‘ಮಹಾಭಾರತದ ರಸ ಘಟ್ಟಗಳು’ ಕೃತಿ ಪರಿಚಯ

ಹಿರಿಯ ಲೇಖಕಿ ಶಾಂತಾ ನಾಗಮಂಗಲರವರು ಮಹಾಭಾರತದ ಮೂರು ಪ್ರಸಂಗಗಳನ್ನು ಆಯ್ದುಕೊಂಡು “ಮಹಾಭಾರತದ ರಸ ಘಟ್ಟಗಳು” ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಕುರಿತು ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಮಹಾಭಾರತದ ರಸ ಘಟ್ಟಗಳು
ಲೇಖಕಿ: ಶಾಂತಾ ನಾಗಮಂಗಲ
ಪ್ರಕಟನೆ: ಪುಷ್ಯ ಪ್ರಕಾಶನ.
ಪ್ರಥಮ ಮುದ್ರಣ: ಎಪ್ರಿಲ್ ೨೦೨೨.

ಪುಸ್ತಕ ಪರಿಚಯ:
ಮಹಾಭಾರತದ ಕಥೆ ಗೊತ್ತಿಲ್ಲದವರು ಯಾರು? ಇದೊಂದು ಪ್ರಾಚೀನ ಮಹಾಕಾವ್ಯ. ಓದು, ಬರಹ ಗೊತ್ತಿಲ್ಲದವರಿಗೂ ಮಹಾಭಾರತದ ಕಥೆಗಳು ಗೊತ್ತಿರುತ್ತದೆ. ನಮ್ಮ ದಿನ ನಿತ್ಯದಲ್ಲಿ ನಡೆಯುವ ಘಟನೆಗಳನ್ನು ಈ ಕಥೆಯಲ್ಲಿ ಬರುವ ಘಟನೆಗಳ ಜೊತೆ ಹೋಲಿಸಿಕೊಂಡು ಮಾತನಾಡುವುದು ಸಾಮಾನ್ಯ.

ಮಹಾಭಾರತ ಗೊತ್ತಿರುವ ಕಥೆಯಾದರೂ ಈ ಕಥೆಗಳ ಬಗ್ಗೆ ಹೊಸ ಪುಸ್ತಕಗಳು ಹೊಸ, ಹೊಸ ದೃಷ್ಟಿಕೋನದಿಂದ ನೋಡುತ್ತಾ ಬರುತ್ತಲೇ ಇವೆ. ಕಥೆಯ ಕೊನೆಯ ‘ಕ್ಲೈಮ್ಯಾಕ್ಸ್’ ಗೊತ್ತಿದ್ದರೂ ಆ ಹೊಸ ಪುಸ್ತಕಗಳನ್ನು ಸಾಹಿತ್ಯಾಸಕ್ತರು ಮತ್ತೆ, ಮೆತ್ತೆ ಓದುವುದು ಈ ಕಥೆಗಳಿಗೆ ಇರುವ ಶಕ್ತಿಯನ್ನು ತೋರಿಸುತ್ತದೆ. ಇದೊಂದು ದಾರ್ಶನಿಕ, ನೈತಿಕ, ಧಾರ್ಮಿಕ ಸಂಗತಿಗಳ ಬಗ್ಗೆ ಆಳವಾದ ನೋಟವನ್ನು ಬೀರುವ ಅದ್ಭುತ ಮಹಾಕಾವ್ಯವಾಗಿದೆ. ಹಾಗಾಗಿ “ಧರ್ಮೇ ಚ ಅರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನಾನ್ಯತ್ರ ಕ್ವಚಿತ್” ಎಂದು ಹೇಳುತ್ತಾರೆ. ಅಂದರೆ ಧರ್ಮ, ಅರ್ಥ, ಆಸೆ ಮತ್ತು ಮೋಕ್ಷದ ನಾಲ್ಕು ಪುರುಷಾರ್ಥಗಳಿಗೆ ಸಂಬಂಧಿಸಿದಂತೆ ಇಲ್ಲಿರುವುದನ್ನೇ ಬೇರೆಡೆಯೂ ಕಾಣಬಹುದು. ಆದರೆ ಮಹಾಭಾರತದಲ್ಲಿ ಇಲ್ಲದಿರುವುದು ಬೇರೆಲ್ಲೂ ಇರಲು ಸಾಧ್ಯವಿಲ್ಲ.

ಈ ಮಹಾಕಾವ್ಯದಲ್ಲಿ ಎಲ್ಲಾ ನವರಸಗಳನ್ನು ಹದವಾಗಿ ಬೆರತಿರುವುದು ಇನ್ನೊಂದು ವಿಶೇಷವೇ ಸರಿ. ಕುಟುಂಬಗಳ ನಡುವೆ ವೈಷಮ್ಯ, ಯುದ್ಧ, ಧರ್ಮ ಸಂಸ್ಥಾಪನೆಯಂತಹ ಗಹನವಾದ ವಿಷಯಗಳನ್ನು ಹೇಳುತ್ತಿರುವಾಗ ಮಧ್ಯೆ ಬರುವ ಉತ್ತರ ಕುಮಾರನಂತಹ ಕಥೆಗಳು ಸ್ವಲ್ಪ ಮಟ್ಟಿಗೆ “ಕಾಮಿಕ್ ರಿಲೀಫ್” ಕೊಡುವುದು ಸರಿಯಷ್ಟೆ. ಶ್ರೀಮತಿ ಶಾಂತಾ ನಾಗಮಂಗಲರವರು ಮಹಾಭಾರತದ ಮೂರು ಪ್ರಸಂಗಗಳನ್ನು ಆಯ್ದುಕೊಂಡು ವ್ಯಾಸ, ಪಂಪ, ಕುಮಾರವ್ಯಾಸ ರಚಿತ ಮಹಾಭಾರತಗಳಲ್ಲಿ ಬರುವ ವಿಷಯಗಳ ತೌಲನಿಕ ಅಧ್ಯಯನ ಮಾಡಿ ಅದರಲ್ಲಿ ಅಡಕವಾಗಿರುವ ವಿಷಯಗಳನ್ನು “ಮಹಾಭಾರತದ ರಸ ಘಟ್ಟಗಳು” ಎಂಬ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.

ಮೊದಲ ರಸಘಟ್ಟವನ್ನಾಗಿ ‘ಹಿಡಿಂಬಾ ಪರಿಣಯ’ವನ್ನು ಆರಿಸಿಕೊಂಡಿದ್ದಾರೆ. ವ್ಯಾಸರ “ಮಹಾಭಾರತ”ದಲ್ಲಿ ಹಿಡಿಂಬೆಯ ಕಥೆಯು ಸರಳ ಹಾಗೂ ಹೆಚ್ಚು ಸಾಂಪ್ರದಾಯಿಕವಾಗಿದೆ. ಒಬ್ಬ ರಾಕ್ಷಸಿ ಮತ್ತು ನರನ ನಡುವಿನ ಪ್ರೀತಿ, ಯುದ್ಧ ಮತ್ತು ತ್ಯಾಗದ ಕಥೆಯಾಗಿ ಮೂಡಿ ಬಂದಿದೆ. ಇಲ್ಲಿ ಹಿಡಿಂಬೆ ತನ್ನ ಸಹೋದರನಾದ ಹಿಡಿಂಬನನ್ನು ಕೊಂದ ಭೀಮನ ಮೇಲೆ ಪ್ರೀತಿಯಿಂದ ಧರ್ಮರಾಯನ ಶರತ್ತುಗಳನ್ನು ಒಪ್ಪಿ ವಿವಾಹವಾಗುತ್ತಾಳೆ. ಇದರ ನಂತರ ಹಿಡಿಂಬೆ ಭೀಮನಿಗೆ ತಾತ್ಕಾಲಿಕ ಸಂಗಾತಿಯಾಗಿ ಕಾಣಿಸಿಕೊಂಡು ತನ್ನ ಮಗನನ್ನು ಸಾಕಲು ವನದಲ್ಲಿಯೇ ಉಳಿಯುತ್ತಾಳೆ. ‘ಹಿಡಿಂಬಾ ಪರಿಣಯ’ದಲ್ಲಿ ರಾಕ್ಷಸಿಯಾದರೂ ಮನುಷ್ಯನಾದ ಭೀಮನ ಮೇಲೆ ಪ್ರೇಮಾಂಕುರವಾದಾಗ ವ್ಯಾಸರಿಗೆ ಸರ್ವಜೀವಗಳ ಮೇಲೆ ಇರುವ ಕಾರುಣ್ಯದ ಪರಿಯನ್ನು ಲೇಖಕಿ ಗುರುತಿಸಿ, ತೆರೆದಿಟ್ಟಿದ್ದಾರೆ.

ಹಿಡಿಂಬೆ ಭೀಮನನ್ನು ಪ್ರಥಮಬಾರಿ ನೋಡುವ ಸನ್ನಿವೇಶದಲ್ಲೇ ಕವಿಗಳು ಮಾಡಿರುವ ಸೂಕ್ಷ್ಮ ವ್ಯತ್ಯಾಸಗಳನ್ನು ಲೇಖಕಿ ಕಂಡಿರುವ ಪರಿ ನೋಡೋಣ. ವ್ಯಾಸರ ಪ್ರಕಾರ ಹಿಡಿಂಬೆಯೇ ದೂರದಿಂದ ಭೀಮನನ್ನು ಮೊದಲು ನೋಡಿದಾಗ ಅತನಲ್ಲಿ ಆಕೆಗೆ ತಕ್ಷಣವೇ ಪ್ರೇಮಾಂಕರವಾಗುವುದು. ಆಕೆ ಭೀಮನನ್ನು ಒಲಿಸಿಕೊಳ್ಳುವ ಮಾರ್ಗದಲ್ಲಿ ಮಾಡಿದ ಮೊದಲ ಕೆಲಸವೇ ರಾಕ್ಷಸಿ ರೂಪದಿಂದ ರೂಪಾಂತರ ಹೊಂದಿ ಉತ್ತಮ ರೂಪವನ್ನು ಪಡೆದು ಭೀಮನನ್ನು ಮಾತನಾಡಿಸುವುದು. ಆದರೆ ಪಂಪನ ಭಾರತದಲ್ಲಿ ಭೀಮನೇ ದೂರದಿಂದ ಈ ಸುಂದರಿ ಬರುವುದನ್ನು ಕಂಡು ‘ಇವಳು ಯಾರೋ, ಒಂದು ನರಪಿಳ್ಳೆಯೂ ಸುಳಿಯದಿದ್ದ ಈ ವನದಲ್ಲಿ ಇವೆಳೆಲ್ಲಿಂದ ದಿಢೀರ್ ಎಂದು ಬಂದಳು’ ಎಂದು ಸ್ವಲ್ಪ ಆತಂಕಪಡುತ್ತಾನೆ. ಕುಮಾರವ್ಯಾಸನು ಪಂಪನ ದಾರಿ ತುಳಿದರೂ ಆತನಿಗೆ ಪಂಪನಷ್ಟು ಅವಸರವಿಲ್ಲ. ಹಾಗಾಗಿ ಭೀಮನಿಗೆ ಗುಂಗುರು ಕೂದಲು, ಕೆಂಚು ಮೀಸೆ, ಕೆಂಪು ಕಣ್ಣು, ಮಲ್ಲಿಗೆಯಂತೆ ಬಿಳಿಪು ಹಲ್ಲು ಎಂದು ವರ್ಣಿಸಿ ನಂತರ ಹಿಡಿಂಬೆ ಕೈಲಿ ಮಾತನಾಡಿಸುತ್ತಾನೆ. ಹಿಡಿಂಬೆ ಭೀಮನನ್ನು ಪ್ರಥಮಬಾರಿ ಮಾತನಾಡುವಾಗ ಇರುವ ಈ ಸೂಕ್ಷ್ಮ ವ್ಯತ್ಯಾಸಗಳನ್ನು ‘ಹಿಡಿಂಬೆ ಪರಿಣಯ’ದ ಸುತ್ತಲೂ ಲೇಖಕಿ ತೆರೆದಿಡುತ್ತಾರೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಲೇಖಕಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿದ ಪರಿ. ಹಿಡಿಂಬೆ ಶೃಂಗಾರಭಾವ ತಳೆದ ನಂತರ ಸುಂದರ ರೂಪ ಧರಿಸಿ ಸ್ವಾಭಾವಿಕವಾಗಿ ಒರಟಾಗಿರುವ ರಾಕ್ಷಸಿಯ ಚರ್ಮ, ಉಗುರುಗಳು ಕೂಡ ಸುಕೋಮಲವಾಗಿರುವಂತೆ ವರ್ಣಿಸಿರುವುದನ್ನು ಹೇಳುತ್ತಾ ವ್ಯಾಸರ ಮನೋಧರ್ಮವನ್ನು ಗುರುತಿಸಿರುವ ರೀತಿ ಲೇಖಕಿ ಎಲ್ಲಾವನ್ನು ಸೂಕ್ಷ್ಮ ವಾಗಿ ಗಮನಿಸಿರುವುದನ್ನು ತೋರಿಸುತ್ತದೆ. ಸಿದ್ಧವಾಗಿರುವ ಬುದ್ಧಿಗೆ ಮಾತ್ರ ಈ ರೀತಿಯ ಸೂಕ್ಷ್ಮಗಳನ್ನು ಹಿಡಿದು ತೋರಿಸಲು ಸಾಧ್ಯ.

ಲೇಖಕಿಯ ಪ್ರಕಾರ ಭೀಮನನ್ನು ನೋಡಿದ ತಕ್ಷಣ ಪ್ರೇಮಾಂಕುರವಾಗುವುದು ಈಗೀನ ಕಾಲದ ‘ಕ್ಲೀನ್ ಬೌಲ್ಡ್’ ತರಹವೇ ಇದೆ. ಕುಮಾರವ್ಯಾಸ ತನ್ನ ಕಾಲದ ನುಡಿಗಟ್ಟುಗಳನ್ನು ಸೇರಿಸಿ ಕಾವ್ಯವನ್ನು ಸ್ವಾರಸ್ಯಗೊಳಿಸಿರುವಂತೆ ಲೇಖಕಿ ಈಗೀನ ನುಡಿಗಟ್ಟುಗಳನ್ನು ತಮ್ಮ ವ್ಯಾಖ್ಯಾನದಲ್ಲಿ ಸ್ವಾಭಾವಿಕವಾಗಿ ಬಂದಂತೆ ಸೇರಿಸಿರುವುದು ಗಮನ ಸೆಳೆಯುತ್ತದೆ. ಹಿಡಿಂಬೆ ಮತ್ತು ಭೀಮ ‘ಮಧುಚಂದ್ರ’ಕ್ಕೆ ಹೋದ ಜಾಗದ ವರ್ಣನೆಯನ್ನು ಪುಸ್ತಕದಲ್ಲಿ ಓದಿ ಆನಂದಿಸಬೇಕು.

‘ದ್ರೌಪತಿ ಸ್ವಯಂವರ’ ಎರಡನೇಯ ರಸಘಟ್ಟ. ಈ ಸಂದರ್ಭ ಮಹಾಭಾರತದ ಪ್ರಮುಖ ಘಟನೆಯಾಗಿದೆ. ಇದನ್ನು ವ್ಯಾಸರು ಮತ್ತು ಕುಮಾರವ್ಯಾಸ ವಿಭಿನ್ನ ಶೈಲಿಯಲ್ಲಿ ವಿವರಿಸುತ್ತಾರೆ. ಈ ಎರಡು ಕಾವ್ಯಗಳಲ್ಲಿ ಸ್ವಯಂವರದ ವಿವರಣೆ ಶೈಲಿಯ, ಪ್ರಾಸಂಗಿಕ ತತ್ವಗಳ ಮತ್ತು ಪಾತ್ರಗಳ ನಿರೂಪಣೆಯ ಆಧಾರದಲ್ಲಿ ವ್ಯತ್ಯಾಸವಿರುವುದನ್ನು ಲೇಖಕಿ ಮನೋಜ್ಞವಾಗಿ ತೆರೆದಿಟ್ಟಿದ್ದಾರೆ.

ವ್ಯಾಸನ ಮಹಾಭಾರತದಲ್ಲಿ, ಸ್ವಯಂವರವು ಶಾಂತತೆಯಿಂದ ಸಾಗುವ ಘಟನೆಯಾಗಿದ್ದು, ಕಾವ್ಯದ ಪ್ರಮುಖ ಸಾಂದರ್ಭಿಕತೆಯು ಧರ್ಮ ಹಾಗೂ ಕರ್ಮದ ಅನ್ವೇಷಣೆಯ ಕಡೆಗೆ ಹೆಚ್ಚು ಮನಸ್ಸು ತೋರಿಸುತ್ತದೆ.

ಕುಮಾರವ್ಯಾಸನ ನಿರೂಪಣೆಯು ವ್ಯಾಸರ ದಾರಿಯಲ್ಲಿ ಸಾಗಿದರೂ ಅದಕ್ಕೊಂದು ಪೂರ್ವ ಭಾಗವನ್ನು ಚಿತ್ರಿಸಿದೆ. ಈ ಭಾಗದಲ್ಲಿ ದ್ರೌಪತಿಯ ಸೌಂದರ್ಯದ ಮತ್ತು ಆಕೆಯ ನಡೆ-ನುಡಿಗಳ ಆಕರ್ಷಣವಾದ ಚಿತ್ರಣವಿದೆ. ಇದರ ಜೊತೆಗೆ ರಾಜಮಹಲಿನ ಸುತ್ತುಮುತ್ತಲಿನ ಉತ್ಸಾಹ, ಸ್ವಯಂವರದಲ್ಲಿ ಪಾಲ್ಗೊಳ್ಳುವ ರಾಜರುಗಳ ಬುದ್ಧಿ, ವೈಭವ ಮತ್ತು ಶೌರ್ಯದ ಬಗ್ಗೆ ವಿವರಣೆ, ಕರ್ಣನ, ದುರ್ಯೋಧನನ ಮತ್ತು ಇತರ ರಾಜರುಗಳ ಪ್ರತಿಕ್ರಿಯೆ ಮತ್ತು ಅವರ ವಿಕ್ರಮಗಳ ಬಗ್ಗೆ ಗಂಭೀರವಾಗಿ ಮತ್ತು ಉತ್ಸಾಹಭರಿತವಾಗಿ ಲೇಖಕಿ ವಿವರಿಸಿರುವುದನ್ನು ಪುಸ್ತಕದಲ್ಲಿ ಓದಿದರೆ ಚೆಂದ. ಕುಮಾರವ್ಯಾಸನ ಕಥೆ ಭಾವನಾತ್ಮಕ ತೀವ್ರತೆ, ಶೃಂಗಾರ, ಮತ್ತು ಪಾತ್ರಗಳ ನಡುವಿನ ನಾಟಕೀಯತೆ ಮೇಲೆ ಪೂರ್ವಭಾವಿಯಾಗಿ ಕಟ್ಟಿಕೊಟ್ಟಿರುವ ಈ ಚಿತ್ರಣ ಮನ ಮುಟ್ಟುತ್ತದೆ.

‘ಉತ್ತರನ ಪೌರುಷ’ ಜನ ಸಾಮಾನ್ಯರ ಮನಸ್ಸಿನಲ್ಲಿ ಬೇರೂರಿರುವ ಘಟನೆ. ಈ ಘಟನೆ ಕುರುಕ್ಷೇತ್ರ ಯುದ್ಧದ ಪೂರ್ವದಲ್ಲಿ ನಡೆಯುವ ಒಂದು ಪ್ರಮುಖ ಘಟನೆ. ಇದರಲ್ಲಿ ಉತ್ತರನು ಅರ್ಜುನನ ಸಹಾಯದಿಂದ ಕೌರವರ ವಿರುದ್ಧ ತನ್ನ ಪೌರುಷವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾನೆ. ಈ ಘಟನೆಯನ್ನು ವ್ಯಾಸರು ಮತ್ತು ಕುಮಾರವ್ಯಾಸರು ವಿಭಿನ್ನ ಶೈಲಿಯಲ್ಲಿ ನಿರೂಪಿಸಿರುವುದನ್ನು ಲೇಖಕಿ ರಸವತ್ತಾಗಿ ತೆರೆದಿಟ್ಟಿದ್ದಾರೆ.

ವ್ಯಾಸ ಮಹಾಭಾರತದಲ್ಲಿ ಉತ್ತರನ ಪಾತ್ರವು ಹೆಚ್ಚು ಸಾಂದರ್ಭಿಕವಾಗಿ ನಿರೂಪಿತವಾಗಿದೆ. ಉತ್ತರ ತನ್ನ ಪೌರುಷವನ್ನು ಅರಮನೆಯಲ್ಲಿ ಬಡಾಯಿ ಕೊಚ್ಚಿಕೊಂಡರೂ ವಾಸ್ತವವಾಗಿ ಯುದ್ಧದ ವೇಳೆ ಭಯಭೀತನಾಗುತ್ತಾನೆ. ಇಲ್ಲಿ ನಿಜವಾದ ನಾಯಕ ಅರ್ಜುನನೇ ಆಗಿರುತ್ತಾನೆ.

ಕುಮಾರವ್ಯಾಸನು ಕನ್ನಡ ಭಾರತದಲ್ಲಿ ಉತ್ತರನ ಪೌರುಷವನ್ನು ವಿಶಿಷ್ಟ, ನಾಟಕೀಯ ಮತ್ತು ಭಾವನಾತ್ಮಕವಾಗಿ ಚಿತ್ರಿಸಿದ್ದಾನೆ. ಉತ್ತರನು ಹೆಂಗಳೆಯರ ಮುಂದೆ ತೋರಿಸುವ ಧೈರ್ಯ, ಪೌರುಷ ಮತ್ತು ಕೊನೆಯಲ್ಲಿ ಯುದ್ಧಕ್ಕೆ ತಯಾರಾದಾಗ ಎದುರಿಸಿದ ಆತಂಕವನ್ನು ನಾಟಕೀಯವಾಗಿ ಚಿತ್ರಿಸುತ್ತಾನೆ. ಹಾಸ್ಯರಸದ ಲೇಪನ ಹೊಂದಿರುವ ಈ ಭಾಗ, ಈಗಾಗಲೇ ಗೊತ್ತಿದ್ದರೂ, ಹೊಸ ವಿಷಯ ಓದಿದಾಗ ಕೊಡುವ ಸಂತೋಷವನ್ನು ಮತ್ತೆ ಕೊಡುತ್ತದೆ.

ಕುಮಾರವ್ಯಾಸನ ನಿರೂಪಣೆ ಉತ್ತರನ ಭಾವನೆಗಳನ್ನು, ಆತ್ಮವಿಶ್ವಾಸದ ಗೆಲುವುಗಳನ್ನು ಮತ್ತು ಆತನಲ್ಲಿನ ಧೈರ್ಯವನ್ನು ಘನವಾಗಿಸುತ್ತಾ ಸಾಗುತ್ತದೆ. ಘಟನೆಯ ನಾಟಕೀಯತೆ, ವೀರತ್ವ, ಮತ್ತು ಬಾಹ್ಯ-ಆಂತರಿಕ ಸಂಘರ್ಷಗಳನ್ನು ಹೆಚ್ಚು ಆಕರ್ಷಕವಾಗಿ ತೆರೆದಿಡುತ್ತದೆ.

ನರ್ತನ ಶಾಲೆಯಲ್ಲಿ ಹೆಂಗಸರ ಮೇಳದಲ್ಲಿದ್ದ ಉತ್ತರನಿಗೆ ಪಶುಸಂಗೋಪನಾ ವಿಭಾಗದ ಮುಖ್ಯಸ್ಥ ಉತ್ತರನ ಬಿಲ್ಲನ್ನು ವೀಣೆಗೆ ಹೋಲಿಸಿ “ಈಗ ನೀನು ನಿನ್ನ ವೀಣೆಯಂತಹ ಬಿಲ್ಲಿನ ವಾದನವನ್ನು ಶತ್ರುಗಳಿಗೆ ಕೇಳಿಸುವಂತೆ ಮಾಡು’ ಎನ್ನುವ ಮಾತು ತುಂಬಾ ಮಾರ್ಮಿಕವಾಗಿದೆ. ಲೇಖಕಿ ಅದೇ ರೀತಿ ಕುದುರೆಗಳನ್ನು ರಥಕ್ಕೆ ‘ಕಟ್ಟಿದನು’ ಎಂದು ಹೇಳದೇ ‘ಬಿಗಿದನು’ ಎಂದು ಹೇಳುವುದಲ್ಲಿರುವ ಶಬ್ಧಾರ್ಥದ ಬಗ್ಗೆ ಗಮನ ಸೆಳೆಯುತ್ತಾರೆ. ಉತ್ತರ ದುಷ್ಟನೇನಲ್ಲ. ಆತನಿಗೆ ಭಯದ ವ್ಯಾಧಿ ಅಷ್ಟೇ. ಅದನ್ನು ಯಥಾವತ್ತಾಗಿ ಗ್ರಹಿಸಿರುವ ಕುಮಾರವ್ಯಾಸ ಮುಂದೆ ಬಹುಶಃ ವ್ಯಾಸರನ್ನು ಮೀರಿ ಉತ್ತರನ ಪಲಾಯನವನ್ನು ಚಿತ್ರಿಸಿದ್ದಾರೆ ಎಂದು ಲೇಖಕಿ ಹೇಳಿದ್ದಾರೆ. ಓದುತ್ತಿರುವಂತೆ ಕಣ್ಣ ಮುಂದೆ ನಡೆಯುತ್ತಿರುವ ನಾಟಕದ ಅನುಭವವನ್ನು ಈ ಭಾಗ ಕೊಡುತ್ತದೆ.

ಪುಸ್ತಕವೊಂದನ್ನು ತೆಗೆದುಕೊಳ್ಳಲು ಅಂಗಡಿಗೆ ಹೋದಾಗ ಮೊದಲು ಮುಖಪುಟ ನೋಡಿ, ನಂತರ ಯಾವುದಾದರೂ ಒಂದು ಪುಟ ತೆಗೆದು, ಅದರಲ್ಲಿ ಒಂದೆರೆಡು ಸಾಲು ಓದಿ ಖುಷಿ ಅನಿಸಿದರೆ ಸಾಮಾನ್ಯವಾಗಿ ಆ ಪುಸ್ತಕ ತೆಗೆದುಕೊಳ್ಳುತ್ತೇವೆ. ಈ ಪುಸ್ತಕದ ಮೇಲೆ ಮುಖಪುಟದಲ್ಲಿ ಇಬ್ಬರು ಋಷಿಗಳು ಇದ್ದಾರೆ, ಒಳಗಡೆ ಪುಟದಲ್ಲಿ ವ್ಯಾಸ-ಕುಮಾರವ್ಯಾಸ ಹೆಸರಿದೆ. ಯಾವುದೋ ಒಂದು ಪುಟ ಹಾಗೇ ನೋಡಿದಾಗ ಅಲ್ಲಲ್ಲಿ ಪದ್ಯಗಳು ಕೂಡ ಇವೆ. ವ್ಯಾಸ-ಕುಮಾರವ್ಯಾಸರನ್ನು ಹೈಸ್ಕೂಲಿನಲ್ಲಿ ಒಂದಿಷ್ಟು ಬಾಯಿಪಾಠ ಮಾಡಿ, ಪರೀಕ್ಷೆಯಲ್ಲಿ ಬರೆದು ಪಾಸು ಮಾಡಿರುವುದು ನೆನಪಿಗೆ ಕೂಡ ಬಂತು. ಹಾಗಾದರೆ ಈ ಪುಸ್ತಕ ಕನ್ನಡ ಮೇಷ್ಟ್ರುಗಳಿಗೆ ಮಾತ್ರವೇ ಎಂಬ ಭಾವನೆ ನನಗೆ ಬಂದಿದ್ದು ಆಶ್ಚರ್ಯವಿಲ್ಲ. ಪುಸ್ತಕ ತೆರೆದಾಗ ‘ಉತ್ತರನ ಪೌರುಷ’ ಕಥೆಯ ಒಂದು ಪುಟ ತೆರೆದು ಕೊಂಡಿತು. ಆಗ, ಸಂಸಾರಿಕ ಕಥೆಗಳ ಮಧ್ಯೆ ಒಂದು ‘ರಿಲೀಫ್’ ಈ ಗೊತ್ತಿರುವ ಕಥೆ ಕೊಡಬಹುದು ಅನಿಸಿತು. ಹಾಗಾಗಿ ತೆಗೆದುಕೊಂಡೆ. ಓದುತ್ತಾ ಹೋದಂತೆ ನಾವು ನೋಡುವ ಈಗಿನ ಜೀವನದ ಘಟನೆಗಳನ್ನು ಮಹಾಭಾರತದ ಘಟನೆಗಳಿಗೆ ಅಲ್ಲಲ್ಲಿ ಹೋಲಿಸುತ್ತಾ, ಈಗಿನ ನುಡಿಗಟ್ಟುಗಳನ್ನು ಅವರ ವ್ಯಾಖ್ಯಾನದಲ್ಲಿ ಎಳೆ ಎಳೆಯಾಗಿ ತಿಳಿಹಾಸ್ಯ ಬೆರಸಿ ತೆರೆದಿಟ್ಟಿದ್ದಾರೆ . ಇದೊಂದು ‘ಮಿಲ್ಕ್ ಮೈಡ್’ನಲ್ಲಿ ಮಾಡಿದ ಶಾವಿಗೆ ಪಾಯಸದ ತರಹ ರುಚಿಕಟ್ಟಾಗಿದೆ. ಕವಿವರೇಣ್ಯರ ಪದಗಳ ಬಳಕೆಯಲ್ಲಿರುವ ಸೌಂದರ್ಯ, ಅವು ಹೊರಡುಸುವ ಧ್ವನಿಗಳು, ಸಂದರ್ಭದ ವಿಶೇಷಣಗಳ ಮೇಲೆ ಬೀರುವ ಪ್ರಭಾವಗಳನ್ನು ತೋರಿಸಲು ಮಾತ್ರ ಮಧ್ಯೆ, ಮಧ್ಯೆ ಪುಸ್ತಕದಲ್ಲಿ ಬಂದಿರುವ ಈ ಸರಳ ಪದ್ಯಗಳು ಪಾಯಸದಲ್ಲಿ ಸಿಗುವ ತುಪ್ಪದಲ್ಲಿ ಕರಿದು ಹಾಕಿರುವ ದ್ರಾಕ್ಷಿಗಳ ತರಹವಿದೆ. ಹಾಗಾಗಿ ಅವು ಹಲ್ಲಿಗೆ ತ್ರಾಸ ಕೊಡದೆ, ರುಚಿ ಹೆಚ್ಚಿಸುತ್ತದೆ. ಹಾಗಾಗಿ ಈ ಪುಸ್ತಕ ಕನ್ನಡದ ಪಂಡಿತರಿಗೆ ಮಾತ್ರವಲ್ಲದೇ ಪಾಮರರಿಗೂ ಇಷ್ಟವಾಗುವಂತಿದೆ.

ಶ್ರೀಮತಿ ಶಾಂತಾ ನಾಗಮಂಗಲರವರು ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಬರೆದ ‘ಕೀರ್ತನಕಲೆ ಮತ್ತು ಗಮಕ ಕಲೆ -ಒಂದು ತೌಲನಿಕ ಅಧ್ಯಯನ’ ಎಂಬ ಫೆಲೋಷಿಪ್ ಪ್ರಬಂಧವು ಕರ್ನಾಟಕ ನೃತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಕಥೆ, ಕವನ, ಲಲಿತಾ ಪ್ರಬಂಧ ಮುಂತಾದ ಲೇಖನಗಳನ್ನು ಮಲ್ಲಿಗೆ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಾಚನ-ವ್ಯಾಖ್ಯಾನ ಕ್ಷೇತ್ರದಲ್ಲಿ ಮಾಡಿರುವ ಕೆಲಸಕ್ಕೆ ೨೦೧೬ರಲ್ಲಿ ‘ಶಾಂತರಾಮ್ ದತ್ತಿನಿಧಿ ಪ್ರಶಸ್ತಿ’ಯನ್ನು ಭಂಡಾರ್ಕರ್ಸ್ ಕಾಲೇಜು, ಕುಂದಾಪುರದವರು ಇವರಿಗೂ ಮತ್ತು ವಾಚನಕಾರರಾದ ಶ್ರಿ ಚಂದ್ರಶೇಖರ ಕೆದಿಲಾಯರವರಿಗೆ ನೀಡಿರುತ್ತಾರೆ. ಇವರ ‘ಪಟ ಗಾಳಿಯಲಿ ತೇಲಿ’ ಎಂಬ ಪ್ರಬಂಧ ಸಂಕಲನ ಬಿಡುಗಡೆಗೆ ಸಿದ್ಧವಾಗಿದೆ.

ಉತ್ತಮ ಪುಸ್ತಕ ಕೊಟ್ಟ ಲೇಖಕಿಗೆ ಧನ್ಯವಾದಗಳು.


  • ಎನ್.ವಿ.ರಘುರಾಂ – (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW