ನಮ್ಮ ತಂದೆ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾರೆ ದೇವರ ತೀರ್ಥ ಹಾಕಿಸಿ, ಹುಣ್ಣಿಮೆಯ ದಿನ ನನಗೆ ಕೋಪ ಕೆರಳಬಾರದು ಅಂತ, ನನಗ್ಯಾವ ಹುಚ್ಚಿಲ್ಲ, ನೀವೆ ಹೇಳಿ ಕಟ್ಗೊಂಡ ಗಂಡ ಯಾವಳನ್ನೋ ಇಟ್ಕೊಂಡಿದ್ದಾಗ,ಅದನ್ನು ವಿರೋಧಿಸಿದರೆ ನನಗೆ ಹುಚ್ಚಿ ಪಟ್ಟ ಕಟ್ಟಿ ಹೀಗೆ ಮಾಡಿ ಕೂರಿಸಿದಾರೆ ಎಂದಳು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮನಸಿನ ಭ್ರಮೆ, ಅಮಾವಾಸ್ಯೆ ಹುಣ್ಣಿಮೆ’ ತಪ್ಪದೆ ಮುಂದೆ ಓದಿ…
ಒಬ್ಬ ಹೆಂಗಸು ಸುಮಾರು ಮೂವತ್ತೈದು ವರ್ಷವಿರಬಹುದು ಅವಳ ಜೊತೆ ಹೆಚ್ಚು ಕಡಿಮೆ ಅರವತ್ತು ವಯಸ್ಸಿನ ಒಬ್ಬರು ಗಂಡಸರು ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತ್ತಿದ್ದರು. ನಾನು ದೇವರ ದರ್ಶನ ಮುಗಿಸಿಕೊಂಡು ಪ್ರದಕ್ಷಿಣೆ ಹಾಕಿ ಅದೇ ಪ್ರಾಂಗಣದಲ್ಲಿ ಬಂದು ಕುಳಿತೆ. (ನಮ್ಮ ಮನೆ ದೇವರ ದರ್ಶನಕ್ಕೆ ಹೋದಾಗ ನಡೆದ ಘಟನೆ.)
ಆ ಹೆಂಗಸು ಏನೋ ಯೋಚನೆ ಮಾಡುತ್ತಾ ಕುಳಿತ್ತಿದ್ದಳು. ಆ ಗಂಡಸು ನನ್ನ ಮುಖ ನೋಡುತ್ತಾ ಕುಳಿತರು. ಯಾವ ಊರಿನವರು ಎಂದು ಕೇಳಿದೆ. ಇಲ್ಲೇ ಪಕ್ಕದ ಹಳ್ಳಿ, ನಮ್ಮ ಮಗಳು ಇವಳು, ಹುಷಾರಿಲ್ಲ ಅದಕ್ಕೆ ಕರೆದುಕೊಂಡು ಬಂದಿರುವೆ ಎಂದರು. ಇವತ್ತು ಹುಣ್ಣಿಮೆ ಇದೆಯಲ್ಲ ಹಾಗಾಗಿ ಬಂದೆವು ಎಂದರು.
ನಾನು ಅವರ ಮಗಳ ಮುಖ ನೋಡಿದೆ, ಏನೋ ಚಿಂತೆಯಲ್ಲಿ ಇದ್ದಳು. ಏನು ಹುಷಾರಿಲ್ಲ ಎಂದು ಅವರ ತಂದೆಯನ್ನು ಕೇಳಿದಾಗ, ಇತ್ತೀಚೆಗೆ ಪ್ರತಿ ಅಮಾವಾಸ್ಯೆ ಹಾಗು ಹುಣ್ಣಿಮೆಗೆ ವಿಚಿತ್ರವಾಗಿ ಆಡುತ್ತಾಳೆ, ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ, ಕೋಪ, ಅಳು ಹೀಗೆ ಅವಳ ವರ್ತನೆ ಸರಿ ಇರಲ್ಲ ಎಂದರು. ನಾನು ವೈದ್ಯರಿಗೆ ತೋರಿಸಿರುವಿರ ಎಂದು ಕೇಳಿದೆ. ಅದಕ್ಕವರು ಅವಳಿಗೆ ವೈದ್ಯರಿಗೆ ತೋರಿಸಲು ಜ್ವರವಿಲ್ಲ, ಕಾಯಿಲೆ ಇಲ್ಲ ಸುಮ್ನೇ ಏನುಕ್ಕೆ ಎಂದು ಹೇಳಿ ದೇವಸ್ಥಾನದ ಅರ್ಚಕರ ಬಳಿ ಹೋಗಿ ಏನೋ ಮಾತನಾಡಿಕೊಂಡು ನಿಂತರು.
ನಾನು ಆ ಹೆಂಗಸನ್ನು ಮಾತನಾಡಿಸಲು ಶುರುಮಾಡಿದೆ ಆಕೆ ಮಾತನಾಡುತ್ತ, ಯಾವ ಕಾಯಿಲೆ ಇಲ್ಲ ಅಕ್ಕ, ನನ್ನ ಗಂಡ ಸರಿ ಇಲ್ಲ, ಮಗ ಹತ್ತನೆ ತರಗತಿ ಓದುತ್ತಿದ್ದಾನೆ, ಇನ್ನೊಂದು ಮದುವೆ ಮಾಡ್ಕೊತಿನಿ ಅಂತ ಯಾವಳನ್ನೋ ಇಟ್ಕೊಂಡಿದಾನೆ ಎಂದು ಹೇಳಿದಾಗ, ನಿಮ್ಮ ಅತ್ತೆ ಮನೆಯಲ್ಲಿ ಈ ವಿಷಯ ಹೇಳಬೇಕು ಅಲ್ವಾ ಎಂದರೆ, ಹೇಳಿದೀನಿ ಅದಕ್ಕವರು ನಿನ್ನಂಥ ಹುಚ್ಚಿ ಜೊತೆ ಸಂಸಾರ ಮಾಡಿಕೊಂಡು ಅವನು ಇರಬೇಕಾ, ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗು ಎಂದು ಕಳಿಸಿಬಿಟ್ಟರು. ನನಗೆ ನನ್ನ ಮಗ ಬೇಕು ಎಂದು ಕೇಳಿದರೆ, ಕಳಿಸುವುದಿಲ್ಲ ಎಂದರು. ನನಗೆ ಮಗನನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಎಷ್ಟು ಗೋಳಾಡಿದರೂ ಕಳಿಸಲಿಲ್ಲ.

ಫೋಟೋ ಕೃಪೆ :google
ನಾನು ಅಳುವುದು ಕೋಪ ಮಾಡಿಕೊಳ್ಳುವುದು ನೋಡಿ ಹುಚ್ಚು ಹಿಡಿದಿದೆ ಎಂದು ವೈದ್ಯರ ಬಳಿ ಕರೆದುಕೊಂಡು ಹೋದರು ಅವರು ನಿಮ್ಹಾನ್ಸ್ ಗೆ ಕಳಿಸಿ ಅಲ್ಲಿ ವೈದ್ಯರು ನನಗೆ ಮಾತ್ರೆ ಕೊಟ್ಟು ಕಳಿಸಿದರು ಅದನ್ನು ನುಂಗಿದರೆ ನಿದ್ದೆ ಬರುತ್ತೆ ಅಷ್ಟೆ. ನಮ್ಮ ಅಪ್ಪ ನಿಮ್ಮ ಬಳಿ ಏನೂ ಕಾಯಿಲೆ ಇಲ್ಲ ಎಂದು ಹೇಳಿದಾರೆ ಅಷ್ಟೆ. ನಮ್ಮ ಅಪ್ಪ ಅಮ್ಮನಿಗೆ ಹೇಳಿದರೆ ಅವರು ನನ್ನ ಮಾತು ಕೇಳದೆ ಹುಚ್ಚು ನಿನಗೆ ಅದಕ್ಕೆ ಔಷಧಿ ಕೊಡುತ್ತಿರುವುದು ಎಂದು ಹುಚ್ಚಿ ಪಟ್ಟ ಕಟ್ಟಿದಾರೆ ಎಂದು ಗೋಳಾಡಿದಳು. ಅವಳ ಮಾತು ಕೇಳಿ ನಿಜವಾಗಿ ಹುಚ್ಚು ಯಾರಿಗೆ ಅನಿಸಿಬಿಟ್ಟಿತು.
ನಮ್ಮ ತಂದೆ ಇಲ್ಲಿಗೆ ಕರೆದುಕೊಂಡು ಬಂದಿದಾರೆ ದೇವರ ತೀರ್ಥ ಹಾಕಿಸಿ, ಹುಣ್ಣಿಮೆಯ ದಿನ ನನಗೆ ಕೋಪ ಕೆರಳಬಾರದು ಅಂತ, ನನಗ್ಯಾವ ಹುಚ್ಚಿಲ್ಲ, ನೀವೆ ಹೇಳಿ ಕಟ್ಗೊಂಡ ಗಂಡ ಹೀಗೆ ಮಾಡಿದರೆ, ವಿರೋಧಿಸಿದರೆ ನನಗೆ ಹುಚ್ಚಿ ಪಟ್ಟ ಕಟ್ಟಿ ಹೀಗೆ ಮಾಡಿ ಕೂರಿಸಿದಾರೆ ಎಂದಳು.
ಅಷ್ಟರಲ್ಲಿ ಅವಳ ತಂದೆ ಬಂದು ಅವಳನ್ನು ಕರೆದುಕೊಂಡು ಹೋದರು. ನಾನು ಅವಳ ತಂದೆಯ ಬಳಿ ಮಾತನಾಡಲು ಹೋದರೆ ಕೇಳುವ ಪರಿಸ್ಥಿತಿಯಲ್ಲಿ ಅವರಿರಲಿಲ್ಲ…….ಹೊರಟು ಹೋದರು.
ಆಗ ನನ್ನ ಮನಸಿಗೆ ಅನಿಸಿದ್ದು…
ಏನಿದು ಮನಸಿಗೂ ಹುಣ್ಣಿಮೆ ಅಮಾವಾಸ್ಯೆಗೂ ಏನು ಸಂಬಂಧ ಅಂದುಕೊಳ್ಳಬಹುದು. ಈ ಆಧುನಿಕ ಯುಗದಲ್ಲಿಯೂ ಹೀಗೆ ಉಂಟಾ? ಅನಕ್ಷರಸ್ತರು ಆಡುವ ಮಾತ? ವಿಜ್ಞಾನ ಇಷ್ಟೊಂದು ಮುಂದುವರೆದಿದ್ದರೂ ಇದನ್ನು ನಂಬಬೇಕ? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ.
ಮಾನವನ ದೇಹದಲ್ಲಿ ಶೇಕಡ 70 ರಷ್ಟು ನೀರಿನಿಂದ ಕೂಡಿದೆ. ಹುಣ್ಣಿಮೆಯಂದು ಸಾಗರದ ಅಲೆಗಳು ಹೇಗೆ ರಭಸ ಹಾಗು ಎತ್ತರಕ್ಕೆ ಮೂಡಿತ್ತದೋ ಹಾಗೆ ಮಾನವನ ಮನಸ್ಥಿತಿ ಏರುಪೇರಾಗುತ್ತದೆ. ಖಿನ್ನತೆಗೆ ಒಳಗಾದ ಜನರ ಮನಸ್ಥಿತಿ ಹಾಗು ಹಾರ್ಮೋನುಗಳ ವ್ಯತ್ಯಯದಿಂದಾಗಿ ಮನಸು ವಿಕೋಪಗೊಳ್ಳುತ್ತದೆ. ಮನಸ್ಥಿತಿ ಕೆರಳುತ್ತದೆ. ಅಸಮತೋಲನ ಮನಸ್ಸಿನ ಪ್ರಭಾವದಿಂದ ಕೂಗಾಡುವುದು, ಕೋಪಗೊಳ್ಳುವುದು, ಪದಾರ್ಥಗಳನ್ನು ಎಸೆಯುವುದು, ವಿನಾಕಾರಣ ಅಳು, ಅಸಹಜ ನಗು ಹೀಗೆ ಬದಲಾವಣೆ ಆಗುತ್ತದೆ.
ದೇಹದ ಹಾರ್ಮೋನ್ ತೊಂದರೆಗಳಿಂದಲೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಈ ವೇಳೆ ಮನುಷ್ಯನ ಮೆದುಳಿನ ತರಂಗಗಳಲ್ಲಿ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.
ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳು ಕೆಲವು ಜನರಲ್ಲಿ ಅಜ್ಞಾನ, ಭಯ ಮತ್ತು ಕುತೂಹಲವನ್ನು ಹುಟ್ಟಿಸುತ್ತವೆ. ಅನೇಕ ಕಥೆಗಳು, ನಂಬಿಕೆಗಳು ಈ ದಿನಗಳಿಗೆ ಸಂಬಂಧಿಸಿ ಮೂಡಿಬಂದಿರುವುದರಿಂದ, ಮನಸ್ಸು ಅದರ ಪ್ರಭಾವಕ್ಕೆ ಒಳಗಾಗುತ್ತದೆ.
ಜನರು ಬೆಳೆದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯು ಈ ದಿನಗಳಿಗೆ ವಿಶೇಷವಾದ ಭಾವನಾತ್ಮಕ ಪ್ರಭಾವವನ್ನು ಉಂಟುಮಾಡುತ್ತದೆ. ಕೆಲವು ಮಂದಿ ಈ ದಿನಗಳಲ್ಲಿ ಹೆಚ್ಚು ಆತಂಕ, ಚಿಂತೆ ಅಥವಾ ಅಸಹಜ ಮನಸ್ಥತಿ ತೋರಿಸಬಹುದು. ಇಂತಹ ಸಂದರ್ಭದಲ್ಲಿ ಆಪ್ತಸಮಾಲೋಚನೆಯು (counseling) ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಾಲೋಚನೆ ಪ್ರಕ್ರಿಯೆ ಮಾನಸಿಕ ಸ್ಥಿತಿಯನ್ನು ಸುಧಾರಿಸಲು, ಪರಿಹಾರ ಮಾರ್ಗಗಳನ್ನು ಕಂಡುಹಿಡಿಯಲು, ಮತ್ತು ವ್ಯಕ್ತಿಯ ಜೀವನವನ್ನು ಸಮತೋಲನಗೊಳಿಸಲು ಸಹಾಯಕವಾಗಬಹುದು.
ಮೊದಲನೇ ಹಂತದಲ್ಲಿ ಸಮಾಲೋಚಕರಾಗಿರುವವರು ವ್ಯಕ್ತಿಯೊಂದಿಗೆ ವಿಶ್ವಾಸದ ಮತ್ತು ಸುರಕ್ಷಿತ ಬಾಂಧವ್ಯವನ್ನು ನಿರ್ಮಿಸಬೇಕು. ವ್ಯಕ್ತಿ ಮುಕ್ತವಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಬೇಕು.

ಫೋಟೋ ಕೃಪೆ :google
ಅವರ ಸಮಸ್ಯೆಯನ್ನು ಆಸಕ್ತಿಯಿಂದ ಕೇಳುವುದು ಮತ್ತು ಮಧ್ಯದಲ್ಲಿ ಅಡ್ಡಪಡಿಸದೆ ಸಹಾನುಭೂತಿ ತೋರಿಸುವುದು ಮಹತ್ವದಾಗಿದೆ. ವ್ಯಕ್ತಿಯ ಜೀವನಶೈಲಿ, ಹೋರಾಟಗಳು, ಚಿಂತನೆಗಳು, ಮತ್ತು ಭಯಗಳಿಗೆ ಸಂಬಂಧಿಸಿದಂತೆ ಹಳೇ ಅನುಭವಗಳನ್ನು ಗುರುತಿಸಿ ಅವರ ಪರಿಸ್ಥಿತಿಯ ಮೂಲವನ್ನು ಹುಡುಕಬೇಕು.
ಚಿಂತೆ ಮತ್ತು ನಿರಾಶೆಯ ಬಗ್ಗೆ ಧನಾತ್ಮಕ ಚಿಂತನೆಗಳ ಮಹತ್ವವನ್ನು ವಿವರಿಸಬೇಕು. ‘ಇದು ತಾತ್ಕಾಲಿಕ ಮತ್ತು ನಿವಾರಣೆಯಾಗಬಹುದಾದ ಸಮಸ್ಯೆ’ ಎಂಬ ಧೈರ್ಯವನ್ನು ತುಂಬಬೇಕು. ಅವರ ಸಾಮರ್ಥ್ಯವನ್ನು ಗುರುತಿಸಿ, ಅವುಗಳನ್ನು ಬಲಪಡಿಸುವತ್ತ ಕರೆದೊಯ್ಯಬೇಕು. ‘ನೀವು ಇದನ್ನು ಜಯಿಸಬಹುದು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು.
ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಮನಸ್ಸಿನಲ್ಲಿ ಬದಲಾವಣೆ ಕಾಣುವವರಿಗೆ ಪ್ರೀತಿ, ವಿಶ್ವಾಸ, ಧೈರ್ಯ, ಮತ್ತು ಹಿತಕರ ಚಟುವಟಿಕೆಗಳ ಮೂಲಕ ಅವರನ್ನು ಸುಧಾರಿಸಬಹುದು. ಆಧ್ಯಾತ್ಮಿಕತೆ, ಮತ್ತು ಮಾನಸಿಕ ಆರೋಗ್ಯದ ಸಮತೋಲನದ ಮೂಲಕ ಶ್ರೇಷ್ಠ ಜೀವನಶೈಲಿಯನ್ನು ರೂಪಿಸಲು ಸಹಾಯ ಮಾಡಬಹುದು.
ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಮಾನಸಿಕ ಸ್ಥಿತಿ ಕೆರಳುವ ಕಾರಣಕ್ಕೆ ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸಮುದಾಯದ ನಂಬಿಕೆಗಳನ್ನು ಒಳಗೊಂಡ ಹಲವು ಕಾರಣಗಳನ್ನು ಹೇಳಬಹುದು. ಚಂದ್ರನ ಆಕರ್ಷಣೆ ಸಮುದ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೋ ಹಾಗೆ ಕೆಲವರಿಗೆ ಕೆಲವೊಮ್ಮೆ ದೇಹದ ಒಳ ದ್ರವಮಟ್ಟಗಳ (fluid balance) ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ, ಇದು ನರಕೋಶಗಳ ಕ್ರಿಯಾಶೀಲತೆಯನ್ನು ಪ್ರಭಾವಿತ ಮಾಡುತ್ತದೆ ಎಂದು ತಿಳಿ ಹೇಳಬೇಕು. ದೇಹದ ಸಕಲ ಚಕ್ರಗಳು ಚಂದ್ರನ ಚಲನೆಗಳ ಪ್ರಭಾವಕ್ಕೆ ಒಳಗಾಗುತ್ತದೆ. ಇದರಿಂದ ಕೆಲವು ವ್ಯಕ್ತಿಗಳಲ್ಲಿ ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ ಕಂಡುಬರುತ್ತದೆ. ಚಂದ್ರನ ಬೆಳಕು (ಹುಣ್ಣಿಮೆ) ಅಥವಾ ಕತ್ತಲು (ಅಮಾವಾಸ್ಯೆ) ನಿದ್ರೆಯ ಗುಣಮಟ್ಟವನ್ನು ಪ್ರಭಾವಿತಗೊಳಿಸಬಹುದು. ನಿದ್ರೆ ಸರಿಯಾಗದಿದ್ದರೆ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತದೆ.
ಅಮಾವಾಸ್ಯೆ ದಿನದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಕೆಲವರಲ್ಲಿದೆ, ಇದು ಖಿನ್ನತೆಯನ್ನು ಉಂಟುಮಾಡಬಹುದು. ಖಿನ್ನತೆಯಲ್ಲಿ ಇರುವವರು ಚಂದ್ರನ ಚಲನೆಗಳಿಂದ ಉಂಟಾಗುವ ಪರಿಸರ ಬದಲಾವಣೆಗಳಿಗೆ ಹೆಚ್ಚು ಸ್ಪಂದಿಸುತ್ತಾರೆ, ಇದರಿಂದ ಆಂಗ್ಸೆಟಿ (anxiety) ಮತ್ತು ಖಿನ್ನತೆ ಹೆಚ್ಚಾಗುತ್ತದೆ. ಚಂದ್ರನ ಚಲನೆಯ ಸಮಯದಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುವುದು ಸಾಮಾನ್ಯ, ಇದು ಖಿನ್ನತೆಯನ್ನು ಹೆಚ್ಚು ಗಂಭೀರವಾಗಿಸುತ್ತದೆ.
ನಿದ್ರೆ, ಆಹಾರ, ಮತ್ತು ವ್ಯಾಯಾಮದ ನಿಯಮ ಪಾಲನೆ ಮಾಡಿಕೊಳ್ಳಬೇಕು. ಧ್ಯಾನ, ಯೋಗ, ಮತ್ತು ಆಧ್ಯಾತ್ಮ ಚಟುವಟಿಕೆಗಳು ಸಹಾಯಕವಾಗಬಹುದು. ತಜ್ಞರ ಸಲಹೆಯೊಂದಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಉತ್ತಮ ಮಾರ್ಗದರ್ಶನ. ಈ ಸಮಯದಲ್ಲಿ ಕೆಲವರು ಅವಿದ್ಯಾವಂತರು ಅಂತಹ ವ್ಯಕ್ತಿಯನ್ನು ಯಾರೋ ಮಂತ್ರವಾದಿ ಬಳಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರಿಗೆ ಬೇವಿನ ಸೊಪ್ಪಿನಿಂದ ಹೊಡೆದು, ಬಡಿದು ಅವರನ್ನು ಮತ್ತಷ್ಟು ಭಯಗೊಳ್ಳುವಂತೆ ಮಾಡಿ ಮತ್ತಷ್ಟು ಮಾನಸಿಕ ಅಸ್ವಸ್ಥತೆಗೆ ಗುರಿಮಾಡುತ್ತಾರೆ.
ಈ ಅಸಮತೋಲನ ಮಾನಸಿಕ ಬದಲಾವಣೆಗಳು ಕಂಡು ಬಂದಲ್ಲಿ ಕೂಡಲೇ ನುರಿತ ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು. ಅಲ್ಲಿ ಅವರಿಗೆ ಚಿಕಿತ್ಸೆ ಕೊಡುತ್ತಾರೆ ಹಾಗು ಔಷಧೋಪಚಾರ ಮಾಡಲಾಗುತ್ತದೆ.
- ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಮಾನಸ….ಇದು ಮನಸಿನ ಮಾತು (ಭಾಗ-೩೯)
- ಮಾನಸ….ಇದು ಮನಸಿನ ಮಾತು (ಭಾಗ-೪೦)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
