ಬದುಕಿದ್ದಿದ್ದರೆ ಈ ಹಾಸ್ಯಬ್ರಹ್ಮನಿಗೆ 101 ವರ್ಷ

ಇದು ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಕುಟುಂಬವರ್ಗ ಈಗೇನು ಮಾಡುತ್ತಿದೆ? ಅವರ ಧರ್ಮಪತ್ನಿ ಹೇಗಿದ್ದಾರೆ? ಬದುಕು ಸಹನೀಯವೇ? ನಾಡಿನ ಮಂದಿಗೆಲ್ಲಾ ನಗೆಯ ಸಿಹಿ ಹಂಚಿದ ಕಲಾವಿದನೊಬ್ಬನ ಸಂಸಾರ ಸಿಹಿಯಾಗಿದೆಯಾ? ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಅವರ ಮನೆಗೆ ಹೋದಾಗ ಸಿಕ್ಕ ಉತ್ತರ, ಗಣೇಶ ಕಾಸರಗೋಡು ಲೇಖನಿಯಲ್ಲಿ ಮೂಡಿ ಬಂದ ಲೇಖನವನ್ನು ತಪ್ಪದೆ ಮುಂದೆ ಓದಿ..

ನಗೆಗಾರ ನರಸಿಂಹರಾಜು ಅವರ ಕೊನೆಯ ದಿನಗಳ ವಿವರಗಳನ್ನು ನನಗೆ ಬೊಗಸೆ ತುಂಬಾ ತುಂಬಿ ಕೊಟ್ಟದ್ದು ಅವರ ಧರ್ಮ ಪತ್ನಿ ಶಾರದಮ್ಮ. ಒಂದು ಕಾಲದಲ್ಲಿ ರಾಜಕುಮಾರ್ ಅವರ ಕಾಲ್’ಶೀಟ್ ಪಡೆವ ಮೊದಲೇ ಈ ನಗೆಗಾರನ ಕಾಲ್’ಶೀಟ್ ಪಡುಯುವಂಥಾ ಡಿಮಾಂಡ್ ಇವರಿಗಿತ್ತು. ಆದರೆ ಸಾಯುವ ಕಾಲಕ್ಕೆ ನರಸಿಂಹರಾಜು ಅವರ ಹೃದಯ ಛಿದ್ರ ವಿಛಿದ್ರವಾಗಿ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು. ಇದಕ್ಕೆ ಕಾರಣವಾದದ್ದು ಚಿತ್ರರಂಗದಲ್ಲಿ ಅವಕಾಶಗಳ ಕೊರತೆ, ‘ಪ್ರೊಫೆಸರ್ ಹುಚ್ಚುರಾಯ’ ಚಿತ್ರದ ಅಗಾಧ ಲಾಸ್…
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಹಾಸ್ಯನಟರಿವರು. ತಾರಾಮೌಲ್ಯವಿದ್ದುದರಿಂದಲೇ ರಾಜಕುಮಾರ್’ರಂಥಾ ಮೇರು ನಟರು ಕೂಡಾ ಇವರ ಜತೆ ನಟಿಸಲು ದುಂಬಾಲು ಬೀಳುತ್ತಿದ್ದುದು. ನರಸಿಂಹರಾಜು ಅವರ ಕಾಲ್’ಶೀಟ್ ಸಿಕ್ಕರೆ ಆ ನಿರ್ಮಾಪಕ ಗೆದ್ದನೆಂದೇ ಲೆಕ್ಕ! ಇಂಥಾ ನರಸಿಂಹರಾಜು ಅವರ ಕುಟುಂಬವರ್ಗ ಈಗೇನು ಮಾಡುತ್ತಿದೆ? ಅವರ ಧರ್ಮಪತ್ನಿ ಹೇಗಿದ್ದಾರೆ? ಬದುಕು ಸಹನೀಯವೇ? ನಾಡಿನ ಮಂದಿಗೆಲ್ಲಾ ನಗೆಯ ಸಿಹಿ ಹಂಚಿದ ಕಲಾವಿದನೊಬ್ಬನ ಸಂಸಾರ ಸಿಹಿಯಾಗಿದೆಯಾ? ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಕುಮಾರಪಾರ್ಕ್ ಬಡಾವಣೆಯ ಬಿ.ಡಿ.ಎ. ಕಚೇರಿಯ ಹಿಂಬದಿ ರಸ್ತೆಯಲ್ಲಿರುವ ‘ನಲಶ್ರೀ’ ಮನೆಗೆ ಭೇಟಿ ನೀಡಿದಾಗ ಸಿಕ್ಕ ಉತ್ತರವೇ ಈ ಬರಹ…

ಅಂದಹಾಗೆ ಇದು ಈಗಿನ ಬರಹವಲ್ಲ. 21 ವರ್ಷಗಳ ಹಿಂದೆ ‘ವಿಜಯ ಕರ್ನಾಟಕ’ಕ್ಕಾಗಿ ಬರೆದ ಬರಹ. ಇಷ್ಟೊಂದು ವರ್ಷಗಳಲ್ಲಿ ನರಸಿಂಹರಾಜು ಅವರ ಕುಟುಂಬದ ಬದುಕಿನ ಶೈಲಿ ಬದಲಾಗಿರಬಹುದು ಆದರೆ ಅವರು ಬಿಟ್ಟುಹೋದ ನೆನಪುಗಳು ಬದಲಾಗಲು ಸಾಧ್ಯವೇ ನೀವೇ ಹೇಳಿ? ಅಂಥಾದ್ದೊಂದು ನೆನಪುಗಳ ಮೆರವಣಿಗೆಯೇ ಈ ಲೇಖನ…

ಅದೊಂದು ಸಾಮಾನ್ಯವಾದ ಮನೆ. ಅಂಥಾ ಅದ್ದೂರಿ ಬಡಾವಣೆಯಲ್ಲಿ ಇಷ್ಟೊಂದು ಸರಳ ಮನೆಯಿರುವುದು ಸಾಧ್ಯವಾ ಎನ್ನುವಷ್ಟು ಸರಳ ಮನೆಯದು. ತಿಂಗಳಿಗೆ ಎಂಟು ಸಾವಿರ ಬಾಡಿಗೆ. ತೀರಾ ಇತ್ತೀಚೆಗೆ ತಾನೇ ಜಯಮಹಲ್’ನ ಅಧಿಕೃತ ಸ್ವಂತ ಬಂಗಲೆಯಿಂದ ಈ ಮನೆಗೆ ಬಂದಿರುವ ಕುರುಹಾಗಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶೋಕೇಸ್ ತುಂಬಾ ಫಲಕ, ಸ್ಮರಣಿಕೆಗಳು. ಸದ್ಯ ಇವುಗಳನ್ನೆಲ್ಲಾ ಮಾರುವಂಥಾ ದಾರಿದ್ರ್ಯ ಪರಿಸ್ಥಿತಿ ಇವರಿಗೆ ಬಂದಿಲ್ಲವೆನ್ನುವ ಸಮಾಧಾನದೊಂದಿಗೆ ನರಸಿಂಹರಾಜು ಅವರ ಮಗಳು ಸುಧಾ ಅವರೊಂದಿಗೆ ಮಾತಿಗೆ ಕುಳಿತದ್ದಾಯಿತು. ಅವರು ಕೊಟ್ಟಿರುವ ಕೆಲವೊಂದು ಮಾಹಿತಿ ಹೀಗಿವೆ :

ನರಸಿಂಹರಾಜು ಅವರು ನಿಧನರಾದದ್ದು 1979ರ ಜುಲೈ 11ರಂದು. ಅವರಿಗೆ ಒಂಭತ್ತು ಮಂದಿ ಮಕ್ಕಳು. ಮೊದಲನೆಯವಳ ಹೆಸರು ಧರ್ಮಾವತಿ, ಎರಡನೆಯವ ಶ್ರೀಕಾಂತ, ಮೂರನೆಯವಳು ಕಲಾವತಿ, ಚಂದ್ರಾವತಿ, ಲಕ್ಷ್ಮೀಕಾಂತ, ನರಹರಿರಾಜು, ಸುಧಾವತಿ, ಎಂಟನೆಯವಳು ಗಾಯತ್ರೀ ದೇವಿ, ಒಬ್ಬಾಕೆ ತೀರಿಕೊಂಡಿದ್ದಾಳೆ. ಹೆಂಡತಿ ಶಾರದಮ್ಮ. ಸುಧಾ ನರಸಿಂಹರಾಜು ನಟಿಯಾಗುತ್ತಾರೆಂದು ಕನಸೂ ಕಂಡವರಲ್ಲ. ಅದೊಂದು ಅಚಾನಕ ಘಟನೆ. ತಂದೆ ತೀರಿಕೊಂಡಾಗ ಸುಧಾಗೆ ಆರು ವರ್ಷ. ಹದಿನೈದು ವರ್ಷಗಳ ಹಿಂದೆ ಬಣ್ಣ ಹಚ್ಚಿದ ಸುಧಾ ಲೆಕ್ಕವಿಲ್ಲದಷ್ಟು ಎಪಿಸೋಡುಗಳಲ್ಲಿ ನಟಿಸಿದ್ದಾರೆ…

ಅಪ್ಪನ ಬಗ್ಗೆ ಮಾತಾಡುತ್ತಾ ಭಾವುಕರಾಗುವ ಸುಧಾ ನರಸಿಂಹರಾಜು ಹೇಳುತ್ತಾರೆ : ‘ಮಕ್ಕಳ ಓದಿನ ಬಗ್ಗೆ ಅಪ್ಪನಿಗೆ ವಿಪರೀತ ಕಾಳಜಿಯಿತ್ತು. ತಮಗೆ ಓದಲಾಗಿಲ್ಲ, ಆದರೆ ತಮ್ಮ ಮಕ್ಕಳು ಓದಬೇಕೆನ್ನುವ ತುಡಿತ ಅವರಲ್ಲಿತ್ತು. ಬದುಕು ಪೂರ್ತಿ ಕಷ್ಟಪಟ್ಟಿದ್ದಾರೆ, ಆದರೆ ಯಾವತ್ತೂ ನಮ್ಮ ಮುಂದೆ ಈ ಬಗ್ಗೆ ಹೇಳಿಕೊಂಡಿಲ್ಲ. ಕಾಳು-ಸೊಪ್ಪು ತಿಂದುಕೊಂಡೇ ಬೆಳೆದವರು ನಾವು. ಕಲೆಗಾಗಿ ಬದುಕನ್ನು ಮುಡಿಪಾಗಿಟ್ಟರು ಅಪ್ಪ. ಸಾಯುವ ಕಾಲಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಇರಲಿಲ್ಲ ನಿಜ, ಆದರೆ ಮಾಡಿರುವ ಸಾಲವನ್ನು ಉಳಿಸಿ ಹೋಗಲಿಲ್ಲ…’ – ಇತ್ಯಾದಿ ಇತ್ಯಾದಿ.

ಅಷ್ಟರಲ್ಲಿ ನರಸಿಂಹರಾಜು ಅವರ ಧರ್ಮಪತ್ನಿ ಶಾರದಮ್ಮ ಬಂದು ಮಾತಿಗೆ ಕೂತರು. ಗಿಡ್ಡನೆಯ ಜೀವ. ಆರೋಗ್ಯವಂತ ಲುಕ್. ಸ್ಪಷ್ಟ ಮಾತು. ನಿಖರ ನಿಲುವು. ಎಲ್ಲೂ ವಿಷಾದದ ಛಾಯೆ ಇದ್ದ ಹಾಗಿರಲಿಲ್ಲ. ಆ ಹಾಲ್’ನ ಬೃಹತ್ ಶೋಕೇಶಿನ ಎದುರುಗಡೆಯ ಪುಟ್ಟ ಸ್ಟೂಲಿನಲ್ಲಿ ಕೂತಿದ್ದ ಶಾರದಮ್ಮ ಒಂದು ನಿಟ್ಟುಸಿರು ಬಿಟ್ಟು ಮಾತು ಆರಂಭಿಸಿದ್ದು ಹೀಗೆ : ‘ಯಾರು ಸತ್ತರೂ ಮೊದಲ ಹನ್ನೆರಡು ದಿನ ಮಾತ್ರ ನೆನಪಿರುತ್ತದೆ. ಇದು ಶ್ರಾದ್ಧ ಕಾರ್ಯದ ನೆನಪು. ಕ್ರಮೇಣ ಎಲ್ಲವೂ ಮರೆತು ಹೋಗುತ್ತದೆ. ಹೀಗಿರುವಾಗ ಚಿತ್ರರಂಗದ ಮಂದಿ ಅವರನ್ನು ಮರೆತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದ್ರೆ ಅವ್ರು ನಮ್ಮ ಪಾಲಿಗೆ ಮಾತ್ರ ಸತ್ತಿಲ್ಲ. ಅವ್ರ ನೆನಪು ಮಾತ್ರ ಬದುಕಿಕೊಂಡಿದೆ. ಇಲ್ಲಿ ಈ ಮನೆಯಲ್ಲಿ, ಈ ಮನಸ್ಸಿನಲ್ಲಿ ಅವ್ರು ಸದಾ ಜೀವಂತ. ಹೀಗಿರುವಾಗ ಮರೆಯುವ ಪ್ರಶ್ನೆಯೇ ಇಲ್ಲ…

‘ನಿಜ ಹೇಳಬೇಕೆಂದರೆ ಅವರದ್ದು ನಿಜವಾದ ಅರ್ಥದಲ್ಲಿ ನರಸಿಂಹಾವತಾರವೇ! ಅವರ ಹೆತ್ತವರು ಅದು ಹೇಗೆ ನರಸಿಂಹ ಎಂಬ ಹೆಸರಿಟ್ಟರೋ? ಅದಕ್ಕೆ ತಕ್ಕುದಾದ ಸಿಟ್ಟು, ಸಿಡುಕು, ಕೋಪ. ಎದುರು ಮಾತಾಡಿದರೆ ಮುಗಿದೇ ಹೋಯಿತು. ಹೆಂಡ್ತಿ ಮಕ್ಳನ್ನು ಎಷ್ಟು ಪ್ರೀತಿಸುತ್ತಿದ್ರೋ ಸಿಟ್ಟು ಬಂದ್ರೆ ಸಾಕ್ಷಾತ್ ನರಸಿಂಹಾವತಾರವೇ! ಮಕ್ಕಳು ತಪ್ಪು ಮಾಡಿದ್ರೆ ಮನೆಗೆ ಸುತ್ತು ಹಾಕಿಸುತ್ತಾ ಹೊಡೆದದ್ದೂ ಇದೆ…

‘ದಿನಕ್ಕೆ ನಾಲ್ಕೈದು ಶಿಫ್ಟ್’ ನಲ್ಲಿ ಕೆಲಸ ಮಾಡುತ್ತಿದ್ರು. ವಿಪರೀತ ಟೆನ್ಷನ್ ಇತ್ತು. ಅವರಿಗೆ ಆಗ ಸ್ಟಾರ್ ವ್ಯಾಲ್ಯೂ ಏರಿತ್ತು. ಎಲ್ಲಾ ಸಿನಿಮಗಳಲ್ಲೂ ಇವರದ್ದೇ ಕಾರುಬಾರು! ಆಗಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟರೆಂದರೆ ಇವರೇ. ಆದ್ರೆ ಕೈಗೆ ಸಿಗುತ್ತಿದ್ದುದು ಕಮ್ಮಿ. ಕಮಿಟ್ ಆಗಿರುವ ದುಡ್ಡು ಬಂದದ್ದೇ ಇಲ್ಲ. ಕೈಗೆ ಬಂದ ದುಡ್ಡಿಗಿಂತಲೂ ಕೈ ತಪ್ಪಿಸಿಕೊಂಡ ದುಡ್ಡಿನ ಮೊತ್ತವೇ ಜಾಸ್ತಿಯಾಗಿತ್ತು. ಇಷ್ಟಕ್ಕೂ ಅಂದಿನ ದಿನಗಳಲ್ಲಿ ಸಿಗುತ್ತಿದ್ದ ಸಂಭಾವನೆಯ ಮೊತ್ತ ತೀರಾ ಕಮ್ಮಿಯಿತ್ತು. ಹೆಸರು ಜಾಸ್ತಿ. ಮನೆಗೆ ಬಂದು ಹೋಗುತ್ತಿದ್ದ ನೆಂಟರಿಷ್ಠರು ಕಮ್ಮಿಯಾ? ಖರ್ಚು ವಿಪರೀತ. ಈ ಕಡೆ ದುಡ್ಡು ಬಂದ್ರೆ ಆ ಕಡೆ ಖರ್ಚಿಗೆ ದಾರಿಯಿತ್ತು. ಇಷ್ಟು ಸಾಲದೆನ್ನುವಂತೆ ಅವ್ರಿಗೆ ಹೆಂಡ್ತಿ ಮಕ್ಳನ್ನು ಕಟ್ಟಿಕೊಂಡು ಊರೂರು ಸುತ್ತುವ ಚಪಲ! ಜತೆಗೇ ಸಿನಿಮಾ ನೋಡುವಾಸೆ. ‘ಎಂಟರ್ ದಿ ಡ್ರ್ಯಾಗನ್’ ಸಿನಿಮಾವನ್ನು ಅದೆಷ್ಟು ಸಾರಿ ನೋಡಿದ್ದಾರೋ ಲೆಕ್ಕವಿಟ್ಟವರಿಲ್ಲ! ಆಗ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಅವರು ಎಲ್ಲರಂತೆ ಆರಾಮವಾಗಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವಂತಿರಲಿಲ್ಲ. ಮುಖ ಕಾಣದಂತೆ ತಲೆ ತುಂಬಾ ಶಾಲು ಹೊದ್ದುಕೊಂಡು ಕಳ್ಳರಂತೆ ಥಿಯೇಟರಿಗೆ ಹೋಗಬೇಕಾಗಿತ್ತು! ಜತೆಗೆ ದಿನದ ಇಪ್ಪತ್ತನಾಲ್ಕೂ ಗಂಟೆ ಎಲೆಯಡಿಕೆ ಸೇವನೆಯ ಚಟ. ಕಪ್ಪುಕನ್ನಡಕ ಧರಿಸಿ, ತುಟಿ ಕೆಂಪು ಮಾಡಿಕೊಂಡು ಹೊರಟರೆ ಸಿನಿಮಾ ಮುಗಿಯುವವರೆಗೂ ಟಾಯ್ಲೆಟ್ಟಿಗೂ ಹೋಗುತ್ತಿರಲಿಲ್ಲ! ಹೋದರೆ ಅಲ್ಲೂ ಅಭಿಮಾನಿಗಳು ಮುತ್ತಿಕೊಂಡು ಬಿಡುತ್ತಿದ್ರು. ಡ್ರೈವ್ ಇನ್ ಥಿಯೇಟರೆಂದ್ರೆ ಇವ್ರಿಗೆ ಪ್ರಾಣ. ಆಗ ಬನ್ನೇರುಘಟ್ಟ ರಸ್ತೆಯಲ್ಲೊಂದು ಡ್ರೈವ್ ಇನ್ ಥಿಯೇಟರಿತ್ತಲ್ವಾ? ಪ್ರತಿ ತಿಂಗಳ ಕೊನೆಯಲ್ಲಿ ಅಲ್ಲಿಗೆ ಭೇಟಿ. ಫ್ಯಾಮಿಲಿ ಜತೆ ಕೂತು ಅಲ್ಲೇ ಊಟ, ಕುರುಕಲು ತಿಂಡಿ ಸೇವನೆ. ಇವರಿಗೆ ಅಮಿತಾಬ್ ಬಚ್ಚನ್ ಅಂದ್ರೆ ಪ್ರಾಣ. ಆತನ ಸಿನಿಮಾಗಳನ್ನು ಒಂದೂ ಬಿಡದೇ ನೋಡುತ್ತಿದ್ರು. ಆತ ಅಭಿನಯಿಸಿದ ‘ಅಮರ್ ಅಕ್ಬರ್ ಆಂಟನಿ’ ಸಿನಿಮಾವನ್ನು ಅದೆಷ್ಟು ಸಾರಿ ನೋಡಿದ್ದಾರೋ ಆ ಪರಮಾತ್ಮನೇ ಬಲ್ಲ. ದೇವಾನಂದ್, ಶಿವಾಜಿ ಗಣೇಶನ್, ಅವರ ಜತೆಯೂ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು. ಆದ್ರೆ ಕನ್ನಡ ಚಿತ್ರರಂಗದಲ್ಲಿ ಇವರಿಗೆ ಆತ್ಮೀಯರೆನ್ನಬಹುದಾದ ಗೆಳೆಯಾರ್ಯಾರೂ ಇರ್ಲಿಲ್ಲ. ಬಾಲಣ್ಣನೆಂದ್ರೆ ಅಚ್ಚುಮೆಚ್ಚು. ರಾಜಾಶಂಕರ್ ಜತೆ ಸ್ವಲ್ಪ ಹೆಚ್ಚೇ ಪ್ರೀತಿ ಗೌರವ…

‘ಪಗಡೆಯಾಟವೆಂದ್ರೆ ಇವರಿಗೆ ಜೀವ. ತಮ್ಮ ಜತೆ ಆಟವಾಡುವಂತೆ ನಮ್ಮ ಜೀವ ತಿನ್ನುತ್ತಿದ್ರು. ಜತೆಗೆ ಎಳೆಯಡಿಕೆ, ಸಿಗರೇಟು. ಪಗಡೆಗೆ ಕೂತ್ರೆ ಊಟ, ತಿಂಡಿ, ನಿದ್ದೆಯ ನೆನಪಿರುತ್ತಿರ್ಲಿಲ್ಲ. ನಮ್ಮ ಮದ್ವೆಯಾದಾಗ ಇವ್ರು ನಾಟಕ ಕಂಪನಿಯಲ್ಲಿದ್ರು. 1949ರಲ್ಲಿ ನಮ್ಮ ಮದ್ವೆಯಾಯ್ತು. 1950ರಲ್ಲಿ ಗುಬ್ಬಿ ಕಂಪೆನಿ ಸೇರಿಕೊಂಡ್ರು. ಆರೇಳು ವರ್ಷಗಳ ಅಗ್ರಿಮೆಂಟದು. ನಂತರದ ದಿನಗಳಲ್ಲಿ ಸಿನಿಮಾಗಳಲ್ಲಿ ಬಿಜಿಯಾದ್ರು. ಆಗ ಇಡಿಯ ಉದ್ಯಮವೇ ಮದರಾಸಿನಲ್ಲಿದ್ದುದರಿಂದ ನಾವೆಲ್ಲಾ ಅಲ್ಲಿಗೇ ಶಿಫ್ಟ್ ಆದೆವು. ನಾನು ಅವ್ರ ಹೆಂಡ್ತಿ ಅಂತ ಹೇಳ್ತಿಲ್ಲ, ಆ ಲೆವೆಲ್ಲಿನ ನಟನನ್ನು ನಾನು ನನ್ನ ಲೈಫ್’ನಲ್ಲೇ ನೋಡಿಲ್ಲ! ಈಗ್ಲೂ ಅಷ್ಟೇ ಅವ್ರ ಹೆಸರು ಹೇಳಿದ್ರೂ ಸಾಕು ಸೀಟು ಬಿಟ್ಟು ಕೊಡ್ತಾರೆ! ಅಂಥಾ ಮಹಾನ್ ನಟನ ಕುಟುಂಬ ವರ್ಗದವ್ರು ನಾವು ಅಂತ ಹೇಳಿಕೊಳ್ಳಲು ಹೆಮ್ಮೆ ನಮ್ಗೆ. ಮದರಾಸಿನಲ್ಲೊಂದು ಮನೆಯಿತ್ತು. ದೊಡ್ಡ ಮಗಳ ಮದ್ವೆಗಾಗಿ ಅದನ್ನು ಮಾರಿದ್ರು. ಉಳಿದ ದುಡ್ಡು ಬದುಕಿಗಾಯ್ತು. ಅವರಿರುವಷ್ಟು ಕಾಲ ನಮ್ಮನ್ನೆಲ್ಲಾ ತುಂಬಾ ಚೆನ್ನಾಗಿ ನೋಡಿಕೊಂಡ್ರು. ಯಾವುದಕ್ಕೂ ಕಮ್ಮಿ ಮಾಡಲಿಲ್ಲ. ತೀರಿಕೊಂಡ ಮೇಲೂ ಯಾರಿಗೂ ತೊಂದ್ರೆಯಾಗದಂತೆ ಮಾಡಿದ್ದ ಸಾಲವನ್ನು ಮುಗಿಸಿಯೇ ಹೊರಟು ಹೋದ್ರು. ‘ಪ್ರೊ|ಹುಚ್ಚುರಾಯ’ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತರೂ ಸಾಲ ಉಳಿಸಲಿಲ್ಲ. ಈಗ ಆಗಾಗ ಅವ್ರ ನೆನಪು ಆಗುತ್ತಲೇ ಇರ್ತದೆ. ಅವ್ರು ಉಪಯೋಗಿಸುತ್ತಿದ್ದ ಟೆಲಿಫೋನ್ ಈಗ್ಲೂ ನಮ್ಮ ಬಳಿಯಿದೆ. ಅಷ್ಟರ ಮಟ್ಟಿಗೆ ಮೈನ್’ಟೇನ್ ಮಾಡ್ಕೊಂಡು ಬಂದಿದ್ದೀವಿ. ದೇವ್ರು ಹೇಗೋ ನಡೆಸಿಕೊಂಡು ಹೋಗ್ತಾನೆ. ಹೇಗೆಂದು ಗೊತ್ತಿಲ್ಲ. ಅದೊಂದು ಪವಾಡ! ಆಗೀಗ ಬಂಧು ಬಾಂಧವರ ಮದ್ವೆ ಸಮಾರಂಭಗಳಿಗೆ ಹೋಗೋದಿದೆ. ವರ್ಷಕ್ಕೊಮ್ಮೆ ‘ಶ್ರಾದ್ಧ’ ಮಾಡ್ತೇವೆ. ಮುಖ್ಯವಾಗಿ ಅವ್ರು ನಮ್ಮ ಜತೆಯಲ್ಲಿಲ್ಲ ಅಂತ ಯಾವತ್ತೂ ಅನಿಸಿಲ್ಲ. ಇಲ್ಲೇ ಇದ್ದಾರೆ, ಇಲ್ಲೆಲ್ಲೋ ಹೊರಗೆ ಹೋಗಿದ್ದಾರೆ, ಇನ್ನೇನು ಬಂದೇ ಬರ್ತಾರೆ, ನಮ್ಮ ಜತೆಯಲ್ಲೇ ಇದ್ದಾರೆ, ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ ಎಂದೆಲ್ಲಾ ಅನಿಸಿವುದಿದೆ…’ – ಎಂದು ಹೇಳುತ್ತಾ ಶಾರದಮ್ಮ ಒಮ್ಮೆ ಮನೆಯ ಸುತ್ತ ನೋಡಿಕೊಂಡರು. ಅವರ ಕಣ್ಣುಗಳು ಅದೃಶ್ಯ ಬಾಳ ಸಂಗಾತಿಯನ್ನು ಹುಡುಕುತ್ತಿದ್ದುವೋ ಏನೋ ಗೊತ್ತಿಲ್ಲ…!!!


  • ಗಣೇಶ ಕಾಸರಗೋಡು – ಖ್ಯಾತ ಸಿನಿಮಾ ಪತ್ರಕರ್ತರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW