ರಸಂ ಎಂಬ ದಿವ್ಯಾಮೃತ: ಒಂದು ರಸಚಿಂತನೆ

ರಸವೆಂಬುದು ಸಾಮಾನ್ಯವೆ? ಅದು ಪಂಚೇಂದ್ರಿಯಗಳಲ್ಲೂ ಹನಿಹನಿಯಾಗಿ ಒಸರುವ ಭಾವ. ಸಾರು ಎಂಬುದು ಗಮ್ಮತ್ತು ಹಾಗೂ ಮತ್ತು. ಅದು ಹಾನಿಕಾರಕವಲ್ಲದ ಅಮಲು. ಘಮಘಮಲು. ಹಾಗಾಗಿ ಅದು ಹಲವು ಹತ್ತು ಭಕ್ಷ್ಯಗಳನ್ನು ಕಟ್ಟುವ ಬದಲು ಕಟ್ಟಬಹುದಾದ ಒಂದು ಮುತ್ತು! – ಕೆ. ರಾಜಕುಮಾರ್ , ತಪ್ಪದೆ ಮುಂದೆ ಓದಿ…

ಆಷಾಢದ ಮೆಲ್ಲಬೀಸು ಗಾಳಿ ಒಂದೆಡೆ. ಮತ್ತೊಂದೆಡೆ ಧೋ ಎಂದು ಸುರಿಯುತ್ತಿರುವ ಮುಂಗಾರಿನ ಮುಸಲ ಧಾರೆ. ತುಂಬಿ ಹರಿಯುತ್ತಿ ರುವ ಹಳ್ಳಕೊಳ್ಳಗಳು. ನದಿಗಳಲ್ಲಿ ಮಹಾಪೂರ. ಚಳಿಗೆ, ಮಳೆಗೆ ಬಾಯಿ ಸಪ್ಪಸಪ್ಪಗೆ. ಕಮ್ಮಗಿನ ಪದಾರ್ಥ ರುಚಿಸದು. ಈಗ ಅಗತ್ಯವಾಗಿ ಬೇಕಾಗಿರುವುದು ಬಿಸಿಬಿಸಿಯಾದ, ಖಾರಖಾರವಾದ ತಿಳಿಸಾರು ಅಥವಾ ರಸಂ ಎಂಬ ದಿವ್ಯಾಮೃತ. ಆ ಕುರಿತು ಒಸರಿದ ಒಂದು ರಸಮಯ ಚಿಂತನೆ; ರಸಚಿಂತನೆ:

ಸಾರವಿರುವುದೇ ಸಾರು. ಸಾರವಿದ್ದರೆ ಸಂಸಾರ. ಸಂಸಾರದಲ್ಲಿ ಘಮವಿರಬೇಕು ಎಂದರೆ ರಸವಿರಬೇಕು. ಇಲ್ಲದಿದ್ದರೆ ನಿಸ್ಸಾರ.

ರುಚಿಗೂ, ಅಭಿರುಚಿಗೂ, ರಸಕ್ಕೂ ಅಂತರ್ಸಂಬಂಧವಿದೆ. ಸರಸದಲ್ಲಿ ರಸವಿದೆ. ಇರಬೇಕಾದದ್ದೇ. ವಿರಸದಲ್ಲೂ ರಸವಿದೆ. ಅದು ಬೇಡವಾದದ್ದು. ವಿರಸವೆಂಬುದು ವಿಷ. ಅದಕ್ಕೇ ಇರಬಹುದು ಬೇಂದ್ರೆ ವಿರಸ ಮರಣ ಎಂದಿರುವುದು. ರಸದ ಘಮವೆಂದರೆ ಸೃಷ್ಟಿಕ್ರಿಯೆಯ ಪರಿಮಳ. ಅದಕ್ಕೇ ಕವಿ ರಸವೇ ಜನನ ಎಂದಿರಬಹುದು ಎಂಬ ವಾದ ನನ್ನದು. ಅದು ಇಹದ ಪರಿಮಳದ ಹಾದಿಯೂ ಹೌದು. ಒಟ್ಟಿನಲ್ಲಿ ರಸವೆಂಬುದು ಸಮರಸ. ಹಾಗಾಗಿ ಸಮರಸವೇ ಜೀವನ.

ಭೂರಿಭೋಜನ, ಷಡ್ರಸಭೋಜನ, ಮೃಷ್ಟಾನ್ನಭೋಜನ, ಸುಗ್ರಾಸಭೋಜನ. ಈ ಯಾವ ಭೋಜನಗಳಲ್ಲೇ ಆಗಲಿ ರಸವಿರಬೇಕು. ಷಡ್ರಸಗಳು ಯಾವುವೆಂದಿರಾ? ಉಪ್ಪು, ಹುಳಿ, ಕಾರ, ಸಿಹಿ, ಕಹಿ ಮತ್ತು ಒಗರು. ಈ ಎಲ್ಲಾ ರುಚಿಗಳ ಮಹಾ ಸಂಗಮವೇ ರಸಂ ಎಂಬ ಪಾಕ. ಅದುವೇ ತಿಳಿಸಾರು.

ಮೇಲೆ ಭಿನ್ನ, ಭಿನ್ನ ಬಗೆಯ ಭೋಜನಗಳನ್ನು ಉಲ್ಲೇಖಿಸಿರುವೆ. ಮೊಗಮಿತ್ರರಿಗೆ ಇವು ಏನು, ಎತ್ತ ಎಂದು ಅರಿಯುವ ಬಯಕೆ ಮೂಡಬಹುದು. ಷಡ್ರಸಗಳ ಬಗೆಗೆ ಮೇಲೆ ಹೇಳಿರುವೆ. ತಿಳಿಸಾರು ಮತ್ತು ಪುಳಿಯೋಗರೆ ಇದಕ್ಕೆ ಉದಾಹರಣೆ.

ಇನ್ನು ಮೃಷ್ಟಾನ್ನ ಭೋಜನವೆಂದರೆ ಆರು ರಸಗಳಲ್ಲಿ ಕಹಿಯನ್ನು ಹೊರತುಪಡಿಸಿದ ಭೋಜನ. ಇದರಲ್ಲಿ ಸಿಹಿಯ ಪಾಲು ಸ್ವಲ್ಪ ಮುಂದಾಗಿರುತ್ತದೆ. ಐದು ರಸಗಳ ‘ಪಂಚರಸೋಪೇತ’ ಭೋಜನವೇ ಮೃಷ್ಟಾನ್ನಭೋಜನ.

ಭೂರಿಭೋಜನ ಎಂದರೆ ಹತ್ತಾರು ಬಗೆಯ ಖಾದ್ಯಗಳು. ಒಂದೊಂದು ಖಾದ್ಯವೂ ಎರಡರಿಂದ ಆರು ರಸಗಳವರೆಗಿನ ಸಂಗಮಬಿಂದು. ಇನ್ನು ಸುಗ್ರಾಸ ಭೋಜನ ಅಥವಾ ಖಗ್ರಾಸ ಭೋಜನವೆಂದರೆ ಪರಿಪೂರ್ಣ ಭೋಜನ. ಎಲೆಯಲ್ಲಿ ಬಡಿಸಿದ ಯಾವ ಪದಾರ್ಥವನ್ನೂ ಬಿಡದೆ, ಎಲ್ಲವನ್ನೂ ಮೆದ್ದು, ಸಂಕೋಚವನ್ನು ಸುತ್ತಿ ಪಕ್ಕಕ್ಕಿಟ್ಟು ಬೆರಳು ಚೀಪುವಂತಹ ಸುಮೇರು ರುಚಿಯ ಭೋಜನ. ಇಷ್ಟೆಲ್ಲಾ ತಿಂದರೂ ಒಂದರ್ಧ ಸೌಟು ಸಾರಿಗಾಗಿ ಬೊಗಸೆ ಒಡ್ಡುವ ಭೋಜನ! ರಸವಿಲ್ಲದ ಭೋಜನ ನಿಸ್ಸಾರ. ಸಾರು ಜೀವನದ ಸಂಜೀವಿನಿ ಶಕ್ತಿ.

ಏನೇ ತಿನ್ನಿ, ಎಷ್ಟೇ ತಿನ್ನಿ ಕಡೆಯಲ್ಲಿ ಒಂದೆರಡು ತುತ್ತು ಅನ್ನವನ್ನು ರಸದಲ್ಲಿ ಕಲೆಸಿ ಹಪ್ಪಳ, ಸಂಡಿಗೆ, ಬಾಳಕ, ಬಜ್ಜಿಗಳೊಡನೆ ನಂಜಿಕೊಂಡು ಉಣ್ಣುವ ಸುಖವೇ ಬೇರೆ. ಅದು ಪರಮಸುಖ. ನಾನು ನಂಜಿಕೆಗಳ ನಡುವೆ ಅಥವಾ, ಅಥವಾ ಎಂದು ಬಳಸಿಲ್ಲ. ‘ವಿಶ್ವ ಆಹಾರ ದಿನ’ದಂದು ಇಳೆಗೆ ಇಳಿದು ಬಂದಿರುವ ರಾಜಕುವರ ನಾನು. ಹಾಗಾಗಿ ತಿನ್ನುವ ಹೊಟ್ಟೆಗೆ ಕಲ್ಲು ಹಾಕಲಾರೆ. ನಾಲಿಗೆ ಚಪಲಕೆ ಅಂಕುಶ ಒಗೆಯಲಾರೆ. ಇನ್ನೂ ಸ್ವಲ್ಪ ಐಸಾ, ಸಾವಧಾನವಾಗಿ ತಿನ್ನಿ, ಹೊಟ್ಟೆತುಂಬಾ ತಿನ್ನಿ ಎಂದು ಹೇಳುವವನು ನಾನು.

ಹಾಗಾದರೆ ರಸದ ಜೊತೆ ಕಲೆಸಿಕೊಳ್ಳಲು ಬಡಿಸುವ ತೊವ್ವೆಯನ್ನು ಬಿಟ್ಟಿರೇಕೆ ಎಂದಿರಾ? ಅದು ಬಿಟ್ಟೇನೆಂದರೂ ಬಿಡದೀ ಮಾಯೆ. ಆದರೆ ರಸದ ಜೊತೆಗೆ ಈ ತೊವ್ವೆ, ತೊವ್ವೆ ಕ್ಯಾ ಹೈ, ಇದರ ಮತಲಬ್ ಏನು ಎಂದು ನಮ್ಮಲ್ಲೇ ಬಹಳ ಜನರಿಗೆ ಗೊತ್ತಿಲ್ಲ. ಬೇಳೆರಹಿತ ಸಾರಿನಲ್ಲಿನ ಪೌಷ್ಟಿಕ ಅಂಶಗಳ ಕೊರತೆಯನ್ನು ನೀಗಿಸಲು ನಮ್ಮವರು ಕಂಡುಕೊಂಡ ಜಾಣ ಪಥವದು. ಮದುವೆ, ಶ್ರಾದ್ಧ ಯಾವುದೇ ಸಮಾರಂಭವಿರಲಿ ಅಲ್ಲಿ ಪುಷ್ಕಳ ಅಂದರೆ ಹೇರಳವಾದ ಭೋಜನವಿರುತ್ತದೆ. ಹಾಗಾಗಿ ಅಲ್ಲಿ ತೊವ್ವೆ ಅಗತ್ಯವಿಲ್ಲ. ಆದರೆ ಅದು ನಮ್ಮ ಪರಂಪರೆಯ ಭಾಗ. ಅದಕ್ಕೆಂದೇ ಎಲೆಯ ಕೊನೆಯಲ್ಲಿ ಅದನ್ನು ಬಿಡದೆ ಬಡಿಸುತ್ತಾರೆ. ಆದರೆ ಬಹಳಷ್ಟು ಎಲೆಗಳಲ್ಲಿ ತೊವ್ವೆಗೆ ರಸಂನ ಸಾನ್ನಿಧ್ಯ ಪ್ರಾಪ್ತವಾಗುವುದೇ ಇಲ್ಲ. ತೊವ್ವೆ ಯಾವಾಗ ತಿನ್ನಬೇಕು, ಯಾವುದರ ಜೊತೆ ಕಲೆಸಿ ತಿನ್ನಬೇಕು ಎಂಬುದರ ಅರಿವು ಬಹಳಷ್ಟು ಮಂದಿಗಿಲ್ಲ. ಇಷ್ಟೆಲ್ಲಾ ಭಕ್ಷ್ಯಗಳ ನಡುವೆ ಈ ಸಪ್ಪೆ ತೊವ್ವೆಯೇಕೆ ಎಂಬುದು ಇಂದಿನ ಪೀಳಿಗೆಗೆ ಬಿಡಿಸಲಾಗದ ಒಗಟು. ಎಲೆ ಕೊನೆಯಲ್ಲಿ ಪಾಯಸ, ಅದಕ್ಕಿಂತ ಮುಂಚೆ ತೊವ್ವೆ. ಹಾಗಾಗಿ ಅದು ತಿನ್ನುವವರಿಲ್ಲದೆ ಅನಾಥವಾಗಿ ಉಳಿದಿರುತ್ತದೆ. ಬಹುಶಃ ಅದಕ್ಕೇ ಇರಬಹುದು; ಬರಬರುತ್ತ ಬಡಿಸುವ ಅದರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸಾಂಕೇತಿಕ ಎಂದು ಭಾವಿಸುವಂತಾಗಿದೆ.

ಸಾರಿನ ಜೊತೆಗೆ ಅನಾದಿ ಕಾಲದಿಂದಲೂ ಸಂಬಂಧ ಬೆಸೆದುಕೊಂಡ ತುಪ್ಪದ ಬಗ್ಗೆ ಬರೆದಿಲ್ಲವಲ್ಲ ಎಂದು ಬೇಸರಿಸದಿರಿ. “ನಂದಿನಿ ತುಪ್ಪ ಹಾಕಿದೆನಪ್ಪ, ಸ್ವೀಕರಿಸಪ್ಪ ಗಣಪತಿ ಬಪ್ಪ” ಎಂಬ ಹಾಡು ನನಗೂ ನೆನಪಿದೆ. ಇದು ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವ ವಿಚಾರವಲ್ಲ. ತುಪ್ಪವೇ ಜಾರಿ ಸಾರಿಗೆ ಬೀಳುವ ಸಂಗತಿ. ಸನಾತನ ಕಾಲದಿಂದ ಇವೆರಡರ ನಡುವೆ ಇರುವ ಸಾಂಗತ್ಯ ಅಷ್ಟು ಗಾಢವಾದದ್ದು. ಅದನ್ನು ನಿರಾಕರಿಸಲಾದೀತೆ? ನಾನೂ, ನೀನೂ ಜೊತೆಗಿರಲು ಕಾರಣವೆನಗೆ ಬೇಕಿಲ್ಲ ಎಂದು ಸಾರು-ತುಪ್ಪ ಯುಗಳಗೀತೆ ಹಾಡಿಕೊಳ್ಳುವಾಗ ಕೊಲೆಸ್ಟೆರಾಲು, ಕೊಬ್ಬು, ಸಕ್ಕರೆ, ಉಪ್ಪು ಎಂದು ನಾನೇಕೆ ಹೆದರಿಸಲಿ? ನಾನು ಅಪಶಕುನ ನುಡಿಯುವುದಿಲ್ಲ. ಶುಭ ನುಡಿ, ಶುಭ ನುಡಿ, ಶುಭ ನುಡಿಯುವ ಶಕುನದ ಹಕ್ಕಿಯಾಗುವೆ. ಆದರೆ ನಡುವೆ ಅಂತರವಿರಲಿ. ಅರ್ಥವಾಯಿತಲ್ಲ! ಮಿತಿಯಿರಲಿ. ಮಿಳ್ಳೆಯಷ್ಟು ಬೇಡ. ಒಂದೆರಡು ತೊಟ್ಟು ಮಾತ್ರ ಉದುರಿಸಿ! ಸಾರಿನ ಮೂಲ ರುಚಿಯನ್ನು ಅದು ಹೆಚ್ಚಿಸುವಂತಾಗಲಿ. ಕಳೆಯುವಂತೆ ಆಗದಿರಲಿ. ಮುದಕೆ; ಆಮೋದಕೆ ಒಂದು ಹದವಿರಬೇಕು.

ರಸ ಉಂಬುವ ಹಂತವೇ ಸುಖದ ತುರೀಯ ಘಟ್ಟ. ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ ಎಂಬ ಉಕ್ತಿಯಿದೆ. ರಸಿಕನಾಗ ಬೇಕೆಂದರೆ ರಸವನ್ನು ಉಣ್ಣಬೇಕು. ಮತ್ತೂ ರಸಿಕನಾಗಬೇಕು ಎಂದರೆ ಊಟದ ಕಡೆಯ ಭಾಗವಾಗಿ ಒಂದರ್ಧ ಲೋಟ ರಸವನ್ನು ಸಾವಧಾನದಿಂದ ಹನಿಹನಿಯಾಗಿ ಹೀರಬೇಕು. ಅರ್ಧ ಕಣ್ಣುಮುಚ್ಚಿ ಆ ಅನುಭವವನ್ನು ಆಸ್ವಾದಿಸಬೇಕು. ಅದುವೇ ರಸಾಸ್ವಾದ. ತುಸು ಶುಂಠಿ ಅರೆದು; ಸಾಸಿವೆ, ಕರಿಬೇವು, ಜೀರಿಗೆ, ಒಂದೆರಡು ಬ್ಯಾಡಗಿ ಮೆಣಸಿನಕಾಯಿ ಮತ್ತು ಇಂಗು ಒಗ್ಗರಣೆಯನ್ನು ಮಜ್ಜಿಗೆಗೆ ಸೇರಿಸಿ. ಅಂತಹ ಮಜ್ಜಿಗೆಯನ್ನು ಸಾರಿಗೆ ಬೆರೆಸಿ ಕುಡಿದರೆ ಕಿಕ್ ಎಂದರೇನೆಂದು ಅರಿವಾಗುತ್ತದೆ. ನಶೆ ಎಂಬುದು ಇರುಳಿನ ಲೋಕದ ಸ್ವತ್ತಲ್ಲ. ಅದು ಬೆಳಕಿನ ಲೋಕದ ಆನಂದವೂ ಹೌದು ಎಂಬುದು ಮನವರಿಕೆಯಾಗುತ್ತದೆ. ಬಿಸಿಯಾಗಿದೆ, ನಶೆ ಏರಿದೆ, ಮಿತಿ ಮೀರಿದೆ ಜೋಪಾನ ಎಂಬ ಎಚ್ಚರ ಅಗತ್ಯವಿಲ್ಲ. ಬದುಕಿನಲ್ಲಿ ಬಡವ, ಬಲ್ಲಿದನೆಂಬ ಭೇದವಿಲ್ಲ. ರಸಂ ಎಂಬುದು ಬಡವರ ಬಂಧು. ಅದು ಸಮಾನತೆಯ ಹರಿಕಾರ. ಭಾಷಣ, ಬರೆಹಗಳಿಲ್ಲದೆಯೇ ಏಕಸ್ತರ ಸಮಾಜವನ್ನು ನಿರ್ಮಿಸಬಲ್ಲ ಗುರಿಕಾರ. ರಸಂ ಕುಡಿದ ಮೇಲೆ “ನಿದಿರಾ ದೇವಿ ಬಾ ಮೆಲ್ಲಗೆ, ತಾರೆಯಿಂದ ಈ ಭೂಮಿಗೆ” ಎಂಬ ಹಾಡಿನ ಪ್ರಾತ್ಯಕ್ಷಿಕೆ. “ಸದ್ದು ಮಾಡದೆ ನೀನು ನಿದಿರೆ ಮಾಡಯ್ಯ” ಎಂಬ ಜೋಗುಳ.

ತಿಳಿ ಎಂದರೆ ಅರಿವು; ಜ್ಞಾನ. ತಿಳಿಸಾರಿನಲ್ಲಿ ಅರಿವೂ ಉಂಟು, ಹರಿವೂ ಉಂಟು. ಸಾರು ಎಂಬುದು ನಿಂತ ನೀರಲ್ಲ. ಪ್ರವಹಿಸುವ ಗುಣವುಳ್ಳದ್ದು. ರಸಕ್ಕಿರುವ ಈ ‘ವಹ್’ ಧಾತುವಿನ ಗುಣವೇ ಅದಕ್ಕೆ ಚಲನೆಯನ್ನು ಕಟಾಕ್ಷಿಸುತ್ತದೆ. ಸಾರು ಹರಿವ ಗುಣವುಳ್ಳದ್ದು. ಆದುದರಿಂದ ಅದು ನಾರುವುದಿಲ್ಲ! ಅದು ಸ್ಥಾವರವಲ್ಲ. ವರ!

ಉಪ್ಸಾರು, ಬಸ್ಸಾರು, ಸೊಪ್ಸಾರು, ರುಬ್ಸಾರು, ತಿಳಿಸಾರು, ಪುಳಿಚಾರು, ಶುಂಠಿಸಾರು, ನಿಂಬೆಸಾರು, ಹುರುಳಿ ಕಟ್ಸಾರು, ಬೆಳ್ಳುಳ್ಳಿಸಾರು, ಬೇಳೆಸಾರು, ಚುಕ್ಕಿಸಾರು ಅಥವಾ ಹುಣಸೆಸಾರು. ಏನಿದು ಚುಕ್ಕಿಸಾರು ಎಂದು ಹುಬ್ಬು ಏರಿಸಿದಿರಾ? ಹಸಿ ಹುಣಸೆ ಸಾರು ಅಥವಾ ಗೊಜ್ಜಿಗೆ ಹಸಿಮೆಣಸಿನಕಾಯಿಯ ಬೀಜ ಮೇಲೆ ತೇಲುತ್ತದೆ. ನೋಡಲು ನಕ್ಕಾ ನಕ್ಷತ್ರಗಳಂತೆ ಕಾಣುತ್ತವೆ. ಹಾಗಾಗಿ ಈ ಸುಂದರ ಹೆಸರು. ಇವುಗಳ ಜೊತೆಗೆ ಕೊಸರಿಗೆ ಎಂಬಂತೆ ಗೊಡ್ಸಾರು ಎನ್ನುವ ಬಾಣಂತಿಸಾರು. ಎಲ್ಲವೂ ಬೇಗೆಯನ್ನು ತೀರಿಸುವಂತಹವು. ಆರೋಗ್ಯಕರ. ಸಾರು ಎಂಬುದು ಏಕಾಕಿಯಲ್ಲ. ಅದು ವೈವಿಧ್ಯಮಯ. ಅದು ನವರಸ ವಿನ್ಯಾಸವುಳ್ಳದ್ದು. ನವಭಾವ ಸಹಿತವಾದದ್ದು. ಆಗುಂಬೆ ಘಾಟಿಗೆ ಇನ್ನಿಲ್ಲ ಸಾಟಿ ಎಂದು ಕೇಳಿದ್ದೀರಿ; ಅಲ್ಲವೆ? ಸಾರಿನ ಘಾಟಿಗೂ ಸಾಟಿ ಎಂಬುದು ಇಲ್ಲ. ಏನಂತೀರಿ ನೀವು ಏನಂತೀರಿ?

ಸಾರು ಎಂಬುದು ಬದುಕಿನ ಜಡತೆಯನ್ನು ನೀಗಿ, ಜಿಹ್ವೆಗೆ ಸಾಣೆ ಹಿಡಿದು ಚೈತನ್ಯವನ್ನು ಚಿಮ್ಮಿಸುವ ರಸಕಾರಂಜಿ. ಅದು ಶೀತ ನಿವಾರಕ. ಕಾವು ಜನ್ಯ. ಕೊರಳಿಗೆ ಸಾಣೆಹಿಡಿದು ಗೊಗ್ಗರು ದನಿಯನ್ನು ನಿವಾರಿಸುವ ರಸಪೇಯ. ಸಪ್ತಸ್ವರ ಗಳನ್ನೂ ಸುಲಲಿತವಾಗಿ ಪಲಕಿಸುವಂತಹ ಅಮೃತಪಾನ.

ರಸ ಎಂಬುದು ಭಾಗೀರಥಿಗೆ ಸಮಾನ. ಅದನ್ನು ನೆನೆದಕೂಡಲೇ ಗಂಗಾವತರಣವಾಗಿ ಬೇಂದ್ರೆ ಸಾಲು ಜೀವ ತಳೆಯುತ್ತದೆ: “ನೀನಲ್ಲ ಅನ್ಯೆ, ರಸಪೂರ್ಣ ಜನ್ಯೆ.” ಸಾರು ಎಂಬ ಈ ರಸ ಭಾವಲಹರಿಗೆ ಜೀವಸಂಚಯ ಆಗುತ್ತದೆ.

ಕನ್ನಡದಲ್ಲಿ ರಸವೆನ್ನಿ, ಸಾರು ಎನ್ನಿ, ತಿಳಿಸಾರು ಎನ್ನಿ. ಇವು ಮೂರೂ ಒಂದೇ ಪದಾರ್ಥ. ತಮಿಳಿನ ರಸಂ, ಸಾಂಬಾರ್ ಕನ್ನಡಕ್ಕೆ ಪ್ರವೇಶಿಸಿ ತಮ್ಮ ದರಬಾರು ಚಲಾಯಿಸು ತ್ತಿವೆ. ಅವು ಕನ್ನಡದ ತಿಳಿಸಾರು ಮತ್ತು ಹುಳಿಯನ್ನು ಬಳಕೆಯಿಂದ ಹಿಂದಕ್ಕೆ ಅಟ್ಟಿವೆ.

ಸುಖವೀವ ಸುರಾಪಾನಕ್ಕಿಂತ ರಸಪಾನವೇ ಮಿಗಿಲು. ಅದು ರಸರೋಮಾಂಚನ ಎಂದರೆ ಹೇಗಿರುತ್ತದೆ ಎಂದು ಅರಿಯಬೇಕೆ? ಹೋಳಿಗೆ ಸಾರು ಎಂಬ ದಿವ್ಯಾಮೃತವನ್ನು ನೆನಪಿಸಿಕೊಳ್ಳಿ. ಅದರ ಮಹತ್ತ್ವದ ಅರಿವಾಗುತ್ತದೆ. ಮಾಡಿದ ಮಾರನೆಯ ದಿನ ಹೋಳಿಗೆ ಸಾರು ಅಮೃತಸದೃಶ ರುಚಿ ಪಡೆಯುತ್ತದೆ. ಉಪ್ಪು, ಕಾರ, ಹುಳಿಗಳು ಬೇಳೆಯ ಸಿಹಿ ಹೂರಣದೊಂದಿಗೆ ಒಂದು ದಿನ ಅರಿತು, ಬೆರೆತು, ಚಕ್ಕಂದವಾಡಿ ಪರಸ್ಪರ ಹೊಂದಿಕೊಂಡು ರುಚಿವರ್ಧಿಸುವಂತೆ ಮಾಡುತ್ತದೆ.

ರಸವೆಂಬುದು ಸಾಮಾನ್ಯವೆ? ಅದು ಪಂಚೇಂದ್ರಿಯಗಳಲ್ಲೂ ಹನಿಹನಿಯಾಗಿ ಒಸರುವ ಭಾವ. ಕಣ್ಣನ್ನು ಅರಳಿಸುವ, ಕಿವಿಯನ್ನು ನೆಟ್ಟಗಾಗಿಸುವ, ನಾಲಿಗೆಯನ್ನು ಹುರಿದುಂಬಿಸುವ, ನಾಸಿಕವನ್ನು ಘಮಹೀರಲು ಸಜ್ಜಾಗಿಸುವ ಹಾಗೂ ಮೈಮೇಲಿನ ತೊಗಲ ಹೊದಿಕೆಯಲ್ಲಿ ಹೊಳಪನ್ನು ಕಾಣಿಸುವ ಶಕಿಯುಳ್ಳ ಏಕಮಾತ್ರ ಭಕ್ಷ್ಯವೇ ರಸ. ಅದು; ಆಹಾ ರೋಮಾಂಚನ! ಮತ್ತೇನೂ ಅಲ್ಲ.

ರಸವು ತೃಪ್ತಿಯ, ಸಮಗ್ರತೆಯ ಸಂಕೇತ. ಅದು ಪ್ರತಿಷ್ಠೆಯ ಸಂಕೇತವಲ್ಲ. ಎಲ್ಲವನ್ನೂ, ಹದವಾಗಿ, ಹಿತವಾಗಿ ಒಳಗೊಳ್ಳುವ ರಸಪಾಕ! ಅದು ರಸಾಮೃತ. ಮುಕ್ತಿ ಮಾರ್ಗಕೆ ಸೋಪಾನ. ರಸವೆಂಬುದು ಜೀವ ಬಂದಂತೆ, ಸವಿಭಾವ ಬಂದಂತೆ.

ಸಾರು ಎಂಬುದು ಗಮ್ಮತ್ತು ಹಾಗೂ ಮತ್ತು. ಅದು ಹಾನಿಕಾರಕವಲ್ಲದ ಅಮಲು. ಘಮಘಮಲು. ಹಾಗಾಗಿ ಅದು ಹಲವು ಹತ್ತು ಭಕ್ಷ್ಯಗಳನ್ನು ಕಟ್ಟುವ ಬದಲು ಕಟ್ಟಬಹುದಾದ ಒಂದು ಮುತ್ತು!

ಅದರದು ಏಕಮೇವಾದ್ವಿತೀಯ ರುಚಿ. ಏಕಂ ಏವಾ ಅದ್ವಿತೀಯ ಸುರುಚಿ. ಪಚನಶಕ್ತಿಯನ್ನು ವರ್ಧಿಸುವ ಸುಗುಣಿ. ಹಾಗಾಗಿ ಅದು ಹಸಿವು ಜನ್ಯ. ರಸವೆಂಬುದು ಆಹಾರ ಜಗತ್ತಿನ ಶಕ್ತಿ ಕೇಂದ್ರ; ರುಚಿ ಕೇಂದ್ರ. ಅದು ವಿವಾಹ ಭೋಜನದ ಅಮಿತ ಭಕ್ಷ್ಯಗಳನ್ನು ಅಥವಾ ಶ್ರಾದ್ಧದೂಟದ ಮಿತ ಭಕ್ಷ್ಯಗಳನ್ನು ಅಥವಾ ಅನ್ನ-ಸಾರು ಎಂಬ ಸಾಧಾರಣ ಭೋಜನವನ್ನು ಭುಜಿಸಿದ ಅನಂತರ ಭಜಿಸುವ ಮಧ್ಯಮಾವತಿ ಎಂಬ ಮಂಗಳರಾಗ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW