ಲೇಖಕರ ಮನದಾಳದ ಮಾತು : ಎ. ಪಿ.ಮಾಲತಿ

ಹಿರಿಯ ಲೇಖಕಿ ಎ.ಪಿ.ಮಾಲತಿ ಅವರ ಬದುಕು ಬರಹಗಳ ಕುರಿತು ವಸಂತ ಗಣೇಶ್  ನಡೆಸಿದ ಒಂದು ಕಿರು ಸಂದರ್ಶನ. ಅಹಂಕಾರವಿಲ್ಲದ ನಿಷ್ಕಲ್ಮಶ, ಸರಳ ಸುಂದರ ಮನದ ಜೊತೆಗೆ ಮಾತನಾಡಲು ಅವಕಾಶ ಮತ್ತು ಕೇಳಿದ ಪ್ರಶ್ನೆಗಳಿಗೆ ಪ್ರೀತಿಯಿಂದ, ಸಮಾಧಾನದಿಂದ ಎ. ಪಿ. ಮಾಲತಿ ಅವರು ಉತ್ತರ ಕೊಟ್ಟಿದ್ದಾರೆ. ಲೇಖಕಿಯ ಮನದ ಮಾತನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಲೇಖಕಿ ವಸಂತ ಗಣೇಶ ಅವರು, ತಪ್ಪದೆ ಲೇಖಕರ ಪರಿಚಯ ಓದಿ.

  • ನಿಮ್ಮ ಬಾಲ್ಯ ಹಾಗೂ ತಂದೆ-ತಾಯಿ, ಹುಟ್ಟಿದ ಊರು ವಿದ್ಯಾಭ್ಯಾಸದ ಬಗ್ಗೆ ಹೇಳಿ?

ನಾನು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ. ತಂದೆ ಗಣೇಶ ಕೃಷ್ಣಭಟ್ಟ ತಾಯಿ ಕಾವೇರಿ. ನನ್ನ ವಿದ್ಯಾಭ್ಯಾಸ ನಡೆದದ್ದು ಧಾರವಾಡದಲ್ಲಿ, ಓದಿದ್ದು ಪಿಯುಸಿ ತನಕ. ಮುಂದೆ ಹರಿದಾಸ ಸಾಹಿತ್ಯ ಸೆಂಟರ್ ನಿಂದ ಕನ್ನಡ ಕಾದಂಬರಿ ಯಲ್ಲಿ “ಸ್ಟ್ರಕ್ಚರಲ್ ಮೆಥಡ್” ಈ ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನ ನನ್ನ 68ನೆಯ ವಯಸ್ಸಿನಲ್ಲಿ ಪಡೆದೆ.

ನಾನು ಮದುವೆಯಾಗಿ ಬಂದಿದ್ದು ಪುತ್ತೂರಿನ ಕೃಷಿಯನ್ನು ಬದುಕಾಗಿಸಿಕೊಂಡಿದ್ದ ಅವಿಭಕ್ತ ಕುಟುಂಬಕ್ಕೆ. ಮಾವ ಎ ಪಿ ಸುಬ್ಬಯ್ಯನವರು ದೊಡ್ಡ ಜಮೀನ್ದಾರರು. ಮಾವನವರು ಇಂಗ್ಲಿಷ್ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಶ್ರೇಷ್ಠ ಅನುವಾದಕರು. ಪಿತ್ರಾರ್ಜಿತ ಆಸ್ತಿ ಪಾಲು ಆದಮೇಲೆ ಸ್ವತಂತ್ರ ಜೀವನ. ಕೃಷಿ ಜೊತೆ ಜೊತೆಗೆ ನಡೆದಿದೆ ನನ್ನ ಸಾಹಿತ್ಯ ಕೃಷಿ.

  • ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಯಾವಾಗ ಮತ್ತು ಹೇಗೆ? ಲೇಖಕಿಯಾಗಬೇಕೆನಿಸಿದ್ದು ಯಾವಾಗ? ಕಾರಣ ಏನು?

ಬಾಲ್ಯದಿಂದಲೇ ನನಗೆ ಸಾಹಿತ್ಯದ ವಿವಿಧ ಪ್ರಕಾರಗಳ ಓದು ಬರವಣಿಗೆಯಲ್ಲಿ ಆಸಕ್ತಿಯಿತ್ತು. ಹದಿನೈದರ ವಯಸ್ಸಿನಲ್ಲಿ ಎರಡು ಪತ್ತೆದಾರಿ ಕಾದಂಬರಿ ಬರೆದಿದ್ದೆ. ಗೆಳತಿಯರು ಓದಲು ತೆಗೆದುಕೊಂಡು ಅದು ಕೈನಿಂದ ಕೈಗೆ ಕೊಟ್ಟು ಕೊಳ್ಳುತ್ತಾ ಕಳೆದು ಹಾಕಿದ್ದರು. ಆಗ ನನಗಾದ ದುಃಖ ಅಷ್ಟಿಷ್ಟಲ್ಲ.

  • ನಿಮ್ಮ ಮೊದಲ ಬರಹ ಯಾವುದು? ಬರೆದದ್ದು ಯಾವಾಗ?

ಶಾಲಾ ದಿನಗಳಲ್ಲಿ ಬರೆಯುವ ಹವ್ಯಾಸ ಇರುವ ಕಾರಣ ಲೇಖಕಿ ಆಗಲೇ ಬೇಕೆಂಬ ಯಾವುದೇ ಯೋಜನೆ ಯೋಚನೆ ಮಾಡಲಿಲ್ಲ. ಬರವಣಿಗೆ ನನಗೆ ಒಂದು ತರಹದ ಧ್ಯಾನ ತಪಸ್ಸು. ಬರೆಯದೆ ಇರಲಾರೆ ಎಂಬ ತುಡಿತ. ಬರೆದ ನಂತರ ನಿರಾಳತೆಯಲ್ಲಿ ನನ್ನ ಮನಸ್ಸು ಹೊಸದರ ಅನ್ವೇಷಣೆ ಮಾಡುತ್ತಲೇ ಇರುತ್ತದೆ. ಆಗ ಹೊಸ ಕೃತಿ ಅದು ಕಾದಂಬರಿ, ಕಥೆ, ಲೇಖನ ಏನೋ ಒಂದು. ಒಟ್ಟಿನಲ್ಲಿ ಹೊಸದರ ಅವಿಷ್ಕಾರ ನಡೆದೇ ಇರುತ್ತದೆ. ನನ್ನ ಮೊದಲ ಬರಹ ಎಂದು ಹೇಳುವುದಾದರೆ ಅದು ಬಾಲ್ಯದಲ್ಲಿ ಕಳೆದುಕೊಂಡ ಪತ್ತೆದಾರಿ ಕಾದಂಬರಿಗಳು.

  • ಒಟ್ಟು ನೀವು ಬರೆದಿರುವ ಕೃತಿಗಳು ಎಷ್ಟು? ಕಾದಂಬರಿ, ಸಣ್ಣ ಕಥೆಗಳು, ಲೇಖನಗಳು, ಜೀವನ ಚರಿತ್ರೆ ಎಷ್ಟೆಲ್ಲ ಬರೆದಿರುವ ನಿಮಗೆ ಇಷ್ಟವಾಗುವ ಸಾಹಿತ್ಯದ ಪ್ರಕಾರ ಯಾವುದು?

ಈವರೆಗೆ ಒಟ್ಟು 36 ಕೃತಿಗಳು ಪ್ರಕಟವಾಗಿವೆ. ಮತ್ತೊಂದು ಕೃತಿ ಸಧ್ಯದಲ್ಲೇ ಪ್ರಕಟವಾಗಲಿದೆ. ಅವುಗಳಲ್ಲಿ ಕಾದಂಬರಿಗಳಲ್ಲದೆ , 2 ಕಥಾಸಂಕಲನ, 9 ಲೇಖನ ಪುಸ್ತಕಗಳು. 2 ಜೀವನ ಚರಿತ್ರೆ ಹಾಗೂ ಒಂದು ನನ್ನ ಆತ್ಮಕಥನವೂ ಸೇರಿವೆ.

 

  • ಒಟ್ಟು ನೀವು ರಚಿಸಿರುವ ಕಾದಂಬರಿಗಳು ಎಷ್ಟು?
    22 ಕಾದಂಬರಿಗಳನ್ನು ರಚಿಸಿದ್ದೇನೆ.
  • ನೀವು ಬರೆದಿರುವ ಪ್ರತೀ ಕಾದಂಬರಿಗಳಿಗೆ, ಕಥೆಗಳಿಗೆ ವೈವಿಧ್ಯಮಯ ವಸ್ತು, ವಿಷಯಗಳನ್ನು ಎಲ್ಲಿಂದ ಸಂಗ್ರಹಿಸುತ್ತೀರಿ?

ಬರವಣಿಗೆ ನನ್ನ ಉಸಿರು. ಅದು ನಿಂತಾಗ ನನ್ನ ಉಸಿರು ನಿಂತಂತೆ. ನನ್ನ ವೈವಿಧ್ಯಮಯ ಸಾಹಿತ್ಯ ರಚನೆಗೆ ಕೇಂದ್ರ ಈ ಮನಸ್ಸು. ಅದು ನೋಡಬೇಕು, ಅರಿಯಬೇಕು, ಬರೆಯಲು ಹೇಳಬೇಕು ಆಗಲೇ ನಾನು ಬರೆಯುವುದು.

ನಮ್ಮಲ್ಲಿ ಕೆಲಸಕ್ಕೆ ಬರುವವರ ಜೀವನ ಶೈಲಿ, ಅವರ ನೋವು ನಲಿವಿನ ಕಥೆಗಳು, ಮೂಢನಂಬಿಕೆ, ಅಜ್ಞಾನ, ಆಕ್ರೋಶ, ಜೀತ ಪದ್ದತಿ ಬಡತನವನ್ನು ಸಮೀಪದಿಂದ ನೋಡುವ ಅವಕಾಶ ಸಿಕ್ಕಿತು. ಒಂದೊಂದು ಸಮಸ್ಯೆ, ಒಂದೊಂದು ನೋವು ನನ್ನೊಳಗನ್ನು ಕೆಣಕಿದಾಗ ಅವನ್ನು ಬಿಡಿಸುವ ಹಂತದಲ್ಲಿ ನನ್ನ ಲೇಖನಿ ಪ್ರಯತ್ನಿಸಿದೆ. ನನ್ನಲ್ಲಿ ಕೆಲಸಕ್ಕೆ ಬರುವ ಮಹಿಳೆಯರಿಗೆ ಕುಟುಂಬ ಯೋಜನೆ ಬೋಧಿಸಿದ್ದು, ಉಳಿತಾಯ ಮಹತ್ವ ತಿಳಿಸಿದ್ದು ಅವರಿಗಾಗಿ ರಿಕರಿಂಗ್ ಡಿಪಾಸಿಟ್ ತೆರೆಸಿದ್ದು, ಶೋಷಣೆಗೆ ನಾನು ಅನುಕಂಪದಿಂದ ಮರುಗಿದ್ದೆ. ಈ ಅನುಕಂಪದ ಹಿನ್ನೆಲೆಯಲ್ಲಿ ರಚನೆ ಆದ ಕಾದಂಬರಿಗಳು, “ಕಾಡು ಕರೆಯಿತು” “ಬದಲಾಗದವರು” ” ದೇವ” ಮುಂತಾದ ಕಾದಂಬರಿಗಳನ್ನು ರಚಿಸಿದೆ. ನಾನು ಲೇಖಕಿ ಎಂದು ತಿಳಿದ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಕಥೆ ಬರೆಯಿರಿ ಎನ್ನುತ್ತಾರೆ. ಪತ್ರ ಬರೆದು ಸಮಸ್ಯೆಗಳಿಗೆ ಪರಿಹಾರ ಕೇಳುತ್ತಾರೆ. ಇವುಗಳಲ್ಲಿ ನನ್ನನ್ನು ತೀವ್ರವಾಗಿ ತಟ್ಟುವ ಘಟನೆಗಳು ಹಾಗೂ ಪಾತ್ರಗಳು ನನ್ನ ಲೇಖನಿಯಲ್ಲಿ ಕಥೆ ಕಾದಂಬರಿಗಳಾಗಿ ಹೊಸ ರೂಪು ಪಡೆಯುತ್ತವೆ.

ಲೇಖಕರಿಗೆ ಕಲ್ಪನೆಯ ಜೊತೆಗೆ ಜೀವನಾನುಭವ ಕೂಡ ಮುಖ್ಯ, ಹಾಗಾಗಿಯೇ ನಾನು ಈಗಲೂ ಸರ್ಕಾರಿ ಕೆಂಪು ಬಸ್ಸಿನಲ್ಲಿ ಪ್ರಯಾಣ ಮಾಡುತ್ತೇನೆ. ಸಿನಿಮಾ ಮಂದಿರಗಳಲ್ಲಿ ಸಾಮಾನ್ಯ ಜನರ ನಡುವೆ ಕುಳಿತುಕೊಳ್ಳುತ್ತೇನೆ. ವಯಸ್ಸಾದ ಪಾಪ ಎನಿಸುವ ಮಹಿಳೆಯರ ಜೊತೆಗೆ, ವಿಷಾದ ತುಂಬಿದ ಗೃಹಿಣಿಯರ ಜೊತೆ, ಕಿಶೋರ ವಯಸ್ಸಿನ ಮುಗ್ಧೆಯರ ಜೊತೆ ಹೆಚ್ಚು ಬೆರೆಯುತ್ತೇನೆ. ಅಲ್ಲಿ ಸಿಗುವ ವಿಷಯಗಳು ಕಥೆ ಕಾದಂಬರಿಗಳಿಗೆ ಕೆಲವೊಮ್ಮೆ ವಸ್ತು ಆಗುತ್ತದೆ.

 

  • ನಿಮಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ?

ಸುಖದ ಹಾದಿ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ.

“ಅನಿಶ್ಚಯ” ಕಾದಂಬರಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಬಹುಮಾನ

“ಅನಿಶ್ಚಯ” ಕಾದಂಬರಿಗೆ ತಮ್ಮನರಾವ್ ಅಮ್ಮಿನಭಾವಿ ಸ್ಮಾರಕ ಗ್ರಂಥ ಬಹುಮಾನ

“ಅನಿಶ್ಚಯ” ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ

“ಕಾಡು ಕರೆಯಿತು” ಕಾದಂಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ-೧೯೯೮

‘ಖಾಲಿಮನೆ’ ಕಾದಂಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ

“ಸಂಜೆ ಬಿಸಿಲು” ಗೆ ೨೦೦೪ರಲ್ಲಿ ಕಥಾರಂಗಂ ಪ್ರಶಸ್ತಿ

“ಗ್ರಾಮೀಣ ಮಹಿಳೆಯರು’ಕೃತಿಗೆ ೧೯೭೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ

“ಮಂದಾರ” “ತಿರುಗಿದ ಚಕ್ರ” “ವಕ್ರರೇಖೆ” ಕಾದಂಬರಿಗಳಿಗೆ – ವನಿತಾ ಮಾಸ ಪತ್ರಿಕೆ ನಡೆಸಿದ ಸ್ಪರ್ಧೆಗಳಲ್ಲಿ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು.

ಎ.ಪಿ. ಮಾಲತಿ ಅವರಿಗೆ ೨೦೦೬ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಹಿತ್ಯ ಸಾಧನೆಗಾಗಿ ಗೌರವ ಪ್ರಶಸ್ತಿ ದೊರಕಿದೆ.

೨೦೧೩ರಲ್ಲಿ ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿ ಪ್ರಶಸ್ತಿ

೧೯೯೪ರಲ್ಲಿ ಭಾರ್ಗವ ಪ್ರಶಸ್ತಿ, ಕೋದಂಡರಾಮ ದೇವಸ್ಥಾನ, ಹಿರೇಮಗಳೂರು

೨೦೧೮ ರಲ್ಲಿ ನಿರಂಜನ ಪ್ರಶಸ್ತಿ

ಇದಲ್ಲದೆ

ಕರಾವಳಿ ಲೇಖಕಿ ವಾಚಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ – ೧೯೯೪

ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ೨೦೦೯-೨೦೧೧

ಪುತ್ತೂರಿನ ಕೆದಂಬಾಡಿಯಲ್ಲಿ ನಡೆದ ೧೧ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ – ೨೦೦೫

ಮಂಗಳೂರು ಗಣರಾಜ್ಯೋತ್ಸವ ಗೌರವ ಪ್ರಧಾನ

ಗೌರವಾರ್ಪಣೆ – ಡೋನ್ ಬಾಸ್ಕೋ ಕ್ಲಬ್, ಪುತ್ತೂರು ೧೯೯೨ರಲ್ಲಿ

ಲಯನ್ಸ್, ರೋಟರಿ ಕ್ಲಬ್ ನಿಂದ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿ ಗ್ರಾಮೀಣ ಪ್ರದೇಶದ “ಸುವರ್ಣ ಭಾವೈಕ್ಯತೆ ಸಂಸ್ಕೃತಿ ಸಂಭ್ರಮ”ದಲ್ಲಿ ಗೌರವ ಸನ್ಮಾನ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.

ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ ಗೌರವ ಸನ್ಮಾನ

‘ಇಲ್ಲದವರು’ ಎಂಬ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ನಾಟಕದ ರೂಪದಲ್ಲಿ ಬಿತ್ತರಗೊಂಡಿದೆ.

‘ಸಂಜೆ ಬಿಸಿಲು’ ಕಥಾಸಂಕಲನದ “ಯೋಗ” ಕಥೆಯನ್ನು ಲಕ್ಷ್ಮಣಾಚಾರ್ ಅವರು ಮಲಯಾಳಂ ಭಾಷೆಗೆ ಅನುವಾದಿಸಿದ್ದಾರೆ

“ಅರ್ಹತೆ” ಕಥೆಯನ್ನು ಪ್ರಮೋದ ಕುಮಾರ ಲಕ್ಷ್ಮಣಾಚಾರ್ ಅವರು ತೆಲುಗಿಗೂ ಅನುವಾದಿಸಿದ್ದಾರೆ

“ದೇವ” ಕಾದಂಬರಿ ಮಂಗಳೂರು ಯೂನಿವರ್ಸಿಟಿ ಪದವಿ ತರಗತಿಗೆ ಮತ್ತು ಕೊಟ್ಟಾಯಮ್ ಯುನಿವರ್ಸಿಟಿಯ ಪಿ.ಯು.ಸಿ.ಗೆ ಪಠ್ಯಪುಸ್ತಕವಾಗಿತ್ತು.

“ಪ್ರೀತಿ” ಲೇಖನ ಇಂಗ್ಲೀಷಿಗೆ ಅನುವಾದವಾಗಿದೆ.

“ಅಂಜನಾ” ಕಾದಂಬರಿ ಸಂಸ್ಕೃತಕ್ಕೆ ಅನುವಾದವಾಗಿದೆ.

ಸಣ್ಣ ಕಥೆ, ಚಿಂತನ ಲೇಖನಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.

ಪುತ್ತೂರಿನ ಶಿವರಾಮ ಕಾರಂತ ಅಧ್ಯಯನ ಪೀಠದ ಕಮಿಟಿ ಸದಸ್ಯೆ ಆಗಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿದ್ದರು.

ಇದಿಷ್ಟೇ ಅಲ್ಲದೆ ಶ್ರೀಮತಿ ಮಾಲತಿ ಮೇಡಂ ಅವರು ಸಾಕಷ್ಟು ನಿಯತಕಾಲಿಕ ಪತ್ರಿಕೆಗಳ ಸಣ್ಣ ಕಥಾ ಸ್ಪರ್ಧೆಗಳಲ್ಲಿ ಅನೇಕ ಸಣ್ಣ ಕಥೆಗಳಿಗೆ ಪ್ರಥಮ, ದ್ವಿತೀಯ ಬಹುಮಾನಗಳನ್ನೂ ಪಡೆದಿರುತ್ತಾರೆ.

ಇವೆಲ್ಲಕ್ಕಿಂತ ಇನ್ನೂ ಒಂದು ದೊಡ್ಡ ಗೌರವಕ್ಕೆ ಮೇಡಂ ಅವರು ಪಾತ್ರರಾಗಿದ್ದಾರೆ. ಅದು ಯಾವುದೆಂದರೆ ವಿಜಾಪುರದ ವಿದ್ಯಾರ್ಥಿನಿ ತ್ರಿವೇಣಿ ಅವರು ಎ ಪಿ ಮಾಲತಿ ಅವರ ಜೀವನ ಮತ್ತು ಸಾಹಿತ್ಯ ಈ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ 2022ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಎ.ಪಿ.ಮಾಲತಿಯವರ ಕಾದಂಬರಿಗಳು ಒಂದು ಅಧ್ಯಯನ ಎನ್ನುವ ವಿಷಯವನ್ನು ಆರಿಸಿಕೊಂಡು ಕಣ್ಣೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಸತ್ಯಭಾಮಾ ಅವರು ಎಂ.ಫಿಲ್ ಡಿಗ್ರಿ ಪಡೆದಿರುತ್ತಾರೆ. ಮತ್ತು “ಎ.ಪಿ.ಮಾಲತಿಯವರ ಕಾದಂಬರಿಗಳಲ್ಲಿ ಸ್ತ್ರೀ ಜಗತ್ತು” ಈ ವಿಷಯದಲ್ಲಿ ಸುಬ್ರಹ್ಮಣ್ಯ ಪದವಿ ಕಾಲೇಜಿನ ಮೂಕಾಂಬಿಕ ಎನ್ನುವವರು ಎಂ.ಫಿಲ್ ಡಿಗ್ರಿ ಪಡೆದಿರುತ್ತಾರೆ.

(ಇದರಲ್ಲಿ ಕೆಲವನ್ನು ಮಾತ್ರ ಮಾಲತಿ ಮೇಡಂ ಹೇಳಿದ್ದರು. Google ನಲ್ಲಿ ಸರ್ಚ್ ಮಾಡಿದಾಗ ಮತ್ತಷ್ಟು ಸನ್ಮಾನ, ಗೌರವಗಳ ವಿವರ ಸಿಕ್ಕಿತು)

  • ನೀವು ಪತಿಯೊಂದಿಗೆ ವ್ಯವಸಾಯದಲ್ಲಿಯೂ ಕೈ ಜೋಡಿಸುತ್ತಾ ಗೃಹಿಣಿಯ ಜವಾಬ್ದಾರಿಗಳ ನಡುವೆ ಬರವಣಿಗೆಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ.

ದೈಹಿಕ ಕೆಲಸಕ್ಕೆ ನಾನು ಸೋಲುವುದಿಲ್ಲ. ಹಳ್ಳಿಯಲ್ಲಿ ದಿನ ರಾತ್ರಿ ಕೆಲಸದ ಹೊರೆ ಇದ್ದೇ ಇರುತ್ತದೆ. ನನ್ನ ಪತಿ ಕೂಡಾ ಸಾಹಿತ್ಯದಲ್ಲಿ ಆಸಕ್ತಿ ಇರುವವರು. ನನ್ನ ಬರವಣಿಗೆಗೆ ಅವರ ಪ್ರೋತ್ಸಾಹವೇ ಮುಖ್ಯ ಕಾರಣ. ನನ್ನ ಕೈಯಲ್ಲಿ ಪೆನ್ನು ಇದ್ದಾಗ ಅವರ ಕೈಯಲ್ಲಿ ಅಡಿಗೆ ಸೌಟು ಇರುತ್ತದೆ. ಬರೆಯುವ ಉತ್ಸಾಹ ಇದ್ದರೆ ಸಮಯ ತಾನೇ ಆಗುತ್ತದೆ.

ಸಾಹಿತ್ಯಕ್ಕೆ ಜಾತಿ, ಮತ, ಧರ್ಮಗಳಿಲ್ಲ. ಸಾಹಿತ್ಯ ಸಕಲ ಮಾನವ ಜನಾಂಗದ ಆರಾಧನೆಯ ಜಗತ್ತು. ಸಾಹಿತ್ಯ ನನಗೆ ಮಾನಸಿಕ ಸ್ಥಿತಪ್ರಜ್ಞತೆಯನ್ನು ತಂದುಕೊಟ್ಟಿದೆ. ಜೀವನದ ಹಲವು ಸೌಂದರ್ಯವನ್ನು ತೋರಿಸಿಕೊಟ್ಟಿದೆ, ಜೀವನದ ಸಣ್ಣತನಗಳನ್ನು ಮೀರಿ ನಡೆಯಬೇಕೆಂದು ಕಲಿಸಿಕೊಟ್ಟಿದೆ.

  • ಜನಪ್ರಿಯ ಸಾಹಿತ್ಯ, ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿದೆ ಎನ್ನುವ ಮಾತು ಸಾಹಿತ್ಯ ವಲಯದಲ್ಲಿ ಇದೆ. ಒಬ್ಬ ಬರಹಗಾರ್ತಿಯಾಗಿ ಈ ಕುರಿತು ನೀವು ಏನು ಹೇಳುತ್ತೀರಿ?
    ವಿಮರ್ಶಕರು ಏನೇ ಹೇಳಲಿ ಜನಪ್ರಿಯ ಆಗುವಂತೆ ಕೃತಿ ರಚಿಸುವುದು ನಮ್ಮ ಉದ್ದೇಶ ಮತ್ತು ಉತ್ಸಾಹ.

  • ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಏನು ಮಾಡಬಹುದು? ಈ ವಿಷಯದಲ್ಲಿ ನಿಮ್ಮ ಸಲಹೆ ಏನು?

ನಮ್ಮ ಮಕ್ಕಳಿಗೆ ಓದುವ ಅಭಿರುಚಿ ಎಳೆ ಶಿಶುವಿನಿಂದಲೇ ಸಿಗಬೇಕು. ಹೇಗೆಂದರೆ ಬಣ್ಣ ಬಣ್ಣದ ಪುಸ್ತಕದ ಪುಟ, ಬಣ್ಣದ ಚಿತ್ರಗಳನ್ನು ಆಟಿಕೆಯಂತೆ ಶಿಶು ನೋಡುತ್ತಾ ಬೆಳೆಯಬೇಕು. ಚಿತ್ರ ತೋರಿಸುತ್ತಾ ಕಥೆ ಹಾಡು ಹೇಳಬೇಕು. ಮಾತು ಕಲಿತ ನಂತರ ಮಗು ತನ್ನ ಕಲ್ಪನೆಯ ವಿಷಯ ಕಟ್ಟಿ ಹೇಳುವಂತೆ ಉತ್ತೇಜಿಸಬೇಕು. ಮಗುವಿನ ಜೊತೆ ತಾಯಿ ತಂದೆ ತಾವು ಪುಸ್ತಕ ಹಿಡಿದು ಓದುವಂತಹ ವಾತಾವರಣ ಇರಬೇಕು. ಆದರೆ ಇಂದಿನ ಮೊಬೈಲ್ ಯುಗದಲ್ಲಿ ಇದೆಲ್ಲ ಸಾಧ್ಯವೇ. ಕನ್ನಡವೇ ಬೇಡವೆಂಬ ಕಾಲ ಈಗ.

  • ನಿಮ್ಮ ಯಾವುದಾದರೂ ಕೃತಿಗಳು ಚಲನಚಿತ್ರ/ ಧಾರಾವಾಹಿ ಗಳಾಗಿವೆಯೇ?

ನನ್ನ “ಮಂದಾರ” ಕಾದಂಬರಿ ಈ ಟಿವಿ ಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದೆ.

  • ನಿಮ್ಮ ಇಷ್ಟದ ಲೇಖಕರು ಯಾರು, ನೀವು ಮತ್ತೆ ಮತ್ತೆ ಓದಲು ಇಷ್ಟಪಡುವ ಕೃತಿಗಳ ಬಗ್ಗೆ ಹೇಳಿ. ಹಾಗೆ ನೀವು ಆಸೆಪಟ್ಟು ನಿಮ್ಮ ಇಷ್ಟದ ಲೇಖಕ/ಲೇಖಕಯರನ್ನು ಭೇಟಿಯಾಗಿ ಮಾತನಾಡಿಸಿದ ಕ್ಷಣದ ನೆನಪುಗಳನ್ನು ಹಂಚಿಕೊಳ್ಳಿ.

ಹಲವಾರು ಹಿರಿಯ ಲೇಖಕಿಯರ ಪರಿಚಯ, ಸಮಕಾಲೀನ ಲೇಖಕಿಯರ ಒಡನಾಟ ನನ್ನ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಬೌದ್ಧಿಕ ಜಗತ್ತನ್ನು ವಿಸ್ತರಿಸಿದೆ. ನನ್ನ ಇಷ್ಟದ ಲೇಖಕರು ಬಂಗಾಲಿ ಸಾಹಿತ್ಯದ ಅನುವಾದಕ ಅಹೋಬಲ ಶಂಕರರು. ನನ್ನ ತವರುಮನೆ ಮುಂಬೈ. ನಾನು ಅಲ್ಲಿಗೆ ಹೋದಾಗ ಅವರನ್ನು ಭೇಟಿ ಆಗುತ್ತಿದ್ದೆ. ಅವರು ಬಹಳಷ್ಟು ಒಳ್ಳೆಯ ಕಾದಂಬರಿ ಕೊಟ್ಟು ನನ್ನಲ್ಲಿ ಬರೆಯುವ ಉತ್ಸಾಹ ತುಂಬಿಸುತ್ತಿದ್ಧರು. ಅವರು ಅನುವಾದಿಸಿದ ಪಥೇರ ಪಾಂಚಾಲಿ ಮತ್ತು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ನನ್ನ ಇಷ್ಟದ ಕೃತಿಗಳು.

  • ಹೊಸ ಲೇಖಕರಿಗೆ ನಿಮ್ಮ ಸಂದೇಶವೇನು?

ಹೊಸ ಲೇಖಕಿಯರಿಗೆ ತುಂಬಾ ವಿಷಯದ ಬಗ್ಗೆ ತಿಳಿಯುವ ಕಲಿಯುವ ಮುಕ್ತವಾಗಿ ಬರೆಯುವ ಅವಕಾಶ ಇದೆ. ಸಾಹಿತ್ಯ ಬರವಣಿಗೆಗೆ ಬೇಕಾಗಿರುವುದು ಶಿಸ್ತು, ಸತತ ಪ್ರಯತ್ನ, ಹಠ ಬಿಡದ ತ್ರಿವಿಕ್ರಮನಂತಹ ಸಾಧನೆ.

  • ನೀವು ನಮ್ಮ ಪುಸ್ತಕ ಅವಲೋಕನ ಬಳಗದ ಸದಸ್ಯರೂ ಆಗಿದ್ದೀರಿ. ನಮ್ಮ ಬಳಗದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಈ ದಿನಗಳಲ್ಲಿ ಪುಸ್ತಕ ಅವಲೋಕನ ಕನ್ನಡ ಸಾಹಿತ್ಯದ ಓದು ಬರಹದಲ್ಲಿ ಅತ್ಯಂತ ದೊಡ್ಡ ಸಂಚಲನೆ ಮಾಡುತ್ತಿದೆ. ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವಂತೆ ಟಾಸ್ಕ್ ಕೊಟ್ಟು ಹೆಚ್ಚು ಹೆಚ್ಚು ಜನರನ್ನು ತಲುಪುವ ಉದ್ದೇಶ ಹೊಂದಿದೆ. ಹೀಗೆ ಮುಂದುವರಿಯಲಿ.

ನಮ್ಮ ಕೋರಿಕೆಯನ್ನು ಮನ್ನಿಸಿ ನಿಮ್ಮ ಅಮೂಲ್ಯ ಸಮಯದ ಸ್ವಲ್ಪ ಭಾಗವನ್ನು ನಮಗಾಗಿ ಮೀಸಲಿಟ್ಟು, ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದಕ್ಕೆ ಅನಂತ ಧನ್ಯವಾದಗಳು ಮೇಡಂ. ನಿಮ್ಮ ಸಾಹಿತ್ಯ ಸೇವೆ ಹೀಗೆಯೇ ಮುಂದುವರೆಯಲಿ. ನಿಮ್ಮ ಮತ್ತಷ್ಟು ಕೃತಿಗಳನ್ನು ಓದುವ ಭಾಗ್ಯ ನಮಗೆಲ್ಲ ದೊರಕಲಿ.

ಕೃಪೆ : ಪುಸ್ತಕ ಅವಲೋಕನ


  • ವಸಂತ ಗಣೇಶ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW