ಪೂರ್ಣಿಮಾ ಮಾಳಿಗಿಮನಿ ಅವರ ‘ಮ್ಯಾಜಿಕ್ ಸೌಟು’ ಕೃತಿಯ ಕುರಿತು ಮನೋ ವೈದ್ಯರು, ಲೇಖಕರಾದ ವಿರೂಪಾಕ್ಷ ದೇವರಮನೆ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮ್ಯಾಜಿಕ್ ಸೌಟು
ಲೇಖಕಿ : ಪೂರ್ಣಿಮಾ ಮಾಳಿಗಿಮನಿ
ಬೆಲೆ : ೧೮೦.೦೦
ಅಂತೂ ನಾನೂ ಮಾಳಿಗಿಮನಿಯವರ ‘ಮ್ಯಾಜಿಕ್ ಸೌಟು’ ಓದಿ ಮುಗಿಸಿದೆ. ಈ ಮೊದಲೇ “ಆಗಮ್ಯ” ಕಾದಂಬರಿ ಓದಿ ನಿಮ್ಮ ಬರೆಹದ ಅಭಿಮಾನಿಯಾಗಿದ್ದೆ. ವಯಸ್ಸಿಗೆ ಮೀರಿದ ನಿಮ್ಮ ಜೀವನಾನುಭವ, ಓರಗೆಯ ಬದುಕನ್ನು ಇಂಚಿಂಚು ಗಮನಿಸುವ ತಮ್ಮ ಮಸೂರ ದೃಷ್ಟಿಯಿಂದ ಕತೆಗಳ ಸಾಲುಗಳಿಗೆ ಜೀವಂತಿಕೆ.

ಬದುಕನ್ನು ಇದ್ದದ್ದು ಇದ್ದ ಹಾಗೆಯೇ ಅಬ್ಬಬ್ಬಾ ಎಂದರೆ ಪ್ರಬಂಧ ರೂಪದಲ್ಲಿ ಬರೆದು ಮುಗಿಸಬಹುದು. ಅದಕ್ಕೆ ಅಂತರಾವಲೋಕನ ಸೇರಿಸಿ, ಓಡುವ ಬದುಕನ್ನು ನಿಲ್ಲಿಸಿ, ವಿಮರ್ಶೆಗೆ ಹಚ್ಚಿ ನಿಧಾನಗೊಳಿಸುವ ಕತೆಗಳಾಗಿಸಿರುವುದು ಅಚ್ಚರಿ. ಕತೆಗಳ ಮೂಲಕ ಪೂರ್ಣಿಮಾ ಅವರನ್ನು ಹುಡುಕಲು ಹೊರಟರೆ ಪರಿಧಿಗೆ ಸಿಕ್ಕುವುದೇ ಇಲ್ಲ . ಇಲ್ಲಿ ಮೌಲ್ಯಗಳನ್ನು ಬಿಂಬಿಸುವ ಸಾಹಿತ್ಯವಿದೆ. ವಿಜ್ಞಾನದ ವಿಸ್ತಾರ ಮತ್ತು ಮಿತಿಗಳಿವೆ. ಮಾನವೀಯತೆಯ ಸೋಸಿ ತೆಗೆಯುವ ದೃಶ್ಯಗಳು ಹೇರಳವಾಗಿವೆ. ಎಲ್ಲದಕ್ಕೂ ಹೆಚ್ಚು ನಾಗಾಲೋಟದಲ್ಲಿರುವ ಎಲ್ಲರ ಧಾವಂತದ ಬದುಕಿನ ಸಮಾನ ವಿಚಾರಗಳು, ಕಣ್ಣು ಕೋರೈಸುವ ಬೆಳಕಿನ ಬದುಕಿನಲ್ಲಿ ನಲುಗಿ ಹೋಗುತ್ತಿರುವ ಸಂಬಂಧಗಳು ಕತೆಯ ಹೂರಣ.

ಆದರೆ ಕತೆಗಳ ಓದು ತೀರಾ ಬದುಕಿನ ಬಗ್ಗೆ ಜುಗುಪ್ಸೆ ಹುಟ್ಟಿಸದೆ ಏಯ್ ಹೌದಲ್ಲ ನಾನು ಹೀಗೆ ಮಾಡ್ತಾ ಇದೀನಿ ಅಲ್ವಾ ಎಂದು ಮುಗುಳ್ನಗೆ ತರಿಸಿ ಸರಿಪಡಿಸಿಕೊಳ್ಳಲು ಯೋಚನೆಗೆ ಹಚ್ಚುತ್ತವೆ. ಪೂರ್ಣಿಮಾ ನೀವು ನಗರದ ಜೀವನದಲ್ಲಿದ್ರೂ ಹಳ್ಳಿ ಜೀವನದ ಒಳ ಹೊರಹುಗಳ , ಬಡತನದ ವಿವಿಧ ಪರೀಕ್ಷೆಗಳ, ಕಷ್ಟದಲ್ಲಿರುವವರ ಇಂಚಿಂಚು ಪರಿಚಯ ನಿಮಗಿರುವುದು, ಅದನ್ನು ಕತೆಗಳಲ್ಲಿ ಮೂಡಿಸುವ ಬಗೆ ,ಆಶ್ಚರ್ಯದ ಜೊತೆಗೆ ಗೌರವ ಮೂಡಿಸುತ್ತದೆ. ಮುಜುಗರ ಬಿಟ್ಟು ಹೇಳುವುದಾದರೆ ನಿಮ್ಮ ಬರೆಹದ ಮೇಲೆ ಅಸೂಯೆ ಮೂಡಿಸುತ್ತದೆ. ನಿಮ್ಮ ಪರಿಚಯವಿರದವರು ಓದಿದರೆ ಯಾರೋ ಇಳೀವಯಸ್ಸಿನ ಲೇಖಕಿ ಇರಬೇಕು ಎನ್ನುವಷ್ಟು ಅನುಭವ ಈ ಕತೆಗಳಲ್ಲಿವೆ. ಮ್ಯಾಜಿಕ್ ಸೌಟು ರುಚಿಕರವಾಗಿದ್ದನ್ನೇ ಬಡಿಸಿದೆ.
180 ರೂಪಾಯಿಗೆ ಫುಲ್ ಪ್ಲೇಟ್ ಮೀಲ್. ಅಂತೂ ಭರವಸೆಯ ಲೇಖಕಿಯಾಗಿ ಮುಂದುವರೆದಿದ್ದು ಸಂತಸ. ನಿಮಗೆ ಅಭಿನಂದನೆಗಳು.
- ವಿರೂಪಾಕ್ಷ ದೇವರಮನೆ – ಮನೋ ವೈದ್ಯರು, ಲೇಖಕರು
