ಕೆಲವು ಮೂಢರು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಸರಣೆಯ ಗೀಳಿಗೆ ಮುಗಿಬಿದ್ದು ತಮ್ಮತನ ಮರೆತು ವಿಚಿತ್ರ ವಿದೇಶಿ ಸಂಸ್ಕೃತಿಗೆ ಜೋತು ಬಿದ್ದು ಸ್ವಂತಿಕೆಯನ್ನು ಮರೆಯುತ್ತಿದ್ದಾರೆಂಬುದನ್ನು ಈ ಕಥಾ ಹಂದರ ಅತ್ಯಂತ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಕಾದಂಬರಿಗಾರ್ತಿ ಸಾಯಿಸುತೆ ಅವರ ‘ಮಧುರ ಆರಾಧನಾ’ ಕೃತಿಯ ಕುರಿತು ಲೇಖಕಿ ಸುಮಾ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮಧುರ ಆರಾಧನಾ
ಲೇಖಕರು: ಸಾಯಿಸುತೆ
ಪ್ರಕಾಶಕರು: ಸುಧಾ ಎಂಟರ್ ಪ್ರೈಸಸ್
ಪ್ರಕಟವಾದ ವರ್ಷ: ೧೯೯೩
ಬೆಲೆ:೧೫೦
ಪುಟಗಳು: ೧೮೬
ಭಾರತದ ಮಣ್ಣಿನ ಸೊಗಡಲ್ಲಿ ಸಂಸ್ಕೃತಿ, ಸದಾಚಾರ, ಅವಿನಾಭಾವ ಸಂಬಂಧಗಳು, ಆಚಾರ ವಿಚಾರಗಳು, ಸೂಕ್ಷ್ಮ ಸಂವೇದಾನಾತ್ಮಕ, ಭಾವನಾತ್ಮಕ ಭಾವಗಳು, ಸೌಹಾರ್ದಯುತ ಸಂಬಂಧಗಳ ತಂತು ಹೀಗೆ ಹಲವು ಅತ್ಯಮೂಲ್ಯ ವಿಷಯಗಳು ಅಡಕವಾಗಿದೆ. ಆದರೆ ಕೆಲವು ಮೂಢರು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಸರಣೆಯ ಗೀಳಿಗೆ ಮುಗಿಬಿದ್ದು ತಮ್ಮತನ ಮರೆತು ವಿಚಿತ್ರ ವಿದೇಶಿ ಸಂಸ್ಕೃತಿಗೆ ಜೋತು ಬಿದ್ದು ಸ್ವಂತಿಕೆಯನ್ನು ಮರೆಯುತ್ತಿದ್ದಾರೆಂಬುದನ್ನು ಈ ಕಥಾ ಹಂದರ ಅತ್ಯಂತ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.
ಇನ್ನು I love you ಎಂದು ಹೇಳಿದಾಕ್ಷಣವೇ ಪ್ರೀತಿ ಎಂದು ಭ್ರಮಿಸಿ ಪ್ರೀತಿ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳೋ ಯುವ ಜನತೆಗೆ, ಇಲ್ಲಾ ಮೈಮಾಟ ಪ್ರದರ್ಶಿಸುವುದು, ಸಿರಿವಂತಿಕೆ ಇವು ಪ್ರೀತಿ, ಪ್ರೇಮ ಬಾಂಧವ್ಯವನ್ನು ಹಿಡಿದಿಡುತ್ತದೆಂಬ ಕಲ್ಪನೆಯಲ್ಲಿರುವವರಿಗೆ ಈ ಕಾದಂಬರಿಯ ಪಾತ್ರಗಳು, ಸನ್ನಿವೇಶಗಳು, ಕಥಾಹಂದರ ಪ್ರೀತಿ ಒಂದು ಅನುಭೂತಿ, ಮನಸುಗಳ ಮಿಲನ,ವಿಭಿನ್ನ ವಾತಾವರಣದಲ್ಲಿ ಬೆಳೆದು ಆಲೋಚನೆಗಳಲ್ಲಿ ಭೇದವಿದ್ದರೂ ಸಂಸಾರದಲ್ಲಿ ಸಾಮರಸ್ಯ ಸಾಧ್ಯವಿದೆ ಎಂಬ ಸಂದೇಶ ಸೂಚ್ಯವಾಗಿ ಸಾಯಿಸುತೆಯವರ “ಮಧುರ ಆರಾಧನಾ” ಕಾದಂಬರಿ ನೀಡುತ್ತದೆ.

ಆತ್ಮೀಯ ಗೆಳತಿಯರಾದ ಸುಹಾಸಿನಿ ಮತ್ತು ಸ್ವಾತಿ ಖರೀದಿಗೆಂದು ನಗರಕ್ಕೆ ಆಟೋದಲ್ಲಿ ಹೊರಟು, ನಗರದ ಹೃದಯ ಭಾಗಕ್ಕೆ ಬಂದಿಳಿದಾಗ, ನಗರದಲ್ಲಿ ಗಲಭೆಯಾಗುತ್ತಿರುವುದರಿಂದ ಹತ್ತಿರದಲ್ಲಿದ್ದ ಸ್ವಾತಿಯ ಚಿಕ್ಕಮ್ಮ ಪೂರ್ಣಿಮಾ ಮನೆಗೆ ಬರುವುದರಿಂದ ಕಥೆ ಆರಂಭವಾಗುತ್ತದೆ. ಸ್ವಚ್ಛ, ಸರಳ,ಆತ್ಮೀಯ ವಾತಾವರಣದಲ್ಲಿ ಜೀವನದ ನಿಜವಾದ ಮೌಲ್ಯಗಳೊಂದಿಗೆ ಬೆಳೆದ ಸುಹಾಸಿನಿಗೆ ಬರೀ ಸಿರಿವಂತಿಕೆಯ ಡೌಲಿನ ಪ್ರದರ್ಶನವಿದ್ದು ಆತ್ಮೀಯತೆಯ ತಂತೇ ಇರದ ಪೂರ್ಣಿಮಾರ ಮನೆಯ ವಾತಾವರಣ ಹಿಡಿಸದಿರುವುದನ್ನು ಗೆಳತಿ ಸ್ವಾತಿಗೆ ನೇರವಾಗಿ ತಿಳಿಸುವಾಗ ಅಚಾನಕ್ಕಾಗಿ ನಾಯಕ ಶಶಾಂಕ್ ಕೇಳುವಂತಾಗುತ್ತದೆ. ಸ್ವಾತಿಯನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಾ, ಗೆಳೆಯ ಪೀಟರ್ ಇಬ್ಬರಿಂದಲೂ ತಿಳಿದ ಮಾಹಿತಿಯಿಂದ ಸುಹಾಸಿನಿಯೇ ತನ್ನ ಬಾಳಸಂಗಾತಿಯಾಗಿ ಬರಲು ಸೂಕ್ತವೆಂದು ಶಶಾಂಕ್ ನಿರ್ಧರಿಸುತ್ತಾನೆ.
ತಮ್ಮ ರಾಜಕೀಯ ಜೀವನದ ಉನ್ನತಿಗೆ ಮತ್ತು ತಮ್ಮ ಅಂತಸ್ತಿಗೆ ಸರಿ ಸಮನರಾದ ಮಂತ್ರಿ ಪಾಟೀಲರ ಮಗಳು ಬಿಂದುವನ್ನು ಶಶಾಂಕ್ನೊಂದಿಗೆ ಮದುವೆ ಮಾಡುವ ಯೋಜನೆ ಅವನ ತಂದೆಯದಾಗಿತ್ತು. ಆದರೆ ತನ್ನದೇ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಶಶಾಂಕ್ ಅವಳೊಂದಿಗೆ ಮದುವೆಯಾಗುವುದನ್ನು ನಿರಾಕರಿಸಿ, ತನ್ನ ನಿರ್ಧಾರ ತಂದೆಗೆ ಸ್ಪಷ್ಟಪಡಿಸಿದ. ಸುಹಾಸಿನಿಯ ತಂದೆ ಪೂರ್ಣಯ್ಯನವರ ಬಳಿ ತಾನು ಸುಹಾಸಿನಿ ಪ್ರೀತಿಸಿದ್ದಾಗಿ ದಾಖಲೆ ನೀಡಿ, ಅವರ ಮುಂದೆ ತನ್ನನ್ನು ಕ್ಷುಲ್ಲಕ ಕಾರಣ ನೀಡಿ ದೂರಾಗಿದ್ದಾಳೆಂದು ಸಾಬೀತು ಮಾಡುವಲ್ಲಿ ಶಶಾಂಕ್ ಯಶಸ್ವಿಯಾಗುತ್ತಾನೆ. ಶಶಾಂಕ ತಂದೆಯನ್ನು ನಂಬಿಸಿದ ಪರಿ, ಸುಳ್ಳಿನ ಮೂಲಕ ತನ್ನನ್ನು ಮೂರ್ಖಗೊಳಿಸಿದ್ದು ಸುಹಾಸಿನಿಯನ್ನು ಗೊಂದಲಕ್ಕೆ ತಳ್ಳುತ್ತದೆ.
ಈ ಮದುವೆ ಪೂರ್ಣಿಮಾ ಮತ್ತು ಶ್ರೀನಾಥರಿಗೆ ಒಲ್ಲದ ವಿಷಯ, ಆದರೆ ಮಗನಿಗಾಗಿ ಸುಮ್ಮನಾಗಿದ್ದರು. ಗೊಂದಲಗಳ ಗೂಡಿನಲ್ಲಿದ್ದ ಸುಹಾಸಿನಿ ತನಗೆ ಶಶಾಂಕನನ್ನು ಪ್ರೀತಿಸಿದ ವಿಷಯ ತಿಳಿಸದಿರುವುದರ ಬಗ್ಗೆ ಸ್ವಾತಿ ಹುಸಿಕೋಪ ಪ್ರಕಟಿಸುತ್ತಿದ್ದಳು. ಸುಹಾಸಿನಿಗೆ ಗೆಳತಿಯ ಮದುವೆಗೆ ಶಿವಮೊಗ್ಗಕ್ಕೆ ಹೋಗಿ ಬಂದ ನಂತರ ತಂದೆ ಶಶಾಂಕ್ ಹೇಳಿದ ಮಾತುಗಳನ್ನು ನಂಬಿದ್ದರಿಂದ ತನ್ನದೇ ಯೋಚನೆಯಲ್ಲಿದ್ದರಿಂದ ಗೆಳತಿಯ ಪ್ರಶ್ನೆಗೆ ಅವಳ ಬಳಿಯೇ ಉತ್ತರವಿರಲಿಲ್ಲಾ.
ತಂದೆಯ ಮಾತಿಗೆ ಒಪ್ಪಿದ ಸುಹಾಸಿನಿ ಶಶಾಂಕನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ಏಕಾಂತದಲ್ಲಿ ಶಶಾಂಕ್ ಅವಳು ಪ್ರಶ್ನೆ ಕೇಳುವ ಮೊದಲೇ ನಿನಗೆ ಕ್ರಮೇಣ ಅರ್ಥವಾಗುತ್ತದೆ, ಎಂದು ಎಲ್ಲಕ್ಕೂ ವಿರಾಮ ಹಾಕಿಬಿಡುತ್ತಾನೆ. ಅಲ್ಲದೇ ನಮ್ಮಿಬ್ಬರ ಮಧ್ಯದ ಈ ವಿಷಯಗಳು ಹೊರ ಜಗತ್ತಿಗೆ ತಿಳಿಯುವುದು ಬೇಡ ಎಂಬುದನ್ನು ತಿಳಿ ಹೇಳುತ್ತಾನೆ. ವಿದೇಶದಲ್ಲೇ ಓದಿದರೂ ಇತ್ತೀಚೆಗೆ ಭಾರತಕ್ಕೆ ಬಂದು ಪೂರ್ಣಿಮಾ ಸ್ಯೂಟಿಂಗ್ಸ್ ಜವಾಬ್ದಾರಿ ಹೊತ್ತ ಶಶಾಂಕ್ ಸುಹಾಸಿನಿಯನ್ನು ಪ್ರೀತಿಸಿದ್ದು ಯಾವಾಗ ಎಂಬುದೇ ಅವನ ಹೆತ್ತವರ, ಸುಹಾಳ ಗೆಳತಿ ಸ್ವಾತಿ, ಮಂತ್ರಿ , ಅವರ ಮನೆಯವರು, ಅವನ ಗೆಳತಿ ಬಿಂದು ಎಲ್ಲರಿಗೂ ಕಾಡುತ್ತಿದ್ದ ಯಕ್ಷ ಪ್ರಶ್ನೆ.
ಸುಹಾಸಿನಿ ತಂದೆ ಪೂರ್ಣಯ್ಯ ಅವಳ ಮದುವೆಯ ನಂತರ ಅಮೇರಿಕಾದಲ್ಲಿ ನೆಲೆಸಿದ್ದ ತನ್ನ ತಮ್ಮನ ಬಲವಂತಕ್ಕೆ ಅಲ್ಲಿ ನೆಲೆಸಲು ಹೊರಟು ಬಿಟ್ಟರು. ತಂದೆಯಿಂದ ದೂರಾದ ಕೆಲ ದಿನ ಮಂಕಾಗಿದ್ದ ಸುಹಾ ಕ್ರಮೇಣ ತನ್ನನ್ನು ಸಂಭಾಳಿಸಿಕೊಂಡು ಮನೆಯ ಬಗ್ಗೆ ಗಮನ ಹರಿಸ ತೊಡಗಿದಳು. ಮನೆಯ ಯಜಮಾನ ಶ್ರೀನಾಥ್ ತಮ್ಮ ರಾಜಕೀಯದಲ್ಲಿ ಮಗ್ನವಾದರೆ, ಮಡದಿ ಪೂರ್ಣಿಮಾ ಸಂತೋಷಕೂಟಗಳು, ದೇಹ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ವ್ಯಸ್ಥರು.ಇನ್ನು ಈ ದಂಪತಿಗಳ ಮತ್ತೊಬ್ಬ ಸಂತಾನ ವಿಶಾಂಕ್ ಇರುವುದು ತಿಳಿದಿದ್ದೇ ಸುಹಾಸಿನಿಗೆ ವಿಚಿತ್ರ ಸಂದರ್ಭದಲ್ಲಿ.
ಈ ವಿಷಯಗಳ ಅರಿವು ಸುಹಾಸಿನಿಗೆ ವ್ಯವಸ್ಥಿತವಾಗಿ ಅಸ್ತವ್ಯಸ್ಥವಾದ ಪೂರ್ಣಿಮಾ ಪ್ಯಾಲೆಸಿನ ಚಿತ್ರಣ ನೀಡುತ್ತದೆ. ಕೊಂಚ ಭಿನ್ನ ಎಂದರೆ ಶಶಾಂಕ್ ವಿದೇಶದಲ್ಲಿ ಓದಿದ್ದರೂ ತನ್ನ ಬಾಲ್ಯದಲ್ಲಿ ತಾತನ ಸಂಸ್ಕಾರದಲ್ಲಿ ಬೆಳೆದಿದ್ದರಿಂದ ಓದು ಮುಗಿಸಿ ಇಲ್ಲಿರಲು ವಾಪಾಸ್ ಬಂದಿದ್ದ. ಶಶಾಂಕನ ತಮ್ಮ ವಿಶಾಂಕ್ ವಿದೇಶದಲ್ಲಿ ಓದುತ್ತಿದ್ದು ಈ ಮನೆಯವರೊಂದಿಗೆ ಬೆರೆತು ಕಲೆಯದಿರುವುದು ಅವಳಿಗೆ ಆಶ್ಚರ್ಯ. ತಂದೆ ಒಬ್ಬರೇ ಸಾಕಿದರೂ ಸುಹಾಳಿಗೆ ಬಂಧುತ್ವದ ಆಳ, ಸಂಬಂಧಗಳ ಸವಿ ತಿಳಿದಿತ್ತು. ಆದರೆ ಈ ಮನೆಯಲ್ಲಿ ಎಲ್ಲರೂ ಇದ್ದರೂ ಸಂಬಂಧಗಳಿಗೆ ಕೊಂಡಿಯೇ ಇಲ್ಲದೆ ವ್ಯಾವಹಾರಿಕವಾಗಿದ್ದಂತಿತ್ತು.

ಈ ಬಂಗ್ಲೆಯಲ್ಲಿ ಮತ್ತೊಂದು ವಿಚಿತ್ರ ಎನ್ನುವುದಕ್ಕಿಂತ ಅತಿರೇಕವೆಂದರೆ ಪೂರ್ಣಿಮಾರ ಸಹಾಯಕಿಯಾಗಿದ್ದ ಎಲಿನಾಳ ಸಾರ್ವಭೌಮತ್ವ. ಪೂರ್ಣಿಮಾರ ಬಲಹೀನತೆಗಳನ್ನು ಉಪಯೋಗಿಸಿಕೊಂಡು, ಶ್ರೀನಾಥ್ ಆಗಾಗ ಮನೆಗೆ ಬಂದಾಗ ವಿಧೇಯತೆ ನಟಿಸುತ್ತಾ ಮನೆ ಆಡಳಿತ ಎಲಿನಾ ತನ್ನ ಕೈಯಲ್ಲಿಟ್ಟುಕೊಂಡಿದ್ದಳು. ಅಲ್ಲದೇ ಪೂರ್ಣಿಮಾರನ್ನು ತನಗೆ ಬೇಕಾದಂತೆ ಬಳಸಿಕೊಂಡು, ಅವರ ಆಲೋಚನಾ ಶಕ್ತಿಯನ್ನೇ ಕಸಿದುಕೊಂಡಿದ್ದಳು. ಪ್ರತಿಯೊಂದು ವಿಚಾರಗಳು ಸುಹಾಸಿನಿಯ ಗಮನಕ್ಕೆ ಬಂದ ನಂತರ ಬುದ್ಧಿವಂತಿಕೆಯಿಂದ, ಸಹನೆಯಿಂದ ಸುಹಾಸಿನಿ ಮನೆಯ ಒಂದೊಂದೇ ಅವ್ಯವಸ್ಥೆಗಳನ್ನು ಸರಿಪಡಿಸುತ್ತಾ ಸಾಗುತ್ತಾಳೆ.
ಹುಟ್ಟಿನಿಂದ ಹೆತ್ತವರ ಪ್ರೀತಿ ಅರಿಯದೇ ಆಯಾರ ಬಳಿ ಬೆಳೆದ, ಬರೀ ವ್ಯವಹಾರಿಕವಾಗಿ ಮನೆಯವರೊಡನೆ ಸಂಬಂಧವಿಟ್ಟುಕೊಂಡಿದ್ದ ವಿಶಾಂಕ್ ಮನ ಗೆಲ್ಲುವಲ್ಲಿ ಸುಹಾಸಿನಿ ಯಶಸ್ವಿಯಾಗುತ್ತಾಳೆ. ನಂತರ ಅಮೇರಿಕಾಗೆ ತೆರಳಿದ ಮೇಲೂ ಅತ್ತಿಗೆಯ ವಾತ್ಸಲ್ಯಕ್ಕೆ ಮನಸೋತು ಸುಹಾಸಿನಿಗೆ ವಿಶಾಂಕ್ ಆತ್ಮೀಯನಾಗುತ್ತಾನೆ. ಸ್ವಾತಿ ಸುಹಾಸಿನಿಯನ್ನು ನೋಡಲು ಬಂದಾಗಲೆಲ್ಲಾ ಅವರಿಬ್ಬರ ಪ್ರೇಮ ಮೂಡಿದ ಸಂದರ್ಭದ ಬಗ್ಗೆ ವಿಚಾರಿಸಿ ಕಾಡುತ್ತಿರುತ್ತಾಳೆ. ಮದುವೆಯಾದ ನಂತರದ ಕೆಲ ದಿನಗಳಲ್ಲಿ ಶಶಾಂಕನ ಮನಃ ಸ್ಥಿತಿ, ಅವನು ತನ್ನನ್ನು ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಸುಹಾಸಿನಿಗೆ ಸುಮಾರಾದ ಉತ್ತರ ಹೊಳೆವಂತಾಗುತ್ತದೆ.
ಈ ಬೆಳವಣಿಗೆಗಳ ಮಧ್ಯೆ ಎಮ್.ಎಲ್.ಎ ಸೀಟು ಕೊಡಿಸಲು ಪಾಟೀಲರ ಕೋಪ ತಣಿಸಲು ಶ್ರೀನಾಥ್ ಶಶಾಂಕ್ ಮತ್ತು ಬಿಂದುವಿನ ಮದುವೆ ಮಾಡುವ ಯೋಚನೆಯಲ್ಲಿರುವ ವಿಷಯ ತಲೆ ಎತ್ತಿ ನಿಲ್ಲುತ್ತದೆ. ಇದು ಅವರಿವರಿಂದ ತಿಳಿದ ಸ್ವಾತಿಯ ತಾಯಿ ಪಾರ್ವತಿ ಶಶಾಂಕನನ್ನು ಮನೆಗೆ ಕರೆಸಿ, ಇದರ ಬಗ್ಗೆ ತಮ್ಮ ಅನುಮಾನ ಪರಿಹರಿಸಿಕೊಳ್ಳುತ್ತಾರೆ. ಶಶಾಂಕನೊಂದಿಗೆ ಸುಹಾಸಿನಿ ಹೋದ ಔತಣ ಕೂಟದಲ್ಲಿ ಭೇಟಿಯಾದ ಬಿಂದು ಅವಳ ಮನದಲ್ಲಿ ಅನುಮಾನದ ಬೀಜ ಬಿತ್ತಲು ಹೋಗುತ್ತಾಳೆ. ಆದರೆ ಸಮಯೋಚಿತವಾಗಿ ಆ ಸಂದರ್ಭವನ್ನು ಸುಹಾಸಿನಿ ಸಂಭಾಳಿಸಿದ ಪರಿ ಅರಿಯುವ ಶಶಾಂಕ್ ತನ್ನ ಮಡದಿಯ ಧೃಡತೆಯ ಬಗ್ಗೆ ಹೆಮ್ಮೆ ಪಡುವಂತಾಗುತ್ತದೆ.
ಈ ವಿದ್ಯಮಾನಗಳ ನಡುವೆ ಯಾವುದೋ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಶ್ರೀನಾಥ್ ಅವರಿಗೆ ಹೃದಯಾಘಾತವಾಗಿ, ಆಸ್ಪತ್ರೆಗೆ ಸೇರುತ್ತಾರೆ. ಶಶಾಂಕ್ ಮತ್ತು ಸುಹಾಸಿನಿ ಇಬ್ಬರೂ ಸೇರಿ ಶ್ರೀನಾಥರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದರೆ, ಪೂರ್ಣಿಮಾ ವಿಚಿತ್ರವಾಗಿ ಈ ಸನ್ನಿವೇಶಕ್ಕೆ ಪ್ರತಿಕ್ರಯಿಸುತ್ತಾರೆ. ಪೂರ್ಣಿಮಾರ ಅತಿರೇಕದ ವರ್ತನೆ, ಅರ್ಥವಿಲ್ಲದ ಪ್ರಲಾಪಗಳನ್ನು ಕಂಡ ಅಕ್ಕ ಪಾರ್ವತಿ ಮುಲಾಜಿಡದೆ ದಂಡಿಸುವಂತೆ ಮಾತಾಡುತ್ತಾರೆ.
ಸುಹಾಸಿನಿ ಶಶಾಂಕನ ಸಹಕಾರದಿಂದ ಎಲಿನಾಳನ್ನು ಮನೆಯ ಆಡಳಿತದಿಂದ ಮೂಲೆ ಗುಂಪಾಗಿಸಿದರೂ, ಪೂರ್ಣಿಮಾರನ್ನು ಎಲಿನಾಳ ಪ್ರಭಾವದಿಂದ ಹೊರ ತರಲಾಗಲಿಲ್ಲಾ. ಎಲಿನಾ ಪೂರ್ಣಿಮಾರ ದೌರ್ಬಲ್ಯತೆ ಅರಿತಿದ್ದ ಕಾರಣ ಅವರನ್ನು ತನಗೆ ಬೇಕಾದಂತೆ ಬಳಸಿಕೊಂಡು ಆ ಮನೆಯಲ್ಲಿ ನೆಲೆಯೂರಿದ್ದಳು. ಆದರೆ ಇಂತಹಾ ಆಳವಾಗಿ ಬೇರೂರಿದ್ದ ಎಲಿನಾಳನ್ನು ಗಂಡನ ಸಹಾಯದಿಂದ ಚಾಣಾಕ್ಷತನದಿಂದ ಸುಹಾಸಿನಿ ಮನೆಯಿಂದ ಹೇಗೆ ದೂರಾಗಿಸುತ್ತಾಳೆ ಎಂಬುದನ್ನು ಕಾದಂಬರಿ ಓದಿಯೇ ತಿಳಿಯಬೇಕು.
ಸ್ವಾತಿ ಮತ್ತು ಪೀಟರ್ ಇಬ್ಬರಿಂದ ಶಶಾಂಕ್ ಸುಹಾಸಿನಿಯ ಬಗ್ಗೆ ಯಾವೆಲ್ಲಾ ವಿಷಯಗಳನ್ನರಿತ??? ಒಂದೇ ಬಾರಿ ಭೇಟಿಯಾಗಿದ್ದ ಸುಹಾಸಿನಿ ಮತ್ತು ತಾನು ಪ್ರೀತಿಸಿದ್ದೇವೆಂದು ಪೂರ್ಣಯ್ಯನವರ ಬಳಿ ಶಶಾಂಕ್ ಸಾಬೀತು ಪಡಿಸಿದ್ದಾದರೂ ಹೇಗೆ???ಸುಹಾಸಿನಿ ಗೊಂದಲದಿಂದಲೇ ಶಶಾಂಕನನ್ನು ಮದುವೆಯಾಗಿ ನಂತರ ಆ ಗೊಂದಲಗಳಿಗೆ ಶಶಾಂಕನಿಂದ ಉತ್ತರ ಪಡೆದಳೇ???
ಸುಹಾಸಿನಿ ಮದುವೆಯಾಗಿ ಬಂದಾಗ ಪೂರ್ಣಿಮಾ ಪ್ಯಾಲೇಸ್ ಯಾವ ರೀತಿಯ ಅವ್ಯವಸ್ಥೆಯಿಂದ ಕೂಡಿತ್ತು???ಯಾವ ರೀತಿಯಿಂದ ಅವ್ಯವಸ್ಥೆಯ ಗೂಡಾಗಿದ್ದ ಪೂರ್ಣಿಮಾ ಪ್ಯಾಲೇಸನ್ನು ವ್ಯವಸ್ಥಿತವಾಗಿಸುವಲ್ಲಿ ಸುಹಾಸಿನಿ ಯಶಸ್ವಿಯಾದಳು???ಅದಕ್ಕೆ ಪತಿ ಶಶಾಂಕ್ ಯಾವ ರೀತಿ ಸಹಕರಿಸಿದ???

ಸ್ವಾತಿ ಸುಹಾಸಿನಿಯನ್ನು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯಿತೇ??? ಸ್ವಾತಿಯ ಬದುಕಿನಲ್ಲಿ ಬಂದ ಫಾಲ್ಗುಣ ಯಾರು, ಅವನು ಕಾದಂಬರಿಯಲ್ಲಿ ಯಾವ ಕಾರಣಕ್ಕೆ ಬಂದ??? ಶಶಾಂಕ್ ಮರುಮದುವೆಯ ವಿಷಯ ತಿಳಿದು, ಸುಹಾಳ ದಾಂಪತ್ಯದ ಬಗ್ಗೆ ಕಳವಳಗೊಂಡ ಗೃಹಿಣಿ ಶಶಾಂಕ್ ದೊಡ್ಡಮ್ಮ ಪಾರ್ವತಿ ಯಾವ ಸಂದೇಹಗಳನ್ನು ಅವನಿಂದ ಪರಿಹರಿಸಿಕೊಂಡರು???
ಗಂಡನಿಗೆ ಹೃದಯಾಘಾತವಾದಾಗ ಪೂರ್ಣಿಮಾ ಅತಿರೇಕದ ವರ್ತನೆ ಹೇಗಿತ್ತು??? ಹೃದಯಾಘಾತಕ್ಕೆ ಈಡಾದ ತಂದೆಗಾಗಿ ಶಶಾಂಕ್ ಸುಹಾಸಿನಿಯಿಂದ ದೂರವಾಗುತ್ತಾನಾ??? ಮದುವೆಯಾದ ನಂತರ ಸುಹಾಸಿನಿ ಶಶಾಂಕನ ಯಾವ ವಿಚಾರಧಾರೆಗಳಿಂದ ಪ್ರಭಾವಿತಳಾದಳು???
ಎಲೀನಾಳನ್ನು ಯಾವ ರೀತಿಯಲ್ಲಿ ಮಟ್ಟ ಹಾಕಿ ಪೂರ್ಣಿಮಾ ಪ್ಯಾಲೇಸಿನಲ್ಲಿ ಅವಳ ಸಾರ್ವಭೌಮತ್ವವನ್ನು ಅಮೂಲಾಗ್ರವಾಗಿ ಸುಹಾಸಿನಿ ಕೊನೆಗೊಳಿಸಿದಳು??? ಪೂರ್ಣಿಮಾರನ್ನು ಎಲೀನಾಳ ಪ್ರಭಾವದಿಂದ ಹೊರ ತರವಲ್ಲಿ ಶಶಾಂಕ್ ಮತ್ತು ಸುಹಾಸಿನಿ ಸಂಪೂರ್ಣವಾಗಿ ಸಫಲರಾಗುವರೇ??
ಈ ಅಪರೂಪದ ಜೋಡಿಗಳಲ್ಲಿ ಬಾಂಧವ್ಯದ ಮಧುರತೆ ಮೂಡಿದ್ದರೂ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೂ…ಅದು ಆರಾಧನೆ, ಅರ್ಪಣೆಯಾಗಿ ಬದಲಾಗಲು ಸಾಧ್ಯವಾಯಿತಾ???ಇಂತಹ ಕುತೂಹಲಗಳು ಕಾದಂಬರಿ ಓದಿನಿಂದ ತಣಿಯುತ್ತದೆ.
ಈ ಕಾದಂಬರಿಯಲ್ಲಿ ಶಶಾಂಕ್ ಮತ್ತು ಸುಹಾಸಿನಿ ಇಬ್ಬರ ಪಾತ್ರಗಳೂ ಅಪರೂಪದ ಅನುಭೂತಿ ತರುತ್ತದೆ. ಇಂದಿನ ಕಾಲದಲ್ಲಿ ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ಸ್ವದೇಶ ಮರೆಯುವ ಯುವ ಪೀಳಿಗೆಗೆ ಮಾದರಿಯಂತಿರುವ ಶಶಾಂಕನು ಭಾರತೀಯತೆಗೆ ನೀಡುವ ಪ್ರಾಮುಖ್ಯತೆ ಹೆಮ್ಮೆ ಎನಿಸಿದರೆ…ಬರೀ ಆಡಂಬರಕ್ಕೆ ಜೋತು ಬಿದ್ದ ಪೂರ್ಣಿಮಾ ಬಂಗ್ಲೆಯನ್ನು ಅಪ್ಪಟ ಜವಾಬ್ದಾರಿಯುತ ಗೃಹಿಣಿಯಾಗಿ ನಂದನವನವಾಗಿಸುವ ಸುಹಾಸಿನಿ ಆದರ್ಶ ಅನುಕರಣೇಯವೇ ಸೈ.ಪ್ರೀತಿಸಿದ್ದೇವೆಂದು ಮದುವೆಯಾದ ಪೂರ್ಣಿಮಾ ಮತ್ತು ಶ್ರೀನಾಥ್ ಸಮಯ ಕಳೆದಂತೆ, ಮಕ್ಕಳು ದೊಡ್ಡವರಾದ ಮೇಲೆ ಮುಖ ತಿರುಗಿಸಿ ಓಡಾಡುವಂತಾಗಿ ಸಂಸಾರದಲ್ಲಿ ನಂಬಿಕೆ ಕಳೆದುಕೊಳ್ಳುವಂತಾದರೆ?? ಎಂಬ ಪ್ರಶ್ನೆ ಕಾಡುತ್ತದೆ.
ಪ್ರೀತಿಯೆಂಬ ಸುಂದರ ಅನುಭೂತಿ ಮನದಲ್ಲಿ ಮೊಗ್ಗೊಡೆದು ನಿಧಾನವಾಗಿ ಹೂವಾಗಿ ಅರಳಿ, ಸಂಜೆಯ ತಂಪಲ್ಲಿ ಕಂಪು ಸೂಸುವ ಮಲ್ಲಿಗೆಯ ಸುಗಂಧದಂತೆ ಇರುವ ಶಶಾಂಕ್, ಸುಹಾಸಿನಿಯ ದಾಂಪತ್ಯದ ಸವಿಗಾನವಿರುವ ಸಾಯಿಸುತೆಯವರ ಕಾದಂಬರಿಯೇ “ಮಧುರ ಆರಾಧನ”. ಜೀವನದಲ್ಲಿ ನಡೆಯುವ ಕೆಲವು ಸಣ್ಣ ಸಣ್ಣ ಘಟನೆಗಳು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿ, ಬದುಕಿನ ಮಹತ್ತರ ತಿರುವಿಗೆ ಕಾರಣವಾಗಿಬಿಡುತ್ತದೆ ಎಂಬುದನ್ನು ರುಜುವಾತು ಮಾಡೋ ಸರಳವಾದ ಕಾದಂಬರಿಯಾಗಿದೆ ಎನ್ನುವ ಭಾವ ಮೂಡಿಸಿತು.ಸಿಕ್ಕರೆ ಓದಿ ನೋಡಿ.
- ಸುಮಾ ಭಟ್
