ಅವಳ ಪ್ರೀತಿಯ ಪರಿವೇ ಇಲ್ಲ, ಅದಕೇ ಅವಳು ಎಲ್ಲಕ್ಕೂ ಮಹಾಮಾತೆ… ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಈ ಕಾಳರಾತ್ರಿಯ ಆಳುವ
ಧಾತ್ರಿ
ಕರಿಯ ಹಸ್ತಗಳಲ್ಲಿ ಜಗವ ತಬ್ಬುವ
ಖಾತ್ರಿ
ಎಲ್ಲಾ ನೋವಿಗೂ ನಿದ್ರೆಯ
ತೆರೆಯೆಳೆದು
ಸಂತೈಸುತ್ತಾಳೆ
ತಾನೊಬ್ಬಳೇ ಕಾವಲಿಗಿದ್ದು
ಹಗಲು ಕಾಣಿಸಿದ ಡಂಬವೇಷಗಳ
ತಣ್ಣನೆಯ ಕತ್ತಲಲದ್ದಿ ತೊಳೆದುಬಿಡುತ್ತಾಳೆ
ಈಗ ಎಲ್ಲವೂ ಆಕೆಯ ಸ್ವಾಧೀನ
ಮನ ಮೋಹಿಸಿದ್ದೆಲ್ಲವೂ
ಈಗ ಲದ್ದಿ…ನಿದ್ರೆಯ ಹೊರತಾಗಿ
ಬೇಕಾಗಿಲ್ಲ ಯಾವ ಸಿದ್ಧಿ….
ನಾನು ನಿರಾಕರಿಸುತ್ತಿದ್ದೆನೇ
ಆಕೆಯ ಕಾಳತನವ
ಗೌರಾಂಗವನು ಮೋಹಿಸಿ ಅನ್ಯರ…
ಆ ಕಣ್ಕುಕ್ಕುವ ಬಿಳಿ
ಕಬಳಿಸಿತಲ್ಲ ತನ್ನೇಳು ಬಣ್ಣಗಳ
ತಲ್ಲಣಗಳ ದಂತದಲಿ
ಅರೆದು ಸಿಗಿದು…ಜಗಿದು
ನೊಂದೆಯಾ ಕಂದ ಅಂಜದಿರು
ನಾನಿರುವೆ ನಿನ್ನ ಸುಷುಪ್ತಿ…
ಮತ್ತೆ ರಣಸನ್ನದ್ಧಗೊಳಿಸಲು
ವಿರಾಮದಲಿ ಕಸುವು ತುಂಬಿ
ಆಶ್ವಾಸನೆಯ ನೆರಳಲ್ಲಿ
ನಿಶ್ಚಿಂತೆಯೀಗ
ಬಾಳ ವಿರಾಮದ ಗಮ್ಯಕ್ಕೆ
ಸಜ್ಜುಗೊಳಿಸುತ್ತಾಳೆ ತಾಯಿ
ನಮಗರಿಯದಂತೆ….
ಅವಳ ಪ್ರೀತಿಯ ಪರಿಗೆ
ಇಲ್ಲ ತಾರತಮ್ಯಗಳ ಚಿಂತೆ
ಅದಕೇ ಅವಳು ಎಲ್ಲಕ್ಕೂ
ಮಹಾಮಾತೆ…
- ಶಿವದೇವಿ ಅವನೀಶಚಂದ್ರ
