ಏನಾದರಾಗಲೀ , ಪರಸ್ಪರ ವಿರೋಧಾಭ್ಯಾಸಗಳ ಗಂಡು ಹೆಣ್ಣನ್ನು ಒಂದುಗೂಡಿಸಿ , ಬದುಕಿನ ಸಾರ್ಥಕತೆಗೆ ಅವರಿಬ್ಬರ ಸ್ವಭಾವಗಳನ್ನು ಕಾಂಪ್ರೊಮೈಸ್ ಮಾಡಿಕೊಂಡು ಮುಂದುವರೆಯುವಂತೆ ಮಾಡುವ ಅದ್ಭುತ ವಿಧಾನವೇ ವಿವಾಹ ಬಂಧನ !. ಹಿರಿಯೂರು ಪ್ರಕಾಶ್ ಅವರ ಲೇಖನಿಯಲ್ಲಿ ಮದುವೆಯ ಮೂರಕ್ಷರದ ಅರ್ಥ ಓದಿ …
ಎಂಥಾ ಗಂಡಿಗೆ ಎಂತಹಾ ಹೆಣ್ಣನ್ನು ಗಂಟು ಹಾಕಬೇಕೆಂದು ಆ ಬ್ರಹ್ಮ ಮೊದಲೇ ನಿಶ್ವಯಿಸಿರುತ್ತಾನೆ ಅನ್ಸುತ್ತೆ ! ಇಲ್ಲದಿದ್ರೆ ಮದುವೆ ಅನ್ನೋದು ಒಂದು ಪವಿತ್ರ ಬಂಧನ ಅಂತ ಕರೆಸಿಕೊಳ್ಳೋಕೆ ಸಾಧ್ಯನೇ ಇರುತ್ತಿರಲಿಲ್ಲ ಕಣ್ರೀ ! ಕೆಲವು ಅಪವಾದಗಳನ್ನು ಬಿಟ್ಟರೆ ಬಹುತೇಕ ಗಂಡು ಹೆಣ್ಣಿನ ಹಿಸ್ಟರಿ, ಮಿಸ್ಟರಿ, ಕೆಮಿಸ್ಟ್ರಿ ಎಲ್ಲವೂ ಪಕ್ಕಾ ಮ್ಯಾಚ್ ಆಗುವಂತೆಯೇ ಮೊದಲೇ ಡಿಸೈಡ್ ಆಗಿಬಿಟ್ಟಿರುತ್ತದೆ. ಹೀಗಾಗಿಯೇ ಶತ ಶತಮಾನಗಳಿಂದಲೂ ವಿವಾಹ ಅನ್ನೋ ಬಾಂಡೇಜ್ ಸಕತ್ ಸ್ಟ್ರಾಂಗಾಗಿ ಉಳಿದುಕೊಳ್ಳಲು ಸಾಧ್ಯವಾಗಿದ್ದು !
ಎಲ್ಲಿಯದೋ ಗಂಡು ಎಲ್ಲಿಯದೋ ಹೆಣ್ಣು. ಒಬ್ಬರನ್ನೊಬ್ಬರು ನೋಡಿರೋಲ್ಲ, ಪರಿಚಯವಿರೋಲ್ಲ, ಗೊತ್ತಿರೋಲ್ಲ. ಆದರೂ #ಮದುವೆ ಎನ್ನುವ ಮೂರಕ್ಷರದ ಮೂಲಕ #ಸಪ್ತಪದಿ ತುಳಿದು ಸತಿಪತಿಗಳಾಗಿ ಜೀವನ ಸಂಗಾತಿಗಳೇ ಆಗಿಬಿಡುತ್ತಾರೆ. ಇದೂ ಒಂಥರಾ ಕೌತುಕವೇ. ಇಲ್ಲಿ ಕೌತುಕ ಯಾಕೆಂದರೆ ಇವರಿಬ್ಬರಲ್ಲಿ ಮದುವೆಗೆ ಮುನ್ನ ಸಾಮಾನ್ಯವಾಗಿ ಯಾರ ಗುಣ ಹೇಗೆ ಎಂಬ ಬಗೆಗೆ ಪೂರಾ ತಿಳಿವಳಿಕೆ ಇರೋದೇ ಇಲ್ಲ. ಮೇಲ್ನೋಟಕ್ಕೆ ಅಥವಾ ಅವರಿವರ ಅನಿಸಿಕೆಗಳ ಆಧಾರದ ಮೇಲೆ ಒಬ್ಬರ ಬಗೆಗೆ ಮತ್ತೊಬ್ಬರು ಅರಿತುಕೊಳ್ಳ ಬೇಕಷ್ಟೇ. ಮದುವೆಯ ನಂತರ ಕೆಲ ಕಾಲ ಸಂಸಾರ ಮಾಡಿದ ಮೇಲೆಯೇ ಏನಿದ್ದರೂ ತನ್ನ ಪತಿ -ಪತ್ನಿ ಹೇಗೆಂಬುದು ಗೊತ್ತಾಗಲು ಸಾಧ್ಯ ! ಈ ಪದ್ದತಿ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ಮಾತ್ರ ಹೀಗಿರುತ್ತೆ. ಆದರೆ ಲವ್ ಮ್ಯಾರೇಜ್ ಗಳಲ್ಲಿ ಒಬ್ಬರ ಬಗೆಗೆ ಮತ್ತೊಬ್ಬರು ವಿವಾಹಕ್ಕೆ ಮುನ್ನವೇ ಅರಿತುಕೊಂಡಿರುವ ಸಾಧ್ಯತೆ ಹೆಚ್ಚು. ಆದರೂ ಅಲ್ಲಿಯೂ ಪರಿಪೂರ್ಣವಾಗಿ ಪರಸ್ಪರ ಅರ್ಥವಾಗೋದು ಕಡಿಮೆಯೇ. ಏಕೆಂದರೆ ” ಗರ್ಲ್ ಫ್ರೆಂಡ್ ” ಆದವಳು ಸಂಗಾತಿಯಾಗಿ ಬಂದಾಗ
” ವರ್ಲ್ ವಿಂಡ್ ” ಆಗಿ ರೂಪಾಂತರವಾಗಿರುವ ಕೇಸುಗಳೇ ಹೆಚ್ಚು !

ಫೋಟೋ ಕೃಪೆ : google
ಇಷ್ಟೆಲ್ಲಾ ಕೌತುಕ- ಗೊಂದಲಗಳಿದ್ದರೂ ಒಂದು ಗಂಡಿಗೆ ತಕ್ಕನಾದ ಹೆಣ್ಣನ್ನು ಹೆಚ್ಚು ಕಡಿಮೆ ಅವರವರ ಅಭಿರುಚಿಗೆ ತಕ್ಕಂತೆ ಬ್ರಹ್ಮ ಗಂಟು ಹಾಕಿರುತ್ತಾನಲ್ಲವೇ..!. ಅಭಿರುಚಿ, ಅನಿಸಿಕೆ, ಗುಣ ಸ್ವಭಾವಗಳಲ್ಲಿ ತದ್ವಿರುದ್ಧವಾಗಿದ್ದರೂ ಸಹಾ, ಸಂಸಾರದ ಬಂಡಿಯ ಜೋಡೆತ್ತುಗಳಾಗಿ ಹೊಂದಾಣಿಕೆಯಿಂದ ಗಂಡ ಹೆಂಡತಿ ಬಾಳು ಸವಿಯುತ್ತಾ ಸವೆಸೋದನ್ನು ನೋಡಬಹುದು .
ಪರಸ್ಪರ ಕೈ ಹಿಡಿಯುವವರ ಮ್ಯಾಚಿಂಗ್ ಎಷ್ಟು ಪಕ್ಕಾ ಇರುತ್ತೆಂದರೆ ಗಂಡು ಹೆಣ್ಣಿನ ಸ್ವಭಾವಗಳ ವಿರೋಧಾಭ್ಯಾಸಗಳ ನಡುವೆಯೂ ಅನ್ಯೋನ್ಯವಾಗಿ ಹೊಂದಿಕೊಂಡು ಹೋಗುವ ಸ್ವಾಭಾವಿಕ ಗುಣ ಈ ಬಂಧಕ್ಕಿರುತ್ತದೆ. ಇಲ್ಲಿನ ಅತ್ಯಂತ ಸುಂದರ ಅಂಶವೆಂದರೆ ಒಬ್ಬರಲ್ಲಿನ ಕೊರತೆಯನ್ನು ಮತ್ತೊಬ್ಬರಲ್ಲಿನ ಕ್ಷಮತೆಯಿಂದ ಸರಿದೂಗಿಸಿ ಅತ್ಯಂತ ಬ್ಯಾಲೆನ್ಸ್ಡ್ ಆಗಿ ಸಂಸಾರ ನೆಡೆಸಿಕೊಂಡು ಹೋಗುವಂತೆ ಬ್ರಹ್ಮನೇ ಮ್ಯಾನೇಜ್ ಮಾಡಿ ಮ್ಯಾರೇಜ್ ಮಾಡಿಸಿರಬಹುದೇನೋ ಎಂಬಂತೆ ಜೋಡಿಗಳು ಹೊಂದಿಕೊಂಡು ಜೊತೆಯಾಗಿರುತ್ತವೆ.
ನೀವು ಗಮನಿಸಿ ! ಬಹುತೇಕ ಜೋಡಿಗಳಲ್ಲಿನ ಗುಣ ಸ್ವಭಾವಗಳು ಒಂದೇ ತೆರನಾಗಿರಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಗಮನಿಸು ವುದಾದರೆ ಗಂಡನಾದವನು ಸಿಡುಕ, ಕೆಡುಕ, ದುಡುಕನಾಗಿದ್ದಲ್ಲಿ ಹೆಂಡತಿ ಅಷ್ಟೇ ತಾಳ್ಮೆ, ಒಳ್ಳೆಯತನ ಹಾಗೂ ನಿಧಾನಿಯಾಗಿರುತ್ತಾಳೆ. ಅದೇ ಹೆಂಡತಿಯಾದವಳು ದುಂದುವೆಚ್ಚ, ದುಡುಕು, ದುರಾಸೆಯುಳ್ಳವಳಾದಲ್ಲಿ ಗಂಡನಾದವನು ಸಮಾಧಾನಿಯಾಗಿ, ಸರಳತೆಯಿಂದ ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳುವವನಾಗಿರುತ್ತಾನೆ. ಗಂಡನಿಗೆ ಸಾಹಿತ್ಯ , ಸಂಸ್ಕೃತಿ, ಸರಳತೆ, ಸಂಗೀತ ಇಷ್ಟವಾದಲ್ಲಿ #ಹೆಂಡತಿಗೆ ಅದರ ವಿರುದ್ಧದ ಗುಣಗಳೂ ಇದ್ದಾವು ! ಗಂಡ ಮೌನಿಯಾಗಿದ್ದರೆ, ಹೆಂಡತಿ ವಾಚಾಳಿಯಾಗಿರಬಹುದು, ಇಲ್ಲವೇ ಉಲ್ಟಾ ಆಗಿರಬಹುದು. ಹೀಗೆ ಗಂಡನ ಇಷ್ಟ ,ಅನಿಷ್ಟ, ಅನಿಸಿಕೆ ,ಅಭಿರುಚಿ ಅಭಿಪ್ರಾಯ ಗಳೆಲ್ಲವೂ ಒಂಥರಾ ಇದ್ದಲ್ಲಿ ಹೆಂಡತಿಯದೇ ಮತ್ತೊಂದು ಥರ ಇರೋದು ಸಹಾ ಪ್ರಕೃತಿಯ ವಿಸ್ಮಯ.

ಫೋಟೋ ಕೃಪೆ :google
ಸಂಸಾರ ನಿರ್ವಹಣೆಯ ವಿಚಾರದಲ್ಲಿ ಬಹುತೇಕ #ಸಂಸಾರಗಳನ್ನು ನಾನು ಕಂಡಂತೆ ಹೆಂಡತಿಯಾದವಳ ಜಾಣ್ಮೆಯೇ ಮೇಲುಗೈ ಸಾಧಿಸಿರುತ್ತದೆ. ಗಂಡನ ಆದಾಯ, ಅನುಕೂಲ ಎಷ್ಟೇ ಇದ್ದರೂ ಇದ್ದುದರಲ್ಲಿಯೇ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸುವ ತಾಕತ್ತು ಕೌಶಲ್ಯ ಸಾಮಾನ್ಯವಾಗಿ ಹೆಣ್ಣಿಗೇ ಹೆಚ್ಚು. ಗಂಡನದು ಜೆ.ಎಂ. ಕೇನ್ಸ್ ತರಹ ಮ್ಯಾಕ್ರೋ ಲೆವಲ್ ಎಕಾನಮಿಯಂತೆ ತನ್ನ ಕುಟುಂಬದಾಚೆಗಿನ ಖರ್ಚಿಗೂ ವಿಶಾಲವಾಗಿ ಯೋಚಿಸಿ ಅದಕ್ಕಾಗಿ ತಲೆಕೆಡಿಸಿಕೊಂಡರೆ ಅದೇ ಹೆಂಡತಿಯದು ಮಾತ್ರ ಅರ್ಥಶಾಸ್ತ್ರದ ಪಿತಾಮಹ ಆಡಂ ಸ್ಮಿತ್ ನ ತರಹ ಮೈಕ್ರೋ ಎಕಾನಮಿಯಂತೆ ತನ್ನ ಮಿತಿಯೊಳಗೇ ಯೋಚಿಸುತ್ತಾಳೆ. ಆಕೆ ತನ್ನ ಕುಟುಂಬದಿಂದಾಚೆ ಗಿನ ಆರ್ಥಿಕ ವ್ಯವಸ್ಥೆ ಬಗೆಗೆ ಯೋಜನೆಯನ್ನು ರೂಪಿಸುವುದು ಕಡಿಮೆ ! ಆಕೆಯದೇನಿದ್ದರೂ ತಾನು ತನ್ನ ಗಂಡ ತನ್ನ ಮಕ್ಕಳು …ಅಷ್ಟೇ ! ಹೀಗಾಗಿಯೇ ಅನೇಕ ಕುಟುಂಬಗಳು ಆರ್ಥಿಕ ಸರಿದಾರಿಯಲ್ಲಿ ಸಾಗುತ್ತಿರುವುದು ಎಂಬ ಅವರ ಸಿದ್ದಾಂತಕ್ಕೂ ಜಾಗತಿಕ ಮನ್ನಣೆ ಸಿಕ್ಕಿದೆ !
ಹಾಗಂತ ಗಂಡ ಹೆಂಡತಿಯರಿಬ್ಬರ ಸ್ವಭಾವಗಳೂ ಭಿನ್ನವಾಗಿರಲೇ ಬೇಕೆಂದೇನಿಲ್ಲ . ಅವರಲ್ಲಿಯೂ ಇಬ್ಬರೂ ಸಮಾನವಾಗಿ ಬುದ್ದಿವಂತರು, ಜಾಣರು, ದಡ್ಡರು, ದುಡುಕಿನವರು, ಜಿಪುಣರು, ದುಂದು ವೆಚ್ಚದವರು, ಸೋಂಬೇರಿಗಳು ,ಒಳ್ಳೆಯವರು ಕೆಟ್ಟವರು… ಹೀಗೆ ಅವರ ಸ್ವಭಾವಗಳಲ್ಲಿ ಪಕ್ಕಾ ಮ್ಯಾಚ್ ಆಗುವ ಜೋಡಿಗಳೂ ಇರ್ತಾರೆ ಬಿಡಿ ! ಅದು ಅದೃಷ್ಟವಿದ್ದವರಲ್ಲಿ ಮಾತ್ರ ! ಆದರೆ ….ಜೋಡಿ ಹೀಗಿದ್ದಲ್ಲಿ ಸಂಸಾರದಲ್ಲಿ ” ಸಂ ” ಇದ್ದರೂ ” ಸಾರ” ಇರೋದು ಕಡಿಮೆ. ಏಕೆಂದರೆ ವೈರುಧ್ಯ ಸ್ವಭಾವಗಳ ಸಂಯೋಜನೆಯ ಪ್ರಕ್ರಿಯೆಯಲ್ಲಿಯೇ ಬದುಕಿನ ಕೌತುಕ- ರುಚಿ, ವಿಸ್ಮಯ ಅಡಗಿರುವುದಲ್ಲವೇ..?

(ಧರ್ಮಪತ್ನಿಯೊಂದಿಗೆ ಹಿರಿಯೂರು ಪ್ರಕಾಶ್)
ಹೀಗೆ ಏನೆಲ್ಲ ಸ್ವಭಾವಗಳ ವೈರುಧ್ಯಗಳಿದ್ದರೂ ಗಂಡು ಹೆಣ್ಣನ್ನು ಬ್ಯಾಲೆನ್ಸ್ಡ್ ಆಗಿಯೇ ಬ್ರಹ್ಮ ಗಂಟು ಹಾಕಿ ತಗಲಾಕಿಬಿಟ್ಟಿರೋದು ಬ್ರಹ್ಮಗಂಟೋ ಅಥವಾ ಅಡ್ಜಸ್ಟ್ ಮೆಂಟೋ ಬಲ್ಲವರೇ ಹೇಳಬೇಕು !
** ಮರೆಯುವ ಮುನ್ನ **
ಬಹುಶಃ ಮದುವೆ ಎನ್ನುವ ಮೂರಕ್ಷರಕ್ಕಿರುವ ಪಾವಿತ್ರ್ಯತೆ ಹಾಗೂ ಮಹತ್ವಕ್ಕಾಗಿಯೇ ಅವು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತವೆ ಎಂದಿದ್ದಿರಬಹುದು. ಗಂಡು ಹೆಣ್ಣಿನ ಮದುವೆಗೆ ಮುಂಚಿನ ಗುಣಾವಗುಣಗಳು ಏನೇ ಇರಲಿ, ಅವು ವಿವಾಹದ ನಂತರದಲ್ಲಿ ಹೊಂದಾಣಿಕೆಗೊಳಪಟ್ಟು ಬದಲಾವಣೆ ಆಗಿಯೇ ತೀರುತ್ತವೆ. Ofcourse , ಕೆಲವು ಅಪವಾದಗಳನ್ನು ಹೊರತುಪಡಿಸಿ !
ಈ #ವಿವಾಹ ಭಾಂದವ್ಯದ ರೀತಿ ನೀತಿ ಆಚರಣೆಯಲ್ಲೂ ಸಾಕಷ್ಟು ಬದಲಾವಣೆ ಕಂಡು ಬಂದು ಅವರವರ ಇಷ್ಟಾನುಸಾರ ವಿವಾಹ ಪದ್ದತಿ ಜರುಗಿದರೂ, ಮದುವೆಯ ಈ ಬಂಧವೆನ್ನುವುದು ಗಂಡು ಹೆಣ್ಣಿನ ಪರಸ್ಪರ ಅನುರಾಗದ ಅನುಬಂಧವಾಗಿಯೇ ಬೆಳೆದು ಏಳೇಳು ಜನುಮದಲ್ಲೂ ಚಿರವಾಗಿರುವ ಸಂಬಂಧವಾಗಿದೆ.
ಏನಾದರಾಗಲೀ , ಪರಸ್ಪರ ವಿರೋಧಾಭ್ಯಾಸಗಳ ಗಂಡು ಹೆಣ್ಣನ್ನು ಒಂದುಗೂಡಿಸಿ , ಬದುಕಿನ ಸಾರ್ಥಕತೆಗೆ ಅವರಿಬ್ಬರ ಸ್ವಭಾವಗಳನ್ನು ಕಾಂಪ್ರೊಮೈಸ್ ಮಾಡಿಕೊಂಡು ಮುಂದುವರೆಯುವಂತೆ
ಮಾಡುವ ಅದ್ಭುತ ವಿಧಾನವೇ ವಿವಾಹ ಬಂಧನ !
ಈ ಬಂಧನ ಎಂದೆಂದೂ ಗಟ್ಟಿಯಾಗಿರಲಿ.
# ಲಾಸ್ಟ್ ಪಂಚ್ #
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬುದು ನಾಣ್ಣುಡಿ ….ಆದರೆ ಮದುವೆಯ ಪ್ರಸ್ತಾಪ, ಪಶ್ಚಾತ್ತಾಪ , ಮನಸ್ತಾಪಗಳೆಲ್ಲವೂ ಭೂಲೋಕವೆಂಬ ನರಕದಲ್ಲಿಯೇ ಜರುಗುವುದು ವಾಸ್ತವದ ಕನ್ನಡಿ !
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
