ದುಡ್ಡಿದ್ದರೆ ಏನನ್ನು ಬೇಕಾದರೂ ಪಡೆಯಬಹುದು ಎಂಬ ಭ್ರಮೆಯಲ್ಲಿರಬೇಡಿ, ಇಂದು ಕೈಯಿಂದ ಜಾರುತ್ತಿರುವ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ. ಮಕ್ಕಳಲ್ಲಿ ಪಾಲಕರು ಮತ್ತು ಶಿಕ್ಷಕರು ಸಾಮಾಜಿಕ ಮೌಲ್ಯದ ಬಗ್ಗೆ ತಿಳಿಸಿ, ಲೇಖಕಿ ಸ್ವರ್ಣಲತಾ ಎ ಎಲ್ ಅವರ ಮಕ್ಕಳ ಬೆಳವಣಿಗೆಯ ಕುರಿತು ಒಂದು ಚಿಂತನ ಲೇಖನ ತಪ್ಪದೆ ಮುಂದೆ ಓದಿ…
ಹಿಂದೆ ಇದ್ದಂತೆ ರೂಪಾಯಿಗೆ ಹದಿನಾರು ಇಪ್ಪತ್ತು ಸೇರು ರಾಗಿ, ರೂಪಾಯಿಗೆ ಆರು ಏಳು ಸೇರು ಅಕ್ಕಿ ದೊರೆಯುವಂತಾಗಿ, ತುಟ್ಟಿಭತ್ಯವೂ ಸೇರಿದ ಈಗಿನ ಸಂಬಳಗಳೇ ಮುಂದಕ್ಕೂ ನಿಗದಿಯಾಗಿ, ಸ್ಥಿತಿ ಸುಧಾರಿಸಿದರೆ ಆ ಬಡ ಉಪಾಧ್ಯಾಯರು ಸಂತೋಷದಿಂದ ತಮ್ಮ ಕರ್ತವ್ಯವನ್ನು ನೆರವೇರಿಸಿಯಾರು ; ಸುಖವಾಗಿ ಸಂಸಾರವನ್ನು ನಡೆಸಿಯಾರು. ಆದರೆ ಆ ರಾಮರಾಜ್ಯ ಯಾವಾಗ ಬರುವುದೋ ಗೊತ್ತಿಲ್ಲ.’
ಬಾಲ್ಯ ಕಾಲದಲ್ಲಿ ನಮ್ಮಂಥ ವಿದ್ಯಾರ್ಥಿಗಳ ಕಣ್ಣಲ್ಲಿ ನೀರು ತರಿಸಿದ ‘ಬೋರ್ಡು ಒರಸುವ ಬಟ್ಟೆ’ ಯ ಲೇಖಕರಾದ ಶ್ರೀಯುತ ಎಂ ಆರ್ ಶ್ರೀನಿವಾಸ ಮೂರ್ತಿಯವರು 1949 ರಲ್ಲಿ ಬರೆದ , ಶಿಕ್ಷಕರ ಕೈಪಿಡಿಯಾಗಬೇಕಾದ ‘ ರಂಗಣ್ಣನ ಕನಸಿನ ದಿನಗಳು ‘ಪುಸ್ತಕದ ಮುನ್ನುಡಿಯಲ್ಲಿ ಮೇಲಿನ ಮಾತನ್ನು ಹೇಳಿದ್ದಾರೆ. ಲೇಖಕರು ಹೇಳಿದಂತೆ ಶಿಕ್ಷಕರ ಪಾಲಿಗೆ ರಾಮರಾಜ್ಯ ಬಂದಾಯಿತು. ಆದರೆ ಮಕ್ಕಳ ಪಾಲಿಗೆ ಈ ರಾಮರಾಜ್ಯ ಆಶಾದಾಯಕವಾಗಲಿಲ್ಲ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರು ನಿವೃತ್ತಿ ವೇತನವನ್ನೇ ನಲ್ವತ್ತು ಐವತ್ತು ಸಾವಿರ ತೆಗೆದುಕೊಳ್ಳುತ್ತಿದ್ದಾರೆ.ಆದರೆ ಅವರ ವೃತ್ತಿಯ ಬಗೆಗಿನ ಪ್ರೀತಿ ಮಾತ್ರ ಸಂಬಳದ ಜೊತೆ ಏರಿತೋ ಇಲ್ಲವೋ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೆ. ಇಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ವೇತನದ ವಿಷಯ ಪ್ರಸ್ತಾಪ ಮಾಡದಿದ್ದರೆ ಅವರಿಗೆ ವಂಚನೆ ಮಾಡಿದಂತಾಗುತ್ತದೆ. ಬಹುಪಾಲು ಶಿಕ್ಷಣ ಸಂಸ್ಥೆಗಳು ಕೇವಲ ಹದಿನೈದು ಸಾವಿರ ವೇತನಕ್ಕೆ ದಿನವೆಲ್ಲಾ ದುಡಿಸಿಕೊಳ್ಳುತ್ತವೆ. ದೊಡ್ಡ ಹಳ್ಳಿಗಳು, ಮುಖ್ಯ ರಸ್ತೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳೂ ಕನಿಷ್ಠ ಐವತ್ತು ಸಾವಿರ ಡೊನೇಷನ್ ತೆಗೆದುಕೊಳ್ಳುತ್ತಿವೆ. ಈ ದಿನಗಳಲ್ಲಿ ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವವರೂ ದಿನವೊಂದಕ್ಕೆ ಐನೂರರಿಂದ ಒಂದುವರೆ ಸಾವಿರದವರೆಗೆ ಸಂಪಾದನೆ ಮಾಡುತ್ತಿದ್ದಾರೆ. ವಿಷಯಾಂತರವಾಯಿತು.
ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಎರಡೂ ಜೊತೆ ಜೊತೆಯಾಗಿ ಎತ್ತ ಸಾಗುತ್ತಿವೆ ಎನ್ನುವುದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಮಕ್ಕಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿರುವ ತಂದೆ ತಾಯಿಗಳು ಒಂದು ಕಡೆಯಾದರೆ ತಾವು ಊದುವ ಶಂಖ ಊದಿದರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿರುವ ಶಿಕ್ಷಕ ವೃಂದ ಮತ್ತೊಂದು ಕಡೆ. ಹೆತ್ತ ತಂದೆ ತಾಯಿಗಳಿಗೇ ಮಕ್ಕಳತ್ತ ಗಮನವಿಲ್ಲದಿದ್ದ ಮೇಲೆ ಐದಾರು ಗಂಟೆ ಪಾಟ ಹೇಳಿ ಮನೆಗೆ ಹೋಗುವ ಶಿಕ್ಷಕರಿಗೆ ಹೇಗೆ ಬಂದೀತು. ಮಕ್ಕಳ ಕುರಿತು ಪ್ರೀತಿ ,ಪ್ರೇಮ ,ಕಾಳಜಿ ಯಾವುದೂ ಈರ್ವರಿಗೂ ಇಲ್ಲದಿದ್ದ ಮೇಲೆ ಮಕ್ಕಳ ಭವಿಷ್ಯ ಹೇಗೆ ಉಜ್ವಲವಾದೀತು.
ಹದಿನಾಲ್ಕು ವರ್ಷದ ಹುಡುಗನೊಬ್ಬ ತನ್ನ ಗರ್ಲ್ ಫ್ರೆಂಡನ್ನು ಮತ್ತೊಬ್ಬ ಹುಡುಗ ಮಾತನಾಡಿಸಿದ ಎಂದು ಮುಖಕ್ಕೆ ಗುದ್ದಿದ ಬಗ್ಗೆ ಮೊನ್ನೆ ಶಾಲಿನಿ ಪ್ರದೀಪ್ ಬರೆದಿದ್ದರು. ಈ ಗಂಡು ಮಕ್ಕಳಿಗೆ ಅಷ್ಟು ಚಿಕ್ಕವಯಸ್ಸಿಗೇ ಹೆಣ್ಣುಮಕ್ಕಳ ಬಗ್ಗೆ ಕಲ್ಪನೆ ಅದು ಹೇಗೆ ಬರುತ್ತದೋ ಕಾಣೆ.
ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಈ ಸಮಾಜವೇಕೆ ಉದಾಸೀನ ಪ್ರವೃತ್ತಿ ತೋರುತ್ತಿದೆಯೋ ಗೊತ್ತಾಗುತ್ತಿಲ್ಲ. ಶಿಕ್ಷಣ ಇಲಾಖೆಯ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿ ಡಿಡಿಪಿಐ ಆಗಿ ನಿವೃತ್ತಿ ಹೊಂದಿ , ಈಗ ಪ್ರತಿಷ್ಠಿತ ಬೋರ್ಡಿಂಗ್ ಶಾಲೆಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ನನ್ನ ಪತಿಯ ಗೆಳೆಯರೊಬ್ಬರು ಇತ್ತೀಚೆಗೆ ಮನೆಗೆ ಬಂದಿದ್ದಾಗ ಹೇಳುತ್ತಿದ್ದ ವಿಷಯಗಳು ನಿಜಕ್ಕೂ ಆಘಾತಕಾರಿಯಾಗಿದ್ದವು.

ಫೋಟೋ ಕೃಪೆ : google
ಸಾಮಾನ್ಯವಾಗಿ ಮನೆಯಲ್ಲಿ ಹೇಳಿದ ಮಾತು ಕೇಳದಂಥ ಮಕ್ಕಳನ್ನು ಬೋರ್ಡಿಂಗ್ ಶಾಲೆಗೆ ಸೇರಿಸುವುದು ಈಚೆಗೆ ಅಭ್ಯಾಸವಾಗುತ್ತಿದೆ. ಒಟ್ಟಿನಲ್ಲಿ ಈ ತಂದೆತಾಯಿಗಳಿಗೆ ಮಕ್ಕಳು ಕಣ್ಣೆದುರು ಇರಬಾರದು, ಎಷ್ಟು ಖರ್ಚಾದರೂ ಪರವಾಗಿಲ್ಲ. ಬೋರ್ಡಿಂಗ್ ಗೆ ಸೇರಿಸುತ್ತೇವೆ ಎಂದು ಶಾಲೆಯ ಮ್ಯಾನೇಜ್ ಮೆಂಟ್ ನವರ ಕೈಕಾಲು ಹಿಡಿದು ಫೇಲಾಗುತ್ತಿದ್ದ ಮಕ್ಕಳನ್ನು ಪಾಸು ಮಾಡಿಸಿ ತಂದುಹಾಕುತ್ತಾರೆ. ಮನೆಯಲ್ಲಿ ಮಕ್ಕಳನ್ನು ತಿದ್ದಲು ಸಮಯ, ಸಹನೆ ಯಾವುದೂ ಇಲ್ಲ. ಬೋರ್ಡಿಂಗ್ ಶಾಲೆ ಸೇರುತ್ತಿದ್ದಂತೆ ,ಅವರ ಮಕ್ಕಳು Distinction ಬಂದುಬಿಡಬೇಕು. ಒಳ್ಳೆಯ ನಡತೆಯನ್ನೂ ಕಲಿಯಬೇಕು.
ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿದಂತೆ ಎಂದು ಭಾವಿಸಿರುವ ತಂದೆ ತಾಯಿಗಳು ಅದು ಹೇಗೆ ತಾನೆ ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಟ್ಟಾರು. ದುಡ್ಡಿದ್ದರೆ ಏನನ್ನು ಬೇಕಾದರೂ ಪಡೆಯಬಹುದು ಎಂಬ ಭ್ರಮೆ ಆಧುನಿಕ ಸಮಾಜವನ್ನು ಆವರಿಸಿದೆ. ಈಗಿನ ಜಮಾನದಲ್ಲಿ ನಾನು ಕಂಡ ಮಟ್ಟಿಗೆ ಸಾಮಾನ್ಯವಾಗಿ ಯಾವ ತಂದೆ ತಾಯಿಗಳೂ ಇದರಲ್ಲಿ ಹಳ್ಳಿ ಮತ್ತು ನಗರಗಳ ವ್ಯತ್ಯಾಸವಿಲ್ಲ . ಮಕ್ಕಳಿಗೆ ಬುದ್ದಿ ಹೇಳಿ ಬೆಳೆಸುತ್ತಿಲ್ಲ, ನೀತಿ ನಿಯಮಗಳನ್ನು ಹೇಳುತ್ತಿಲ್ಲ, ಸಾಮಾಜಿಕ ಮೌಲ್ಯಗಳ ಬಗ್ಗೆ ತಿಳಿ ಹೇಳುತ್ತಿಲ್ಲ. ಇನ್ನು ಶಿಕ್ಷಕರು ಪಠ್ಯದಲ್ಲಿ ಪಾಠ ಹೇಳಿದರೆ ತಮ್ಮ ಕರ್ತವ್ಯ ಮುಗಿದಂತೆ ಎಂದು ಭಾವಿಸಿದ್ದಾರೆ. ಜೀವನದ ಪಾಠ ಹೇಳುವುದೆಲ್ಲಿ ಬಂತು. ಮಕ್ಕಳ ಭವಿಷ್ಯ ನೆನೆದರೆ ನೋವು, ಬೇಸರಗಳು ಒಟ್ಟಿಗೆ ಆಗುತ್ತವೆ.
- ಸ್ವರ್ಣಲತಾ ಎ ಎಲ್
