‘ಮಾಧುರಿಯ ಮಿಡಿತಗಳು’ ಕೃತಿ ಪರಿಚಯ

ಸರ್ವ ಮಂಗಳ ಜಯರಾಮ್ ಅವರ ಗಜಲ್ ಸಂಕಲನ ಇವರ ನಾಲ್ಕನೆಯ ಕೃತಿ ‘ಮಾಧುರಿಯ ಮಿಡಿತಗಳು’ ಗಜಲ್ ಸಂಕಲನ. ಇದರಲ್ಲಿ 54 ವೈವಿಧ್ಯಮಯ ಗಜಲ್ ಗಳ ಗುಚ್ಛವಾಗಿದೆ. ಈ ಕೃತಿಯ ಕುರಿತು ಅನುಸೂಯ ಯತೀಶ್ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…

“ಹಲವು ಭಾವಗಳ ಬಣ್ಣದೋಕುಳಿಯಲಿ ಮಿಂದ ಮಾಧುರಿಯ ಗಜಲ್ ಗಳು”

ಕನ್ನಡ ಸಾಹಿತ್ಯದಲ್ಲಿ ಕಥೆ, ಕವನ, ಕಾದಂಬರಿ, ಹನಿ ಚುಟುಕು, ಸೇರಿದಂತೆ ಹತ್ತು ಹಲವು ಪ್ರಕಾರಗಳಿದ್ದು ಅವುಗಳಲ್ಲಿ ಕಾಲಕಾಲಕ್ಕೆ ಉತ್ಕೃಷ್ಟವಾದ ಫಸಲು ತೆಗೆಯುತ್ತಿದ್ದರೂ ಹೊರಗಿನಿಂದ ಬರುವ ಯಾವ ಪ್ರಕಾರವನ್ನು ತಿರಸ್ಕರಿಸುವ ಮನೋಭಾವ ಕನ್ನಡಿಗರದಲ್ಲ. ನಮ್ಮ ನೆಲ ಮೂಲದ ಸಾಹಿತ್ಯ ಶಿಶುಗಳನ್ನು ಲಾಲಿಸುತ್ತಾ ಅನ್ಯದೇಶಿಯ ಸಾಹಿತ್ಯ ಕೂಸುಗಳನ್ನು ಸ್ವಾಗತಿಸಿ ಪೋಷಿಸಿ ಸಂಭ್ರಮಿಸುವ ಹೃದಯವಂತಿಕೆ ಕನ್ನಡಿಗರಿಗಲ್ಲದೆ ಮತ್ಯಾರಿಗೆ ಇರಲು ಸಾಧ್ಯ. ಅರಬ್ ಮೂಲದಿಂದ ಉರ್ದು ಭಾಷೆ ಪ್ರವೇಶಿಸಿ ಹಲವು ದೇಶ ಭಾಷೆಗಳಲ್ಲಿ ಘೋಷಿಸಲ್ಪಟ್ಟು ಇದೀಗ ಕನ್ನಡ ಸಾರಸ್ವತ ಲೋಕ ಪ್ರವೇಶಿಸಿ ಕನ್ನಡ ಕಾವ್ಯಾಸಕ್ತರನ್ನು ಕುಣಿಸುತ್ತಿರುವ ಸಾಹಿತ್ಯ ಪ್ರಕಾರವೆಂದರೆ ಗಜಲ್. ಈ ಗಜಲ್ ಬಹುವಾಗಿ ಸ್ತ್ರೀ ಸಂವೇದನೆಗಳ ಕಾವ್ಯ ಪ್ರಕಾರವಾಗಿದೆ. ತನ್ನ ಮೃದು ಮಧುರತೆ ಮತ್ತು ನವಿರು ಸ್ಪರ್ಶದಿಂದ ಬಹುಬೇಗ ಕಾವ್ಯ ಪ್ರೇಮಿಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ಅವರ ಮನವನ್ನು ಆವರಿಸುವುದು ಇದರ ಪ್ರಮುಖ ಲಕ್ಷಣವಾಗಿದೆ.

ಗಜಲ್ ಎಂದರೇ ಹೃದಯಗಳ ಮಿಡಿತ, ಭಾವನೆಗಳ ತಕದಿಮಿತ, ಕನಸು ನನಸುಗಳ ಮೌನ ಮೆರವಣಿಗೆ, ಪ್ರೇಮಿಗಳ ಪಿಸುಮಾತು, ಶಬ್ದ ನಿಶ್ಯಬ್ದಗಳ ಅಭಿವ್ಯಕ್ತಿಯಾಗಿದೆ.
ಇಂತಹ ವಿಶಾಲ ಮನೋಭಾವದಿಂದ ಕನ್ನಡಕ್ಕೆ ಬರಮಾಡಿಕೊಂಡು ಉರ್ದು ಗಜಲ್ ರಾಣಿಯನ್ನು ಬೊಗಸೆಯಲ್ಲಿ ತುಂಬಿಸಿಕೊಂಡು ನಿಷ್ಠೆ ಬದ್ಧತೆ ಶ್ರದ್ಧೆ ಆಸಕ್ತಿ ಪ್ರಾಮಾಣಿಕತೆಯಿಂದ ಧ್ಯಾನಿಸಿ,ಆರಾದಿಸಿದ್ದರ ಫಲವಾಗಿ ಗಜಲ್ ಸಾಹಿತ್ಯ ಇಂದು ಕರುನಾಡಿನ ಮನೆ ಮನಗಳಲ್ಲಿ ತೊರೆಯಾಗಿ ಹರಿಯುತ್ತಿದೆ. ಇಂತಹ ಗಜಲ್ ಮೋಹಕ್ಕೆ ಸಿಲುಕಿ ಗಜಲ್ ಗೋಯಿ ಮಾಡುತ್ತಿರುವವರ ಸಂಖ್ಯೆ ಇಂದು ಯಥೇಚ್ಛವಾಗಿದೆ. ಅಂತಹ ಅನೇಕ ಗಜಲ್ ಗೋ ಗಳ ಪಟ್ಟಿಯಲ್ಲಿ ಇದೀಗ ಹೊಸ ಸೇರ್ಪಡೆ ಶ್ರೀಮತಿ ಸರ್ವ ಮಂಗಳ ಜಯರಾಮ್. ಸರ್ವಮಂಗಳ ಜಯರಾಮ್ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತ್ಯ ರಚನೆ ಗೈಯ್ಯುತ್ತಿದ್ದಾರೆ. ಇವರು ಈಗಾಗಲೇ ‘ಕಾವ್ಯ ಕುಸುರಿ’ ಕವನ ಸಂಕಲನ, ‘ಕಥಾ ಸಿರಿ’ ಕಥಾ ಸಂಕಲನ, ‘ಗುಲ್ಮೋಹರ್’ ಲೇಖನಗಳ ಸಂಕಲನವನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಈಗ ‘ಮಾಧುರಿಯ ಮಿಡಿತಗಳು’ ಗಜಲ್ ಸಂಕಲನ ಇವರ ನಾಲ್ಕನೆಯ ಕೃತಿಯಾಗಿದೆ. ಆ ಮೂಲಕ ಬಹು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಲೇಖಕಿಯಾಗಿದ್ದಾರೆ.

‘ಮಾಧುರಿಯ ಮಿಡಿತಗಳು’ ಗಜಲ್ ಸಂಕಲನವು 54 ವೈವಿಧ್ಯಮಯ ಗಜಲ್ ಗಳ ಗುಚ್ಛವಾಗಿದೆ. ಇಲ್ಲಿ ಬಹುತೇಕ ಗಜಲ್ ಗಳು ಜುಲ್ ಕಾಫಿಯ ಗಜಲ್ ಗಳಾಗಿದ್ದು ಅಲ್ಲಲ್ಲಿ ಆಜಾದ್ ಗಜಲ್, ಮುರದ್ದಫ್ ಗಜಲ್, ಗೈರ್ ಮುರದ್ಧಫ್ ಗಜಲ್ ಗಳು ಕಾಣಸಿಗುತ್ತವೆ. ಇಲ್ಲಿನ ಗಜಲ್ ಗಳು ಐದು ಅಶಅರ್ ಗಳನ್ನು ಹೊಂದಿದ್ದು ಮಕ್ತಾದ ಮಿಸ್ರಾ ಎ ಊಲಾ ಮತ್ತು ಮಿಸ್ರಾ ಎ ಸಾನಿ ಗಳೆರಡರಲ್ಲೂ ‘ಮಾಧುರಿ’ ಎಂಬ ತಖಲ್ಲುಸ್ ಅನ್ನು ಪ್ರಯೋಗಿಸಿದ್ದಾರೆ. ಆದಾಗ್ಯೂ 14, 17, 18 ಹಾಗೂ 52 ನೇ ಗಜಲ್ ಗಳು ತಖಲ್ಲುಸ್ ರಹಿತವಾಗಿವೆ.

ಗಜಲ್ ಹಾಡುಗಬ್ಬ ಕಾವ್ಯ ಪ್ರಕಾರವಾಗಿದ್ದು ಸಂಗೀತ ಸಂಯೋಜಿಸುವಂತಿರಬೇಕು. ಸರ್ವಮಂಗಳ ಅವರ ಗಜಲ್ ಗಳು ಗೇಯತೆಯ ಸ್ವರೂಪವನ್ನು ಹೊಂದಿದ್ದು ಈ ಗಜಲ್ ಗಳನ್ನು ಸುಲಭವಾಗಿ ಹಾಡಬಹುದು ಹಾಗೂ ವಾಚಿಸಲೂಬಹುದು. ಗಜಲ್ ಕಸುಬುದಾರಿಕೆಯಲ್ಲಿ ಅತ್ಯಂತ ಸರಳವಾದ ರೂಪಕಗಳು ಮತ್ತು ಪ್ರತಿಮೆಗಳನ್ನು ಬಳಸಿದ್ದಾರೆ. ಈ ಗಜಲ್ ಗಳನ್ನು ಗಜಲ್ಕಾರ್ತಿ ರಚಿಸುವಾಗ ಭಾವ ಪರವಶವಾಗಿ ಕಾವ್ಯದೊಳಗೆ ಈಜಿದ್ದಾರೆ ಎಂಬ ಭಾವ ಮೂಡುತ್ತದೆ.

ಗಜಲ್ ಸಾಹಿತ್ಯಕ್ಕೆ ನಿಯಮಗಳ ಬಂಧನವಿದೆ. ಅದೇ ಚೌಕಟ್ಟಿನಲ್ಲಿ ಕಾವ್ಯ ಒಡಮೂಡಬೇಕು‌. ಜೊತೆಗೆ ಭಾವಗಳು ಢಾಳಾಗದಂತೆ ಎಚ್ಚರ ವಹಿಸಬೇಕು. ಇದು ಗಜಲ್ ಗೋ ಅವರುಗಳಿಗೆ ದೊಡ್ಡ ಸವಾಲೆ ಸರಿ. ಈ ದಾರಿಯಲ್ಲಿ ಕ್ರಮಿಸುವಾಗ ಗಜಲ್ ಗೋ ಅವರು ಮಿಸರೈನ್ ಗಳನ್ನು ಸುಂದರವಾಗಿ ಕಟ್ಟಿದ್ದಾರೆ. ಇವು ಕೆಲವು ಕಡೆ ಪರಸ್ಪರ ಪೂರಕವಾಗಿಯೂ, ಮತ್ತಷ್ಟು ಕಡೆ ಪರಸ್ಪರ ವಿರೋಧವಾಗಿಯು ಜೋಡಿಸಲ್ಪಟ್ಟಿದ್ದು ಒಂದರೊಳಗೊಂದು ಸೇರ್ಪಡೆಯಾಗದೇ ಗಜಲ್ ನಾ ತೂಕವನ್ನು ‌ಹೆಚ್ಚಿಸಿವೆ. ಗಜಲ್ ನ ಉದಯ ಅಂದರೇ ಮತ್ಲಾ ಇಡೀ ಗಜಲ್ ನಾ ಆಶಯವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಗಜಲ್ ನ ಅಸ್ತಂಗತ ಅಂದರೆ ಮಕ್ತಾ ಕೂಡ ದನಿ ಪೂರ್ಣವಾಗಿ ಬಳಕೆಯಾಗಿದೆ. ಕಾಫಿಯಾ ಗಳನ್ನು ಚೆನ್ನಾಗಿ ಜೋಡಿಸಿಕೊಂಡ ಗಜಲ್ ಗಳ ಸೊಬಗು ಹೆಚ್ಚಾಗಿದೆ.

ಈ ‘ಮಾಧುರಿಯ ಮಿಡಿತಗಳು’ ಹೊತ್ತಿಗೆಯ ಪ್ರಾರಂಭದ ಗಜಲ್ ಗಳು ಪ್ರೀತಿ, ಪ್ರೇಮ, ಅಗಲಿಕೆ ಮತ್ತು ವಿರಹದ ಭಾವದಲ್ಲಿ ಮೂಡಿಬಂದಿದ್ದು, ತದ ನಂತರ ಮಾತೃ ಪ್ರೇಮ, ನೈತಿಕ ಮೌಲ್ಯಗಳ ಕುರಿತ ಸಮಾಜದ ಡೋಂಗಿತನ, ಅವ್ಯವಸ್ಥೆಯ ಮುಖವಾಡಗಳು, ಬಡವರ ಅಸಹಾಯಕತೆ, ಬಲಿಷ್ಠರ ದಬ್ಬಾಳಿಕೆ, ಆಧುನಿಕತೆಯೊಂದಿಗೆ ಬದುಕಿನ ಸಂಘರ್ಷ, ನಿರ್ಗತಿಕರ ಬದಲಾಗದ ಆರ್ಥಿಕ ಪರಿಸ್ಥಿತಿಗಳು ಅನಾವರಣಗೊಂಡಿವೆ. ಸಮಾಜಕ್ಕೆ ಮಾರಕವಾದ ದ್ವೇಷ, ಅಸೂಯೆ ಮತ್ಸರಗಳ ಅಟ್ಟಹಾಸ, ರೈತನ ಪ್ರಗತಿ ಕಾಣದ ಬದುಕು ಬವಣೆ, ಕಾಂಚಾಣದ ಹಿಡಿತ, ಭಾರತಾಂಬೆ ಮತ್ತು ಕನ್ನಡಾಂಬೆ ವರ್ಣನೆ, ಭಾವೈಕ್ಯತೆ, ಪ್ರಜಾಪ್ರಭುತ್ವದ ಬೇರುಗಳ ಸಡಿಲಿಕೆ, ಕೃಷ್ಣನ ಪ್ರೇಮಾರಾಧನೆ, ಸಖಿಯ ಮೋಹಕತೆಯ ವರ್ಣನೆ, ಹಸಿವಿನ ಆರ್ಥನಾದ, ಸಮಯ ಸಾಧಕರ ಕುತಂತ್ರಗಳು, ಬೆಲೆ ಏರಿಕೆಯ ಬಿಸಿ, ಜಾಲತಾಣಗಳ ಪ್ರಭಾವಳಿ, ಕವಿತೆ ಮೂಡುವ ಘಳಿಗೆ, ಕನಸಿನ ಭಾರತದ ಹಂಬಲ ಇವೇ ಮೊದಲಾದ ವಸ್ತುಗಳು ಕಾವ್ಯದಲ್ಲಿ ಹದವಾಗಿ ಮೆದುಗೊಂಡು ಸುಂದರವಾದ ಗಜಲ್ ಗಳಾಗಿ ರೂಪ ತಾಳಿವೆ.

ಇವು ಅರ್ಥ ವೈವಿಧ್ಯತೆಯಿಂದ ಕೂಡಿದ್ದು, ಅವುಗಳ ಹರವು ಕೂಡ ದೊಡ್ಡದಿದೆ. ಸರಳ ಪದಗಳ ಬಳಕೆಯು ಓದುಗರ ಹೃದಯವನ್ನು ಬಹುಬೇಗ ತಟ್ಟುತ್ತದೆ. ಇಲ್ಲಿರುವ ಗಜಲ್ ಗಳು ಹೆಚ್ಚಾಗಿ ಸುಖ ಸಂತೋಷ, ನಲಿವಿನ ಕ್ಷಣಗಳನ್ನು ಹೊತ್ತು ತಂದಿವೆ. ಸಾಮಾಜಿಕ ನ್ಯಾಯ ಕೇಳುವಲ್ಲಿಯೂ ಗಜಲ್ಕಾರ್ತಿ ಹಿಂದೆ ಬಿದ್ದಿಲ್ಲ. ಅನ್ಯಾಯವನ್ನು ತೀವ್ರವಾಗಿ ಪ್ರತಿಭಟಿಸುತ್ತಾರೆ. ಸಮಾಜದ ಓರೆ ಕೋರೆಗಳನ್ನು ತಿದ್ದಿಕೊಂಡು ಜಗಕ್ಕೆ ಜೀವನ ಪ್ರೀತಿ ನೀಡಲು ಇವರ ಗಜಲ್ ಗಳು ಹಾತೊರೆಯುತ್ತವೆ. ಮನುಷ್ಯನ ನಡವಳಿಕೆಗಳ ಪ್ರಸಕ್ತ ವಾಸ್ತವಿಕ ಛಾಯೆಯನ್ನು ಯಥಾವತ್ತಾಗಿ ಸಮಾಜದ ಮುಂದೆ ಪ್ರಕಟಗೊಳಿಸಿದ್ದಾರೆ. ಇದು ಭ್ರಮೆಯಿಂದ ಸತ್ಯ ಮತ್ತು ನೈಜತೆಯೆಡೆಗೆ ಹೊರಳಿದೆ.

‘ನೈತಿಕ ಮೌಲ್ಯಗಳಿಗೆ ಬೆಲೆಯಿಲ್ಲದೆ ಮಾಧುರಿಯ ಮನ ಬಿಕ್ಕುತ್ತಿದೆ
ಕುಂಟು ನೆಪದಲ್ಲಿ ಬಂಡತನ ತೋರುವುದರಲ್ಲಿ ತಪ್ಪೇನಿಲ್ಲ ಬಿಡು’
(ಗಜಲ್ 8 ಮಕ್ತಾ)

ಸಾನಿ ಎ ಮಿಸ್ರಾ ದಲ್ಲಿ ‘ಮಾಧುರಿ’ ಎಂಬ ತಖಲ್ಲುಸ್ ಹೊಂದಿರುವ ಈ ಶೇರ್ ನೈತಿಕ ಮೌಲ್ಯಗಳ ಅಧಃಪತನದ ಕುರುಹು ನೀಡುತ್ತದೆ. ಇಲ್ಲಿ ಗಜಲ್ಕಾರ್ತಿ ನಮ್ಮ ಸಮಾಜದ ಮನಸ್ಥಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸನ್ಮಾರ್ಗ ತ್ಯಜಿಸಿ ದುರ್ಮಾರ್ಗ ಹಿಡಿದಿರುವುದಕ್ಕೆ ಹತಾಶ ಭಾವ ತಾಳಿ ವಿಡಂಬನ ರೂಪದಲ್ಲಿ ತನ್ನ ಮನದ ಆಕ್ರೋಶವನ್ನು ಅವರು ಹೊರ ಹಾಕಿದ್ದಾರೆ. ಜೊತೆಗೆ ದಾರಿ ತಪ್ಪುತ್ತಿರುವ ಮನುಕುಲದ ಸ್ಥಿತಿಗೆ ಇವರ ಮನ ಬಿಕ್ಕಳಿಸಿದೆ.

‘ಕೈಗೆ ಬಂದ ತುತ್ತು ಬಾಯಿಗೆ ಬಂದೀತೆಂಬುದು ಬರಿಯ ಭ್ರಮೆ
ಸಾಲವೇ ಶೂಲವಾಗಿ ಅನ್ನದಾತನ ಕೊಲ್ಲುತ್ತಾ ಚುಚ್ಚುತಿದೆ ಕುರುಡು ಕಾಂಚಾಣ’
(ಗಜಲ್ 13 ಶೇರ್ 3)

ಈ ಶೇರ್ ನೇಗಿಲ ಯೋಗಿಯ ಕುರಿತು ಬಹಳ ಸೂಚ್ಯವಾಗಿ ಕಳಕಳಿಯಿಂದ ಮೂಡಿಬಂದಿದೆ. ರೈತನ ಬವಣೆಗಳಿಗೆ ಕಾರಣಗಳನ್ನು ಇದು ಹುಡುಕುತ್ತದೆ. ಕಾಯಕ ಜೀವಿಯ ಶ್ರಮಕ್ಕೆ ಮೌಲ್ಯ ಬರಬೇಕು. ಆದರೆ ಇಂದು ಮಧ್ಯವರ್ತಿಗಳ ಉಪಟಳದಿಂದ ಬೆಳೆದ ಬೆಳೆಗೆ ನಿಗದಿತ ಮೌಲ್ಯವು ಬಾರದಿರುವುದಕ್ಕೆ ಗಜಲ್ ಗೋ ಅವರು ದುಃಖಿಸುತ್ತಾರೆ. ಮತ್ತೊಂದೆಡೆ ಪ್ರಕೃತಿಯು ಮುನಿಸಿಕೊಂಡು ಬರಗಾಲ, ಮಹಾಪೂರ, ಅಕಾಲಿಕ ಮಳೆಗಳನ್ನು ತಂದು ರೈತನನ್ನು ಹಿಂಸಿಸುತ್ತದೆ. ಅದರಿಂದ ರೈತನ ಬದುಕು ಜರ್ಜರಿತವಾಗುತ್ತದೆ ಎಂಬ ಭಾವವನ್ನು ಈ ಗಜಲ್ ಭಿತ್ತರಿಸುತ್ತದೆ. ಸಾಲವನ್ನು ಶೂಲದ ರೂಪಕದಲ್ಲಿ ಕಟ್ಟುವ ಮೂಲಕ ಅವನ ಕಷ್ಟ ನೋವು ಅಸಹಾಯಕತೆಗೆ ತೀವ್ರತೆಯನ್ನು ಒದಗಿಸುತ್ತದೆ. ಇಂತಹ ಕಾವ್ಯ ಕೇವಲ ಪುಸ್ತಕದ ಸ್ವತ್ತಾಗದೆ ವ್ಯವಸ್ಥೆಯ ಬಾಗಿಲು ತಟ್ಟಬೇಕು,ರೈತಪರ ಮಿಡಿಯಬೇಕು.

‘ಅವ್ಯವಸ್ಥೆಯ ಆಗರವ ಕಂಡು ತಲ್ಲಣಗೊಂಡಿದೆ ಮಾಧುರಿಯ ಮನ
ಬೈಗುಳ ಅವಮಾನ ನಿಂದೆಗಳಲ್ಲಿ ಕಾಲೆಳೆಯುತ್ತಾ ಎತ್ತಸಾಗಿದೆ ಈ ಜಗ’
(ಗಜಲ್ 11 ಮಕ್ತಾ)

ಈ ಮಕ್ತಾ ಸಮಾಜದ ಅಹಿತಕರ ವಿಚಾರಗಳನ್ನು, ಅವ್ಯವಸ್ಥೆಗಳನ್ನು ಕಂಡು ರೋಧಿಸುತ್ತದೆ. ‘ಈ ಜಗ’ ಎಂಬ ರದೀಫ್ ಹಾಗೂ ‘ಎತ್ತ ಸಾಗಿದೆ’ ಎಂಬ ಕಾಫಿಯಾ ಗಜಲ್ ಗಳನ್ನು ಅತಿ ಹೆಚ್ಚು ಸಶಕ್ತವಾಗಿಸಿವೆ. ಇಲ್ಲಿರುವ ಊಲಾ ಮಿಸ್ರಾ ಸಮಾಜದ ಬಹುತೇಕ ವ್ಯವಸ್ಥೆಗಳು ಸರಿ ಇಲ್ಲ ಎಂದು ಸಂಕೇತಿಸಿದರೇ, ಸಾನಿ ಮಿಸ್ರಾದಲ್ಲಿ ಈ ಜಗದ ಜನರ ದುರ್ಗುಣಗಳ ಗುಣಗಾನ ಮಾಡುತ್ತದೆ. ಈ ಜಗದ ಕುರಿತು ಗಜಲ್ ಗೋ ಅವರು ಅತಿ ಹೆಚ್ಚು ಸ್ಪಂದಿಸಿದ್ದರ ಫಲವಾಗಿ ಈ ಗಜಲ್ ಧೇನಿಸಿಕೊಂಡು ರಚಿತವಾಗಿದೆ.

‘ಭಾರತ ಮಾತೆಯ ನಲ್ಮೆಯ ಕುವರಿ ಭುವನೇಶ್ವರಿ ದೇವಿ
ಕನ್ನಡವೇ ಕರುನಾಡ ಮಕ್ಕಳ ಮುನ್ನುಡಿ ನೋಡು’
(ಗಜಲ್ 18 ಶೇರ್ 2)

ಈ ಮಿಸ್ರಾ ನಮ್ಮ ರಾಷ್ಟ್ರ ಮತ್ತು ನಾಡನ್ನು ಕುರಿತು ಜೈಕಾರ ಹಾಕುತ್ತದೆ. ಊಲಾ ಮಿಸ್ರಾದಲ್ಲಿ ಭಾರತಾಂಬೆಯನ್ನ ತಾಯಿ ಭುವನೇಶ್ವರಿಯ ಮಾತೆಯಾಗಿ ಅತ್ಯಂತ ಹೆಮ್ಮೆಯಿಂದ ಕೊಂಡಾಡಿದ್ದಾರೆ. ಸಾನಿ ಮಿಸ್ರಾದಲ್ಲಿ ಕರುನಾಡು, ಕನ್ನಡ ಭಾಷೆ ಸವಿಗನ್ನಡದ ಸಿಹಿನುಡಿಯನ್ನು ಹಾಲ್ಜೇನ ತೊರೆಯಂತೆ ಆರಾಧಿಸಿದ್ದಾರೆ. ಕನ್ನಡಿಗರ ಎದೆಯ ಭಾಷೆಯಾಗಿ ಮಕ್ಕಳ ಭವಿಷ್ಯಕ್ಕೆ ಸುಂದರ ಮುನ್ನುಡಿಯಾಗಿ ಕನ್ನಡದ ಕಂದಮ್ಮಗಳನ್ನ ಪೊರೆಯುತ್ತದೆ ಎಂಬುದು ಗಜಲ್ ಗೋ ಅವರ ನುಡಿಯಾಗಿದೆ. ಇಲ್ಲಿ ಗಜಲ್ ಕವಿಯ ದೇಶಭಕ್ತಿ, ನಾಡ ಹಿರಿಮೆಯನ್ನು, ಗರಿಮೆಯನ್ನು ಗುರುತಿಸಬಹುದಾಗಿದೆ.

‘ನಿನ್ನಯ ಮೈ ಮಾಟವನು ಪ್ರತಿಬಿಂಬಿಸುವ ದರ್ಪಣವಾಗಲೇ
ನಿನ್ನಯ ತನುವ ಪ್ರಫುಲ್ಲಗೊಳಿಸಲು ಇಬ್ಬನಿಯ ತಂಪಾಗಲೇ’
( ಗಜಲ್ 23 ಶೇರ್ 2)

ಈ ಮಿಸರೈನ್ ಪ್ರೇಮಿಗಳ ಪ್ರೇಮಾಲಾಪನೆ ಮತ್ತು ಸಂಗಾತಿಯ ಸೌಂದರ್ಯೋಪಾಸನೆ ಮಾಡುತ್ತದೆ. ಪ್ರೇಮಿಗಳ ಭಾಷೆಯೆ ಸೊಗಸು. ಅವರ ಮಧುರವಾದ ರಮ್ಯ ಸಾಲುಗಳನ್ನು ಓದುವುದೇ ಮನಕೆ ಉಲ್ಲಾಸದ ಚಿಲುಮೆ. ಇಲ್ಲಿ ನಲ್ಲನು ನಲ್ಲೆಯ ಮೈಮಾಟವಕೆ ತಾನು ದರ್ಪಣವಾಗ ಬಯಸುತ್ತಾನೆ. ಹಾಗೆಯೇ ಮುಂಜಾನೆಯ ಸೊಬಗು ಮತ್ತು ತಂಪು ನಲ್ಲೆಯ ತನುಮನವನ್ನು ಮುದಗೊಳಿಸುತ್ತದೆ ಎಂಬ ರಮ್ಯ ಭಾವವಿಲ್ಲಿ ಸುಂದರವಾಗಿ ವ್ಯಕ್ತವಾಗಿದೆ.

‘ಕಬ್ಬು ಡೊಂಕಾದರು ಸಿಹಿಯನ್ನೇ ನೀಡುವಂತೆ
ಕಷ್ಟ ನೂರಾದರು ಬೆಂಕಿಯಲ್ಲಿ ಅರಳಿದವರು ನಾವು’
( ಗಜಲ್ 29 ಶೇರ್ 3)

ಈ ಶೇರ್ ನ ಸಾನಿ ಮಿಸ್ರಾದಲ್ಲಿ ಇರುವ ‘ನಾವು’ ಎಂಬ ರದೀಫ್ ಬಡವರು ಮತ್ತು ನಿರ್ಗತಿಕರನ್ನ ಪ್ರತಿನಿಧಿಸುತ್ತದೆ. ಬಡವರ ಬದುಕು ಅಗ್ನಿಕುಂಡದಂತೆ ನಿತ್ಯ ಕಷ್ಟ ಕಾರ್ಪಣ್ಯಗಳೆಂಬ ಬೆಂಕಿಯಲ್ಲಿ ಮೈ ಕೈ ಸುಟ್ಟುಕೊಳ್ಳುತ್ತಲೇ ಇರುತ್ತಾರೆ. ಆ ಕಥಾನಕ ಯಾತನಾಮಯವಾಗಿ ಮೂಡಿಬಂದಿದೆ. ಕಬ್ಬು ಡೊಂಕಾದರು ಸಿಹಿ ನೀಡುವಂತೆ, ಕುಂಬಾರನ ಮಡಿಕೆಯು ಬೆಂಕಿಯಲ್ಲಿ ಹದವಾಗಿ ಬೆಂದು ಸುಂದರ ಆಕೃತಿಯಾಗುವಂತೆ, ನೋವು ದುಃಖಗಳಲ್ಲಿ ಬೆಂದು ಗಟ್ಟಿಯಾಗಿ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯ ಪಡೆಯುತ್ತವೆ ಎಂಬ ಆಶಾವಾದವನ್ನು ಕಾಣಬಹುದು.

‘ಒಂದು ಹೊತ್ತಿನ ಗಂಜಿಗೂ ನಿರಂತರ ಪರದಾಟ ದರ್ಪ ದೌರ್ಜನ್ಯಗಳೇ ರಾರಾಜಿಸುತ್ತಿವೆ ಗೆಳೆಯ’
( ಗಜಲ್ 33 ಶೇರ್ 2)

ಈ ಮಿಸರೈನ್ ಎರಡು ವರ್ಗದ ಜನರ ಬದುಕಿನ ಶೈಲಿಯನ್ನ ವರ್ಣಿಸುತ್ತದೆ. ಮೊದಲ ಚರಣ ಬೆಲೆ ಏರಿಕೆಯ ಬಿಸಿಯಿಂದ ಬಡವರು ನಿರ್ಗತಿಕರು ಮತ್ತು ನಿರುದ್ಯೋಗಿಗಳ ಪರದಾಟವನ್ನ ತುತ್ತಿನ ಚೀಲ ತುಂಬಿಸಿಕೊಳ್ಳಲು ಪಡುವ ಪಡಿಪಾಟಲನ್ನು ಅನಾವರಣಗೊಳಿಸುತ್ತದೆ. ಮುಂದಿನ ಮಿಸ್ರಾ ಉಳ್ಳವರ ಅಟ್ಟಹಾಸ ಅಸಹಾಯಕರ ಮೇಲಿನ ಅವರ ದರ್ಪ ದಬ್ಬಾಳಿಕೆಗಳನ್ನು ಸೂಚಿಸುತ್ತದೆ. ಇಲ್ಲಿ ದುಡಿಯುವ ವರ್ಗ ಮತ್ತು ದುಡಿಸಿಕೊಳ್ಳುವ ವರ್ಗಗಳ ನಡುವೆ ಸಮಾನತೆ ಸಾಮರಸ್ಯ ಸೌಹಾರ್ದತೆ ಮೂಡುವುದಾದರೂ ಯಾವಾಗ ಎಂದು ನಾವು ಚಿಂತಿಸಬೇಕಾಗಿದೆ.

‘ಡೊಂಕು ಬಾಲದ ಹಗಲು ವೇಷದ ನಾಯಕರೇ ಎಲ್ಲರು
ನೀತಿ ಇಲ್ಲದೆ ಧರ್ಮ ಉಳಿದೀತು ಹೇಗೆ ಶಾಂತಿ ನೆಲೆಸಿತು ಹೇಗೆ’
(ಗಜಲ್ 52 ಮಕ್ತಾ)

ಪ್ರಶ್ನೆಯನ್ನು ಹೊತ್ತಿರುವ ‘ಹೇಗೆ’ ಎಂಬ ರದೀಫ್ ಅತ್ಯಂತ ಪ್ರಜ್ಞಾಪೂರ್ವಕವಾಗಿ ಗಜಲ್ ಅನ್ನು ಆವರಿಸಿಕೊಂಡಿದೆ. ‘ಡೊಂಕುಬಾಲ’ ಎಂಬ ‘ರೂಪಕ’ ಎಂದಿಗೂ, ಯಾರೊಂದಿಗೂ ಸರಿಪಡಿಸಿಕೊಳ್ಳಲಾಗದ ನಾಯಕರ ಸ್ವಾರ್ಥ, ಮೋಸ, ವಂಚನೆ, ಭ್ರಷ್ಟತೆ, ಅನ್ಯಾಯ ಅನಾಚಾರಗಳನ್ನು ಡೋಂಗಿತನದ ವೇಷ ಧರಿಸಿ ಒಳ್ಳೆಯವರೆಂಬ ರೇಷ್ಮೆ ಶಾಲು ಹೊದ್ದು ತಿರುಗುವ ನಾಯಕರ ಮರ್ಯಾದೆಯನ್ನು ಹರಾಜು ಮಾಡುತ್ತದೆ. ನಿಮ್ಮಲ್ಲೇ ನ್ಯಾಯ ನೀತಿಗಳಿರದಿದ್ದರೆ ಅದನ್ನು ಪ್ರಜೆಗಳಲ್ಲಿ ಕಾಣುವುದಾದರೂ ಹೇಗೆ? ಮಾನವ ಧರ್ಮ ಉಳಿದು ಶಾಂತಿ ನೆಲೆಸುವುದಾದರೂ ಹೇಗೆ ಎಂದು ಆಲೋಚನೆಗೆ ಹಚ್ಚುತ್ತದೆ.

‘ಶಾಸ್ತ್ರೋಕ್ತವಾಗಿ ಕೈಹಿಡಿಯಲು ಕುಲ ಗೋತ್ರ ಕೇಳುವೆ
ಕತ್ತಲೆಯಲ್ಲಿ ಕಾಮದ ನೆಪವೊಡ್ಡಿ ಮರಳು ಮಾಡಬೇಡ ಗೆಳೆಯ’
(ಗಜಲ್ 50 ಶೇರ್ 3)

ಈ ಗಜಲ್ ಮೇಲು ಕೀಳುಗಳನ್ನು ಸೃಷ್ಟಿಸುವ ಜಾತಿ ಮತ ಭೇದಗಳ ಮೇಲೆ ಬೆಳಕು ಚೆಲ್ಲುತ್ತದೆ. ಪ್ರೀತಿಸಿದ ಹುಡುಗ ಮದುವೆಯಾಗಲು ಮನೆಯ ಸಂಪ್ರದಾಯ, ಶಾಸ್ತ್ರಗಳು, ಆಚಾರ ವಿಚಾರಗಳು ಒಪ್ಪುವುದಿಲ್ಲ ಎನ್ನುವಾಗ ಪ್ರೀತಿಸಿದ ಹುಡುಗಿಯ ಬಾಯಿಂದ ಬರುವ ಆಕ್ರೋಶದ ಕಿಡಿಗಳಿವು. ಕತ್ತಲೆಯಲ್ಲಿ ದೈಹಿಕವಾಗಿ ಬಳಸಿಕೊಳ್ಳುವಾಗ ಇದು ಅಡ್ಡ ಬರುವುದಿಲ್ಲವೇ? ಎಂದು ಪ್ರಶ್ನಿಸುತ್ತ ನಿನ್ನ ಬೆರಗಿನ ಪೊಳ್ಳು ಮಾತುಗಳನ್ನು ನಾನು ನಂಬುವುದಿಲ್ಲ ಎಂದು ಗಟ್ಟಿಯಾದ ದನಿಯಲ್ಲಿ ಹೇಳುವ ಪರಿ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮೂಡಿಬಂದಿದೆ.

‘ಭಾವಗಳು ಬಿಕ್ಕಿದ ಮೇಲೆ ಸಾಲುಗಳು ದಕ್ಕುವುದು ಹೇಗೆ
ಕಂಬನಿಗರೆವ ಮಾಧುರಿಯ ಮನ ಸುರುಳಿ ಸುತ್ತುತ್ತಿದೆ ಗೆಳೆಯ’
( ಗಜಲ್ 45 ಮಕ್ತಾ)

ಈ ಮಕ್ತಾ ಕವಿ, ಕವಿತೆ, ಭಾವ, ಪದ ಸಂಯೋಜನೆ, ಅನುಭವ, ರೂಪಕಗಳ ಮೇಲೆ ಒಡಮೂಡಿದೆ. ಕಾವ್ಯವನ್ನು ಹೃದಯ ಸ್ಪರ್ಶಿಸಲು ಭಾವಾಭಿವ್ಯಕ್ತಿ ಮನೋಜ್ಞವಾಗಿರಬೇಕು.‌ಭಾವಗಳು ನೀರಸವಾದರೇ ಕವಿತೆ ಸಾಯುತ್ತದೆ ಎಂಬುದು ಈ ಸಾನಿ ಮಿಸ್ರಾದಲ್ಲಿ ವ್ಯಕ್ತವಾಗಿದೆ. ಉಲಾ ಮಿಸ್ರಾ ಬಿಕ್ಕುವ ಕವಿತೆಯ ಸ್ಥಿತಿಗೆ ಗಜಲ್ಕಾರ್ತಿಯ ರೋಧನೆಯನ್ನು ಬಣ್ಣಿಸುತ್ತದೆ.

‘ಅದೆಷ್ಟು ಶತಮಾನ ಕಳೆದರೂ ರಸ್ತೆಗಳು ಡಾಂಬರು ಕಾಣಲಿಲ್ಲ ಗೆಳೆಯ
ಗುಡಿಸಲುಗಳ ಸಗಣಿ ನೆಲ ನಯಸ್ಸಾಗಲೇ ಇಲ್ಲ ಗೆಳೆಯ’
(ಗಜಲ್ 41 ಶೇರ್ 2)

ಈ ಮಿಸರೈನ್ ನಾ ಪ್ರಥಮ ಮಿಸ್ರಾ ಪ್ರಗತಿ ಕಾಣದ ಭವ್ಯ ಭಾರತವನ್ನು ಕುರಿತದ್ದಾಗಿದೆ. ದೇಶ ಸ್ವತಂತ್ರಗೊಂಡು ಇಷ್ಟು ವರ್ಷಗಳಾದರೂ ಬಲಿಷ್ಠ ರಾಷ್ಟ್ರವಾಗಿ ಜನರ ದೈನಿಕ ಅಗತ್ಯಗಳನ್ನು ಪೂರೈಸದಿರುವುದಕ್ಕೆ ವ್ಯವಸ್ಥೆ ಮತ್ತು ಜನನಾಯಕರ ವಿರುದ್ಧ ಚಾಟಿ ಬೀಸುತ್ತದೆ. ಎರಡನೇ ಮಿಸ್ರಾ ಜನಪರ ಆಡಳಿತದ ಹಿತಾಸಕ್ತಿ ನಾಯಕರಲ್ಲಿ ಮೂಡಿ ಎಲ್ಲರಿಗೂ ಮೂಲಭೂತ ಅಗತ್ಯವಾದ ವಸತಿಯನ್ನು ಒದಗಿಸುವಂತೆ ಕೋರಿದೆ.

‘ಕೆಲ್ಸದ ಸಲುವಾಗಿ ರೊಟ್ಟಿ ಊಟಾನೂ ಒಲ್ಲೆಅಂತಾನವ
ಸಿನಿಮಾಗೆ ಹೋಗೋಣಂದ್ರ ಇರು ಸ್ವಲ್ಪ ಬ್ಯುಸಿ ಅಂತಾನವ’
( ಗಜಲ್ 39 ಶೇರ್ 4)

ಈ ಗಜಲ್ ಗ್ರಾಮ್ಯ ಶೈಲಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಇದು ಇಂದಿನ ಆಧುನಿಕ ಒತ್ತಡದ ಬದುಕಿನ ಸಂಘರ್ಷಗಳನ್ನು ಪರಿಚಯಿಸುತ್ತದೆ. ಈ ಶೇರ್ ಪ್ರಮುಖವಾಗಿ ಎರಡು ವಿಚಾರಗಳನ್ನು ಗರ್ಭೀಕರಿಸಿಕೊಂಡಿದೆ. ಇಂದಿನ ಹೊಸ ಪೀಳಿಗೆ ದುಡಿಮೆಯೇ ಬದುಕಾಗಿಸಿಕೊಂಡು ವಾಸ್ತವಿಕತೆಯಿಂದ ದೂರಾಗಿ, ಕೌಟುಂಬಿಕ ಸುಖ ಸಂತೋಷಗಳನ್ನು ಬಲಿಕೊಡುತ್ತಿರುವುದರ ಬಗ್ಗೆ ಇಲ್ಲಿ ಆಕ್ಷೇಪವಿದೆ. ಮನೋರಂಜನೆಗೂ ಬಿಡುವಿಲ್ಲದಷ್ಟು ಬ್ಯುಸಿಯಾಗಿರುವ ಯಂತ್ರ ಮಾನವನಾಗುತ್ತಿದ್ದಾನೆಂಬ ಆತಂಕವೂ ಇಲ್ಲಿದೆ.

‘ಕೊಡಿಸುವುದಾದರೆ ಅಂಬರದ ಚಂದಿರನನ್ನೇ ತಂದುಬಿಡು‌ ಸಖ
ಉಡಿಸುವುದಾದರೆ ನಿಹಾರಿಕೆಯ ಸೀರೆಯನ್ನೇ ಸುತ್ತಿ ಬಿಡು ಸಖ’
( ಗಜಲ್ 28 ಮತ್ಲಾ)

ಸಖ ಎಂಬ ರದೀಫ್ ಹೊಂದಿರುವ ಈ ಗಜಲ್ ಪ್ರೇಯಸಿಯು ತನ್ನ ಪ್ರೇಮಿಯಲ್ಲಿ ಒಲವಿನ ಉಡುಗೊರೆ ಕೋರುತ್ತಿರುವುದನ್ನು ಸೊಗಸಾದ ರೂಪದಲ್ಲಿ ಅತ್ಯಂತ ಚೆಂದವಾಗಿ ಚಿತ್ರಿಸಿದೆ. ಅಂಬರದ ಚಂದಿರ ನಿಹಾರಿಕೆ ಪದಗಳು ಗಜಲ್ ನ ಮೆರುಗನ್ನು ಹೆಚ್ಚಿಸಿವೆ. ಇಂತಹ ರಮ್ಯ ಪದ ಭಾವಗಳ ಕವಿ ಕಲ್ಪನೆ ಓದುಗರೆದೆ ಸ್ಪರ್ಶಿಸಿ ಎಲ್ಲರಿಗೂ ತುಂಬಾ ಆಪ್ತವಾಗುತ್ತದೆ.

‘ವಿರಹದ ಆವಿಗೆಯಲ್ಲಿ ಮಾಧುರಿ ಬೇಯುತಿಹಳು
ಕೋಲ್ಮಿಂಚಿನ ಸಂಚಾಗಿ ಮೂಡಿದವನೇ ಎಲ್ಲಿರುವೆ’
(ಗಜಲ್ 34 ಮಕ್ತಾ)

ಇದು ಈ ಗಜಲ್ ನ ಅಸ್ತಂಗತದ ಶೇರಾಗಿದ್ದು ಪ್ರೀತಿಯಲ್ಲಿ ಆದ ಮೋಸವನ್ನು ಕುರಿತು ಚರ್ಚಿಸುತ್ತದೆ. ತನ್ನನ್ನು ಕಾಡಿಸಿ ಬೇಡಿ ಪ್ರೀತಿಸಿ ಕೊಂಡು ಪ್ರೀತಿಯ ಮೋಹ ಪಾಶದಲ್ಲಿ ನಲ್ಲೆ ಬಿದ್ದಾಗ ಅವಳ ಪ್ರಿಯತಮ ಅವಳನ್ನು ದೂರ ಮಾಡಿ ಹೋಗುವನು. ಅವನ ಅಗಲಿಕೆ ನೋವು ಮತ್ತು ವಿರಹದ ಬೇಗುದಿಯಲ್ಲಿ ಹತಾಶಳಾಗಿ ಅವನನ್ನು ಹಂಬಲಿಸುವ ಪರಿ ಸೊಗಸಾಗಿದೆ. ಪ್ರೀತಿಯಲ್ಲಿ ಬೀಳುವಾಗ ವಹಿಸಬೇಕಾದ ಜಾಗ್ರತೆಯನ್ನು, ವಂಚನೆ ಮತ್ತು ನೈಜ ಪ್ರೀತಿಯನ್ನು ಸರಿಯಾಗಿ ಅರಿಯಬೇಕಾದ ಅಗತ್ಯತೆಯನ್ನು ಈ ಮಕ್ತಾ ಒತ್ತಿ ಹೇಳುತ್ತದೆ.

‘ಅಮಾಯಕರ ಅಂಬಲಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ಶೂರರು
ಹಣದ ಆಮಿಷಕ್ಕೆ ವೋಟು ಮಾರಿಕೊಂಡವರ ವ್ಯಕ್ತಿತ್ವವೇ ಹಾಳಾಗುತ್ತಿದೆ ಗೆಳೆಯ’
(ಗಜಲ್ 26 ಶೇರ್ 3)

ಇದು ಮುಗ್ಧ ಜನರ ಪರವಾಗಿ ಮಿಡಿವ ಶೇರ್ ಆಗಿದೆ. ಇಲ್ಲ ಸಲ್ಲದ ಅಭೀಕ್ಷೆಗಳನ್ನು ಜನರಲ್ಲಿ ಹುಟ್ಟಿಸಿ, ಅವರನ್ನು ಸರಿ ತಪ್ಪುಗಳ ಪರಾಮರ್ಶೆಯಲ್ಲಿ ಸೋಲುವಂತೆ ಮಾಡಿ, ಗೊಂದಲ ಮೂಡಿಸಿ, ದ್ವಂದ್ವ ಭಾವದಲ್ಲಿ ಮುಳುಗಿಸಿ, ಪೂರ್ವಗ್ರಹ ಪೀಡಿತರಾಗಿ, ವಿವೇಕ ರಹಿತರಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಇಕ್ಕಟ್ಟಿನಲ್ಲಿ ಸಿಲುಕಿಸಿ ತಮಗೆ ಬೇಕಾದಂತೆ ಅವರನ್ನು ಅನುಕೂಲಸಿಂಧುವಾಗಿಸಿಕೊಳ್ಳುವ ಜನರ ಸ್ವಾರ್ಥವನ್ನು ಮುನ್ನಲೆಗೆ ತರುವ ಮೂಲಕ ಆ ಅಮಾಯಕರ ಬದುಕು ಮೂರಾಬಟ್ಟೆಯಾಗುವುದನ್ನು ಸಾತ್ವಿಕ ಹೋರಾಟದ ಮೂಲಕ ಈ ಗಜಲ್ ಪ್ರತಿಭಟಿಸುತ್ತದೆ.

‘ಮುಂಬರುವ ದುಃಖ ದುಮ್ಮಾನಗಳು ಹೆದರಿ ಅಡಗಬೇಕು ಕಷ್ಟಕೋಟಲೆಗಳು ದಿಕ್ಕೆಟ್ಟು ಓಡುವಂತೆ ನಕ್ಕು ಬಿಡು ಗೆಳತಿ’
( ಗಜಲ್ 22 ಶೇರ್ 2)

ಬಾಳ ಯಾನದಲಿ ನಗುವಿನ ಅಗತ್ಯತೆಯನ್ನು ಇದು ಒತ್ತಿ ಹೇಳುತ್ತದೆ. ನಗು ಸಕಲ ರೋಗಗಳಿಗೂ, ಸಮಸ್ಯೆಗಳಿಗೂ, ಕಷ್ಟಕೋಟಲೆಗಳಿಗೂ ದಿವ್ಯ ಔಷಧಿ ಇದ್ದಂತೆ. ಬರುವ ಸವಾಲುಗಳನ್ನು ಮೆಟ್ಟಿ ನಿಂತು ಲೋಕದ ಕೊಂಕಿಗೆ ತಲೆ ಕೊಡದೆ ಸಾಧನೆಯ ಸ್ಪೂರ್ತಿಯ ಮೆಟ್ಟಿಲುಗಳಾಗಿ ಭಾವಿಸಿ ಧೈರ್ಯ ಆತ್ಮವಿಶ್ವಾಸದಿಂದ ನಗುನಗುತ ನಿಷ್ಕಲ್ಮಶವಾದ ನಿರಾತಂಕದ ಮನದಲ್ಲಿ ಮುನ್ನುಗ್ಗಿದರೆ ಕಷ್ಟಗಳೆಲ್ಲ ಕರಗಿ ಸುಖ ಸಂತೋಷಗಳು ಕಾಮನಬಿಲ್ಲಿನಂತೆ ವರ್ಣರಂಜಿತ ವಾಗಿ ಬಾಳು ಸುಂದರವಾಗುತ್ತದೆ ಎನ್ನುವುದನ್ನು ಈ ಶೇರ್ ಹೊತ್ತು ತಂದಿದೆ.

‘ರಕ್ತಕ್ಕಿಲ್ಲ ಜಾತಿ ಭೇದ ಕಣ ಕಣವೂ ಕೆಂಪೇ ಅಲ್ಲವೇ
ಬಣ್ಣ ಭಾವ ಭಿನ್ನವಾದರೇನು ಇರಲಿ ಸದಾ ಭಾವೈಕ್ಯತೆ’
( ಗಜಲ್ 20 ಶೇರ್ 2)

ಸಾಮಾಜಿಕ ಮೌಢ್ಯಗಳಿಗೆ ಬಲಿಪಶುವಾದ ರೋಗಗ್ರಸ್ತವಾದ ಸಮಾಜದ ವಿರುದ್ಧ ಈ ಗಜಲ್ ಧ್ವನಿ ಎತ್ತುತ್ತದೆ. ಎಲ್ಲಾ ಜಾತಿಯ ಜನರ ದೇಹದಲ್ಲಿ ಹರಿಯುವ ರಕ್ತದ ಬಣ್ಣ ಕೆಂಪಾಗಿರುವಾಗ ಮಾನವ ಮಾತ್ರ ಇಂಥ ಅಸಂಬದ್ಧವಾದ ತರ್ಕ ಮತ್ತು ಕ್ಷುಲ್ಲಕ ನೆಪವೊಡ್ಡಿ ಮನುಜರ ನಡುವೆ ಮೇಲು ಕೀಳೆಂಬ ವಿಷ ಬೀಜ ಬಿತ್ತಿ ಮನುಷ್ಯ ಪ್ರೇಮದ ನಡುವೆ ಸೇತುವೆ ಕಟ್ಟುವ ಬದಲು ಆಳವಾದ ಕಂದಕ ನಿರ್ಮಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ದ್ವಿತೀಯ ಚರಣದಲ್ಲಿ ಬಣ್ಣ ಮತ್ತು ಭಾವಗಳ ಭಿನ್ನತೆಯನ್ನು ಮರೆತು ರಾಷ್ಟ್ರದ ಜನರೆಲ್ಲ ಒಂದಾಗಿ ಬಾಳಬೇಕೆಂಬ ಐಕ್ಯಗಾನ ಮೊಳಗಿದೆ.

‘ಮತಾಂಧತೆಯ ಕೂಪದಲ್ಲಿ ಬಿದ್ದು ಕಾಲು ಎಳೆಯುವ ಲೋಕವಿದು
ಕೊಚ್ಚೆಗೆ ಕಲ್ಲೆಸೆದು ಸಿಡಿಸಿಕೊಳ್ಳುವ ಇರಾದೆ ನನಗಿಲ್ಲ’
(ಗಜಲ್ 15 ಶೇರ್ 2)

ಸಮ ಸಮಾಜ ನಿರ್ಮಾಣದ ಕನಸು ಕಾಣುವ ಈ ಗಜಲ್ ಜಾತಿ ಧರ್ಮಗಳ ಮೇಲಾಟ ಆಡುವ ಜನರ ವಿರುದ್ಧ ಸಿಡಿದಿದೆ. ಈ ಚರಣದ ಮೊದಲ ಮಿಸ್ರಾ ಲೋಕದ ಜನರ ಕುರಿತು ಮಾತನಾಡಿದರೆ ಎರಡನೇ ಮಿಸ್ರಾ ಈ ಜನರಿಂದ ಅಂತರ ಕಾಯ್ದುಕೊಂಡು ಈ ಮೌಢ್ಯ ಕಂದಾಚಾರಗಳಿಂದ ತಾನು ಮುಕ್ತವಾಗಿ ವೈಚಾರಿಕವಾಗಿ ಆಲೋಚಿಸುತ್ತಾ ಮಾನವ ಪ್ರೇಮ ತೋರುವ ಇರಾದೆ ತನ್ನದು ಎಂಬ ಮನೋಗತ ಹಾಗೂ ಸದುದ್ದೇಶವನ್ನು ಕಾಣಬಹುದು‌.

‘ಮಂದಿ ನೂರು ಮಾತು ಹೇಳಲಿ ಗೆಳೆಯ
ಬುದ್ಧಿ ನಿನ್ನ ಕೈಯಾಗ ಇರಲಿ ಗೆಳೆಯ’
(ಗಜಲ್ 2 ಮತ್ಲಾ)

ಈ ಮತ್ಲಾ ಗೆಳೆಯ ಎಂಬ ರದೀಫ್ ಹೊಂದಿದ್ದು, ತನ್ನ ಬದುಕನ್ನು ಸ್ವ ಇಚ್ಛೆಯಿಂದ ಕಟ್ಟಿಕೊಳ್ಳುವಂತೆ ಆಗ್ರಹಿಸುತ್ತದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇದ್ದರೆ ಇತರ ಪ್ರಭಾವ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ನೂರು ಮಂದಿ ನೂರು ಮಾತು ಹೇಳಿದರು ಮೂರ್ಖರಂತೆ ಎಲ್ಲವನ್ನು ಒಪ್ಪಿ ನಡೆಯಬೇಡ ಎನ್ನುವಲ್ಲಿ ನಿನ್ನ ಜಾಣತನ ಬುದ್ಧಿವಂತಿಕೆಯಿಂದ ಅವೆಲ್ಲವನ್ನು ಆಲೋಚಿಸಿ ಸರಿಯಾದದ್ದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಗಜಲ್ಕಾರ್ತಿ ಸೂಚಿಸಿದ್ದಾರೆ.

‘ನಿನ್ನ ಸಾನಿಧ್ಯ ದೊರೆತರೆ ಸಾಕೆನಗೆ ಸ್ವರ್ಗವನ್ನೇ ತಿರಸ್ಕರಿಸಿ ಬಿಡುವೆ
ನೀ ಹೀಗೇಕೆ ದೂರ ಸರಿದು ಬೆದರಿದ ಜಿಂಕೆಯಂತೆ ಓಡುತ್ತಿರುವೆ ಸಖಿ’
(ಗಜಲ್ 1 ಶೇರ್ 3)

ಮಾಧುರಿಯ ಮಿಡಿತಗಳು ಗಜಲ್ ಸಂಕಲನದ ಪ್ರಥಮ ಗಜಲ್ ಇದಾಗಿದ್ದು ಗಜಲ್ ಗೋ ಅವರು ಗಂಡಿನ ಭಾವದಲ್ಲಿ ಇದನ್ನು ರಚಿಸಿದ್ದಾರೆ.ಇಲ್ಲಿ ಸಖನು‌ ತನ್ನ ಸಖಿಯ ಸಾನಿಧ್ಯವನ್ನು ಸ್ವರ್ಗಕ್ಕಿಂತ ಮಿಗಿಲು ಎಂದು ಭಾವಿಸಿದ್ದಾನೆ. ಆದರೆ ತನ್ನ ಪ್ರೇಯಸಿ ಇವನನ್ನು ಕಂಡೊಡನೆ ದೂರ ಸರಿವ ಪರಿ ಸೋಜಿಗವನ್ನು ಉಂಟು ಮಾಡುತ್ತದೆ.

‘ಏಕಾಂಗಿ ಜೀವನವೊಂದು ಸಾರವಿಲ್ಲದ ಸರಕಾಗಿದೆ
ಜೊತೆಯಾಗಿ ಬಾಳಬೇಕಾಗಿದೆ ಬದುಕಬೇಕಾಗಿದೆ ಸಖ’
(ಗಜಲ್ 3 ಶೇರ್ 4)

ಈ ಗಜಲ್ ನಾ ಸಾನಿ ಮಿಸ್ರಾದಲ್ಲಿ ಬಾಳಬೇಕಾಗಿದೆ, ಬದುಕಬೇಕಾಗಿದೆ ಎಂಬ ಎರಡು ಕಾಫಿಯಾಗಳಿವೆ. ಇದು ಪ್ರೀತಿಯ ಸಾಂಗತ್ಯ ಮತ್ತು ಏಕಾಂಗಿತನದ ನಡುವಿನ ವ್ಯತ್ಯಾಸಗಳನ್ನು ತೆರೆದಿಡುತ್ತದೆ. ಜೊತೆಯಾಗಿ ಕಳೆದ ಸವಿ ಕ್ಷಣಗಳನ್ನು ನೆನೆಯುತ್ತಲೇ ಒಂಟಿಯಾದ ಜೀವನ ನಿಸ್ಸಾರವೆಂದು ಸಾರುತ್ತದೆ. ಜೊತೆಯಾಗಿ ಬಾಳುವ ಸಂತಸವನ್ನು ಈ ಶೇರ್ ಗುರುತು ಮಾಡುತ್ತದೆ.

ಒಟ್ಟಾರೆ ಆತ್ಮಖುಷಿಗಷ್ಟೇ ಈ ಗಜ಼ಲ್ಗಳು ಸೀಮಿತವಾಗಿರದೆ ಮಾನವ ಪ್ರೇಮ ಮತ್ತು ಮಾನವ ಕಲ್ಯಾಣದ ಕನಸುಗಳನ್ನು ಹೊತ್ತು ಭರವಸೆಯ ಆಶಾಭಾವವನ್ನು ವ್ಯಕ್ತಪಡಿಸುತ್ತವೆ.ಈ ಕೃತಿಯ ಬಹುಪಾಲು ಗಜಲ್ ಗಳಲ್ಲಿ ಪ್ರೇಮಧಾರೆಯೇ ಹರಿದಿದೆ ಎನ್ನಬಹುದು. ಉಳಿದಂತೆ ಸಮಾಜಮುಖಿಯಾಗಿಯೂ ಗಜಲ್ ಗೋ ಅವರು ಕಾಣಿಸಿಕೊಂಡಿದ್ದಾರೆ. ‘ಮಾಧುರಿಯ ಮಿಡಿತಗಳು’ ಸರ್ವಮಂಗಳ ಜಯರಾಮ್ ಅವರ ಚೊಚ್ಚಲ ಗಜಲ್ ಸಂಕಲನವಾಗಿದ್ದು ಗಜಲ್ ಕವಿಯಾಗಿ ಹೊಸ ಭರವಸೆಯನ್ನ ಮೂಡಿಸುತ್ತಾರೆ. ಈ ಹೊತ್ತಿಗೆಯಲ್ಲಿ ರಧೀಪ್ ಗಳು ಅತಿ ಹೆಚ್ಚು ಆವರ್ತನಗೊಂಡು ಗಜಲ್ ತೂಕವನ್ನು ಸ್ವಲ್ಪ ಮಟ್ಟಿಗೆ ಹಗುರಗೊಳಿಸಿವೆ. ಮುಂದಿನ ದಿನಗಳಲ್ಲಿ ನವ ನಾವಿನ್ಯ ಭರಿತವಾದ ರದೀಪ್ ಗಳನ್ನು ಪ್ರಯೋಗಿಸುವಲ್ಲಿ ಗಜಲ್ಕಾರ್ತಿ ಕಾರ್ಯೋನ್ಮುಖರಾಗುವರೆಂಬ ಸದಾಶಯ ನನ್ನದು. ಸರ್ವ ಮಂಗಳ ಜಯರಾಮ್ ಅವರ ಮುಂದಿನ ಸಾಹಿತ್ಯ ಪಯಣಕ್ಕೆ ಬಹಳಷ್ಟು ಶುಭ ಹಾರೈಕೆಗಳು.


  • ಅನುಸೂಯ ಯತೀಶ್ – ವಿಮರ್ಶಕಿ. ನೆಲಮಂಗಲ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW