ಮಕರ ಸಂಕ್ರಾಂತಿ ವಿಶೇಷತೆಗಳು

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನವನ್ನು ಹಿಂದುಗಳು ಸಂಕ್ರಾಂತಿಯ ಹಬ್ಬವೆಂದು ಆಚರಿಸುತ್ತಾರೆ. ಚೇತನ ಭಾರ್ಗವ ಅವರ ಸಂಕ್ರಾಂತಿ ಹಬ್ಬದ ವಿಶೇಷತೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಸೂರ್ಯನು ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಬದಲಿಸುವ ದಿನವನ್ನು ದೇಶದಾದ್ಯಂತ ವಿವಿಧ ಹೆಸರಿನಲ್ಲಿ ವಿವಿಧ ಸಂಪ್ರದಾಯದಲ್ಲಿ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಾರೆ. ಈ ಕಾಲವನ್ನು ಉತ್ತರಾಯಣ ಪರ್ವಕಾಲವೆಂದೂ ಕರೆಯುತ್ತಾರೆ.

ಉತ್ತರಾಯಣ ಪರ್ವಕಾಲವೆಂದರೆ ಸೂರ್ಯನು ಭೂಮಧ್ಯ ರೇಖೆಯಿಂದ ಉತ್ತರಾಭಿಮುಖವಾಗಿ ಚಲಿಸುವ ಕಾಲ. ಉತ್ತರಾಯಣ ಕಾಲದಲ್ಲಿ ಭಗವಂತನ ವಿಶೇಷವಾದ ಅನುಗ್ರಹವಿರುತ್ತದೆ ಎಂದು ನಂಬಲಾಗುತ್ತದೆ.

ಫೋಟೋ ಕೃಪೆ : google

ಪುರಾಣದ ಪ್ರಕಾರ, ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರ ವಿವಾಹವಾಗಿದ್ದು, ಬ್ರಹ್ಮದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದಸ್ಪರ್ಶ ಮಾಡಿದ್ದು, ಋಷಿಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಈ ಉತ್ತರಾಯಣದಲ್ಲಿ. ಹಾಗಾಗಿ ಉತ್ತರಾಯಣ ಕಾಲದಲ್ಲಿ ಭಗವಂತನ ವಿಶೇಷ ಅನುಗ್ರಹವಿರುತ್ತದೆ ಎಂದು ಹೇಳಲಾಗುತ್ತದೆ.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿದ್ದಾನೆ. ಈ ಸಮಯದಲ್ಲಿ ಮರಣ ಹೊಂದಿದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ ಭೀಷ್ಮ ಪಿತಾಮಹರು ಶರಶೈಯೆಯಲ್ಲಿ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯಣದಲ್ಲಿ ದೇಹವನ್ನು ತ್ಯಜಿಸಲು ಒಪ್ಪದೇ, ಉತ್ತರಾಯಣ ಪುಣ್ಯಕಾಲದಲ್ಲಿಯೇ ತಮ್ಮ ದೇಹವನ್ನು ತ್ಯಜಿಸಿದರು.

ರೈತರು ತಾವು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಣದಲ್ಲಿ ರಾಶಿ ಹಾಕಿ, ಪೂಜೆ ಮಾಡಿ, ಧಾನ್ಯಗಳನ್ನು ಮನೆ ಒಳಗೆ ತಂದು ಹೊಸ ಅಕ್ಕಿ ಬೇಳೆಗಳಲ್ಲಿ ಪೊಂಗಲ್ ಹುಗ್ಗಿಯನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡಿ ಹೊಸ ಫಸಲನ್ನು ಬಂಧು ಬಾಂಧವರೊಂದಿಗೆ ಸವಿಯುತ್ತಾರೆ. ರೈತಾಪಿ ಜನರು ಸಮೃದ್ಧಿಯ ಸಂಕೇತವೇ ಸಂಕ್ರಾಂತಿ ಎಂದು ಸಡಗರದಿಂದ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿಯ ದಿನದಂದು ರೈತರು ಎತ್ತು ದನ ಕರುಗಳಿಗೆ ಮೈ ತೊಳಿಸಿ ಅಲಂಕರಿಸಿ ಕೆಂಡದ ಮೇಲೆ ಅವುಗಳನ್ನು ಓಡಿಸುವ ಸಾಂಪ್ರದಾಯಿಕ ಆಚರಣೆಯನ್ನು ಮಾಡುತ್ತಾರೆ ಮಕ್ಕಳು ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸುತ್ತಾರೆ.

ಫೋಟೋ ಕೃಪೆ : google

ಮಾರ್ಗಶಿರ ಮಾಸದ ಕೊರೆವ ಚಳಿಗೆ ನಮ್ಮ ದೇಹದ ಚರ್ಮವು ಒಡೆದು ಕಾಂತಿಯನ್ನು ಕಳೆದುಕೊಂಡಿರುತ್ತದೆ. ಎಳ್ಳಿನ ಸೇವನೆಯೂ ನಮ್ಮ ದೇಹಕ್ಕೆ ಬೇಕಾಗುವ ಶಾಖ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಸ್ನೇಹಿತರಿಗೆ ಸಂಬಂಧಿಕರಿಗೆ ಎಳ್ಳು ಬೆಲ್ಲವನ್ನು ಕೊಟ್ಟು ಒಳ್ಳೆಯ ಮಾತನಾಡಿ ಎಂದು ಹೇಳುತ್ತಾ, ಕಬ್ಬು ಮತ್ತು ಬಾಳೆಹಣ್ಣಿನೊಂದಿಗೆ ಎಳ್ಳು ಬೆಲ್ಲವನ್ನು ನೀಡುತ್ತಾ ಹೆಂಗಳೆಯರು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಎಳ್ಳಿನೊಂದಿಗೆ ಕಡಲೆ ಬೀಜ ಹುರಿಗಡಲೆ ಕೊಬ್ಬರಿಯನ್ನು ಮಿಶ್ರಣ ಮಾಡಿರುತ್ತಾರೆ. ಇದರಲ್ಲಿ ಚಳಿಗಾಲದ ಸಮಯದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಹೆಚ್ಚಿನ ಪ್ರೋಟೀನ್ ಅಂಶವು ಇರುತ್ತದೆ ಹಾಗೂ ಶೀತ ವಾತ ಆಲಸ್ಯವನ್ನು ದೂರ ಮಾಡುತ್ತದೆ.

ಭಾರತದ ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಕರ್ನಾಟಕ, ತೆಲಂಗಾಣ ಹಾಗೂ ಒಡಿಸ್ಸಾದಲ್ಲಿ ಮಕರ ಸಂಕ್ರಾಂತಿಯೆಂದೂ, ಗುಜರಾತಿನಲ್ಲಿ ಉತ್ತರಾಯಣಯೆಂದೂ, ಹಿಮಾಚಲ ಪ್ರದೇಶ ಪಂಜಾಬ್ ನಲ್ಲಿ ಮಾಘಿ, ಉತ್ತರ ಪ್ರದೇಶ ಕಿಚೇರಿ, ಪಶ್ಚಿಮ ಬಂಗಾಳ ತ್ರಿಪುರದಲ್ಲಿ ಪೌಶ್ ಸಂಕ್ರಾಂತಿ, ಬಿಹಾರದಲ್ಲಿ ದಹಿ ಚುರಾ,ಕೇರಳದಲ್ಲಿ ಮಕರವಿಳ್ಳಕ್ಕು, ಆಂಧ್ರಪ್ರದೇಶದಲ್ಲಿ ಪೆದ್ದ ಪಾಂಡುರಂಗ, ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬ ವೆಂದೂ ಕರೆಯುತ್ತಾರೆ.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಆಕಾಶದಲ್ಲಿ ಬೆಳಗುವ ನಕ್ಷತ್ರವೇ ಮಕರ ಜ್ಯೋತಿ. ಮಕರ ಜ್ಯೋತಿ ಆಕಾಶದಲ್ಲಿ ಕಾಣಿಸುವ ನಕ್ಷತ್ರ ಎಂದು ಹೇಳಲಾಗುತ್ತದೆ. ಈ ನಕ್ಷತ್ರವು ಸೂರ್ಯಾಸ್ತದ ನಂತರ ಕಾಣಿಸಿ ಸ್ವಲ್ಪ ಸಮಯದ ನಂತರ ಕಣ್ಮರೆಯಾಗುತ್ತದೆ. ಅದು ಮಕರ ಮಾಸದ ಮೊದಲ ದಿನದಂದು ಉದಯಿಸಿದ ನಕ್ಷತ್ರ. ಈ ಶುಭದಿನದಂದು ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದರ್ಶನ ನೀಡಿ ಶಬರಿಯಲ್ಲಿ ನೆಲೆಯಾಗುತ್ತಾನೆ ಎಂಬ ನಂಬಿಕೆ ತಲತಲಾಂತರದಿಂದ ಇಂದಿಗೂ ಇದೆ. ಮಕರ ಜ್ಯೋತಿಯನ್ನು ನೋಡಲು ಶಬರಿಮಲೆಗೆ ಲಕ್ಷಾಂತರ ಭಕ್ತಾದಿಗಳು ದೇಶದ ವಿವಿಧ ಕಡೆಯಿಂದ ಬಂದು ಸೇರುತ್ತಾರೆ.


  • ಚೇತನ ಭಾರ್ಗವ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW