ನಾಗರ ಪಂಚಮಿಗೆ ನಾಗಪ್ಪನ ಪೂಜೆ, ಸಿಹಿ ತಿನ್ನೋದಷ್ಟೇ ಅಲ್ಲ, ಬಾಲ್ಯದ ಮಧುರ ನೆನಪುಗಳನ್ನ ಮಾಡಿಸಿಕೊಡುತ್ತದೆ. ಲೇಖಕಿ ಸವಿತಾ ರಮೇಶ ಅವರು ನಾಗರಪಂಚಮಿ ದಿನದಂದು ಮದರಂಗಿ ವಿಶೇಷತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ, ತಪ್ಪದೆ ಓದಿ…
ನಾಗರ ಪಂಚಮಿ ಬಂದಾಗಲೆಲ್ಲಾ ಬಾಲ್ಯದ ನೆನಪು. ಮದರಂಗಿಯ ರಂಗು ರಂಗಿನ ನೆನಪಲ್ಲಿ ಮನಸ್ಸು ತೇಲಿ ಹೋಗುತ್ತದೆ. ಮದರಂಗಿ ಅಂದರೆ ಗೊತ್ತಾಯಿತಲ್ಲಾ…. ಅದೇರೀ… ಈವಾಗ ಮೆಹಂದಿ ಅಂತ ಕೈಗಳಿಗೆ, ಕಾಲುಗಳಿಗೆ ಚೆಂದದ ಚಿತ್ತಾರ ಬಿಡಿಸುತ್ತಾರಲ್ಲಾ. ಈವಾಗ ಮದುವೆ ಮನೆಯಲ್ಲಿ ಅದರ ಗದ್ದಲ ಭಾರಿ ಜೋರು, ಆಗ ನಾಗರ ಪಂಚಮಿ ದಿನ ಬಿಟ್ಟು ಇನ್ನು ಯಾವ ದಿನವು ಹಾಕಿಕೊಳ್ಳುತ್ತಿರಲಿಲ್ಲ. ಈಗಿನ ಮೆಹಂದಿಯೇ ನಮ್ಮ ಚಿಕ್ಕ ವಯಸ್ಸಿನ ಮದರಂಗಿ. ನನಗಂತೂ ಮದರಂಗಿ ಅನ್ನುವುದೇ ಇಷ್ಟ.
ನಮ್ಮೂರಿನಲ್ಲಿ ನಾಗರ ಪಂಚಮಿ ಹಬ್ಬದಲ್ಲಿ ಮದರಂಗಿ ಹಾಕಿಕೊಳ್ಳಬೇಕೆಂಬ ಸಂಪ್ರದಾಯವಿತ್ತು. ಆ ದಿನ ಮದರಂಗಿ ಹಾಕಿಲ್ಲ ಅಂದರೆ ಹಾವು ಕಚ್ಚುತ್ತದೆಯಂತೆ…. ನಮ್ಮ ನಮ್ಮಲ್ಲಿ (ಮಕ್ಕಳು) ಮಾತನಾಡಿಕೊಳ್ಳುತ್ತಿದ್ದೆವು. ನಾವು ರಾತ್ರಿ ಮಲಗುವಾಗ ಹಾಕಿಕೊಂಡು ಮಲಗಿ ಬೆಳಗ್ಗೆ ಎದ್ದಾಗ ಉಗುರು ನೋಡಿಕೊಳ್ಳುತ್ತಿದ್ದೆವು.

ಫೋಟೋ ಕೃಪೆ : google
೭೦ರ ದಶಕ ನನಗೆ ಐದಾರು ವರ್ಷ, ಆಗ ಪುಟ್ಟ ಕೈಗಳಿಗೆ ಅಕ್ಕಂದಿರು ಹಾಕಿದ ಮದರಂಗಿ ನೆನಪು ಇನ್ನೂ ಮರೆತಿಲ್ಲ.
ಈಗಿನ ತರಹ ಪುಡಿಗಳು, ಕೋನ್ ಗಳು ಇರುತ್ತಿರಲಿಲ್ಲ. ಸಾಧಾರಣವಾಗಿ ಊರಿನ ಒಂದಿಬ್ಬರ ಮನೆಯಲ್ಲಿ ಮದರಂಗಿ ಗಿಡ ಇರುತ್ತಿತ್ತು. ಅಲ್ಲಿಗೆ ಹೋಗಿ ಮದರಂಗಿ ಎಲೆ ಕಿತ್ತು ತಂದು ಕೊಟ್ಟರೆ ಮನೆಯಲ್ಲಿ ದೊಡ್ಡವರು ಅದಕ್ಕೆ ಲಿಂಬೆಹಣ್ಣಿನ ರಸ ಹಾಕಿ ರುಬ್ಬಿಕೊಡುವರು.
ಅಪ್ಪ ಚಿಕ್ಕಪ್ಪ ಎಲ್ಲಾ ಒಟ್ಟಿಗೆ ಇದ್ದ ಕೂಡು ಕುಟುಂಬ ನಮ್ಮದು.
ರಾತ್ರಿ ಊಟವೆಲ್ಲಾ ಮುಗಿದ ಮೇಲೆ ಎಲ್ಲರೂ ಒಂದು ಕಡೆ ಕುಳಿತು ಹರಟೆ ಹೊಡೆಯುತ್ತಾ ಮದರಂಗಿ ಹಾಕುವ ಕಾರ್ಯಕ್ರಮ ಇರುತ್ತಿತ್ತು. ಮದರಂಗಿ ಬರಿ ಹೆಣ್ಣುಮಕ್ಕಳಿಗೆ ತಾನೇ… , ಆದರೂ ನಮ್ಮನ್ನು ರೇಗಿಸಲೆಂದು ಅಣ್ಣ ತಮ್ಮಂದಿರೆಲ್ಲಾ ಸೇರುವರು. ನಾವು ಹೆಣ್ಣು ಮಕ್ಕಳು ಬಿಡುತ್ತಿದ್ದೆವು ಅಂದುಕೊಂಡಿರಾ… ನಾವು ಸಹ ಅಣ್ಣ, ತಮ್ಮಂದಿರನ್ನು ರೇಗಿಸುತ್ತಾ, ಅಣಕಿಸುತ್ತಾ ನಾವು ಮಾತ್ರ ಮದರಂಗಿ ಹಾಕಿಕೊಳ್ಳುತ್ತಿದ್ದೇವು. ನಮಗೆ ಹಾವು ಕಚ್ಚುವ ಭಯವಿಲ್ಲ, ಎನ್ನುತ್ತಿದ್ದೇವು. ಎಷ್ಟು ಸುಂದರ ಕಾಲವಾಗಿತ್ತು…
ರಾತ್ರಿ ಮಲಗುವ ಸಮಯದಲ್ಲಿ ರುಬ್ಬಿದ ಮದರಂಗಿಯನ್ನು ಉಗುರಿನ ಮೇಲೆ ಇಟ್ಟು, ಮುತ್ತುಗದ ಎಲೆ ಸುತ್ತಿ ಬಾಳೆ ನಾರಿನಿಂದ ಕಟ್ಟುವರು ಹತ್ತು ಬೆರಳಿಗೂ ಮದರಂಗಿ ಹಾಕಿ ಕಟ್ಟಿಸಿಕೊಂಡು ಮಲಗುತ್ತಿದ್ದೇವು. ಅಮ್ಮಾ ಹೊದಿಕೆ ಹಾಕಿ ಹೋಗುವರು. ರಾತ್ರಿ ಹೊರಳಿದಾಗ ಕೆಲವು ಬೆರಳಿಂದ ಕಿತ್ತು ಬೀಳುತ್ತಿದ್ದವು.

ಫೋಟೋ ಕೃಪೆ : google
ಬೆಳಿಗ್ಗೆ ಎದ್ದಾಗ ಕೆಂಪಾದ ಉಗುರು ನೋಡಿ ಖುಷಿ ಪಡುತ್ತಿದ್ದೇವು. ಆದರೆ ಪಾಪ ಅಮ್ಮನಿಗೆ ಬೆಡ್ ಶೀಟ್ ಒಗೆಯುವ ಕೆಲಸ ಬೀಳುತ್ತಿತ್ತು. ಬೆಡ್ ಶೀಟ್ ಗಿಂತ ಹಿತವಾದ ಅಮ್ಮನ ಹಳೆಯ ಸೀರೆಗಳೇ ನಮಗೆ ಹಾಸಲು ಇರುತ್ತಿತ್ತು.
ಆದರೆ ಪಾಪ ಬೆಳಿಗ್ಗೆ ಅಮ್ಮ ಹಾಗೂ ಚಿಕ್ಕಮ್ಮನಿಗೆ ಹಾಸಿಗೆ ಬಟ್ಟೆ ಒಗೆಯುವ ಕೆಲಸ, ಯಾಕೆಂದರೆ ರಾತ್ರಿ ಹೊರಳಾಡಿ ಬೆರಳಿಗೆ ಹಾಕಿದ ಟೋಪಿಗಳು( ಮಂದರಂಗಿ) ಕಳಚಿ ಬಿದ್ದು ಹಾಸಿದ ಬಟ್ಟೆಯೆಲ್ಲಾ ಕೊಳೆಯಾಗುತ್ತಿತ್ತು. ಅಮ್ಮನ ಮುಖದಲ್ಲಿ ಬೆಡ್ ಶೀಟ್ ಒಗೆದ ಸುಸ್ತು ಇರದೆ ಮಕ್ಕಳ ಖುಷಿ ಕಂಡು ಅವರು ಖುಷಿ ಪಡುವರು.
ಕೊನೆಯಲ್ಲಿ ಅಮ್ಮಾ ಹಾಗೂ ಚಿಕ್ಕಮ್ಮನವರ ಬೆರಳಿಗೂ ಹಾಕುತ್ತಿದ್ದೆವು.

ಫೋಟೋ ಕೃಪೆ : ಸೌಮ್ಯ ಸನತ್
ಇದೇನು ನಾಗರಪಂಚಮಿ ಅಂದರೆ ಬರಿ ಮದರಂಗಿ ಬಗ್ಗೆ ಬರೆದಿದ್ದೀನಿ ಅಂದುಕೊಂಡಿರಾ… ಅಯ್ಯೋ… ಹಬ್ಬ ಅಂದರೆ ಪೂಜೆ , ಸಿಹಿ ಅಡುಗೆಗಳು ಮಾಮೂಲು ತಾನೇ… ಆಗ ನಮಗೆ ನಾಗರ ಪಂಚಮಿ ಅಂದರೆ ಮದರಂಗಿ ಹಾಗೂ ಉಯ್ಯಾಲೆಯ ಖುಷಿಯೇ ಜಾಸ್ತಿ ಇರುತ್ತಿತ್ತು.
ಹೌದು ನಾಗರ ಪಂಚಮಿಗೆ ಇನ್ನೂ ಯಾರು ಯಾರು ಮದರಂಗಿ ಹಾಕಿಕೊಂಡು ಕೈ ಕೆಂಪುಮಾಡಿಕೊಳ್ಳುತ್ತಿದ್ದೀರಿ ನೆನಪಿಸಿಕೊಳ್ಳಿ…..
- ಸವಿತಾ ರಮೇಶ, ಬೆಂಗಳೂರು
