‘ಮನ ಸೆಳೆಯುವ ಮಲ್ಲಿಗೆ’ ಕೃತಿ ಪರಿಚಯ

ಚುಟುಕು ಸಾಹಿತಿ ನಂದಾ ದೀಪ ಅವರ ‘ರಾತ್ರಿ ಸುರಿದ ಮಲ್ಲಿಗೆ’ ಅವರ ಕೃತಿಯ ಕುರಿತು ಲೇಖಕರಾದ ಪದ್ಮನಾಭ.ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ರಾತ್ರಿ ಸುರಿದ ಮಲ್ಲಿಗೆ
ಲೇಖಕರು : ನಂದಾ ದೀಪ
ಪ್ರಕಾರ : ಚುಟುಕು ಸಂಕಲನ

ಚುಟುಕು ಅಥವ ಹನಿಗವನ ಎಂದರೆ ಹಾಸ್ಯಕ್ಕಾಗಿ ಒಂದು ಕೊನೆಯಲ್ಲಿ ಪಂಚ್ ಇರುವ ನಾಲ್ಕು ಸಾಲುಗಳು ಎಂದು ಹಲವರ ಭಾವನೆ. ಇದಕ್ಕೆ ಕಾರಣವೆಂದರೆ ನಾವು ಕೇಳುವ ಬಹುತೇಕ ಚುಟುಕುಗಳು ಹನಿಗವನಗಳು ಅಂತೆಯೇ ಇರುತ್ತವೆ. ಪ್ರೇಯಸಿ ಅಥವ ಪತ್ನಿಯ ಬಗ್ಗೆ ವ್ಯಂಗ್ಯಮಿಶ್ರಿತ ಹಾಸ್ಯದ ಬಗ್ಗೆ ಮೂಡಿರುವ.ಚುಟುಕುಗಳೇ ಹೆಚ್ಚು. ಆದರೆ ನಂದಾದೀಪರವರ ಚುಟುಕುಗಳನ್ನು ನೋಡಿದಾಗ ಹಾಸ್ಯವನ್ನೂ ಮೀರಿ ಮನಸಿಗೆ ನಾಟುವ ಭಾವ ಸೃಷ್ಟಿ ಯಾಗುತ್ತದೆ. ಉದಾಹರಣೆಗೆ ಈ ಚುಟುಕು ನೋಡಿ.

“ಜೀವನದ ಕಂಪನಿಯಲ್ಲಿ ಭಾವಗಳ ಹೂಡಿಕೆ ಮಾಡುವೆ
ನೀ ನನ್ನ ಪಾಲುದಾರನಾಗುವೆಯಾ
ಕಷ್ಟ ಎಂಬ ನಷ್ಟವನ್ನು ಸಮನಾಗಿ ಹಂಚಿಕೊಂಡು
ಪ್ರೀತಿಯ ಲಾಭ ಗಳಿಸುವ”

ತನ್ನ ಪ್ರೇಮವನ್ನು ಪ್ರಕಟ ಪಡಿಸುತ್ತಲೇ ನೀ ನನ್ನ ಪ್ರೇಮವನ್ನು ಒಪ್ಪುವೆಯಾ ಎಂದು ಎಷ್ಟು ನವಿರಾಗಿ ಕೇಳುತ್ತಾರೆ. (ಇಂದಿನ ಪೀಳಿಗೆಯ ಭಾಷೆಯಲ್ಲಿ ಸುಂದರವಾಗಿ ಪ್ರಪೋಸ್ ಮಾಡಿದ್ದಾರೆ.) “ಮನದ ದಾರಿಯಲ್ಲಿ ಸಾಗುವ ಪ್ರೀತಿ ವಾಹನಕೆ ಚಾಲಕ ನೀನು” ಎಂದು ಸಂಗಾತಿಯನ್ನು ಬಣ್ಣಿಸುವ ಕವಿಮನ “ಹೂವು ದಾರ ಸೇರೆ ಹಾರ ಹೀಗಿರಬೇಕು ನಾವು ಬದುಕಪೂರ” ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಹೆಣ್ಣಿನ ಚೆಲುವನ್ನು ಹೂವಿಗೆ ತಾರೆಗೆ ಶಶಿಗೆ ಹೋಲಿಸುವ ಕವನಗಳು ಸರ್ವೇ ಸಾಮಾನ್ಯ. ಇಲ್ಲಿ ಲೇಖಕಿಯ ವಿಶಿಷ್ಟ ಕಲ್ಪನೆ ನೋಡಿ

“ಹೂವುಗಳ ಪ್ರತಿಭಟನೆ
ನಡೆಸಿದ್ದವಂತೆ ದಂಡು ದಂಡು
ಕಾರಣ ಅವಳ ನಗೆಯೇ ಚಂದವೆಂದು
ವರ್ಣಿಸಿದ್ಜರಂತೆ ಕವಿಗಳ ಹಿಂಡು ಹಿಂಡು”

ಕೇವಲ ರಮ್ಯಭಾವದಲ್ಲಿ ಸಂಚರಿಸದೆ ವಿಷಾದ ಭಾವವನ್ನೂ ಗಾಢವಾಗಿ ಅಭಿವ್ಯಕ್ತಿಸಿದ್ದಾರೆ ಎನ್ನಲು ಈ ಚುಟುಕು ನೋಡಿ

“ನಿನ್ನ ತಾತ್ಸಾರವನ್ನೇ ಎದೆಗಿಳಿಸಿಕೊಂಡವಳು ನಾನು
ಮತ್ಯಾವ ನೋವು ತಾಗುವುದಿಲ್ಲ ನೋಡು”
ಗಂಟಲುಬ್ಬಿದಾಗ ಕಣ್ಣೀರನ್ನೇ ಕುಡಿದವಳು ನಾನು
ತುಟಿಯಂಚಿನ ನಗುವಿಗೆ ಬರವಿಲ್ಲ ನೋಡು”.

ಸ್ತ್ರೀ ಸಂವೇದನೆ ಹರಿದಿರುವ ಈ ಚುಟುಕು ನನಗೆ ಬಹಳ ಇಷ್ಟವಾಯಿತು.

“ಬುದ್ಧನಂತೆ ಸಂಸಾರದಿಂದ ಎದ್ದು ಬಂದ ಹೆಣ್ಣು
ಹೊತ್ತುಕೊಂಡಿದ್ದು ಮಾತ್ರ ಅಪಮಾನ ಅವಮಾನದ ಬಿರುದುಗಳನ್ನು”.

ಪುಟಗಟ್ಟಲೆ ಬರೆಯುವ ಲೇಖನಗಳಲ್ಲಿ ಕಾಣಬಹುದಾದ ಸ್ತ್ರೀಸಂವೇದನೆಯ ಭಾವ ನಾಲ್ಕೇ ಸಾಲುಗಳಲ್ಲಿ ಬಹಳ ಮನೋಜ್ಞವಾಗಿ ಮೂಡಿಬಂದಿದೆ. ಹಿರಿಯ ಚುಟುಕುಕವಿಯೊಬ್ಬರು ಹೇಳುವ ಈ ಸಾಲುಗಳನ್ನು ನೋಡಿ.

“ಅವಳು ಚುಟುಕುಶಾರದೆ
ಶಬ್ದ ನೀಡುವಲ್ಲಿ ಜಿಪುಣೆ
ಅರ್ಥ ನೀಡುವಲ್ಲಿ ನಿಪುಣೆ”

ಕೆಲವೇ ಶಬ್ದಗಳಲ್ಲಿ ಹೆಚ್ಚಿನ ಅರ್ಥ ಗಹನವಾದ ಭಾವವನ್ನು ಕೊಡುವುದೇ ಚುಟುಕುಗಳು.. ಇಂತಹ ಹಲವಾರು ಚುಟುಕುಗಳು ಈ ಕೃತಿಯಲ್ಲಿವೆ. ವಿಶೇಷವಾಗಿ ಪ್ರೇಮದ ನವಿರಾದ ಭಾವ, ವಿರಹದ ಗಾಢ ಭಾವ ಬಹುತೇಕ ಎಲ್ಲ ಚುಟುಕುಗಳಲ್ಲೂ ಹರಿದಿದೆ. ಇವುಗಳನ್ನು “ಒಲವ ಮುತ್ತುಗ”, “ರಾತ್ರಿ ಸುರಿದ ಮಲ್ಲಿಗೆ”, ನೆನಪ ನೈದಿಲೆ” ಮತ್ತು “ವಿರಹ ನಿತ್ಯ ಕಲ್ಯಾಣಿ” ಎಂಬ ನಾಲ್ಕು ಭಾಗಗಳಲ್ಲಿ ವಿಂಗಡಿಸಿದ್ದಾರೆ.

ಮಲ್ಲಿಗೆ ಹೂವಿನ. ಗಾತ್ರ ಕಿರಿದಾದರೂ ಅದು ಬೀರುವ ಕಂಪು ಕಿರಿದಲ್ಲ. ಮಲ್ಲಿಗೆಗೆ ಮನಸೋಲದ ರಸಿಕಮನವಿಲ್ಲ. ಲೇಖಕಿಗೆ ಶುಭವಾಗಲಿ. ನಿಮ್ಮ ಸಾಹಿತ್ಯ ಪಯಣ ಹೀಗೆಯೇ ಮುಂದುವರೆಯಲಿ.


  • ಪದ್ಮನಾಭ. ಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW