ನಾನು ಮನೆ ಪಾಠ ಮಾಡುತಿದ್ದಾಗ 2012 ರಲ್ಲಿ ನಡೆದ ಘಟನೆ. ಏಳನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ಹುಡುಗ ಓದಿನಲ್ಲಿ ಸದಾ ಮುಂದೆ ಇರುತಿದ್ದ. ಮೊದಲ ಟೆಸ್ಟ್ ನಲ್ಲಿ ಅಂಕಗಳನ್ನು ಬಹಳ ಕಡಿಮೆ ತೆಗೆದಿದ್ದ. ಮುಂದೇನಾಯಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಅವನು ಅವನ ದೊಡ್ಡಮ್ಮನ ಮನೆಯಲ್ಲಿ ಇದ್ದ ಕಾರಣ, ಅವನ ದೊಡ್ಡಮ್ಮ ಬಂದು ಟೆಸ್ಟ್ನಲ್ಲಿ ಕಡಿಮೆ ಅಂಕಗಳನ್ನು ತೆಗೆದಿದ್ದಾನೆ ಎಂದು ಹೇಳಿದರು. ನಾನು ಅವರಿಗೆ ಸಮಾಧಾನ ಹೇಳಿದೆ ಅವನು ಯಾವತ್ತೂ ಹೀಗೆ ಕಡಿಮೆ ತೆಗೆದಿಲ್ಲ ಹುಷಾರಾಗಿದನಾ ಎಂದು ಕೇಳಿದಾಗ, ಹುಷಾರಾಗಿದಾನೆ ಮನೆಯಲ್ಲಿ ಯಾಕೋ ಮಂಕಾಗಿ ಕುಳಿತಿರುತ್ತಾನೆ ಎಂದರು. ಸರಿ ವಿಚಾರಿಸುತ್ತೇನೆ ಎಂದು ಹೇಳಿ ಅವರನ್ನು ಕಳುಹಿಸಿದೆ.
ನಂತರ ಪಾಠ ಮಾಡುವ ಸಮಯದಲ್ಲಿ ಮಕ್ಕಳೆಲ್ಲ ಬಂದು ಕುಳಿತಿದ್ದರು. ನಾನು ಅವನನ್ನು ಪ್ರತ್ಯೇಕವಾಗಿ ಕರೆದು ಏನಾಯ್ತು ಯಾಕೆ ಪಾಠ ಅರ್ಥ ಆಗಲಿಲ್ಲವಾ? ಅರ್ಥ ಆಗದಿದ್ದರೆ ಕೇಳು ಇದು ಮೊದಲನೇ ಟೆಸ್ಟ್ ಆದ್ರಿಂದ ಮುಂದಿನ ಟೆಸ್ಟ್ನಲ್ಲಿ ಹೆಚ್ಚು ಅಂಕ ತೆಗೆದುಕೊಳ್ಳುವಂತೆ ಎಂದು ಹೇಳಿದೆ. ಏನಾಯ್ತು ಏಕೆ ಒಂಥರಾ ಇದೀಯ ಎಂದಾಗ ಮೊದಲು ಏನಿಲ್ಲ ಎಂದನು.
ನಾನು ಯಾರಿಗೂ ಹೇಳಲ್ಲ, ಏನಾಯ್ತು ಎಂದು ಮತ್ತೆ ಕೇಳಿದಾಗ, ಮುಖದಲ್ಲಿ ಮೊಡವೆ ಆಗಿದೆ, ಮನೆಯಲ್ಲಿ ನಮ್ಮ ಅಕ್ಕಂದಿರು ಆಡಿಕೊಳ್ಳುತ್ತಾರೆ. ಹುಡುಗ ಇದೀಯ ನಿನಗೆ ಮೊಡವೆ ಬಂದಿದೆಯಲ್ಲೋ ಎಂದು ಹೇಳಿ ನಗುತ್ತಿರುತ್ತಾರೆ ಎಂದು ಅಳುಮುಖ ಮಾಡಿಕೊಂಡ. ನನಗೆ ಬಹಳ ಅಯ್ಯೋ ಎನಿಸಿತು. ಆ ಮೊಡವೆಗೆ ಗಂಡು ಮಕ್ಕಳಿಗೆ ಬರಬಾರದು ಬರೀ ಹೆಣ್ಣು ಮಕ್ಕಳಿಗೆ ಎಂದು ಗೊತ್ತಿದ್ದರೆ ಪಾಪ ಅದು ಬರುತ್ತಿರಲಿಲ್ಲ ಎಂದು ನಗು ತಂದುಕೊಂಡೆ. ನಂತರ ಅವನಿಗೆ ಈ ವಯಸಿನಲ್ಲಿ ನಿಮಗೆ ಹಾರ್ಮೋನ್ಗಳ ಉತ್ಪತ್ತಿಯಾಗುತ್ತಿರುತ್ತದೆ. ಹಾಗಾಗಿ ದೇಹದಲ್ಲಿ ಬದಲಾವಣೆಗಳಾಗುತ್ತದೆ. ಹಾಗೆಯೇ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ.

ಆಗಾಗ ತಣ್ಣೀರಿನಲ್ಲಿ ಮುಖ ತೊಳೆಯುತ್ತಿರು ಎಂದು ಹೇಳಿ ಸಮಾಧಾನ ಮಾಡಿದೆ. ಯಾರೇನೆ ಅಂದರೂ ಪ್ರತಿಕ್ರಿಯೆ ನೀಡಬೇಡ, ವಿಚಲಿತನಾಗಬೇಡ, ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದೆ. ನಂತರ ಅವನು ತುಂಬಾ ಬದಲಾದ, ಖುಷಿಯಿಂದ ಇರುತಿದ್ದ. ಆಪ್ತಸಮಾಲೋಚನೆ ಅವನನ್ನು ಸಕಾರಾತ್ಮಕವಾಗಿ ಇಟ್ಟಿತ್ತು. ಹರೆಯದ ವಯಸ್ಸು ಶುರುವಾಗುತಿದ್ದಂತೆ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮೈ ನೆರೆಯುತಿದ್ದಂತೆ ದೈಹಿಕವಾಗಿ ಮಾನಸಿಕವಾಗಿ ಅನೇಕ ಬದಲಾವಣೆಗಳಾಗುತ್ತದೆ. ಋತುಚಕ್ರ ಪ್ರಕ್ರಿಯೆ ಶುರುವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಅನೇಕ ಬದಲಾವಣೆಗಳಾಗುತ್ತದೆ. ಮುಖದಲ್ಲಿ ಮೊಡವೆಗಳು ಮೂಡಬಹುದು, ಹೊಟ್ಟೆ ಶೂಲೆ, ಕೈ ಕಾಲು ನೋವು, ಮಾಂಸಖಂಡಗಳ ಸೆಳೆತ ಹೀಗೆ ಅನೇಕ ಸಮಸ್ಯೆಗಳು ತಲೆದೂರುತ್ತದೆ. ಅವರಿಗೆ ಬೇರೆ ಸಮಸ್ಯೆಗಿಂತ ಮುಖದಲ್ಲಿ ಮೂಡುವ ಮೊಡವೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಹಾಗೆಯೇ ಗಂಡುಮಕ್ಕಳಿಗೂ ಸಹ ಹರೆಯದ ವಯಸ್ಸಿನ ಶುರುವಿನಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಅವರಿಗೂ ಸಹ ದೈಹಿಕವಾಗಿ ಹಾಗು ಮಾನಸಿಕವಾಗಿ ಬದಲಾವಣೆಗಳಾದಾಗ ಸಮಸ್ಯೆಗಳು ತಲೆದೂರುತ್ತದೆ.
ಹರೆಯದ ಅವಧಿಯಲ್ಲಿ (puberty) ಗಂಡು ಮಕ್ಕಳಲ್ಲಿ ಮುಖದಲ್ಲಿ ಮೊಡವೆ ಮೂಡುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಹಾರ್ಮೋನಲ್ ಬದಲಾವಣೆಗಳ ಕಾರಣದಿಂದ ಉಂಟಾಗುತ್ತದೆ, ಮತ್ತು ಅದರ ಪರಿಣಾಮವಾಗಿ ಕೆಲವೊಮ್ಮೆ ಅವರು ಖಿನ್ನತೆಗೆ (depression) ಗುರಿಯಾಗಬಹುದು. ಮೊಡವೆಗಳು ಅವರ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಬಹುದು, ಹಾಗೂ ಖಿನ್ನತೆಗೆ ಕಾರಣವಾಗಬಹುದು. ಈ ಖಿನ್ನತೆಯನ್ನು ಹೋಗಲಾಡಿಸಲು ಕೆಲವು ಕ್ರಮಗಳನ್ನು ಪಾಲಿಸಬಹುದು.
ತಪ್ಪು ನಂಬಿಕೆಗಳನ್ನು ಹೋಗಲಾಡಿಸುವುದು, ಮೊಡವೆಗಳು ಸಾಮಾನ್ಯವಾಗಿ ಹೆಚ್ಚಿನ ಯುವಕರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಹಾರ್ಮೋನಲ್ ಬದಲಾವಣೆಗಳಾಗಿರುವ ಶಾರೀರಿಕ ಬೆಳವಣಿಗೆದ ಒಂದು ಭಾಗ ಎಂದು ತಿಳಿಯಬೇಕು. ಮೊಡವೆಗಳು ನಮ್ಮ ವ್ಯಕ್ತಿತ್ವವನ್ನು ತೀರ್ಮಾನಿಸುವುದಿಲ್ಲ. ಹೆಚ್ಚು ಗಮನಿಸುವುದು ವ್ಯಕ್ತಿಯ ಗುಣಗಳಿಗೆ, ಸಾಮರ್ಥ್ಯಗಳಿಗೆ, ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಇರಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.
ಮೊಡವೆಗಳಿರುವ ಚರ್ಮಕ್ಕೆ ಸರಿಯಾದ ಆರೈಕೆಯನ್ನು ಮಾಡುವುದು ಮುಖ್ಯ. ಅದಕ್ಕಾಗಿ ನಿಯಮಿತವಾಗಿ ಮುಖವನ್ನು ತೊಳೆದು ಸಹಾಯಕ ಚರ್ಮದ ತೈಲಗಳು, ಕ್ಲೆನ್ಸರ್ ಬಳಸಬಹುದು. ಈ ಪ್ರಯತ್ನದಿಂದಾಗಿ ಮೊಡವೆ ತ್ವರಿತವಾಗಿ ಕಡಿಮೆಯಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿನ ಚಿಕಿತ್ಸೆಗಳನ್ನು ಅನುಸರಿಸಿಯೂ ಸಮಸ್ಯೆ ಕಡಿಮೆಯಾಗದಿದ್ದರೆ, ಡರ್ಮಟೋಲೊಜಿಸ್ಟ್ (ಚರ್ಮ ತಜ್ಞ) ಅವರನ್ನು ಭೇಟಿಯಾಗಿ ಸಮರ್ಥ ಚಿಕಿತ್ಸೆ ಪಡೆದುಕೊಳ್ಳಬಹುದು. ಸೂಕ್ತ ಮಾಲಿನ್ಯ ನಿವಾರಣೆ ಹಾಗೂ ಔಷಧಿ ಮುಖದ ಚರ್ಮವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಮೊಡವೆಗಳಿಂದಾಗಿ ತಮಗೆ ಆಗುವ ನಕಾರಾತ್ಮಕ ಭಾವನೆಗಳನ್ನು ದೂರಮಾಡಲು ಮಕ್ಕಳನ್ನು ಅವರ ಆಸಕ್ತಿಗಳಲ್ಲಿ ತೊಡಗಿಸಬೇಕು. ಕ್ರೀಡೆ, ಸಂಗೀತ, ಕಲಾ ಚಟುವಟಿಕೆಗಳಂತಹ ಆಕರ್ಷಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವರು ತಮ್ಮ ಸಾಮರ್ಥ್ಯವನ್ನು ಬಳಸಲು ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ಪೋಷಕರು, ಶಿಕ್ಷಕರು, ಮತ್ತು ಸ್ನೇಹಿತರು ಅಂತಹ ವ್ಯಕ್ತಿಗಳಿಗೆ ಸಕಾರಾತ್ಮಕ ಹಾಗೂ ಪ್ರೋತ್ಸಾಹಕಾರಿ ಮಾತುಗಳನ್ನು ಹೇಳುವುದು, ಅವನೊಂದಿಗೆ ಆತ್ಮೀಯವಾಗಿ ಮಾತಾಡುವುದು, ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ಕಂಡುಬರುವ ಪರಿಪೂರ್ಣ ಮುಖಗಳು ಅಸಲಿ ಜೀವನದ ಪ್ರತಿಬಿಂಬವಲ್ಲವೆಂಬುದನ್ನು ಹುಡುಗರಿಗೆ ಮನವರಿಕೆ ಮಾಡಿಸಬೇಕು. ಇವು ಕೃತಕವಾಗಿ ತಯಾರಾದ ಚಿತ್ರಣಗಳು ಅಥವಾ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಬಂದಿರುವವು ಎಂದು ವಿವರಿಸಬೇಕು.
ಮೊಡವೆಗಳು ಇದ್ದರೆ ಅದನ್ನು ಇದ್ದ ಹಾಗೆ ಸ್ವೀಕರಿಸಬೇಕು ಮತ್ತು ಅವು ಬರುವ ಪ್ರಕ್ರಿಯೆಯೇ ಸಹಜ ಎಂಬುದನ್ನು ತಿಳಿಯುವುದು ಹಾಗು ಖಿನ್ನತೆಯನ್ನು ತಡೆಯಬಹುದು. ಧ್ಯಾನ, ಯೋಗ, ಮತ್ತು ಪ್ರಾಣಾಯಾಮ ಅಭ್ಯಾಸಗಳಿಂದ ಚಿಂತೆಯನ್ನು ಕಡಿಮೆ ಮಾಡಬಹುದು. ಇದು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮನಸ್ಸಿನ ಆರೋಗ್ಯಕ್ಕೆ ಕೆಲವು ಚಟುವಟಿಕೆಗಳು ಅವಶ್ಯಕತೆ ಇರುತ್ತದೆ. ಮನಸಿಗೆ ತೃಪ್ತಿ ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
ಮೊಡವೆಗಳ ನಿವಾರಣೆಗೆ ಸರಿಯಾದ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಜಂಕ್ ಫುಡ್, ಆಮ್ಲಿಕ ಆಹಾರಗಳನ್ನು ಕಡಿಮೆ ಮಾಡಿ ಹಣ್ಣು, ತರಕಾರಿಗಳು, ಹಾಗೂ ನೀರಿನ ಸೇವನೆ ಹೆಚ್ಚಿಸುವುದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಅನೇಕ ತೈಲಾಂಶ ಹೊಂದಿರುವ ವಸ್ತುಗಳನ್ನು ಉಪಯೋಗಿಸುವುದು ಮೊಡವೆಗಳನ್ನು ಹೆಚ್ಚಿಸಬಹುದು. ಹಾಗಾಗಿ ತೈಲಮುಕ್ತ ಶಾಂಪೂ, ಕ್ಲೆನ್ಸರ್, ಮತ್ತು ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಬಹುದು.
ಮೊಡವೆಗಳನ್ನು ಅನುಭವಿಸುವ ಹುಡುಗರು ಹಲವಾರು ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಹುದು. ಈ ಸಂದರ್ಭದಲ್ಲಿ ಮನೆಯವರು ಮತ್ತು ಶಾಲೆಯವರು ಅವರಿಗೆ ಬೆಂಬಲ ನೀಡುವುದು ಮುಖ್ಯ. ಅವರ ನೋವು ಮತ್ತು ತೊಂದರೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವರನ್ನು ಒತ್ತಡದೊಂದಿಗೆ ನಿಭಾಯಿಸಲು ಸಶಕ್ತಗೊಳಿಸಬೇಕು. ಇತರ ವಿದ್ಯಾರ್ಥಿಗಳು ಮೊಡವೆ ಇರುವವರನ್ನು ಅವಹೇಳನ ಮಾಡುವ ಪರಿಸ್ಥಿತಿಯನ್ನು ತಡೆಗಟ್ಟುವುದು ಮುಖ್ಯ. ಮಕ್ಕಳಿಗೆ ಪ್ರೀತಿಯ ಬಗ್ಗೆ ಅರಿವು ಮೂಡಿಸಿ, ಕೀಳ್ಮಟ್ಟದ ಅಭಿಪ್ರಾಯಗಳ ವಿರುದ್ಧ ನಿಂತು ಆತ್ಮವಿಶ್ವಾಸವನ್ನು ನೀಡುವುದು ಅಗತ್ಯ.
ಹರೆಯದ ಪ್ರಕ್ರಿಯೆಯಲ್ಲಿ ಮೊಡವೆಗಳು ಸಾಮಾನ್ಯವಾದರೂ, ಅವುಗಳಿಂದಾಗಿ ಹುಡುಗರಲ್ಲಿ ಖಿನ್ನತೆ ಅಥವಾ ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು. ಈ ಸಮಸ್ಯೆಯನ್ನು ನಿವಾರಿಸಲು ಶಾರೀರಿಕ ಆರೈಕೆ, ಕುಟುಂಬದ ಬೆಂಬಲ, ಸಕಾರಾತ್ಮಕ ಚಟುವಟಿಕೆಗಳು, ಮತ್ತು ಸಾಮಾಜಿಕ ಒತ್ತಡದ ನಿಯಂತ್ರಣ ಹಾಗು ಮನೋಬಲ ವೃದ್ಧಿಸುವ ಉತ್ತೇಜನದ ಮಾತುಗಳನ್ನು ಆಡುವುದು ಅಗತ್ಯ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
