‘ಬಿಳಿಯರ ಜೀವನ’ ಪುಸ್ತಕ ಪರಿಚಯ

ಪ್ರಸಕ್ತ ಸಾಲಿನ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವ ಡಾ.ಸತ್ಯವತಿ ಮೂರ್ತಿ ಅವರ ‘ಬಿಳಿಯರ ಜೀವನ’ ಕೃತಿಯ ಕುರಿತು ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ: ಬಿಳಿಯರ ಜೀವನ
ಲೇಖಕಿ: ಡಾ.ಸತ್ಯವತಿ ಮೂರ್ತಿ
ಪ್ರಕಾಶಕರು: ವಿಕ್ರಂ ಪ್ರಕಾಶನ
ಮುದ್ರಣ: ಜೂನ್ ೨೦೨೪.
ಬೆಲೆ: ರೂ.೨೦೦.00

“ಅಮೇರಿಕಾ, ಅಮೇರಿಕಾ” ಸಿನಿಮಾದಲ್ಲಿ ಚಿತ್ರದ ನಾಯಕ ಸೂರ್ಯ (ರಮೇಶ್ ಅರವಿಂದ್) ಅಮೇರಿಕದಲ್ಲಿರುವ ಸ್ನೇಹಿತ ಶಶಾಂಕ್ ಮನೆಗೆ ಹೋದಾಗ ದೇವರು ಕೊಟ್ಟ ‘ಸ್ಪೂನ್ ಮತ್ತು ಫೋರ್ಕ್’ ಎನ್ನುತ್ತಾ ಕೈ ಬಳಸಿ ಊಟ ಮಾಡುವ ದೃಶ್ಯ ನೆನಪಿರಬೇಕಲ್ಲವೇ? ನಮ್ಮ ರೀತಿ, ನೀತಿಗಳನ್ನು ಎತ್ತಿ ಹಿಡಿಯುವ ಈ ರೀತಿಯ ದೃಶ್ಯಗಳು ಅನೇಕ ಸಿನಿಮಾಗಳಲ್ಲಿ ಬಂದಿದೆ. ಈ ದೃಶ್ಯಗಳು ನಮಗೂ ಮತ್ತು ವಿದೇಶಿಯರಿಗೂ ಇರುವ ಸಾಂಸ್ಕೃತಿಕ ವ್ಯತ್ಯಾಸಗಳನ್ನು ತೋರಿಸುತ್ತವೆ. ಇನ್ನು ‘ಲಗೂನ್’ ತರಹದ ಹಿಂದಿ ಸಿನಿಮಾಗಳಲ್ಲಿ ಬ್ರಿಟಿಷರು ಅವರ ಆಚಾರಗಳನ್ನು ಹೇರಿಕೆ ಮಾಡಿರುವುದನ್ನು ನೋಡಿದ್ದೇವೆ. ಇದೆಲ್ಲಾ ಗೊತ್ತಿದ್ದರೂ ಅನೇಕ ವಿಷಯಗಳನ್ನು ನಾವು ‘ಫಾರೀನ್’ ಎಂದ ತಕ್ಷಣ ಕಿವಿ ಉದ್ದ ಮಾಡಿಕೊಂಡು ಕೇಳಿಸಿಕೊಳ್ಳುವ, ಕಣ್ಣು ಅಗಲ ಮಾಡಿಕೊಂಡು ನೋಡುವ ಅಭ್ಯಾಸವಂತು ಬಹಳ ಕಾಲದಿಂದ ಇದೆ. ಹೀಗಿರುವಾಗ ಸುಮಾರು ಮೂರು ದಶಕಗಳಿಂದ ಇಂಗ್ಲೆಂಡಿನಲ್ಲಿ ಇರುವ ಡಾ.ಸತ್ಯವತಿ ಮೂರ್ತಿಯವರು ಬ್ರಿಟಿಷರ ರೀತಿ, ನೀತಿಗಳು ಮತ್ತು ಅವುಗಳ ಹಿಂದಿರುವ ಕಿಂಚಿತ್ತು ಇತಿಹಾಸಕ್ಕೆ ತಮ್ಮ ಜೀವನದ ಅನುಭವಗಳನ್ನು ಸೇರಿಸಿ ಕಲಾತ್ಮಕವಾಗಿ ಲೇಖನಗಳ ಮೂಲಕ ಹೆಣೆದಿರುವ ಕೃತಿ ‘ಬಿಳಿಯರ ಜೀವನ’ ವನ್ನು ಕಳೆದ ಜೂನ್ ತಿಂಗಳಲ್ಲಿ ಪ್ರಕಟಿಸಿದ್ದಾರೆ. ಹಾಗಾಗಿ ಈ ಪುಸ್ತಕ ಕೂಡ ‘ಫಾರೀನ್’ ವಿಷಯದ ಬಗ್ಗೆ ಸೂಚಿಸಿರುವುದರಿಂದ ನಮ್ಮ ಗಮನವನ್ನು ತಕ್ಷಣ ಸೆಳೆಯುತ್ತದೆ.

ಬ್ರಿಟನ್ ದೇಶ ಈಗಲೂ ನಮ್ಮ ಗಮನ ಸೆಳೆಯುವ ದೇಶ. ಇದಕ್ಕೆ ಮುಖ್ಯ ಕಾರಣ ಎರಡು ಶತಮಾನಗಳಷ್ಟು ಕಾಲ ನಮ್ಮನ್ನು ಆಳಿದ ದೇಶದ ಜೊತೆಗೆ ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದವರು. ಈಗ ಅದೇ ದೇಶದಲ್ಲಿ ತಮ್ಮ ಪತಿಯ ಜೊತೆ ಇರಲು ಹೋದ ಡಾ.ಸತ್ಯವತಿ ಮೂರ್ತಿಯವರು, ಈ ಕೃತಿಯ ಮೂಲಕ ಅಲ್ಲಿನ ದೊಡ್ಡ ಮನುಷ್ಯರ ಬಗ್ಗೆ ಮಾತ್ರವಲ್ಲದೆ ಜನ ಸಾಮಾನ್ಯರ ವಿವಿಧ ಮುಖಗಳನ್ನು ಅನಾವರಣ ಮಾಡಿದ್ದಾರೆ.

ಬ್ರಿಟಿಷರೆಂದರೆ ಚೆನ್ನಾಗಿ ಓದಿರುವವರು. ಹಾಗಾಗಿ ಅವರು ನಮಗಿಂತ ಬುದ್ಧಿವಂತರೆಂಬ ನಂಬಿಕೆಗಳು ಬಹಳಷ್ಟು ಜನರಲ್ಲಿ ಇನ್ನೂ ಇದೆ. ಅದರಲ್ಲೂ ಬೆಕ್ಕು ಅಡ್ಡ ಬಂದಾಗ, ಅಮ್ಮ ಒಂದು ನಿಮಿಷ ಕೂತು ಹೋಗು ಎಂದಾಗ ಸಿಟ್ಟಾಗುವ, ಹಲ್ಲಿ ಗೋಡೆಯ ಮೇಲೆ ಕೂತು ‘ಚಿಕ್’, ‘ಚಿಕ್’ ಎಂದು ಶಬ್ದ ಮಾಡಿದಾಗ ‘ಬಿಡ್ತು’, ಬಿಡ್ತು’ ಎನ್ನುವ ಅಮ್ಮನನ್ನು ನೋಡಿ ನಗುವುದರ ಜೊತೆಗೆ ‘ನೋಡು, ನಾವೆಲ್ಲ ಹೀಗೆಂದು ಕೂತು ಕೊಂಡಿರುವುದರಿಂದಲೇ ಹಿಂದುಳಿರುವುದು. ಅವರೆನ್ನೆಲ್ಲಾ ನೋಡು, ಹೇಗೆ ಮುಂದುವರಿದ್ದಾರೆ’ ಎಂದು ಅಮ್ಮನಿಗೇ ತಿರುಗಿ ಭಾಷಣ ಮಾಡುತ್ತೇವೆ. ಬ್ರಿಟಿಷರ ತರಹ ವೇಷ, ಭೂಷಣ ಮಾಡಿಕೊಂಡು, ‘ಟುಸ್ ಪುಸ್’ ಎಂದು ಇಂಗ್ಲೀಷಿನಲ್ಲಿ ಮಾತನಾಡಿ, ಸಿನಿಮಾಗಳಲ್ಲಿ ತೋರಿಸಿದ್ದನ್ನು ಅನುಸರಿಲು ಪ್ರಯತ್ನಿಸಿ, ಮುಂದುವರಿಯುತ್ತಿದ್ದೀವೆ ಎಂಬ ಭ್ರಮಾಲೋಕದಲ್ಲಿ ವಿಹರಿಸುವ ಸಾಕಷ್ಟು ಜನರು ಇದ್ದೇವೆ. ಆದರೆ ಬ್ರಿಟಿಷರ ದಿನ ನಿತ್ಯದ ಜೀವನ ಹೇಗಿರುತ್ತದೆ? ಅವರಿಗೆ ಮೂಢನಂಬಿಕೆಗಳು ಇಲ್ಲವೇ? ಅವರು ಹಬ್ಬಗಳನ್ನು ಹೇಗೆ ಆಚರಿಸುತ್ತಾರೆ? ಈ ರೀತಿಯ ಪ್ರಶ್ನೆಗಳಿಗೆ ನಿಜವಾದ ಉತ್ತರ ಈ ಪುಸ್ತಕದಲ್ಲಿ ದೊರೆಯುತ್ತದೆ.

ವಿದೇಶವೆಂದರೆ ಸುಂದರ ಸ್ಥಳ, ರಸ್ತೆಗಳಲ್ಲಿ ಗುಂಡಿಗಳಿಲ್ಲ, ಎಲ್ಲೂ ಕಸದ ರಾಶಿ ಇಲ್ಲ, ಎಲ್ಲಾ ಕಡೆ ಜನ ‘ಕ್ಯೂ’ ನಿಲ್ಲುತ್ತಾರೆ, ಇತ್ಯಾದಿ ಅನಿಸಿಕೆಗಳು ಈಗ ಸಾಮಾನ್ಯ. ಬ್ರಿಟನ್ ಕೂಡ ಇದಕ್ಕೆ ಹೊರತಲ್ಲ. ಇವೆಲ್ಲದರ ಜೊತೆಗೆ ಲೇಖಕಿ ಅಲ್ಲಿಯ ಜನರ ಮಾನವೀಯತೆ, ಅಪರಿಚಿತರಿಗೂ ಸಹಾಯ ಹಸ್ತ ಚಾಚುವ ಪರಿ, ಕಷ್ಟ ಬಂದಾಗ ರೋದಿಸುತ್ತಾ ಕೂರದೆ ಸಮಯಕ್ಕೆ ಹೊಂದಿಕೊಂಡು ಹೋಗುವ ಗುಣ, “ಸುಖವೇ ದುಃಖೇ ಸಮೇ ಕೃತ್ವಾ” ತತ್ವವನ್ನು ಪ್ರಾಯೋಗಿಕವಾಗಿ ಅನುಸರಿಸುವ ಬಗ್ಗೆ ತಾವು ಕಂಡ ಮತ್ತು ಅನುಭವಿಸಿದ ಅನೇಕ ಘಟನೆಗಳನ್ನು ತೆರೆದಿಟ್ಟಿದ್ದಾರೆ. ಆವುಗಳನ್ನು ಪುಸ್ತಕದಲ್ಲಿ ಓದಿ ತಿಳಿಯುವುದೇ ಚೆಂದ.

ಹಾಗಾದರೆ ಇನ್ನೂರು ವರ್ಷಗಳಿಂದ ಕುಟಿಲ ನೀತಿಗಳಿಂದ ನಮ್ಮನ್ನು ಆಳಿದ ಬ್ರಿಟಿಷರನ್ನು ಈ ಪುಸ್ತಕದಲ್ಲಿ ಸದ್ಗುಣಿಗಳೆಂದು ಚಿತ್ರಿಸಲಾಗಿರಬಹುದೇ? ಈ ಅನುಮಾನ ಬೇಡ. ಕೆಲಸದ ಸ್ಥಳದಲ್ಲಿ ಕೀಳಾಗಿ ಕಾಣುವ ಕುಟಿಲ ನೀತಿಯ ತುಣುಕುಗಳು, ರಸ್ತೆಯಲ್ಲಿ ಮಾಡುವ ಕಿರಿ, ಕಿರಿಗಳು ಅನೇಕ ಕಡೆ ಲೇಖನಗಳಲ್ಲಿ ಬೆರೆತು ಕೊಂಡಿದೆ. ಪ್ರಸಿದ್ಧ ಸಾಹಿತಿ ಮತ್ತು ಅನಿವಾಸಿ ಭಾರತೀಯ ಡಾ.ಮೈ.ಶ್ರೀ.ನಟರಾಜರವರು ‘ಹೊನ್ನುಡಿ’ಯಲ್ಲಿ ಬರೆದಿರುವಂತೆ ಇವುಗಳು “ಹರಡಿದ ಚಿತ್ರಾನ್ನದ ಮೇಲೆ ಕಾಣುವ ಕರಿಬೇವು, ಕೊತ್ತಂಬರಿ, ಹಸಿಮೆಣಸಿನಕಾಯಿಗಳಂತೆ ಬೆರೆತು ಕೊಂಡಿವೆ”.

ಇದರ ಜೊತೆಗೆ ಲೇಖಕಿ ಅಪಶಕುನ ಮತ್ತು ಮೂಢ ನಂಬಿಕೆಗಳ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿದ್ದಾರೆ. ಒಂದು ಬಾರಿಗೆ ಎಷ್ಟು ಕ್ಯಾಂಡಲ್ ಹಚ್ಚುತ್ತಾರೆ? ಕರಿ ಬೆಕ್ಕು ಅಡ್ಡ ಬಂದಾಗ, ಗುಬ್ಬಚ್ಚಿ ಏನಾದರೂ ಮನೆಯ ಒಳಗೆ ಬಂದರೆ, ಹಕ್ಕಿಯ ಉಚ್ಛಿಷ್ಠ ಮೈಮೇಲೆ ಬಿದ್ದರೆ ಏನು ಮಾಡುತ್ತಾರೆ ಎನ್ನುವ ಬಗ್ಗೆ ಪುಸ್ತಕದಲ್ಲಿ ಕುತೂಹಲಕಾರಿಯಾದ ವಿಷಯಗಳಿವೆ. ಲೇಖಕಿ ಈ ವಿಷಯಗಳನ್ನು ತಿಳಿಸುವುದರ ಜತೆಗೆ ಆ ನಂಬಿಕೆಗಳ ಹಿಂದಿರುವ ಕಥೆ, ಕಾಲಕ್ಕೆ ತಕ್ಕಂತೆ ಅದು ಬದಲಾಗುತ್ತಿರುವ ರೀತಿಗಳನ್ನು ಅನೇಕ ಘಟನೆ ಮತ್ತು ಸಂಗತಿಗಳ ಮೂಲಕ ಅನಾವರಣ ಮಾಡುತ್ತಾರೆ.

ಬ್ರಿಟಿಷರ ಆಹಾರ ಪದ್ಧತಿ, ಹಬ್ಬಗಳ ಆಚರಣೆ, ಮದುವೆಯ ಆಚರಣೆ, ಉಡುಗೊರೆ ಕೊಡುವ ರೀತಿ, ವಿದ್ಯಾಭ್ಯಾಸ ಹೀಗೆ ಪ್ರತಿಯೊಂದು ವಿಷಯವನ್ನು ತಾವೇ ಅನುಭವಿಸಿದ ಅನೇಕ ಸ್ವಾರಸ್ಯಕರ ಘಟನೆಗಳ ಮೂಲಕ ತೆರೆದಿಟ್ಟಿದ್ದಾರೆ. ಅದರ ಜೊತೆಗೆ ಆ ವಿಷಯಗಳ ಹಿನ್ನಲೆ, ಒಂದಿಷ್ಟು ಇತಿಹಾಸ, ಅವುಗಳು ಹೇಗೆ ನಮ್ಮ ಆಚರಣೆಗಳಿಗಿಂತ ಹೇಗೆ ಭಿನ್ನ ಎಂದು ತೋರಿಸುತ್ತಾ ಅವರ ಅಂಧಾನುಕರಣೆ ಮಾಡದೆ ಇರುವಂತೆ ಕೊನೆಯಲ್ಲಿ ಎಚ್ಚರಿಸಿದ್ದಾರೆ.

ಇಂಗ್ಲೆಂಡಿಗೆ ಹೋದ ಒಂದು ವರ್ಷದಲ್ಲೇ ‘HER MAJESTY’ ಸರ್ಕಾರದಿಂದ ಇವರು “ಹೆಂಗಸರು ಮತ್ತು ಮಕ್ಕಳ ಸೆರೆಮನೆ ಮಂತ್ರಿ”ಯಾಗಿ ನೇಮಕಗೊಳ್ಳುತ್ತಾರೆ. ಇದು ಬಂದೀಖಾನೆ ಸೇರಿರುವ ಖೈದಿಗಳನ್ನು ಭೇಟಿ ಮಾಡಿ, ಅವರ ಜೀವನವನ್ನು ಮತ್ತೆ ಸರಿದಾರಿಗೆ ತರಲು ಪ್ರಯತ್ನ ಪಡುವ ಕೆಲಸ. ಆ ಕೆಲಸದ ಅನುಭವದ ಮೇಲೆ ಅಲ್ಲಿನ ಜೈಲಿನ ಸ್ಥಿತಿ, ಗತಿಗಳ ಬಗ್ಗೆ ಮತ್ತು ಎದುರಿಸಿದ ತಮಾಷೆಯ ಪ್ರಸಂಗಗಳನ್ನು ರಸವತ್ತಾಗಿ ಬರೆದಿದ್ದಾರೆ. ಅವುಗಳನ್ನು ಪುಸ್ತಕದಲ್ಲಿ ಓದಿಯೇ ಆನಂದಿಸಬೇಕು.

ಈ ಮೊದಲೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿರುವ ಡಾ.ಸತ್ಯವತಿ ಮೂರ್ತಿಯವರು ಕಳೆದ ಜೂನ್ ತಿಂಗಳಲ್ಲಿ ಒಂದೇ ದಿನ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡವನ್ನು ಆಳವಾಗಿ ಅಧ್ಯಯನ ಮಾಡಿ ಭೋಧನಾ ವೃತ್ತಿಯಲ್ಲಿ ಹೆಸರು ಮಾಡಿದ್ದ ಇವರು ಇಂಗ್ಲೆಂಡಿಗೆ ತೆರಳಿದ ಮೇಲೆ ಅಕೌಂಟಿಂಗ್ ಪರೀಕ್ಷೆಗಳನ್ನು ಬರೆದು ಪ್ರಾಜೆಕ್ಟ್ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡದ ಅನೇಕ ದಿನ ಪತ್ರಿಕೆಗಳಲ್ಲಿ, ವಾರ ಪತ್ರಿಕೆಗಳಲ್ಲಿ ಇವರು ಬರೆದ ಕಥೆ, ಕವನಗಳು ಪ್ರಕಟವಾಗಿದೆ. ಈ ವರ್ಷ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ.

“… ತಾಯಿಯ ಮಡಿಲಲ್ಲಿ ಸಿಗುವ ಸುಖ, ನೆಮ್ಮದಿಯನ್ನು ಬೇರೆ ಹೆಂಗಸಿನ ಮಡಿಲಲ್ಲಿ (ಆಕೆ ಎಷ್ಟೇ ದಯಾಪರರಾಗಿರಲಿ, ಪ್ರೀತಿ ತೋರಿಸಲಿ) ಕಾಣಲಾದೀತೆ? ಹೇಗೋ ಕಾಲ ತಳ್ಳುತ್ತಿದೆ, ದಿನಗಳುರುಳುತ್ತಿವೆ. ಬದುಕಿರುವವರೆಗೂ ಇರುಳು ಬೆಳಕು ಕಾಣುತ್ತಲೇ ಇರಬೇಕು, ಇರುತ್ತೇವೆ!” ಎಂದು ಲೇಖಕಿ ಹೇಳಿದ್ದಾರೆ. ಈ ಸಾಲುಗಳಲ್ಲಿರುವ ಒಂದು ವಿರಕ್ತಿಯ ಬಾವದ ಎಳೆ ಲೇಖಕಿಗೆ ಇರುವುದರಿಂದ, ಕಂಡಿದ್ದನ್ನು ಮತ್ತು ಅನುಭವಿಸಿದ್ದನ್ನು ವೈಭವೀಕರಿಸದೆ ಅಥವಾ ಹೀಗಳಿಯಲು ಹೋಗದೆ, ಇದ್ದಿದ್ದನ್ನು ಇದ್ದ ಹಾಗೆ ಬರೆಯಲು ಸಾಧ್ಯವಾಗಿದೆ. ಹಾಗಾಗಿ ಬರಹ ಭಿತ್ತಿ ಚಿತ್ರಗಳ ತರಹ ತೆರೆದು ಕೊಳ್ಳುತ್ತಾ ಹೋಗುತ್ತದೆ. ಆ ದಾರಿಯಲ್ಲಿ ನಾವು ಸಹ ಪ್ರಯಾಣಿಕರಾಗುವುದರಿಂದ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಉಪಯೋಗಿಸಿರುವ ಉತ್ತಮ ಮಟ್ಟದ ಬಿಳಿ ಕಾಗದ ಮತ್ತು ಅದರ ಮೇಲೆ ಮೂಡಿಸಿರುವ ಸುಂದರ ಅಕ್ಷರಗಳು ಸುಲಲಿತವಾಗಿ ಓದುವಂತೆ ಮಾಡಿರುವುದು ಈ ಪುಸ್ತಕದ ಇನ್ನೊಂದು ವಿಶೇಷ.

‘ಪಾಶ್ಚಾತ್ಯರ ದಿನ ನಿತ್ಯದ ಬದುಕಿನ ಬಗ್ಗೆ ತಿಳಿಯಲು ಆಸಕ್ತಿಯಿರುವ ಓದುಗರೆಲ್ಲರಿಗೂ ಈ ಪುಸ್ತಕ ಆಹಾರವನ್ನೊದಿಗುಸುತ್ತದೆ’ ಎಂದು ಮುನ್ನುಡಿಯಲ್ಲಿ ಡಾ.ಜೀವಿ ಕುಲಕರ್ಣಿಯವರು ಹೇಳಿರುವುದು ಸರಿಯಾಗಿದೆ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ. ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW