್ಲಿ ಮಾಡುವ ಪ್ರಾರ್ಥನೆಯನ್ನು ಅರ್ಥವಾಗುವ ಕನ್ನಡದಲ್ಲಿ ಮಾಡಿ ಎಂದು ‘ದೇವರ ಪ್ರಾರ್ಥನೆ’ ಕಥೆಯಲ್ಲಿ ಹೇಳುತ್ತಾ ಮಾತೃಭಾಷೆಯ ಮಹತ್ವ ಸಾರಿದ್ದಾರೆ.

ಅದಕ್ಕಿಂತಲೂ ಅತಿ ಹೆಚ್ಚು ಮುಖ್ಯವಾದ ವಿಷಯವೆಂದರೆ ಮನಂ ಅವರು ಈ ಪುಸ್ತಕಗಳ ಬರೆಯಲು ಮಾಡಿರುವ ಬಾಷೆಯ ಆಳಾವಾದ ಅಧ್ಯಯನ. ಕಳೆದ ಸುಮಾರು ಹತ್ತು ಸಾವಿರ ವರ್ಷಗಳಿಂದ ಸುಮೇರಿಯನ್ ಹಾಗೂ ಪ್ರಾಚೀನ ಮಾಳವ ಬಾಷೆಯ ಸಾಹಿತ್ಯದಲ್ಲಿ ಅಪಾರವಾಗಿ ಬಳಕೆ ಆಗುತ್ತಿದ್ದ ಪದಗಳು ಈಗಲೂ ಮಳವಳ್ಳಿ ಜನರ ಮಾತುಗಳಲ್ಲಿ ಬಳಕೆಯಾಗುವ ರೀತಿ, ಮೊದಲು ಏನು ಅನುಜ, ಯಾಕೆ ತನುಜ, ಹೋಗು ಅಗ್ರಜ ಪದಗಳು ಕ್ರಮೇಣ ಏನ್ಜಾ, ಯಾಕ್ಜ, ಹೋಗ್ಜಾ ಆಗಿ ರೂಪಾಂತರಗೊಂಡಿರುವುದು ಒಂದು ಕಡೆ ದಾಖಲಿಸಿದರೆ, ಇನ್ನೊಂದೆಡೆ ಅಲ್ಬೇನಿಯಾ ಭಾಷೆಯಲ್ಲಿಯ ಇತಿಹಾಸ ಗುರುತಿಸುತ್ತಾ, ಪರಕೀಯರ ಆಡಳಿತ ಬಾಷೆಯ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಗಮನ ಸೆಳೆದಿದ್ದಾರೆ. ಹೀಗಾಗಿ ಈ ಪುಸ್ತಕಗಳು ಆ ಸಂಸ್ಕೃತಿಯ ಪ್ರತಿನಿಧಿಸುವುದರಿಂದ, ಇದು ಸಾಮಾನ್ಯ ನೀತಿ ಕಥೆ ಹೇಳುವ ಪುಸ್ತಕಗಳಾಗಿ ಮಾತ್ರ ಉಳಿಯದೆ ಇದು ಮನಂ ವ್ಯಾಖ್ಯಾನ ಹೊಂದಿರುವ ತತ್ವಪದಗಳಾಗಿ ಹೊರಹೊಮ್ಮಿದೆ. ಈ ಎರಡೂ ಪುಸ್ತಕಗಳಲ್ಲಿ ಬರೆದಿರುವ ಮೊದಲ ಮಾತುಗಳು ಭಾಷಾಶಾಸ್ತ್ರದ ಸಂಶೋಧನೆಯ ವಿದ್ಯಾರ್ಥಿಗಳಿಗೆ ದಾರಿದೀಪಗಳಾಗಿವೆ ಎಂದರೆ ಅದು ಅತಿಶಯೋಕ್ತಿ ಅಲ್ಲ.

ಹುಡುಕಾಟ, ಮಿಜೆನಿಯವರ ಸಣ್ಣ ಕಥೆಗಳು, ಭಾರತದ ಮೊದಲ ದೊರೆಗಳು, ಹೊಲಯರು-ಮಾದರು-ರಾಜರು, ಮತ್ತು ಇನ್ನಿತರ ಕೃತಿಗಳನ್ನು ಮನಂ ಬರೆದಿದ್ದಾರೆ. ಸಂಶೋಧನೆಯ ಲೇಖನಗಳನ್ನು ಪ್ರಕಟಿಸಿದ್ದಾರೆ.

ಈಗ ಬರುವ ದೀಪಾವಳಿಗೆ ಈ ‘ಮಾಳವ ಜಾಣರು’ ಮತ್ತು ‘ಕೊಸೊವ ಜಾಣರು’ ಪುಸ್ತಕಗಳನ್ನು ಮಕ್ಕಳಿಗೆ ನೀಡಿದರೆ, ಆ ಮಕ್ಕಳ ಮನದಲ್ಲಿ ಕೂಡ ಬೆಳಕು ಮೂಡಿವುದರಲ್ಲಿ ಸಂದೇಹವಿಲ್ಲ.

ಸರ್ಕಾರಿ ಸೇವಕರಾಗಿ ದೇಶಕ್ಕೆ ಮಾಡಿದ ಸೇವೆಗಾಗಿ ಮನಂರವರಿಗೆ ಇನ್ಟ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್ ನವರು 2004ರಲ್ಲಿ ಗ್ಲೋಬಲ್ ಅಲುಮ್ನಿ ಎಕ್ಸಲೆನ್ಸ್ ಅವಾರ್ಡ ನೀಡಿ ಗೌರವಿಸಿದ್ದಾರೆ. ವಿಶ್ವಸಂಸ್ಥೆಯು ಕೊಸೊವದಲ್ಲಿ ಶಾಂತಿ ಸ್ಥಾಪನಾ ಕಾರ್ಯದಲ್ಲಿ ತೋರಿದ ಮಹತ್ವ ಪೂರ್ಣ ಸಾಧನೆಗಾಗಿ ಇವರಿಗೆ ‘ವಿಶ್ವಸಂಸ್ಥೆಯ ಪದಕ’ ನೀಡಿ ಗೌರವಿಸಿತು. ಶ್ರಿಯುತ ನಂಜುಂಡಸ್ವಾಮಿಯವರಿಂದ ಇನ್ನಷ್ಟು ಪುಸ್ತಕಗಳಲಿ ಬರಲಿ ಎಂದು ಆಶಿಸುತ್ತೇನೆ.



ಮಾಳವ ಜಾಣರು
ಪ್ರಕಾಶನ : ಮಾಳವ ಫಿಲೊಲಾಜಿಕಲ್ ಅಕಾಡೆಮಿ, ಬೆಂಗಳೂರು.
ಬೆಲೆ : ರೂ.200/-

*****

ಕೊಸೊವ ಜಾಣರು.
ಪ್ರಕಾಶನ: ಮಲ್ಲಿಗೆ ಪ್ರಕಾಶನ, ಬೆಂಗಳೂರು.
ಬೆಲೆ : ರೂ. 150/-.
ಮುಂದೆ ಬರುವ ರಾಜ್ಯೋತ್ಸವ ಮತ್ತು ದೀಪಾವಳಿಯನ್ನು ಒಂದಾದರೂ ಕನ್ನಡ ಪುಸ್ತಕ ತೆಗೆದುಕೊಳ್ಳುವ ಮೂಲಕ ಆಚರಿಸೋಣವೇ?.


  • ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ,ಲೇಖಕರು) ಬೆಂಗಳೂರು

3.7 3 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW