ಹೊನ್ನಿನ ಲೇಪನವೆರಚಲು ತರಣಿಯು, ಹೊಳೆವುದು ಚೆಲುವಿನ ರತ್ನದೊಲು, ಚಿನ್ನದ ದಾರದಿ ಬಂಧಿಸಿದಂತಿಹ, ಮಂಗಳದೆಳೆಗಳ ಸೂತ್ರದೊಲು…ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲನ್ನು ತಪ್ಪದೆ ಮುಂದೆ ಓದಿ…
ಬೆಳಗಿನ ಜಾವದಿ ನೇಸರ ಮೂಡುವ
ಹೊತ್ತಿನಲುದಿಸಿದೆ ಮುತ್ತಿನೊಲು
ಹೊಳೆಯುವ ಹನಿಗಳು ಸೊಬಗನು ಚೆಲ್ಲಿವೆ
ಗರತಿಯ ನಾಸಿಕ ನತ್ತಿನೊಲು
ತೂಗುಯ್ಯಾಲೆಗೆ ತೋರಣ ಕಟ್ಟಿದೆ
ಮುತ್ತಿನ ಮಣಿಗಳ ಮಾಲೆಯನು
ಬೀಗುವ ಮಲೆನಾಡೈಸಿರಿ ತೋರುತ
ಸಿಂಗರಿಸಿದೆ ವನ ದೇವಿಯನು
ಇಬ್ಬನಿ ಹನಿಗಳು ಚಿತ್ರವ ಬಿಡಿಸಿವೆ
ಬಿಜ್ಜೆಯ ಅಕ್ಷರ ಮಾಲೆಯೊಲು
ತಬ್ಬುತಲಿಳೆಯಲಿ ಹನಿಯನು ಹರಿಸಿದೆ
ಮಜ್ಜನ ಮಾಡಿಸುವಂದದೊಲು
ಹೊನ್ನಿನ ಲೇಪನವೆರಚಲು ತರಣಿಯು
ಹೊಳೆವುದು ಚೆಲುವಿನ ರತ್ನದೊಲು
ಚಿನ್ನದ ದಾರದಿ ಬಂಧಿಸಿದಂತಿಹ
ಮಂಗಳದೆಳೆಗಳ ಸೂತ್ರದೊಲು
ಬಿರಿಯಲು ಹೂಗಳು ಕಾನನದೊಳಗಡೆ
ದುಂಬಿಯ ಹಿಂಡಿನ ಜೇಂಕಾರ
ಕರೆಯುವ ಕರುಗಳ ಧ್ವನಿಮಾಧುರ್ಯಕೆ
ಗುಡಿಯೊಳ ಗಂಟೆಯ ಓಂಕಾರ
- ಬಿಟ್ಟೀರ ಚೋಂದಮ್ಮ, ಬೆಂಗಳೂರು.
