ಮನದ ಮುಗಿಲ ಹಾದಿ…

ಕತೆ : ಶ್ರೀಮತಿ ರೇಶ್ಮಾಗುಳೇದಗುಡ್ಡಾಕರ್

Screenshot (11)

ಪರಿಚಯ : ಶ್ರೀಮತಿ ರೇಶ್ಮಾಗುಳೇದಗುಡ್ಡಾಕರ್ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಗೃಹಿಣಿಯಾಗಿದ್ದು,  ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅವರು ರಚಿಸಿದ ‘ಗಾಂಧಿ ಕವನ’ ವು ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕದಲ್ಲಿ ಪ್ರಕಟಗೊಂಡಿದೆ. ಅವರ ಇನ್ನೊಂದು ಕವನ  ‘ನನ್ನೊಳಗಿನ ನಾನು ಋಜುವಾತು ಮಾಡಬೇಕಿದೆ’ ಆಕೃತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನು ೧,೦೦೦ಕ್ಕೂ ಹೆಚ್ಚು ಜನ ಓದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಈ ಕತೆಯನ್ನು ಓದಿ, ಯುವ ಬರಹಗಾರ್ತಿಗೆ ಪ್ರೋತ್ಸಾಹಿಸಿ.

ಕುಸುಮಾ- ಸರಳ ರೂಪ , ಯಾವ ಹಮ್ಮು- ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ. ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನಿ ಮನೆ ಸ್ಥಿತಿವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಅದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ  ಮನದಲ್ಲಿ ಜೀವಂತವಾಗಿತ್ತು . ಅವಳ ಈ ನೋವನ್ನು ಹಂಚಿಕೊಳ್ಳುವ , ಸಮಾಧಾನಿಸುವ ಯಾವ ಪ್ರಾಣಿಯೂ ಅವಳಿಗೆ ಮನೆಯಲ್ಲೂ- ಆಫೀಸಿನಲ್ಲೂ ಇರಲಿಲ್ಲ …‌!!!??

ಸದಾ ಅವಳ ಸಂಬಳದ ಲೆಕ್ಕಚಾರ ಮಾಡುವ ಅತ್ತೆ- ಮಾವ , ಹಂಗಿಸುವ ನಾದಿನಿ. ಇದನ್ನು  ಕಂಡು ಕಾಣದಂತೆ ಇರುವ ಪತಿ. ಇನ್ನು ಆಫೀಸಿನಲ್ಲಿ ಅವಳ ಉದ್ಯೋಗ , ಗಂಡನ ಸಿರಿತನದ ಬಗ್ಗೆಯೇ ಮಾತು ಮತ್ತು ಉಚಿತ ಸಲಹೆ ಕೊಡುವವರ ಸಂಖ್ಯೆಇತ್ತೇ ಹೊರತು, ಮನಕ್ಕೆ ಹತ್ತಿವಾಗುವ ಯಾವ ಜೀವಿಯೂ ಇರಲಿಲ್ಲ.

amma

ಆದರೆ ಸರಳ, ಮೃದು ಮನದ ಸ್ನೇಹಾಳ ಗೆಳೆತನಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಸಮಯ ಸಿಕ್ಕಾಗಲೇಲ್ಲ ಸ್ನೇಹಾಳ ಮನೆ , ಪಾರ್ಕ್ , ವಾಕಿಂಗ್ ಎಂಬ ಹೆಸರಿನಿಂದ  ಸಮಯ ಕಳೆಯುತ್ತದ್ದಳು .ಇಲ್ಲವಾದರೆ ಅವಳು ಮೌನಿಯಾಗಿರುತ್ತಿದ್ದಳು. ಒಂದು ಪ್ರೀತಿ ತುಂಬಿದ ಮಾತು ಸಾಕಿತ್ತು. ಬದುಕಿನಲ್ಲಿ ಭರವಸೆ ಹುಟ್ಟಿಸಲು. ಆದರೆ ಅಂತಹ ಮಾತು , ಮನಗಳು ಸಿಗುವುದು ಈ ಜಗತ್ತಿನಲ್ಲಿ ಬಹಳ ದುಬಾರಿ. ಸದಾ ಹಣ, ಅಧಿಕಾರ , ಕೆಲಸ, ಹೀಗೆ ಗೌರವಿಸುವ ಜಗತ್ತಿನಲ್ಲಿ ನಮಗಾಗಿ ಸ್ಪಂದಿಸುವ ನಿಷ್ಕಲ್ಮಷ ಸ್ನೇಹ ಸಂಬಂಧ ಬಹಳ ವಿರಳ .

ಕುಸುಮಾ ಬೇಗನೆ ಮನೆಯ ಕೆಲಸ ಮುಗಿಸಿ, ಬ್ಯಾಂಕ್ ಗೆ ಹೊರಡಲು ತಯಾರಾದಳು. ಸಮಯ ಆಗಲೇ ಹತ್ತು ಆಗುತ್ತಾ ಬರುತ್ತಿತ್ತು. ಅತ್ತೆ  ಟಿ.ವಿ ನೋಡುವದರಲ್ಲಿ ಮಗ್ನರಾಗಿದ್ದರು. ಪತಿರಾಯ ಆಫೀಸಿಗೆ  ಹೊರಡುವ ತಯಾರಿಯಲ್ಲಿದ್ದ. ಗಂಡನೊಂದಿಗೆ ಹೊರಟರಾಯಿತು ಎಂದು ಎಂದುಕೊಂಡಿದ್ದಳು. ಅಷ್ಟೋತ್ತಿಗಾಗಲೇ ಅವಳ ಅತ್ತೆ ಮಗನಿಗೆ ತನ್ನ ತಂಗಿಯ ಮನೆಗೆ ಹೊಗಿ ಆಫೀಸಿಗೆ ಹೋಗಲು ಆಜ್ಞೆ ಮಾಡಿದರು.

ಪತಿರಾಯ ತಾಯಿಯ ಮಾತಿಗೆ ಇಲ್ಲ ಎನ್ನದೆ ಸಮ್ಮತಿಸಿದ. ಕುಸುಮಾಳಿಗೆ ಕಣ್ಣಲ್ಲೆ ಬಾಯ್ ಹೇಳಿ ಹೊರಟು ಹೋದ. ಕುಸುಮಾ ಇನ್ನು ಬಸ್ಸೇ ಗತಿ ಎಂದು  ಗೇಟಿನತ್ತ ನಡೆದಳು. ಅಂಗಳದಲ್ಲಿ ತಾನು ಮುಂಜಾನೆ ಹಾಕಿದ ಅರಳಿದ ರಂಗೋಲಿಯನ್ನು ನೋಡಿ, ಮನಸ್ಸಿನಲ್ಲೇ  ತನ್ನ ಸ್ಥಿತಿಗೆ ನಕ್ಕು ಕುಸುಮಾ ಬಸ್ ನಿಲ್ದಾಣಕ್ಕೆ ಬಂದಳು.

ಬಸ್ಸು ತಂಗುದಾಣದ ಎದುರಿಗೆ ಸರ್ಕಾರಿ ಆಸ್ಪತ್ರೆ ಇತ್ತು. ಆಸ್ಪತ್ರೆ ಜನಸಂದಣಿಯಿಂದ ತುಂಬಿ, ರಸ್ತೆ ತುಂಬಾ ಜನರು ನರಳಾಡುವುದು ಕಂಡು ಬಂತು . ಕುಸುಮಾ ಅದನ್ನು ನೋಡಿ ಕೊಂಚ ಗಲಿಬಿಲಿಗೊಂಡಳು. ಇಷ್ಟೊಂದು ಜನರನ್ನು ಅವಳು ಮೊದಲ್ಲೆಲ್ಲೂ  ಈ ದಾರಿಯಲ್ಲಿ ಕಂಡಿರಲಿಲ್ಲ .
ಪಕ್ಕದಲ್ಲಿದ್ದ  ಜನರನ್ನು ಕೇಳಿದಳು . ಸ್ಪಷ್ಟ ಮಾಹಿತಿ ಸಿಗಲಿಲ್ಲ. ಅಷ್ಟರಲ್ಲಿ ಆಸ್ಪತ್ರೆಯ ನೌಕರರಾದ ಪರಿಚಿತ ಅಪ್ಪಣ್ಣ ಬರುತ್ತಿರುವದು ಕಂಡು ಕುಸುಮಾ ಅವರ ಬಳಿ  ತೆರಳಿ ಮಾತಾಡಿಸಿದಳು. ಅವರು ರಾಜ್ಯದ ಹೆದ್ದಾರಿಯಲ್ಲಿ ನಸುಕಿಗೆ ಭೀಕರ ಅಪಘಾತವಾಗಿದ್ದು, ಬೆಳಗಾವಿ ಸಮೀಪದ ತಾಂಡ ಜನರು ಕೂಲಿ ಕೆಲಸಕ್ಕಾಗಿ ಗುಳೆ ಹೋರಟಿದ್ದರು. ಅವರನ್ನು ತುಂಬಿಕೊಂಡು ಬಂದ ಟ್ಯಾಕ್ಟರ್ ಮತ್ತು ಎದುರಿಗೆ ಬರುತ್ತದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ತುಂಬಾ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು . ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ರಕ್ತ ದ ಮಾದರಿ ತರಲು ಸಾಯಿ ಮಲ್ಟಿಸ್ಪಷೇಲ್ ಆಸ್ಪತ್ರೆಗೆ ಹೊರಟಿರುವುದಾಗಿ ತಿಳಿಸಿದರು. ಕುಸುಮಾ ತನ್ನದು “ಓ ನೇಗೆಟಿವ್ ಇದೆ. ಬೇಕಾದರೆ ಹೇಳಿ ಕೊಡುತ್ತೇನೆ ಎಂದಳು”. ಅಪ್ಪಣ್ಣ ತುಂಬಾ ಸಂತೋಷಗೊಂಡು “ಈಗಾಗಲೇ ಹಲವು ರಕ್ತ ನಿಧಿ ಕೇಂದ್ರಗಳಿಗೆ ತಿಳಿಸಲಾಗಿದೆ. ಆದರೂ ಬನ್ನಿ ಒಮ್ಮೆ  ನೋಡೋಣ ”  ಎಂದು ಅವಳನ್ನು ಆಸ್ಪತ್ರೆ ಯ ಒಳಗೆ ಕರೆದುಕೊಂಡು ಹೋದರು.

ಕುಸುಮಾ ಅಪಘಾತದ ತೀವ್ರತೆಯನ್ನು ಮೊದಲ ಬಾರಿಗೆ ಜೀವನದಲ್ಲಿ ಕಣ್ಣಲ್ಲಿ ಕಂಡಳು. ಮಕ್ಕಳು ವೃದ್ದರು ಎನ್ನದೆ ಎಲ್ಲರೂ ನರಳುತ್ತಿದ್ದರು . ಇಡೀ ಆಸ್ಪತ್ರೆ ರೋಧನದಿಂದ ತುಂಬಿ ಹೋಗಿತ್ತು. ಕುಸುಮಾ  ಮೊದಲೇ  ಭಾವಜೀವಿ,  ಮೂಕವಾಗಿ ಸಾವು – ನೋವು ಸಕಲ ಚರಾ ಚರಗಳಿಗೂ ಒಂದೇ ಅಲ್ಲವೇ? ತುತ್ತಿನ ಚೀಲ ತುಂಬಿಸಲು ಹೋಗಿದ್ದವರು, ಜವರಾಯನ ಬಾಯಿಗೆ ತುತ್ತಾಗಿದ್ದರು ಎಂದು ಅವಳ ಮನವು ದುಃಖಿಸಿತ್ತು.!?

ಮೆಲ್ಲನೆ ಅವರನ್ನು ನೋಡುತ್ತಾ ಭಾರವಾದ ಹೆಜ್ಜೆ ಹಾಕುತ್ತಾ ವಾರ್ಡಿನತ್ತ ನಡೆದಳು.  ಅಪ್ಪಣನವರು ಇದನ್ನು ಗಮನಿಸಿ “ಆಸ್ಪತ್ರೆ ಎಂದ ಮೇಲೆ ಇದು ದಿನನಿತ್ಯದ ದೃಶ್ಯ. ಆದರೆ ಅಪಘಾತದ ಭೀಕರತೆ ತೀವ್ರವಾಗಿದ್ದರಿಂದ ಇಂದು ಜನರ ನರಳಾಟ ಹೆಚ್ಚಾಗಿದೆ . ನಿಮಗೆ ಇದು ಹೊಸದು. ಬನ್ನಿ… ತಾಯಿ. ಈ ಜೀವ ನೀರಿನ ಮೇಲಿನ ಗುಳ್ಳೆಯಂತೆ . ಅದರೂ ಜನಗಳು ಈ ಸತ್ಯವ ಮರೆತು ನಾನು , ನನ್ನದು ಎಂಬ ಸ್ವಾರ್ಥದ ಕೋಟೆಯಲ್ಲಿ ಬದುಕುತ್ತಾನೆ ” ಎಂದು ಹೇಳುತ್ತಾ ಅವಳನ್ನು ಸಾಮಾಧಾನಿಸುತ್ತಾ ಒಳಗೆ  ಕರೆದುಕೊಂಡು ಹೋದರು. ಅಪ್ಪಣ್ಣ ಸಾತ್ವಿಕ ಮತ್ತು ನಿಷ್ಠಾವಂತ ನೌಕರರಾಗಿದ್ದರು. ಇಡೀ ಆಸ್ಪತ್ರೆ ಯಲ್ಲೆ ಉತ್ತಮ ಕೆಲಸಗಾರ ಎಂಬ ನಂಬಿಕೆಯನ್ನು ಅವರು ಗಳಿಸಿದ್ದರು . ಹಣ ಪಕ್ಷಪಾತದ ಯಾವ ಆಮಿಷಕ್ಕೆ ಒಳಗಾಗದೆ ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲುಸುತ್ತಾ ಜೀವನ ನಡೆಸುತ್ತದ್ದರು. ಕುಸುಮಾಳ ಮುಂದಿನ ಬೀದಿಯಲ್ಲೆ ಅವರ ಮನೆ ಇತ್ತು.

ಕುಸುಮಾಳ ರಕ್ತ ದ ಮಾದರಿಯನ್ನು ಮತ್ತು ಅವಳ ಆರೋಗ್ಯವನ್ನು ಪರೀಕ್ಷಿಸಿ. ಅವಳನ್ನು  ಒಂದು ಕೊಠಡಿಯಲ್ಲಿ ರಕ್ತ  ನೀಡಲು ಅವಕಾಶ ಮಾಡಿಕೊಟ್ಟರು. ಕುಸುಮಾ ಅಷ್ಟರಲ್ಲಿ ತನ್ನ ಸಹೋದ್ಯೋಗಿಗೆ ಕರೆಮಾಡಿ ಸಂಕ್ಷಪ್ತವಾಗಿ ವಿಷಯ ತಿಳಿಸಿ, ರಜೆ ಪಡೆಯುವುದಾಗಿ ಹೇಳಿದಳು. ಪತಿಗೆ ಹೇಳುವ ಗೋಜಿಗೆ ಹೋಗಲಿಲ್ಲ . ಚಿಕ್ಕ ವಿಚಾರ ಈಗಲೇ ಹೇಳುವ ಅಗತ್ಯವಿಲ್ಲ. ಅಗತ್ಯ ಬಂದರೆ ಹೇಳಿದರಾಯಿತು ಎಂದುಕೊಂಡು ಮೊಬೈಲ್ ನ್ನು ಬ್ಯಾಗಿನೊಳಗೆ ಹಾಕಿಕೊಂಡು ಕೊಠಡಿಯೊಳಕ್ಕೆ ಹೋದಳು.

ಎಲ್ಲಾ ಮುಗಿದು  ಮಧ್ಯಾಹ್ನದ ಕಳೆಯುತ್ತಾ ಬಂದಿತು. ಅಪ್ಪಣ್ಣನವರು ಅವಳನ್ನು ಆಗಾಗ ಬಂದು ವಿಚಾರಿಸುತ್ತಾ  ಹೋಗುತ್ತಿದ್ದರು. ಅವಳಿಗೆ ದಾಳಿಂಬೆ ಪಾನಕ ತಂದರು ” ಸ್ವಲ್ಪ ವಿಶ್ರಾಮಿಸಿ,  ನಿಮ್ಮ ಪತಿಗೆ ಮಾಹಿತಿ ತಿಳಿಸಿರುವೆ. ಅವರು ಇನ್ನೇನು ಬರುತ್ತಾರೆ ” ಎಂದು ತಿಳಿಸಿದರು. ” ತಮ್ಮಿಂದ ತುಂಬಾ ಉಪಕಾರವಾಯ್ತು ಎಂದು ಹೇಳಿ ಕೆಲಸ ತುಂಬಾ ಇದೆ. ಹೊರಡುವಾಗ ಕೌಂಟರ್ ನಲ್ಲಿ ಇರುತ್ತೇನೆ. ಏನಾದರೂ ಬೇಕಾದರೆ ಸಂಕೋಚ ಪಡದೆ ಕೇಳಿ” ಎಂದು ಕುಸುಮಾಳಿಗೆ  ಹೇಳಿ  ಹೋದರು. ಅವಳು ಅಲ್ಲೇ ಮಂಚದ ಮೇಲೆ ವಿಶ್ರಾಮಿಸುತ್ತಾ ಕುಳಿತಳು . ಅಷ್ಟರಲ್ಲಿ ಪತಿ ಅಭಯ್ ಬಂದರು.
“ಅಪ್ಪಣ್ಣ ಅವರು, ನನಗೆ ಕಾಲ್ ಮಾಡಿ ಹೇಳಿದರು. ಈಗ ಹೇಗಿರುವೆ? ಮನೆಗೆ ಹೋಗೋಣವೇ ? ” ಎಂದನು .

amma

ಸರಿ ಎಂದು, ಕುಸುಮ ಮತ್ತು ಅಭಯ್ ಕೊಠಡಿಯಿಂದ ಹೊರ ನಡೆದರು. ಆಸ್ಪತ್ರೆಯ ತುಂಬಾ ನರ್ಸ, ಆಸ್ಪತ್ರೆಯ ಸಿಬ್ಬಂಧಿಗಳು ,ಡಾಕ್ಟರ್ ಗಳ ಗಡಿ- ಬಿಡಿ ಓಡಾಟ , ರೋಗಿಗಳ ಚೀರಾಟ- ನರಳಾಟ ಮುಗಿಲು ಮುಟ್ಟಿತ್ತು. ಪೋಲಿಸರ ಉಪಸ್ಥಿತಿ, ಸಂಬಂಧಿಕರ ಹುಡುಕಾಟ  ಹೀಗೆ ಒಂದು ವಿಭಿನ್ನ ಲೋಕವೊಂದು ಅಲ್ಲಿ ಸೃಷ್ಟಿಯಾಗಿತ್ತು.

ಕುಸುಮಾಳ ಮನದಲ್ಲಿ ಹಲವು ಪ್ರಶ್ನೋತ್ತರಗಳು ಈ ಹೊಸ ಅನುಭವಕ್ಕೆ ಸಾಕ್ಷಿ ಎಂಬಂತೆ ಉದ್ಬವಿಸುತ್ತಿದ್ದವು. ಅಭಯ್  ಅವಳ ಮನದ ಇಂಗಿತವನ್ನು ಅರಿತು ಅವಳ ಕೈ ಹಿಡಿದುಕೊಂಡು ಹೊರ ಬಂದನು. ಹೊರ ಬರುವಾಗ ಕೆಳಗಿನ ವಾರ್ಡ ವಾರ್ಡ್ ನಲ್ಲಿ ಸತ್ತ ತಾಯಿಯ ಶವದ ಮೇಲೆ ಹಾಲು ಕುಡಿಯಲು ಹವಣಿಸುತ್ತಾ ಅಳುತ್ತಿದ್ದ ಒಂಭತ್ತು ತಿಂಗಳ ಹೆಣ್ಣು ಮಗುವಿನ ದೃಶ್ಯ ಕುಸುಮಾಳ ಎದೆಯನ್ನು ಸೀಳಿಬಿಟ್ಟಿತ್ತು. ಕುಸುಮಾಳ ಕಣ್ಣಾಲೆಗಳು ತುಂಬಿ ಬಂದವು . ಅಲ್ಲಿದ್ದ ಜನರಿಗೆ ಯಾರಿಗೂ ಅದರ ಪರಿವೇ ಇರಲಿಲ್ಲ. ಎಲ್ಲರಿಗೂ ಒಂದೊಂದು ನೋವು ಮನತುಂಬಿದ್ದವು . ತಮ್ಮ ತಮ್ಮ ನೋವುಗಳಲ್ಲೆ ಜಗತ್ತನ್ನು ಮರೆತಿದ್ದರು .

ಕುಸುಮಾ ಒಂದು ಕ್ಷಣ ತನ್ನನ್ನೇ ತಾನು  ಆ ಮಗುವಿನಲ್ಲಿ ಕಂಡಳು. ಹತ್ತು ವರ್ಷಗಳಿಂದ ಸತತ ನೋವು , ಅವಮಾನಕ್ಕೆ ಶರಣಾಗಿ ಎಲ್ಲರೂ ಇದ್ದು ಇಲ್ಲದಂತೆ  ಬದುಕಿನಲ್ಲಿ ದಾರಿ ಕಾಣದೆ ನಿತ್ಯವು ದಹಿಸುತ್ತಿದ್ದಳು. ಅಂತರಂಗದ ಬೆಂಕಿಯಲ್ಲಿ, ಇಂದು ಆ ಮಗುವು ಇಷ್ಟು ಜನಗಳ ಮಧ್ಯ ತನ್ನವರನ್ನು ಕಳೆದುಕೊಂಡು ಆನಾಥವಾಗಿತ್ತು.

ಕುಸುಮಾ  ಓಡಿ ಆ ಮಗುವನ್ನುಎತ್ತಿಕೊಂಡು ಸಂತೈಸುತ್ತಾ ಹೊರ ಬಂದಳು. ಅವಳ ಈ ಅನೀರಿಕ್ಷತ  ನಡೆ ಪತಿ ಅಭಯ್ ಗೆ ಅಚ್ಚರಿಯಾದರೂ ಅವಳನ್ನು ಪ್ರಶ್ನಿಸುವ ಧೈರ್ಯ ಅವನಿಗಿರಲಿಲ್ಲ. ಸತ್ಯ ಅವನಿಗೂ ತಿಳಿದಿತ್ತು.

ಕುಸುಮಾ ಮಗುವನ್ನು ಎತ್ತಿಕೊಂಡು ಪತಿಯ ಜೊತೆಗೆ ಮನೆಗೆ ಬಂದಳು. ಮನೆಯಲ್ಲಿದ್ದ ಅತ್ತೆ – ಮಾವ ಮತ್ತು ನಾದಿನಿ ಮಧ್ಯಾಹ್ನದ ಊಟ ಮುಗಿಸಿ, ನಾದಿನಿ ರಾತ್ರಿಗಾಗಿ ಸಂಬಾರ್ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದಳು. ಅದು ಅವಳ ನಿತ್ಯದ ಕಾಯಕವಾಗಿತ್ತು. ಎಲ್ಲರ ಮುಖದಲ್ಲೂ ಅಚ್ಚರಿ ಮತ್ತು ಪ್ರಶ್ನಾರ್ಥಕ ಚಿಹ್ನೆ ಉದ್ಬವಿಸಿದ್ದವು.

ನಾದಿನಿಗೆ, ಅಣ್ಣನ ಆಸ್ತಿಯ ಆಸೆಗಾಗಿ ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಂದನ್ನು ಅಣ್ಣನಿಗೆ ದತ್ತು ಕೊಡುವ ಅದಮ್ಯ ಬಯಕೆಯಿತ್ತು. ಅದಕ್ಕೆ ಅಭಯ್ ಗೂ ದತ್ತು ಪಡೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಳು. ಅದಕ್ಕೆ ತನ್ನ ತಾಯಿಯ ಸಹಕಾರವು ಇತ್ತು. ಅದರೆ ಅದಕ್ಕೆ ಅಭಯ್ ಯಾವುದೇ ಸೊಪ್ಪು ಹಾಕಿರಲಿಲ್ಲ . ಆದರೆ ಈಗ ಎಲ್ಲ ಬುಡ ಮೇಲಾಗಿತ್ತು. ಒಂದೇ ಹೊಡೆತಕ್ಕೆ . ಆ ಪುಟ್ಟ ಮಗುವನ್ನು ಕುಸುಮ ತಬ್ಬಿ ಹಿಡಿದ ನೋಟವೇ ಅವರನ್ನು ಹೆಚ್ಚು ಕೆಣಕಿತ್ತು . ಕುಸುಮಳ ಮನದ ಇಂಗಿತ ಮನೆಯವರಿಗೆಲ್ಲ ಅರ್ಥವಾಯಿತು.

ಅತ್ತೆ -ಮಾವ , ನಾದಿನಿ ಎಲ್ಲರೂ ಒಮ್ಮಲೇ ಕೂಗಾಡಲು ಶುರು ಮಾಡಿದರು.  ಅಭಯ್ ಮತ್ತು ಕುಸುಮಳ ಮೇಲೆ ಮಾತಿನ ಯುದ್ಧವೇ ನಡೆಯಿತು.  ಆದರೆ ಕುಸುಮಾಳ ನಿರ್ಧಾರ ಬದಲಿಸುವ ಪ್ರಯತ್ನ ವಿಫಲವಾಯಿತು. ಕೊನೆಗೆ ಕುಸುಮಾ ಮಗುನಿನೊಂದಿಗೆ ಒಬ್ಬಳೇ ಬದುಕುವ ನಿರ್ಧಾರವನ್ನು ಗಟ್ಟಿ ಮನಸ್ಸು ಮಾಡಿ ತಿಳಿಸಿದಳು. ಅಭಯ್ ಕ್ಷಣ ಮಾತ್ರದಲ್ಲಿ ಅದುರಿಹೋದ . ಕುಸುಮಾಳನ್ನು ತಡೆದು ನಿಧಾನವಾಗಿ ಹತ್ತು ವರ್ಷ ಮುಚ್ಚಿಟ್ಟ ಸತ್ಯ ಹೇಳಿದನ . ತನ್ನಿಂದ ಕುಸುಮಾಳಿಗೆ ಮಗು ನೀಡಲು ಸಾಧ್ಯವಿಲ್ಲ . ಜಗತ್ತಿನ ಮುಂದೆ ಅವಮಾನ ಆಗಬಾರದು ಎನ್ನುವ ಕಾರಣಕ್ಕೆ ತನ್ನದಲ್ಲ ತಪ್ಪಿನ್ನು ಕುಸುಮಾಳ ಮೇಲೆ ತಾನು ಹೊರೆಸಿದ್ದು, ಮತ್ತು ಕುಸುಮಾಳನ್ನು ಬಿಟ್ಟು ಬದಕಲು ಅಸಾಧ್ಯವೆಂದು ಮೊದಲ ಬಾರಿಗೆ ಎಲ್ಲರ ಮುಂದೆ ಧೈರ್ಯವಾಗಿ ನಿಂತು ಅಭಯ್ ಹೇಳಿದ. ಕುಸುಮಾಳನ್ನು ಹಿಡಿದು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದ.

ಅವನ ಮಾತುಗಳು ಮನದಾಳದಿಂದ ಹೊರಬಂದಿದ್ದವು. ಕಂಗಳು ತುಂಬಿ ನಾಚಿಕೆಯಿಂದ ತಲೆ ತಗ್ಗಿಸಿದ್ದನು. ನಾದಿನಿ ರಭಸವಾಗಿ ಕ್ಯಾರಿಯರ್ ತೆಗೆದುಕೊಂಡು ಮನೆಯಿಂದ ಹೊರ ನಡೆದಳು.

ಅತ್ತೆ- ಮಾವನಿಗೆ ಕುಸುಮಾಳ ಸಂಕಟಕ್ಕಿಂತ, ಮಗಳಿಗಾದ ನಿರಾಶೆಯೇ ಹೆಚ್ಚಾಗಿ ಕಂಡಿತ್ತು. ತಾವು ಇನ್ನು ಮುಂದೆ ಇಲ್ಲಿ ಇರುವುದಿಲ್ಲ . ಈ ಮಗು ನಮ್ಮ ರಕ್ತದಲ್ಲ. ನನ್ನ ಆಸ್ತಿಯಲ್ಲಿ ಒಂದು ಭಾಗವು ನಿನಗೆ ಕೊಡುವುದಿಲ್ಲ ಎಂದು ಹೇಳಿ ತಮ್ಮ ಹಳ್ಳಿಗೆ ಹೊರಡಲು ತಯಾರಾದರು.

ಅಭಯ್ ಯಾರನ್ನು ಸಮಾಧಾನಿಸುವ ಗೋಜಿಗೆ ಹೊಗಲಿಲ್ಲ. ಮಗುವನ್ನುಎತ್ತಿಕೊಂಡು, ಕುಸುಮಾಳನ್ನು ರೂಮಿಗೆ ಕರೆದುಕೊಂಡು ಹೋದನು. ನಾಳೆ ವಕೀಲರನ್ನು ಭೇಟಿ ಮಾಡಿ ಕಾನೂನಾತ್ಮಕ ವಾಗಿ ಮಗುವನ್ನು ದತ್ತು ಪಡೆಯೋಣ. ಮುಂದಿನ ವಾರ ಅವಳಿಗೆ ನಾಮಕರಣ ಮಾಡೋಣ ಎಂದು ಹೇಳಿ ಅವಳ ಕೈಯನ್ನು ಹಿಡಿದು ಹೇಳಿದ.
ಅವನ ಮಾತನ್ನು ಕೇಳಿದ ಕುಸುಮಾಳ ಸಂತಸಕ್ಕೆ ಪಾರವೇ ಇರಲಿಲ್ಲ.  ಕ್ಷಣ ಮಾತ್ರದಲ್ಲಿ
ತನ್ನ ಬದುಕಿನ ಕನಸು ನನಸಾಯಿತು.  ಮನವು ಸಂಭ್ರಮದ ಬೀಡಾಯಿತು.  ಕುಸುಮಾ ಮಗುವಿನ ಕಾಲನ್ನು ಕಣ್ಣಿಗೊತ್ತಿಕೊಂಡು ಹೇಳಿದಳು  “ನೀನು ನನ್ನ ಬದುಕಿನ  ನಿಧಿ”ಎಂದು . ಅವಳ ಕಂಗಳು ತುಂಬಿ ಕಂಬನಿ ಮಿಡಿದವು.

ಅಭಯ್ ಅವಳ ಕಣ್ಣೀರು ಒರೆಸುತ್ತಾ  “ಮಗುವಿಗೆ ಹಾಲು ಬಿಸಿ ಮಾಡಿ ತಾ… ನಾನು ಆಡಿಸುವೆ. ಸಂಜೆ ಅವಳಿಗೆ ತೊಟ್ಟಿಲು, ಬಟ್ಟೆ,  ತರೋಣ. ಅಮ್ಮ ಮಗಳು ಸಿದ್ದರಾಗಿ ” ಎಂದು  ನಗುತ್ತಾ  ಹೇಳಿದ. ಕುಸುಮಾ ಒಂದು ಕ್ಷಣ ಅಭಯ್ ನ ಮುಖ ನೋಡಿದಳು ” ನಿಮಗೆ ನನ್ನ ನಿರ್ಧಾರ ಸಂಪೂರ್ಣ ಒಪ್ಪಿಗೆ ಇದೆಯೇ ?” . ದಯವಿಟ್ಟು ಹೇಳಿ ಮಗುವಿಗೆ ನಮ್ಮಿಬ್ಬರ ಪ್ರೀತಿ, ಕಾಳಜಿ , ಆರೈಕೆ ಅಗತ್ಯವಿದೆ . ಅವುಗಳನ್ನು ಬಲವಂತವಾಗಿ ನಾನು ನಿಮ್ಮಿಂದ ಮಗುವಿಗೆ ಕೊಡಿಸಲಾರೆ” . ಅದಕ್ಕೆ ಅಭಯ್ ನಗುತ್ತ ‘ಕುಸುಮಾ ನಿನ್ನ ಭಾವನೆಗಳನ್ನು ನಾನು ಆರ್ಥಮಾಡಿಕೊಳ್ಳ ಬಲ್ಲೆ . ನಿನ್ನಷ್ಟೇ, ನನಗೂ ಅಪ್ಪನಾಗುವ ಕೊರಗು ಇತ್ತು. ನನ್ನ ಬದುಕು ಇಂದು ಪೂರ್ಣವಾಯಿತು. ನನ್ನಲ್ಲೂ  ಪಿತೃಭಾವನೆ ಇದೆ ಕುಸುಮಾ . ಭಯ ಬೇಡ. ನನ್ನಿಂದ ಹೇಳಲು ಸಾಧ್ಯವಿಲ್ಲ. ನಿರೂಪಿಸಲು ಸಮಯ ಕೊಡು” ಎಂದನು .ಕುಸುಮಾ ಸಂತೋಷದಿಂದ ಮಗುವನ್ನು ಅಭಯ್ ಮಡಿಲಲ್ಲಿ ಮಲಗಿಸಿ ಅಡುಗೆ ಮನೆಯತ್ತ ನಡೆದಳು.

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ರೇಶ್ಮಾಗುಳೇದಗುಡ್ಡಾಕರ್ ಅವರ ಹಿಂದಿನ ಬರಹಗಳು : 

0 0 votes
Article Rating

Leave a Reply

4 Comments
Inline Feedbacks
View all comments
ಆಶಾ

ಚಂದದ ಮನಮಿಡಿತ ಕಥೆ.ಸಂತಾನವಿಲ್ಲದ ದಂಪತಿಗಳಿಗೆ ಒಂದೊಳ್ಳೆ ಸಂದೇಶವಿದೆ.👌👌👌👌👌👌

ರೇಶ್ಮಾ ಗುಳೇದಗುಡ್ಡಾಕರ್

ಆಶಾ ಧನ್ಯವಾದಗಳು ತಮ್ಮ ಪ್ರೋತ್ಸಾಹ ಕ್ಕೆ

ಡಿ. ರಾಮನಮಲಿ

ಒಂದು ವಿಭಿನ್ನವಾದ ಕಥಾ ಹಂದರ ಕಟ್ಟಲು ರೇಷ್ಮಾ ಪ್ರಯತ್ನಿಸಿದ್ದಾರೆ. ಇಂತಹ ಕತೆಗಳಿಂದ ಜನಮಾನಸದಲ್ಲಿ ಉಳಿಯುತ್ತಾರೆ

ರೇಶ್ಮಾ ಗುಳೇದಗುಡ್ಡಾಕರ್

ಅನಂತ ಧನ್ಯವಾದಗಳು

Home
Search
All Articles
Videos
About
4
0
Would love your thoughts, please comment.x
()
x
%d bloggers like this:
Aakruti Kannada

FREE
VIEW