ಪ್ರಸಿದ್ಧಿಯನ್ನು ಅರ್ಥೈಸುವ ಬಗೆ – ಕೇಶವ ಮಳಗಿ

ಮೊದಲು ಪ್ರಸಿದ್ಧಿ ಎಂದರೇನು? ಎಂದು ಅರಿಯಬೇಕು. ಕೀರ್ತಿಯನ್ನು ನಿರಾಕರಿಸುವುದೆಂದರೆ, ಚಲನಶೀಲತೆಯನ್ನು, ಯಶಸ್ಸನ್ನು ತ್ಯಜಿಸಿದಂತೆ. ಕೀರ್ತಿಯು ಸಾಪೇಕ್ಷವಾಗಿರುವುದರಿಂದಲೇ ಅದು ದೋಷರಹಿತವೂ, ಪರಿಪೂರ್ಣವೂ ಆಗಿರಲು ಸಾಧ್ಯವಿಲ್ಲ. – ಕೇಶವ ಮಳಗಿ, ಮುಂದೆ ಓದಿ…

* ನಜೀ಼ಬ್‌ ಮೆಹಫೂಸ಼್

ನೀವು ಪ್ರಸಿದ್ಧರೂ, ಕೀರ್ತಿಶಾಲಿಗಳು ಆಗಲು ಬಯಸುತ್ತೀರ? ಹಾಗಿದ್ದರೆ, ಮೊದಲು ಪ್ರಸಿದ್ಧಿ ಎಂದರೇನು? ಎಂದು ಅರಿಯಬೇಕು. ನಿಜವಾದ ಖ್ಯಾತಿ ಪಡೆಯುವುದು ಎಂದರೆ ನಿಮ್ಮ ಕೃತಿಗಳನ್ನು ಓದುಗರು ಸ್ವೀಕರಿಸಿ, ಓದಿ, ಸರಿಯಾಗಿ ಗ್ರಹಿಸಿ, ವಿಶ್ಲೇಷಿಸುವುದು ಎಂದರ್ಥ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಯಾ ರಂಗಗಳಲ್ಲಿ ಪರಿಣಿತರೂ, ತಜ್ಞರು, ಸಂವೇದನಾಶೀಲರೂ ಆದವರಿಂದ ಗೌರವವನ್ನು ಪಡೆಯುವುದೇ ನಿಜವಾದ ಯಶೋವಂತಿಕೆಯಾಗಿದೆ. ಕೀರ್ತಿಯನ್ನು ನಿರಾಕರಿಸುವುದೆಂದರೆ, ಚಲನಶೀಲತೆಯನ್ನು, ಯಶಸ್ಸನ್ನು ತ್ಯಜಿಸಿದಂತೆ.

ಕೀರ್ತಿಯು ಸಾಪೇಕ್ಷವಾಗಿರುವುದರಿಂದಲೇ ಅದು ದೋಷರಹಿತವೂ, ಪರಿಪೂರ್ಣವೂ ಆಗಿರಲು ಸಾಧ್ಯವಿಲ್ಲ. ವಿದ್ವಾಂಸರೊಬ್ಬರ ಪ್ರಸಿದ್ಧಿಯು ತುಂಬ ಪರಿಮಿತಿಗೊಳಪಟ್ಟಿರ ಬಹುದು. ಆದರದೇ, ನಟನೊಬ್ಬ ಲಕ್ಷಾಂತರ ಜನರು ಆರಾಧಿಸಬಲ್ಲಷ್ಟು ಖ್ಯಾತಿಪಡೆದಿರಬಹುದು. ನಟನೊಬ್ಬನ ಕೀರ್ತಿಯೊಂದಿಗೆ ಪಂಡಿತ ತನ್ನ ಖ್ಯಾತಿಯನ್ನು ಹೋಲಿಸಿಕೊಂಡು ಕೊರಗುತ್ತ ಕೂರುವ ಅಗತ್ಯವಿಲ್ಲ. ತಿಳಿದಿರಬೇಕಾದ ವ್ಯತ್ಯಾಸವಿಷ್ಟೇ: ನಟನೋ, ಕಲಾವಿದನೋ, ಇಬ್ಬರೂ ತಮ್ಮ ತಮ್ಮ ರಂಗಗಳಲ್ಲಿ ತಮ್ಮ ಸಾಧನೆಯ ಉತ್ತುಂಗದಲ್ಲಿದ್ದಾರೆಯೋ, ಇಲ್ಲವೋ? ಇದಕ್ಕಾಗಿ ಸಾಮಾನ್ಯ ಜನರನ್ನೂ ದೂರಬೇಕಾದ ಆವಶ್ಯಕತೆಯೂ ಇಲ್ಲ. ತಮ್ಮ ಅಭಿರುಚಿಗೆ ಹೊಂದುವುದನ್ನು ಅವರು ಆಯ್ಕೆ ಮಾಡಿಕೊಂಡಿರುತ್ತಾರೆ. ಮತ್ತು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಾನು ಮೆಚ್ಚುವವರು ಏನು ಸಾಧಿಸುತ್ತಿದ್ದಾರೆ ಎಂದು ನೋಡುತ್ತಿರುತ್ತಾರೆ.

ಸಾರ್ವಜನಿಕರು ತೋರುವ ಈ ಬಗೆಯ ನಿರ್ಮಲ ಪ್ರೀತಿಯನ್ನು ಮೂಢತೆ ಅಥವ ಉಪಕಾರ ಸ್ಮರಣೆಯಿಲ್ಲದ ಶುಷ್ಕ ಕ್ರಿಯೆ ಎಂಬಂತೆ ವ್ಯಾಖ್ಯಾನಿಸಬೇಕಿಲ್ಲ. ಅವರು ವ್ಯಕ್ತಪಡಿಸುತ್ತಿರುವುದೆಲ್ಲ ತಾವು ಇಷ್ಟಪಡುವವರ ಮೇಲೆ ಅಗಾಧವಾದ ಪ್ರೀತಿ-ಅಂತಃಕರಣವನ್ನು. ಅದೂ ಅಲ್ಲದೆ, ಕೀರ್ತಿಯು ಯಾವಾಗಲೂ ಯೋಗ್ಯತೆ ಮತ್ತು ಅರ್ಹತೆಗಳೊಂದಿಗೆ ಸಂಯೋಗಗೊಂಡಿದೆ ಎಂದು ಭಾವಿಸಬೇಕಿಲ್ಲ. ವಿಜ್ಞಾನವು ಮಾನವ ಬದುಕಿನ ಅತ್ಯುಚ್ಛ ಸ್ಥಾನದಲ್ಲಿರಲು ಅಹರ್ನಿಶಿ ಪ್ರಯತ್ನಪಡುತ್ತದೆ. ಸಾಹಸದ ಆ ಹೆಣಗಾಟದಲ್ಲಿ ತೊಡಗಿಕೊಂಡ ಪ್ರಯೋಗಮತಿಗಳು ಯಾವತ್ತೂ ಸಾರ್ವಜನಿಕ ಪ್ರಸಿದ್ಧಿಯ ಬೆಳಕಿನಲ್ಲಿ ಝಗಮಗಿಸದಿರಬಹುದು.

`ನ್ಯಾಯಪರತೆ’ಯನ್ನೇ ತೆಗೆದುಕೊಂಡರೆ ಅದು ತನ್ನನ್ನು ಸಾಕ್ಷಾತ್ಕರಿಸಿಕೊಳ್ಳಲು ತನ್ನದೇ ದಾರಿಯಲ್ಲಿ ಸದಾ ಕಾರ್ಯನಿರತವಾಗಿರುತ್ತದೆ. ತನ್ನ ಸೋಪಜ್ಞತೆ ಹಾಗೂ ಜ್ಞಾನದ ಮೇಲೆ ಅದು ಬೀರುವ ಪ್ರಭಾವಗಳಿಂದ ತಲೆಮಾರುಗಳನ್ನು ಬಡಿದೆಬ್ಬಿಸಬಲ್ಲಷ್ಟು ಅದು ಪರಿಣಾಮಕಾರಿಯಾಗಿರಬಹುದು. ಇದ್ದರೂ ಖ್ಯಾತಿಯ ದೃಷ್ಟಿಯಿಂದ ನೋಡಿದಾಗ ಅದರ ವ್ಯಾಪ್ತಿ ಬಹಳ ಸೀಮಿತವಾಗಿದ್ದಂತೆ ಕಾಣಬಹುದು. ಆದರೆ, ಉಳಿದ ಖ್ಯಾತಿಗಳು ಒಂದು ಜೀವಿತಾವಧಿಯಲ್ಲಿ ಮಸುಕಾಗಿಬಿಡಬಹುದು!.

ನಾನಿದನ್ನು ಬರೆಯುತ್ತಿರುವುದು ಅಪ್ರತಿಮ ಪ್ರತಿಭಾವಂತರಾದ ಕೆಲವು ಪ್ರಸಿದ್ಧ ಕ್ರೀಡಾಪಟುಗಳನ್ನು ಗೌರವಿಸುತ್ತಿರುವುದನ್ನು ಕಂಡು. ಜನರು ಅವರ ಮೇಲೆ ಹರಿಸುತ್ತಿರುವುದೆಲ್ಲ ಅಪ್ಪಟ ಪ್ರೀತಿ ಹಾಗೂ ಅಕ್ಕರೆಯಿಂದ ಹುಟ್ಟಿರುವುದು. ಜನ ಕ್ರೀಡೆ ನೀಡುವ ಬಿಡುಗಡೆಯನ್ನು ಅಪಾರವಾಗಿ ಆನಂದಿಸುತ್ತಾರೆ. ಗೆಲುವು ತಂದಿತ್ತ ಕ್ರೀಡಾಪಟುಗಳಿಗೆ ಗೌರವಪೂರ್ವಕವಾಗಿ ಜನ ನಿಮಗೆ ನಿಷ್ಠರಾಗಿದ್ದಾರೆ ಎಂದು ತಿಳಿಸಬಯಸುತ್ತಾರೆ. ಮತ್ತು ಗೆಲುವನ್ನು ಸಂಭ್ರಮಿಸುತ್ತಾರೆ. ಇಂತಹ ಸಂಭ್ರಮ-ಸಡಗರದಿಂದ ವಿಜ್ಞಾನ-ವಿಜ್ಞಾನಗಳ ಸಾಧನೆಗೆ ಕಿಂಚಿತ್ತಾದರೂ ಕುಂದು ಬರುತ್ತದೆಯೆ, ಅವರಿಗಿರುವ ಬೆಲೆ ಕಡಿಮೆಯಾಗುತ್ತದೆಯೆ? ಖಂಡಿತವಾಗಿಯೂ ಇಲ್ಲ!

(ವರ್ಣಚಿತ್ರ: ಸ್ವಯಂ ಕಲಿಕೆಯಿಂದ ವಿಶ್ವಪ್ರಸಿದ್ಧನಾದ `ವ್ಯಾನ್‌ ಗೋ’ನ ಗೋಧಿ ಹೊಲ ವರ್ಣಚಿತ್ರ)


  • ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW