ಹಣವನ್ನು ಲಾಕರ್ ನಲ್ಲಿಟ್ಟು ಭದ್ರ ಪಡಿಸಬಹುದು. ಆದರೆ ನಂಬಿಕೆಗೆ ಬೇಕಾಗಿರುವುದು ನಂಬಿಕೆಯ ಲಾಕರ್ ಮಾತ್ರ. ಇದು ನಂಬಿಕೆಯ ಮಾತು ,ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ನಂಬಿಕೆ ಅನ್ನುವುದು ಹಣಕ್ಕಿಂತಲೂ ಬೆಲೆ ಬಾಳುವ ವಸ್ತು. ಅದನ್ನು ಸಂಪಾದಿಸಲು ಎಷ್ಟು ಶ್ರಮ ವಹಿಸಬೇಕೋ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹಣವಾದರೂ ಲಾಕರ್ ನಲ್ಲಿಟ್ಟು ಭದ್ರ ಪಡಿಸಬಹುದು. ಆದರೆ ನಂಬಿಕೆಗೆ ಬೇಕಾಗಿರುವುದು ನಂಬಿಕೆಯ ಲಾಕರ್ ಮಾತ್ರ.
ಒಂದು ಮಗು ಅಮ್ಮನ ಕೈ ಹಿಡಿದು ನಡೆಯುವಾಗ ತಾನು ಬೀಳುವುದಿಲ್ಲ ಎಂಬ ನಂಬಿಕೆಯಿಂದ ಹೆಜ್ಜೆ ಇಡುತ್ತದೆ. ಅದು ತಾಯಿಯ ಮೇಲೆ ಇರುವ ನಂಬಿಕೆ. ಹೀಗೆ ಸಂಸಾರ ಮನೆಯ ಯಜಮಾನನ ಮೇಲೆ ಇರುವ ನಂಬಿಕೆಯಿಂದ ಸಾಗುತ್ತಿರುತ್ತದೆ. ಕೆಲವರು ದೇವರನ್ನು ನಂಬಿ ನಡೆಯುತ್ತಾರೆ, ಕೆಲವರು ಅವರನ್ನೇ ಅವರ ಕೆಲಸಗಳನ್ನೇ ನಂಬಿ ಹೆಜ್ಜೆ ಇಡುತ್ತಾರೆ. ಇಲ್ಲಿ ಅವರವರ ಭಾವ ಹಾಗು ಅವರ ನಂಬಿಕೆಯಷ್ಟೆ.
ಯಾರೇ ಆಗಲಿ ಏನಾದರೋ, ಯಾವುದಾದರೋ ಮೇಲೆ ನಂಬಿಕೆ ಇಟ್ಟಿದ್ದರೆ ಅದನ್ನು ಅವರ ನಂಬಿಕೆಯ ಹಾಗೆ ಬಿಟ್ಟುಬಿಡಬೇಕು. ಅದನ್ನು ನಿರೂಪಿಸಲು, ಪ್ರಶ್ನಿಸಲು, ತರ್ಕ ಮಾಡಲು ಹೋಗಬಾರದು.

ಫೋಟೋ ಕೃಪೆ : google
“ಸತ್ಯಂ ಬ್ರೂಯಾತ್ – ಪ್ರಿಯಂ ಬ್ರೂಯಾತ್- ನ ಬ್ರೂಯಾತ್ ಸತ್ಯಂ ಅಪ್ರಿಯಮ್ ಪ್ರಿಯಂ ಚ ನನೃತಂ ಬ್ರೂಯಾತ್ – ಏಷ ಧರ್ಮಃ ಸನಾತನಃ”
ಇದರ ಅರ್ಥ…. ಸತ್ಯವನ್ನು ಹೇಳಬೇಕು. ಪ್ರಿಯವಾದದ್ದನ್ನೇ ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವೆಂದು ಸುಳ್ಳನ್ನೂ ನುಡಿಯಬಾರದು ಎಂದು ನಮ್ಮ ಸನಾತನ ಧರ್ಮದಲ್ಲಿ ಹೇಳಿದೆ.
ನನ್ನ ಅನುಭವದಲ್ಲಿ ಕಂಡ ಘಟನೆಯೆಂದರೆ, ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಮಕರ ಜ್ಯೋತಿ ಕಾಣಿಸುವುದು ಒಂದು ಪವಾಡ ಎಂಬಂತೆ ನಂಬಿದ್ದರು ಜನರು ಆದರೆ ಕೆಲವು ವರ್ಷಗಳ ಹಿಂದೆ ಮಾಧ್ಯಮದವರು ಮಾನವನಿಂದನೇ ಜ್ಯೋತಿ ಹತ್ತಿಸಲಾಗುತ್ತದೆ ಎಂಬುದನ್ನು ಹೇಳಿದಾಗ ಅನೇಕ ಜನರಿಗೆ ಹಾಗು ಭಕ್ತರಿಗೆ ನಿರಾಸೆ ಉಂಟಾಗಿತ್ತು.
ಒಂದು ನಂಬಿಕೆಯ ಮೇಲೆ ಭಕ್ತರು ದೇವರ ಪೂಜೆ ಸಲ್ಲಿಸುತ್ತಾರೆ ಆದರೆ ಅದು ಸುಳ್ಳು ಎಂದು ಗೊತ್ತಾದಾಗ ಮನಸಿಗೆ ಬಹಳ ಖೇದ ಉಂಟಾಗುತ್ತದೆ. ಅವರವರ ನಂಬಿಕೆಯನ್ನು ಕೆಡಿಸಲು ಹೋಗಬಾರದು. ಆದರೂ ಸಹ ಭಕ್ತರು ತಮ್ಮ ನೇಮ ನಿಷ್ಠೆ ಬಿಡಲಿಲ್ಲ. ಭಗವಂತನ ನಂಬಿಯೇ ನಡೆಯುತಿದ್ದಾರೆ.
ಮತ್ತೊಂದು ಅನುಭವ ನನ್ನ ಕಣ್ಣಾರೆ ಕಂಡದ್ದು…ನಮ್ಮ ಅಪಾರ್ಟ್ಮೆಂಟ್ ಪಕ್ಕಕ್ಕೆ ಒಂದು ದೇವಸ್ಥಾನವಿದೆ, ಅಲ್ಲಿ ಒಂದು ಹುತ್ತವಿದೆ ಅದಕ್ಕೆ ಸುತ್ತಾ ಗೋಡೆ ನಿರ್ಮಿಸಿ ಗೇಟ್ ಹಾಕಿ ಬೀಗ ಹಾಕಿರುತ್ತಾರೆ. ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಹಾಗೂ ವಿಶೇಷ ಹಬ್ಬದ ದಿನಗಳಲ್ಲಿ ಗುಡಿಯ ಬಾಗಿಲು ತೆಗೆದು ಪೂಜೆ ಮಂಗಳಾರತಿ ಮಾಡಿ, ಹುತ್ತಕ್ಕೂ ಸಹ ಪೂಜೆ ಸಲ್ಲಿಸುತ್ತಾರೆ.
ಹುತ್ತದ ಬಳಿ ಇಟ್ಟ ಬಾಳೆಹಣ್ಣು ಹಾಗು ಇನ್ನಿತರ ನೈವೇದ್ಯವನ್ನು ಸ್ವಲ್ಪ ಅಲ್ಲೇ ಬಿಟ್ಟು ಹೋಗುತ್ತಾರೆ. ಮಧ್ಯದಲ್ಲಿ ಒಂದೆರಡು ದಿನದ ಅಂತರದ ನಂತರ ಮತ್ತೆ ಗುಡಿಯ ಬಾಗಿಲು ತೆಗೆದಾಗ ಹುತ್ತದ ಬಳಿ ಹೂವು ಸರಿದ ದೃಶ್ಯ ಹಾಗು ಪ್ರಸಾದ ಕದಲಿರುವುದು ಕಂಡು ದೇವರ ಪೂಜೆ ಮಾಡುವ ವ್ಯಕ್ತಿಗೆ ಅಲ್ಲಿ ಹಾವು ಬಂದು ಹೋಗಿದೆ ಅಥವಾ ಅಲ್ಲೇ ಇರುತ್ತದೆ ಎಂದು ಬಂದ ಜನರೆದಿರು ನುಡಿದ ಮಾತುಗಳನ್ನು ನಾನು ಕೇಳಿದ್ದೇನೆ ಇದು ಅವರ ನಂಬಿಕೆ.

ಫೋಟೋ ಕೃಪೆ : google
ನಾನು ನಮ್ಮ ಮನೆಯ ಮೇಲಿಂದ ಗುಡಿಯ ಕಡೆ ನೋಡಿದಾಗ ಅವರು ಪೂಜೆ ಮಾಡಿ ಹೋಗುತಿದ್ದಂತೆ ಮುಂಗಿಸಿ ಅದರ ಮರಿಗಳೊಂದಿಗೆ ಹುತ್ತದ ಬಳಿ ಹೋಗಿ ಅಲ್ಲಿ ಇಟ್ಟಿದ್ದ ನೈವೇದ್ಯ ತಿಂದು, ಎಲ್ಲಾ ಕಡೆ ಓಡಾಡಿ ಹೊರ ಹೋಗುವುದನ್ನು ನಾನು ಸದಾ ನೋಡುತ್ತೇನೆ. ಅವರಿಗೆ ಹಾವೇ ಇದೆ ಎಂದು ನಂಬಿರುವವರಿಗೆ ನಾನು ಹೋಗಿ ಹಾವಲ್ಲ ಅದು ಮುಂಗುಸಿ ಓಡಾಡುವುದು ಎಂದು ಹೇಳಿದರೆ ಅವರಿಗೆ ನನ್ನ ಮೇಲೆ ಕೋಪ ಬರಬಹುದು ಸುಳ್ಳು ಹೇಳುತಿದ್ದೇನೆಂದು ಅಥವಾ ಅವರು ಇಟ್ಟ ನಂಬಿಕೆ ಸುಳ್ಳೆಂದು ಮನಸು ಒಪ್ಪಿಕೊಳ್ಳದೆ ಇರಬಹುದು. ಹಾಗಾಗಿ ನನಗೆ ಹೇಳುವುದಕ್ಕೆ ಮನಸು ಬರಲಿಲ್ಲ. ನಂಬಿಕೆ ಅನ್ನುವುದು ಅಷ್ಟು ಗಟ್ಟಿ.
ನಂಬಿಕೆಯ ಮೇಲೆ ಪ್ರಪಂಚ, ಎಲ್ಲಾ ಸಂಬಂಧಗಳು ನಿಂತಿರುವುದು. ಈ ಘಟನೆಯಿಂದ ನಂಬಿಕೆ ಅನ್ನುವ ಬರಹ ಹುಟ್ಟಿತು ನನ್ನ ಮನದಲ್ಲಿ.
ಹೀಗೆ ನಂಬಿಕೆಯಿಂದ, ನಂಬಿದವರು ಮೇಲೆ ಹಾಗು ಸ್ನೇಹಿತರ ಮೇಲೆ ನಂಬಿಕೆಯಿಟ್ಟು ಅವರ ಬಳಿ ನಮ್ಮ ಕಷ್ಟವನ್ನೋ ಸಂತೋಷವನ್ನೋ ಹಂಚಿಕೊಂಡಿರುತ್ತೇವೆ ಆದರೆ ಅವರು ಅದನ್ನು ಇತರರೊಂದಿಗೆ ಹಂಚಿಕೊಂಡು ಆಡಿಕೊಳ್ಳುವ ವಸ್ತು ಮಾಡಿಕೊಂಡರೆ ಅಂಥಹ ಸ್ನೇಹಿತರು ನಂಬಿಕೆ ಕಳೆದುಕೊಳ್ಳುತ್ತಾರೆ. ನಂಬಿಕೆ ಎಂದರೆ ಬರೀ ಮಾತಲ್ಲ ಅದು ವ್ಯಾಪಾರದ ವಸ್ತುವೂ ಅಲ್ಲ. ನಂಬಿ ಬಂದವರಿಗೆ ಸಹಾಯ ಮಾಡದಿದ್ದರೂ ಚಿಂತೆಯಿಲ್ಲ ನಂಬಿಕೆ ದ್ರೋಹ ಮಾಡಬಾರದು.
ಒಮ್ಮೆ ಒಬ್ಬ ವ್ಯಕ್ತಿ ಸುಳ್ಳುಗಾರನೆಂದು ಮಿತ್ರದ್ರೋಹಿಯೆಂದು ತಿಳಿದರೆ ಅವರನ್ನು ಜೀವ ಇರುವವರೆಗೂ ನಂಬಲಾಗುವುದುಲ್ಲ. ಸುಳ್ಳೆ ಮೊದಲ ಹೆಜ್ಜೆ ನಂಬಿಕೆ ಕಳೆದುಕೊಳ್ಳುವುದಕ್ಕೆ.
ನಂಬಿ, ನಂಬಿಕೆ ಇಟ್ಟುಕೊಳ್ಳಿ, ನಂಬಿ ನಡೆಯಿರಿ….
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
