ಮಾನಸ….ಇದು ಮನಸಿನ ಮಾತು (ಭಾಗ-೨೭)

ಒಳ್ಳೆಯ ಮನಸ್ಸಿನಿಂದ ಏನೇ ಮಾಡಿದರೂ ಅದಕ್ಕೆ ಬೆಲೆ ಇದ್ದೇ ಇರುತ್ತದೆ. ಆದರೆ ಬೇರೆಯವರ ಮೆಚ್ಚುಗೆಗಾಗಿ ಮಾಡುವ ಕೆಲಸ ಆತ್ಮತೃಪ್ತಿ ನೀಡದು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

“Where there is righteousness in the heart there is beauty in the character”.

ನಮ್ಮ ಹೃದಯದಲ್ಲಿ ಸದಾಚಾರ ಇರುತ್ತದೋ ಅಲ್ಲಿ ನಮ್ಮ ಸನ್ನಡತೆಯ ಸೌಂದರ್ಯ ಕಾಣುತ್ತದೆ ಎಂಬ ಮಾತು. ನಿಜ ಈ ಮಾತಿನಲ್ಲಿ ಬಹಳ ಅರ್ಥ ಅಡಗಿದೆ. ನಾವು ಏನೇ ಕೆಲಸ ಮಾಡಬೇಕಾದರೂ ಆತ್ಮತೃಪ್ತಿಗಾಗಿ ಮಾಡಬೇಕು. ಯಾರದೋ ಹೊಗಳಿಕೆ ಪಡೆಯಲೋ, ಯಾರನ್ನೋ ಮೆಚ್ಚಿಸಲೋ ಕೆಲಸಗಳನ್ನು ಮಾಡುತ್ತಾ ಹೋದರೆ ನಮಗೆ ಅದರಿಂದ ಸಮಾಧಾನವಾಗಲಿ ಮಾಡಿದೆ ಎಂಬ ತೃಪ್ತಿ ಇರುವುದಿಲ್ಲ.

ಸದಾ ಒಳ್ಳೆಯ ಮನಸ್ಸಿನಿಂದ ಏನೇ ಮಾಡಿದರೂ ಅದಕ್ಕೆ ಬೆಲೆ ಇದ್ದೇ ಇರುತ್ತದೆ. ಅಲ್ಲಿ ಅಂಜಿಕೆಯಾಗಲಿ, ಅಳುಕಾಗಲಿ ಇರುವುದಿಲ್ಲ. ನಾವು ಸ್ವಲ್ಪ ಸ್ವಾರ್ಥದಿಂದ ನಡೆದುಕೊಂಡಾಗ ನಮ್ಮಲ್ಲಿ ಸಮಾಧಾನವಾದ ಮನಸಿರುವುದಿಲ್ಲ. ಮೇಲೆ ತೋರಿಕೆಗೆ ಸಜ್ಜನರಂತೆ ಇದ್ದರೂ ಒಳ ಮನಸು ಅವರ ಸ್ವಾರ್ಥ, ಕೆಟ್ಟತನ ಕನ್ನಡಿ ಹಿಡಿದಂತಿರುತ್ತದೆ.

ಫೋಟೋ ಕೃಪೆ : google

ಕೆಲವರಿಗೆ ತುಂಬಾ ರೂಢಿ ಆಗಿರುತ್ತೆ ಅಥವಾ ಒಳ್ಳೆಯವರೆನಿಸಿಕೊಳ್ಳಲು ಬಹಳವಾಗಿ ಜನರನ್ನು ಹೊಗಳಿಕೊಂಡು ಬಹು ಪರಾಖ್ ಮಾಡಿಕೊಂಡು ಇರುತ್ತಾರೆ. ನಿಜವಾಗಿಯೂ ಅವರ ಸಂತೋಷಕ್ಕಾಗಿ ಮಾಡುವ ಕೆಲಸಗಳಿಗೆ ಹೊಗಳಿಕೆಗಳು ಬೇಕಿರುವುದಿಲ್ಲ. ಆದರೆ ಈ ಹೊಗಳು ಭಟರು ತಮ್ಮ ಸ್ವಾರ್ಥದಿಂದ ಅವರನ್ನು ಬಳಸಿಕೊಳ್ಳುತ್ತಿರುತ್ತಾರೆ.

ಮನಸು ಪಕ್ವವಾಗಬೇಕಾದರೆ ಬಲ್ಲವರಿಂದ ಅರಿಯಬೇಕು, ಬದುಕು ಹಸನಾಗುವವರೆಗೂ ತಾಲೀಮು ನಡೆಸಬೇಕು. ಬಿದ್ದರೇನೆ ಏಳುವುದಕ್ಕೆ ತಿಳಿಯುವುದು, ಬಿದ್ದು ಹೋಗುವೆನೆಂದು ನಡೆಯದೆ ಇದ್ದರೆ ಜ್ಞಾನ ನಿಂತ ನೀರಂತೆ ಇರುತ್ತದೆ. ಅನುಭವ ನಮ್ಮ ಮನಸನ್ನು ಪರಿಪಕ್ವತೆ ಮಾಡುತ್ತದೆ. ಬಲ್ಲೆ ನಾನು ಅನ್ನುವ ಬದಲು ತಿಳಿಯಬಲ್ಲೆ ನಾನು ಎಲ್ಲರಿಂದ, ಎಲ್ಲದರಿಂದ ಎಂದು ಅರಿವಾದಾಗ ಸಮ ಮನಸು ನಮ್ಮದಾಗುತ್ತದೆ.

ನಮ್ಮ ನಡತೆ, ನಮ್ಮ ನುಡಿ ನಮಗೆ ಮೆಚ್ಚುಗೆಯಾದರೆ ಸಾಕು ಅದನ್ನು ಸಾಭೀತು ಪಡಿಸಲು ಯಾರಿಂದಲೂ ಮೆಚ್ಚುಗೆ ಪಡೆದುಕೊಳ್ಳುವ ಅಗತ್ಯವಿರುವುದಿಲ್ಲ. ಒಳ್ಳೆಯತನವಿದ್ದರೆ ಯಾರೇ ಆಗಲಿ, ಯಾವುದೇ ಆಗಲಿ ನಮ್ಮ ಬಳಿಯೇ ಶಾಶ್ವತವಾಗಿರುತ್ತದೆ. ಅದಕ್ಕೆ ನಮ್ಮ ನಡವಳಿಕೆ ಬದಲಾಗುವುದು ಬೇಡ ಹೃದಯ ಮನಸು ಸ್ವಚ್ಛವಾಗಿದ್ದರೆ ಸಾಕು.

ಮನಸಿನ ಗೊಂದಲಗಳು ಹೊರಗಿನದು, ಅದನ್ನು ಪೋಷಿಸಬೇಕೋ ಬಗೆಹರಿಸಬೇಕೋ ಎಂಬುದು ನಮಗೆ ಬಿಟ್ಟಿದ್ದು. ಯಾವುದಕ್ಕೂ ತೊಂದರೆ ಮಾಡಿಕೊಳ್ಳದೆ, ಮನಸಿಗೆ ಹಾನಿ ಮಾಡಿಕೊಳ್ಳದೆ ಸಮ ಚಿತ್ತದಿಂದ ಎದುರಿಸಬೇಕು. ನಮ್ಮ ಮನಸಿಗೆ ಯಾವುದರಿಂದ ತೊಂದರೆಯಾಗುತ್ತಿದೆ ಎಂದು ಗೊತ್ತಾದರೆ ಅದರಿಂದ ದೂರವಿರಬಹುದು ಅಥವಾ ಪರಿಹರಿಸಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು.

ಬೇಡದ ಮಾತುಗಳಿಗೆ ಬೆಲೆ ಕೊಡದೆ ಬೇಕಾದ ಮಾತುಗಳನ್ನು ತೆಗೆದುಕೊಳ್ಳುವ ಜಾಣ್ಮೆ ನಮ್ಮದಾಗಬೇಕು. ಅವರು ಹೀಗೆಂದರು, ಇವರು ಹಾಗೆಂದರು ಅನ್ನುವ ಬದಲು ಯಾರೇನೆ ಅಂದರೂ ತಮ್ಮ ನಿಲುವು ಬದಲಾಗದಂತೆ ಇರಬೇಕು.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading