ಕದಿಯುವ ಮನಸ್ಸು, ಎಲ್ಲಿತ್ತು ಹೇಳು…!! ಕವಿ ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳು, ಮುಂದೆ ಓದಿ…
ಕದಿಯುವ ಮನಸ್ಸು
ಎಲ್ಲಿತ್ತು ಹೇಳು…!!
ಕೋರಿಕೊಂಡಿದ್ದೆ
ಮತ್ತೆ ಮತ್ತೆ ಅಲವತ್ತುಕೊಂಡಿದ್ದೆ..
ಕೊನೆಗೊಮ್ಮೆ ವಾಲಿದ್ದೆ ನೋಡು..
ನೀ ಜೋಂಪಿನಲ್ಲಿ ರೆಪ್ಪೆ ಮುಚ್ಚಿದ್ದೆ
ಮೆಲ್ಲಗೆ ಒಳಹೊಕ್ಕು
ಅಪಹರಿಸಿ ಮರಳಿದ್ದೆ..
ಕಿತ್ತುಕೊಂಡ ನೆಲೆಯಲ್ಲಿ
ತಂತು ಬೇರುಗಳು
ಉಳಿದುಕೊಂಡಿವೆಯೇನೋ! ಇನ್ನೂ !
ನೋವಾಗದದ್ದೀತೇ?
ನಿನಗೆ ನೋವಾದರೆ
ನಾನು ನೆಮ್ಮದಿಯಿಂದ
ಇರಲಾದೀತೆ?
ನೀ ಬೇಡುವುದೂ ಬೇಡ
ನಾನು ಕೊಡುವುದೂ ಬೇಡ
ನನ್ನ ನಿನ್ನದೆನ್ನುವ ಎಲ್ಲ ಭಾವಗಳ
‘ನಮ್ಮವು’ ಆಗಿಸಿ
ಜಂಟಿಯಾಗಿ ಉಳಿದುಬಿಡುವಾ
ಜೀ-ವನದ ತುಂಬ
ವಸಂತ ಉಸಿರಾಡುವ ಹಾಗೆ
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
