ಒಬ್ಬರ ಪರಿಚಯವಾದಾಗ ಅವರ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಳ್ಳುವುದು ತಪ್ಪು. ಇಬ್ಬರ ವ್ಯಕ್ತಿಗಳ ನಡುವೆ ನಿಜವಾದ ಸಂಬಂಧವಿದ್ದರೆ ಆಗ ಪ್ರತ್ಯೇಕತೆ ಇರುವುದಿಲ್ಲ, ಪ್ರೀತಿ ಇರುತ್ತದೆ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ನಾವು ನಮ್ಮ ಸಮಾಜ ಎಂಬ ಕಟ್ಟುಪಾಡುಗಳಿಂದಲೇ ಬದುಕಿರುತ್ತೇವೆ. ಸ್ನೇಹಿತರು, ಸಂಬಂಧಗಳು ಎಲ್ಲವೂ ಅದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಪ್ರತಿದಿನ ಹೊಸಬರನ್ನು ನೋಡುತ್ತೇವೆ. ಪರಿಚಯದವರನ್ನೂ ನೋಡುತ್ತಿರುತ್ತೇವೆ. ಅವರನ್ನು ಕಂಡ ಕೂಡಲೆ ಓ ಈ ಮನುಷ್ಯ ಹೀಗೆ, ಹಾಗೆ ಎಂಬ ಯೋಚನೆ ಮೂಡುತ್ತದೆ. ಅವರು ಹೇಗೇ ಇರಲಿ ನಾವು ಸ್ನೇಹದಿಂದ ಇದ್ದರಾಯಿತು ಎಂದುಕೊಂಡು ಬಿಡಬೇಕು. ಅದು ನಮಗೇ ಒಳ್ಳೆಯದು. ಇಲ್ಲದಿದ್ದರೆ ನಮ್ಮನ್ನೇ ಹೈರಾಣ ಮಾಡಿಬಿಡುತ್ತದೆ. ಒಂದು ಯೋಚನೆಯಿಂದ ನೂರಾರು ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ನಮ್ಮಲ್ಲಿನ ಜೀವಕಣಗಳು ಆ ಸಂವೇದನೆಗೆ ಪ್ರತಿಸ್ಪಂದಿಸಿ ಒಬ್ಬ ವ್ಯಕ್ತಿಯ ಬಗ್ಗೆ ನಾವು ಅಂದುಕೊಂಡ ರೀತಿಯಂತೆ ಮುದ್ರಿತವಾಗಿರುತ್ತದೆ. ಅದೇ ವ್ಯಕ್ತಿ ಎದುರಿಗೆ ಬಂದಾಗ ನಾವು ಬಲವಂತದ ನಗು ಮೂಡಿಸಿಕೊಂಡರೆ ನಮ್ಮ ಜೀವಕಣಗಳಿಗೆ ಗಲಿಬಿಲಿ ಉಂಟಾಗಿ ನಮ್ಮಲ್ಲೇ ಬದಲಾವಣೆಗಳಾಗುತ್ತದೆ. ಇದರಿಂದ ನಮಗೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ.
ಒಬ್ಬರ ಪರಿಚಯವಾದಾಗ ಅವರ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಳ್ಳುವುದು ತಪ್ಪು. ಅದು ವಿನಾಶಕಾರಿ ಪರಿಣಾಮ ಆಗುತ್ತದೆ. ಪ್ರತಿಯೊಬ್ಬರೂ ಮತ್ತೊಬ್ಬರ ತಪ್ಪುಗಳನ್ನೇ ಎತ್ತಿ ಹಿಡಿಯುತ್ತೇವೆ. ಇನ್ನೂ ಕೆಲವರು ಬೇರೆಯವರನ್ನು ಹೀಯಾಳಿಸುವುದರಲ್ಲೇ ಸಂತೋಷ ಪಡುತ್ತಾರೆ. ಆದರೆ ಅವರಿಗೇ ಹೀಯಾಳಿಸಿದರೆ ಅವರು ಒಪ್ಪುವುದಿಲ್ಲ. ಒಬ್ಬರಿಗೊಬ್ಬರು ಗೌರವಿಸುವುದನ್ನು ಕಲಿಯಬೇಕು. ಬೇರೆಯವರ ಯೋಗ್ಯತೆ ತೀರ್ಮಾನಿಸುವ ಮೊದಲು ನಾವು ನಮ್ಮತನವನ್ನು ಅರಿತಿರಬೇಕು. ಇಲ್ಲವಾದಲ್ಲಿ ಸ್ನೇಹ ಪ್ರೀತಿಯನ್ನು ಕಳೆದುಕೊಂಡು ಬದುಕಬೇಕಾಗುತ್ತದೆ.
ಬೇರೆಯವರ ಬಗ್ಗೆ ಹೀಯಾಳಿಸುವುದಾಗಲಿ , ಅವರ ಬದುಕಿನ ಬಗ್ಗೆ ನಾವು ಅವಮಾನಿಸುವುದಾಗಲೀ ಮಾಡಲು ನಮಗೆ ಯಾವ ಹಕ್ಕು ಇರುವುದಿಲ್ಲ. ಕೆಲವೊಮ್ಮೆ ಅವರು ಬೆಳೆದು ಬಂದ ರೀತಿ, ಮನೆಯ ವಾತಾವರಣ ಅವರನ್ನು ಹಾಗೆ ಮಾಡಿಸುತ್ತದೆ. ಈ ರೀತಿಯ ಸ್ವಭಾವಗಳನ್ನು ಅವರು ರೂಢಿಸಿಕೊಂಡು ಬಂದಿರುತ್ತಾರೆ. ಅಂಥವರು ನೋಡಿ ಕಲಿಯಬೇಕು ಅಥವ ಸ್ವಯಂ ಅರಿತುಕೊಳ್ಳಬೇಕು. ಸಣ್ಣ ವಯಸಿನಲ್ಲೇ ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳು ತಪ್ಪು ಮಾಡಿದಾಗಲೇ ಅವರಿಗೆ ಅನುಭವವಾಗುತ್ತದೆ. ಇದರಿಂದ ಅವರಿಗೆ ಒಳ್ಳೆ ಪಾಠವಾಗುತ್ತದೆ. ಹಾಗೆಯೇ ಪೋಷಕರು ಮಾರ್ಗದರ್ಶನ ನೀಡಬೇಕು. ಜನರ ರೀತಿ, ನೀತಿ, ನಡಾವಳಿಕೆ ಒಂದೊಂದು ರೀತಿಯದು. ನಮಗೆ ಅವರು ಇಷ್ಟವಾಗಲಿಲ್ಲವೆಂದರೆ ನಾವು ಸುಮ್ಮನಿದ್ದರಾಯಿತು. ನಮ್ಮಲ್ಲಿರುವ ಮೌನ ನಮ್ಮನ್ನು ಜ್ಞಾನದೆಡಗೆ ಎಳೆದೊಯ್ಯುತ್ತದೆ. ಜ್ಞಾನದ ಅರಿವಾದಾಗ ನಮಗೆ ಬೇರೆದೆಲ್ಲಾ ಮುಖ್ಯವೆನಿಸುವುದಿಲ್ಲ. ಅರಿತು ಮಾತಾನಾಡಬೇಕು ಕೆಲವೊಮ್ಮೆ ನಮ್ಮ ಮೌನವೇ ಉತ್ತರವಾಗಿರಬೇಕು.

ನಾವು ಸಂಬಂಧವಿಲ್ಲದೆ ಒಬ್ಬಂಟಿಯಾಗಿರಲು ಸಾಧ್ಯವಿಲ್ಲದ ಮಾತು. ಒಬ್ಬರಿಗೊಬ್ಬರು ಅವಲಂಬಿತರಾಗಿದ್ದೇವೆ. ವ್ಯಕ್ತಿಗಳ ನಡುವಿನ ಸಂಬಂಧ ಸಮಾಜವನ್ನು ಸೃಷ್ಟಿಸುತ್ತದೆ. ಸಮಾಜ ನಮ್ಮನ್ನು ಬಿಟ್ಟು ಬೇರೆಯಾಗಿಲ್ಲ. ಇಬ್ಬರು ವ್ಯಕ್ತಿಗಳು ಪರಸ್ಪರ ಅರಿತರೆ ಅದೇ ಸಂಬಂಧ, ಅದು ಸ್ನೇಹ ಸಂಬಂಧವಿರಬಹುದು , ಅಣ್ಣ ತಂಗಿ, ಅಕ್ಕ ತಮ್ಮರ ಸಂಬಂಧವಿರಬಹುದು,ಗಂಡ ಹೆಂಡತಿ ಇರಬಹುದು ಆ ಸಂಬಂಧಗಳು ಸಾಧಾರಣವಾಗಿ ಪರಸ್ಪರ ಸಹಾಯ, ಪರಸ್ಪರ ಬೆಂಬಲ ಇತ್ಯಾದಿ ಎಂದು ಕರೆಯುವುದರ ಮೇಲೆ ಆಧಾರವಾಗಿದೆ.
ಕುಟುಂಬದಲ್ಲೂ ನಿಕಟ ಸಾಮೀಪ್ಯದ ಭಾವಕ್ಯತೆಯ ಸಂಬಂಧವೆಂಬುದು ಸ್ಪಷ್ಟವಾದ ಸಂಗತಿ. ಒಬ್ಬರಿಗೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದರ ಮೇಲೆ ಸಂಬಂಧಗಳು ಇರುತ್ತದೆ. ಆದರೆ ಕೆಲವು ವಿಷಯಗಳು ಅರ್ಥ ಆಗುವುದೇ ಇಲ್ಲ ಹೊಂದಿಕೊಂಡು ಹೋಗುತ್ತಿರುತ್ತಾರೆ, ರಾಜಿ ಮಾಡಿಕೊಳ್ಳುತ್ತಿರುತ್ತಾರೆ.
ಸಂಬಂಧವೆಂದರೆ ಭಯವಿಲ್ಲದ ಸಹಭಾಗಿತ್ವ, ಪರಸ್ಪರ ಅರ್ಥ ಮಾಡಿಕೊಳ್ಳಲು, ನೇರವಾಗಿ ಸಂಪರ್ಕಿಸಲು ಮುಕ್ತ ವಾತಾವರಣ. ಕೆಲವೊಮ್ಮೆ ಇಬ್ಬರ ಮಧ್ಯೆ ಗೋಡೆ ಕಟ್ಟಿಕೊಂಡಿರುತ್ತಾರೆ. ಹೆಂಡತಿಯದು ಒಂದು ಅಭಿರುಚಿಯಾದರೆ ಗಂಡನದು ಮತ್ತೊಂದು ,ಒಂದೇ ತಾಯಿಯ ಮಕ್ಕಳಾದರೂ ಅವರಲ್ಲೂ ಭಿನ್ನಾಭಿಪ್ರಾಯಗಳು, ವಿಭಿನ್ನ ಆಸಕ್ತಿ ಹೀಗೆ ಹಲವಾರು ಕಾರಣಗಳಿಂದ ಅಣ್ಣ ತಂಗಿ, ಅಕ್ಕ ತಮ್ಮ ಇವರಲ್ಲಿ ಒಬ್ಬರಿಗೊಬ್ಬರಿಗೆ ವೈಮನಸ್ಸು ಉಂಟಾಗಿರಬಹುದು ಆದರೆ ಸಂಬಂದದಿಂದ ದೂರವಿರಲು ಅಸಾಧ್ಯ. ಸಂಬಂಧ ಹೇಗೆ ಇರುತ್ತದೋ ಅವರನ್ನು ಹೇಗೆ ಒಪ್ಪಿಕೊಂಡಿರುತ್ತೇವೆಯೋ ಹಾಗೆ ಹೊಂದಿಕೊಂಡು ಹೋಗಬೇಕಾಗುತ್ತದೆ.
ಇಬ್ಬರ ವ್ಯಕ್ತಿಗಳ ನಡುವೆ ನಿಜವಾದ ಸಂಬಂಧವಿದ್ದರೆ ಆಗ ಪ್ರತ್ಯೇಕತೆ ಇರುವುದಿಲ್ಲ, ಪ್ರೀತಿ ಇರುತ್ತದೆ . ಪ್ರೀತಿಸುವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ ಸಂತೋಷ, ದುಃಖ, ಹಣವನ್ನು ಹಂಚಿಕೊಳ್ಳುತ್ತಾನೆ. ಎಲ್ಲಿ ಅಧಿಕಾರ, ಧೋರಣೆ ದೋಷಾರೋಪಣೆ ಕರೆದೊಯ್ಯುತ್ತದೆಯೋ ಅಲ್ಲಿ ಸಂಬಂಧಗಳಿಗೆ ಬಿರುಕು ಮೂಡಿರುತ್ತದೆ. ಪ್ರೀತಿ ಇದ್ದಾಗ ಮಾತ್ರ ಸಂಬಂಧಗಳು ಇರಲು ಸಾಧ್ಯ. ಏನನ್ನೂ ನಿರೀಕ್ಷಿಸದೆ, ಅಪೇಕ್ಷೆ ಪಡದೆ ಇದ್ದರೆ ಮಾತ್ರ ಸಂಬಂಧಗಳು ಬಹಳ ಕಾಲ ಉಳಿುಯುತ್ತದೆ.
ಸಂಬಂಧಗಳು “ಎರಡು ರೈಲು ಹಳಿಯ ಹಾಗೆ ಜೊತೆಯಲ್ಲೇ ಹೋಗುತ್ತಿರುತ್ತದೆ ಆದರೆ ಒಂದಕ್ಕೊಂದು ಭೇಟಿಯಾಗುವುದಿಲ್ಲ”. ಇಲ್ಲಿ ಭೇಟಿಯಾಗುವುದು ಎಂದರೆ ಜೊತೆಯಲ್ಲೇ ಇರುತ್ತಾರೆ ಆದರೆ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿರುತ್ತಾರೆ ಅವರ ನಡುವೆ ಸಂಬಂಧ ಹೇಗಿರುತ್ತದೆ ಎಂದು ಅರಿತುಕೊಂಡಾಗ ಮಾತ್ರ ಸಂಬಂಧಗಳು ಗಟ್ಟಿಯಾಗಿ ನಿಲ್ಲಲು ಸಾಧ್ಯ. ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುವುದೋ ಕರ್ತವ್ಯ ನಿರ್ವಹಿಸಿಕೊಂಡು ಹೋಗುವುದೋ ಇದ್ದಂತೆ ಇದ್ದಹಾಗೆ ಒಪ್ಪಿಕೊಳ್ಳುವುದೋ ಇದು ಅವರವರಿಗೆ ಬಿಟ್ಟಿದ್ದು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
