ಅರ್ಥ ಸಹಿತ ಕಬೀರದಾಸರ ೫೦೦ ದೋಹಾವಲಿಗಳು

ಕಬೀರ್ ದಾಸರ ಪರಿಚಯ, ಜನ್ಮ, ನಾಮಕರಣ, ಯಾರ ದೇವರು, ಗುರು ಮತ್ತು ಗುರು ಮಂತ್ರ, ಶಿಕ್ಷಣ ಮತ್ತು ಉಪದೇಶ ಹೀಗೆ ವಿವಿಧ ಅಧ್ಯಾಯಗಳು ಸೇರಿದಂತೆ ಅರ್ಥ ಸಹಿತವಾಗಿ ಕಬೀರ್ ದಾಸರ 500 ದೋಹೆಗಳನ್ನು ಕನ್ನಡದಲ್ಲಿ ಸಂಕಲನ ತಂದಿದ್ದಾರೆ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು, ಈ ಕೃತಿಯ ಕುರಿತು ಹಿರಿಯ ಸಾಹಿತಿಗಳಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅರ್ಥ ಸಹಿತ ಕಬೀರದಾಸರ ೫೦೦ ದೋಹಾವಲಿಗಳು
ಲೇಖಕರು : ಪಾಂಗಾಳ ವಿಶ್ವನಾಥ ಶೆಟ್ಟಿ
ಬೆಲೆ : ೨೦೦.೦೦
ಪ್ರಕಾಶನ :ಅಭಿಜಿತ ಪ್ರಕಾಶನ

ಪುಣೆಯಲ್ಲಿ ಕನ್ನಡ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಗೆಳೆಯರಾದ ವಿಶ್ವನಾಥಶೆಟ್ಟರು ತಮ್ಮ ಬಹುಭಾಷಿಕ ಸಂವೇದನೆಗೆ ಹೆಸರಾದವರು. ಅವರು ಕಳಿಸಿ ಕೊಟ್ಟ ಕಬೀರ್ ನ ಅನುವಾದ ಇದಕ್ಕೆ ಸಾಕ್ಷಿ.

ವಚನ ಚಳವಳಿಯ ಉತ್ತರದ ಉತ್ತರಾಧಿಕಾರಿ ಎನ್ನುವ ಹಾಗೆ ಕಬೀರ್ ತಮ್ಮ ದೋಹಾವಲಿಗಳ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಿದರು. ಅವರ ವೃತ್ತಿಯಾದ ನೇಕಾರಿಕೆಯನ್ನು ಮಾಡುತ್ತಲೆ ಒಡೆದುಹೋಗಿದ್ದ ಜನಮನವನ್ನು ಒಂದು ಗೂಡಿಸುವ ಸಾಂಸ್ಕೃತಿಕ ಮಹತ್ವದ ನೇಯ್ಗೆಯ ಕೆಲಸ ಮಾಡಿದರು. ಅದನ್ನು ಕನ್ನಡಕ್ಕೆ ತಂದಿರುವ ಗೆಳೆಯರಾದ. ವಿಶ್ವನಾಥ ಶೆಟ್ಟಿ ಯವರದು ಕೂಡ ಒಂದು ಬಗೆಯ ನೇಯ್ಗೆಯ ಕೆಲಸವೆ ಸರಿ. ಮರಾಠಿ ಕನ್ನಡ ಸಾಂಸ್ಕೃತಿಕ ಸೇತುವೆಯಾಗಿರುವ ( ತಮ್ಮ ಜ್ಞಾನೇಶ್ವರನನ್ನುಕುರಿತು ‘ ‘ಬೆಂಕಿಯಲ್ಲಿ ಬೆಂದ ಬಂಗಾರ’, ಹಾಗೂ ತುಕಾರಾಂ ರ ಕುರಿತು ‌ಶೋಧಗ್ರಂಥಗಳ ಮೂಲಕ),ಈಗ ಉತ್ತರ ದಕ್ಷಿಣಗಳನ್ನು ಬೆಸೆಯುವ ಸಾಧನವಾಗಿ ಕಬೀರ್ ನನ್ನು ಕನ್ನಡಕ್ಕೆ ತಂದಿದ್ದಾರೆ.

ಮೂವರು ವಚನಕಾರರಾದ ಜೇಡರ ದಾಸಿಮಯ್ಯ, ಬಸವಣ್ಣ ಮತ್ತು ಅಲ್ಲಮರ ಪ್ರತಿಭೆ ಮತ್ತು ತತ್ವಗಳು ಹಿಂದಿಯಲ್ಲಿ ಮೈದಳೆದಂತೆ ಕಬೀರ್ ರ ದೋಹಾಗಳು ಇವೆ. ಜೇಡರದಾಸಿಮಯ್ಯನಂತೆ ಕಬೀರ್ ರದು ನೇಕಾರವೃತ್ತಿ. ಅವನು ವಚನಗಳಲ್ಲಿ ಕಾಯಕದ ಮಹತ್ವವನ್ನು ಸಾರಿದಂತೆ ಕಾಯಕದ ಮಹತ್ವವನ್ನು ಸಾರುತ್ತಾನೆ. ಅವನು ಕಪಟ ಸಾಧುಗಳನ್ನು ಬಯಲಿಗೆ ಎಳೆದಂತೆ( ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆ ಗೆದಂತೆ) ಡೋಂಗಿ ಸಾಧುಗಳನ್ನು ಬಯಲಿಗೆಳೆಯುತ್ತಾನೆ. ಬಸವಣ್ಣ ಸ್ಥಾವರವನ್ನು ಅಲ್ಲಗಳೆದು ಜಂಗಮಕ್ಕೆ ಪ್ರಾಶಸ್ತ್ಯ ನೀಡಿದಂತೆ ಕಬೀರ್ ಕೂಡ ಕಲ್ಲಿನ ಮಂದಿರದ ರಾಮನ ವಿಗ್ರಹಕ್ಕೆ ಬದಲಿಗೆ ಹೃದಯದಲ್ಲಿನ ರಾಮನಿಗೆ ಪ್ರಾಶಸ್ತ್ಯ ಕೊಡುತ್ತಾರೆ.ಇಂದಿನ ಸಂದರ್ಭದಲ್ಲಿ ಇದು ಎಷ್ಟು ಮುಖ್ಯ ಎತ್ತಿ ಹೇಳಬೇಕಾದ ಅಗತ್ಯವಿಲ್ಲ.

ಪುರಂದರದಾಸ ರ ‘ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ’ ಎಂಬ ಭಾವನೆ ಅವರ ಹಲವಾರು ದೋಹಾಗಳಲ್ಲಿ ವ್ಯಕ್ತವಾಗಿದೆ. ಆದರೆ ಗುರುಗಳನ್ನು ಆರಿಸುವಾಗ ಯೋಗ್ಯರನ್ನು ಆರಿಸಬೇಕು ಎಂದು ಎಚ್ಚರಿಕೆ ಕೊಡಲು ಮರೆಯುವುದಿಲ್ಲ.ಭಕ್ತಿ ಭಾವದ ಮಹತ್ವವನ್ನು ಕೂಡ ಹಲವು ದೋಹಾಗಳು ಸಾರುತ್ತವೆ. ವೇಷಧಾರಿ ಭಕ್ತರ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಕುಲದ ಮದವನ್ನು ನಿರಾಕರಿಸುವ ಅವರ ದೋಹಾ: ಊಂಚೇ ಕುಲ ಕಹ ಜನಮಿಯಾ ,ಕರನೀ ಊಂಚನ ಹೋಯಾ,ಕನಕ ಕಲಶ ಮದ ಸೋ ಭರಾ,

ಸಾಧುನ ನಿಂದಾ ಸೋಯಾ,
ಅರ್ಥ: ಯಾರೂ ಉಚ್ಚ ಕುಲದಲ್ಲಿ ಜನ್ಮಪಡೆದ ಮಾತ್ರ ಕ್ಕೆ ದೊಡ್ಡವರು ( ಶ್ರೇಷ್ಠ ) ಆಗುವುದಿಲ್ಲ.ಶ್ರೇಷ್ಠ ರಾಗುವುದು ಅವರವರ ಕರ್ಮದಿಂದ. ಸ್ವರ್ಣ ಕಲಶದಲ್ಲಿ ಮದ್ಯ ತುಂಬಿ ಸಿಟ್ಟರೆ ಅದು ಅಮೃತ ವಾಗುವುದಿಲ್ಲ.ಅದೇ ರೀತಿ ಸಜ್ಜನರ ನಿಂದೆ ಮಾಡಿದವರನ್ನು ಉಚ್ಚ ಕುಲದವರೆಂದು‌‌ ಹೇಳಲು ಬರುವುದಿಲ್ಲ.

ದೇವರನ್ನು ಒಲಿಸಿಕೊಳ್ಳಲು ಉಪವಾಸ ಮಾಡಬೇಕಾದ ಅಗತ್ಯವಿಲ್ಲ ಎನ್ನುವುದನ್ನು ಕಬೀರ್ ಹೇಳುವುದು ಹೀಗೆ:

” ಕಬೀರ ಕ್ಷುದಾ ಹೈ ಕೂಕರಿ,ಕರತ ಭಜತೆ ಮೆ ಭಂಗ, ವಾಕೂ ಟುಕಡಾ ಡಾರಿ ಕೆ, ಸುಮೀರನ ಕರುಂ ಸುರಂಗ . ಅರ್ಥ: ಹಸಿವೆ ಎನ್ನುವುದು ಬೊಗಳುವ ನಾಯಿಯ ಹಾಗೆ, ಅದು ಭಜನೆ ಮಾಡುವಾಗ ವಿಘ್ನ ಉಂಟು ಮಾಡುತ್ತದೆ, ಆದ್ದರಿಂದ ಅದಕ್ಕೆ ರೊಟ್ಟಿಯ ತುಂಡು ನೀಡಿ ಅದನ್ನು ಮೊದಲು ಶಾಂತಗೊಳಿಸು, ಆದ್ದರಿಂದ ರಾಮನ ಸ್ಮರಣೆಯಲ್ಲಿ ಬಾಧೆಯುಂಟಾಗುವುದಿಲ್ಲ. ಅರ್ಥಾತ್‌ ಭಜನೆ ಮಾಡುವಾಗ ಹೊಟ್ಟೆ ತುಂಬಿರುವುದು ಅವಶ್ಯಕವಾಗಿದೆ. ಇದು ‘ ಒಡಲಿಚ್ಚೆಯ ಸಲಿಸದೆ ಕ್ಷಣ ಇರಲಾಗದು’ ಎನ್ನುವ ಅಲ್ಲಮನ ವಚನವನ್ನು ನೆನಪಿಗೆ ತರುತ್ತದೆ.
ಕಬೀರನ ದೇವರು: “ಕಬೀರ ಚೇತಾ ಆತಮ, ತೇತಾ ಸಾಲಿಗ್ರಾಮ, ಬೋಲನಾ ಹಾರಾ ಪೂಜಿಯೆ, ನಹಿ ಪಾವನ ಸೋ ಕಾಮ,”

ಅರ್ಥ: ಈ ಪ್ರಪಂಚದಲ್ಲಿ ಎಷ್ಟು ಜೀವಾತ್ಮ ಅಥವಾ ಪ್ರಾಣಿಗಳಿವೆಯೊ ಅವೇ ಸಾಲಿಗ್ರಾಮ ಪರಮಾತ್ಮನ ರೂಪವಾಗಿವೆ.ಆದ್ದರಿಂದ ಈ ಮಾತನಾಡುವ ಪರಮಾತ್ಮನನ್ನೆ ಪೂಜೆ ಮಾಡಿರಿ.( ಪ್ರಾಣಿ ಮಾತ್ರದ ಸೇವೆ ಮಾಡಿರಿ). ಕಲ್ಲಿಗೆ ಪೂಜೆ ಮಾಡಿ ನಿಮ್ಮ ಕಲ್ಯಾಣ ಆಗಲು ಸಾಧ್ಯವಿಲ್ಲ.

ಕಾಯಕದ ಮಹತ್ವ:ಶ್ರಮ ಹಿ ತೆ ಸಬ್ ಹೋತಾ ಹೈ, ಜೋ ಮನ್ ರಾಖೆ ಧೀರ! ಶ್ರಮ ತೆ ಖೋದತ್ ಕೂಪ ಜ್ಯೋಂ, ಥಲಮೇ ಪ್ರಗಟೈ ನೀರ.

ಅರ್ಥ: ಕಷ್ಟದಿಂದ( ಪಟ್ಟು ಆಗಬೇಕು) ಕೆಲಸ ಮಾಡುವುದರಿಂದ ಅಸಾಧ್ಯವಾದ ಕೆಲಸವನ್ನೂ ಪೂರ್ಣಗೊಳಿಸಬಹುದು.ಬರೇ ಧೈರ್ಯದಿಂದ ತಮ್ಮ ಕೆಲಸವನ್ನು ಮುಂದುವರಿಸಬೇಕು. ಹೇಗೆ ಕಠೋರ ಭೂಮಿಯನ್ನು ಅಗೆದು ಬಾವಿ ತೋಡುವುದರಿಂದ ಒಳಗಿನಿಂದ ಶೀತಲ ವಾದ ಜಲ ಬರುತ್ತದೊ ಅದೆ ರೀತಿ ಕಷ್ಟ ಸಾಧ್ಯ ವಾದ ಕೆಲಸವನ್ನು ಧೀರತನದಿಂದ ಮಾಡಿದರೆ ಉತ್ತಮ ಫಲ ದೊರೆಯುತ್ತದೆ. ಸ್ಥಾವರ ನಿರರ್ಥಕ: ಪಾಹನ ಲೆ ದೇವಲ ಚುನಾ, ಮೋಟಿ ಮೂರುತ ಮಾಂಹಿ! ಪಿಂಡ ಪೂಟಿ ಪರಬಸ ರಹೈ, ಸೋಲೈ ತಾರೈ ಕಾಹಿ!! ಅರ್ಥ: ಕಲ್ಲನ್ನು ನುಣುಪುಗೊಳಿಸಿ ಮಂದಿರ ಕಟ್ಟಿದರು.ಮತ್ತು ಅದರಲ್ಲಿ ಕಲ್ಲಿನದ್ದೆ ಮೂರ್ತಿ ಇಟ್ಟು ಪೂಜಿಸಿದರು.ಸಮಯ ಕಳೆದಂತೆ ಮೂರ್ತಿ ಬಿದ್ದು ತುಂಡಾಗುವುದು. ಅರೆ ಮನುಜಾ, ನೀನು ತನ್ನನ್ನೆ ಸುರಕ್ಷಿತವಾಗಿ ಇಟ್ಟು ಕೊಳ್ಳಲಿಲ್ಲ.ಇನ್ನು ಇತರರನ್ನು ಹೇಗೆ ರಕ್ಷಿಸಿಕೊಳ್ಳಬಲ್ಲೆ. ಇದು ಅಲ್ಲಮನ “ಕಲ್ಲಮೇಲೆ ಕಲ್ಲುಬಿದ್ದು ಲಿಂಗ ಎತ್ತಹೋಯಿತ್ತೋ” ಎನ್ನುವ ವಚನವನ್ನು ನೆನಪಿಗೆ ತರುವಷ್ಟು ಸಶಕ್ತವಾಗಿದೆ.

ಅಲ್ಲಲ್ಲಿ ಅನ್ಯಭಾಷೆಗಳ ಶಬ್ದಗಳನ್ನು ಅರ್ಥದಲ್ಲಿ ಬಳಸಿರುವುದು ಅವುಗಳ ಗ್ರಹಿಕೆಗೆ ತೊಡಕನ್ನು ಉಂಟು ಮಾಡುತ್ತದೆ: ಉದಾಹರಣೆಗೆ: ಮೋತಿ, ಪಾರಸ, ಇತ್ಯಾದಿ ‌ಇವು ಗೌಣ.
ಕನ್ನಡ ಮತ್ತು ಇತರ ಭಾಷೆಗಳಲ್ಲಿ ಪ್ರಕಟವಾದ ಸಂತ ಸಾಹಿತ್ಯವನ್ನು ಅಧ್ಯಯನ ಮಾಡಲು ಈ ಬಗೆಯ ಕೃತಿಗಳು ಪೂರಕ ಸಾಮಗ್ರಿಗಳನ್ನು ಒದಗಿಸುತ್ತವೆ. ಈ ದಿಕ್ಕಿನಲ್ಲಿ ಲೇಖಕರ ಸಾಧನೆ ಗಮನಾರ್ಹ. ಪುಸ್ತಕ ಕಳಿಸಿದ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆ.

ಗೆಳೆಯರಾದ ಡಾ.ಕರುಣಾಕರಶೆಟ್ಟಿಯವರು ಒಳ್ಳೆಯ ಮುನ್ನುಡಿ ಬರೆದಿದ್ದಾರೆ. ನನ್ನ ಶಿಷ್ಯ ಡಾ.ಗಣೇಶ್ ಉಪಾಧ್ಯ ತಮ್ಮ ಅಭಿಜಿತ್ ಪ್ರಕಾಶನದ ಮೂಲಕ ಕೃತಿಯನ್ನು ಪ್ರಕಟಿಸಿದ್ದಾರೆ. ಅವರಿಗೆ ಕೂಡ ಅಭಿನಂದನೆ.


  • ರಘುನಾಥ್ ಕೃಷ್ಣಮಾಚಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading