ಭೂತಾಯಿಯ ಅಳಲು – ಆಶ್ರಿತಾ ಕಿರಣ್ (ಆಕೆ)

ದೊಡ್ಡ ಕಟ್ಟಡಗಳ ಹೆಸರಿನಲ್ಲಿ ನನ್ನಲ್ಲಿ ಆಳವಾಗಿ ಬೇರೂರಿ ಬೆಳೆದ ಮರಗಳನ್ನು ಕತ್ತರಿಸಿ ಹಾಕಿದ್ದೀರಿ. ಮನುಷ್ಯನ ತಪ್ಪಿಗಾಗಿ ನಾನು ಬೆಲೆ ತೆರಬೇಕಾಗಿದೆ. ಎಂದಿಗೆ ಎಚ್ಚೆತ್ತು ನನ್ನನ್ನು ಉಳಿಸಿಕೊಳ್ಳುತೀರಿ…! ಭೂಮಿಯ ಒಡಲ ನೋವಿನ ಕತೆಯಿದು ಆಶ್ರಿತಾ ಕಿರಣ್ (ಆಕೆ) ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಒಂದು ಕಾಲದಲ್ಲಿ ನನ್ನನ್ನು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು ಎಂದರೆ ಅವರು ಕೊಡುತ್ತಿದ್ದ ಪ್ರೀತಿ ಕಾಳಜಿ ವಿಶ್ವಾಸಕ್ಕೆ ಪ್ರತಿಯಾಗಿ ನಾನು ನನ್ನೊಡಲಿನಿಂದ ಪ್ರೀತಿಯ ಧಾರೆಯನ್ನು ಹರಿಸುತ್ತಿದ್ದೆ.. ನಾನೆಂದಿಗೂ ಯಾರಿಗೂ ತೊಂದರೆ ಮಾಡಲು ಬಯಸಿದವಳಲ್ಲ. ನಾನು ನಿಸ್ವಾರ್ಥವಾಗಿ ಸಕಲ ಜೀವರಾಶಿಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದೆ.. ಪ್ರತಿಫಲವಾಗಿ ನಾನು ಏನನ್ನು ಬಯಸುತ್ತಿರಲಿಲ್ಲ .ಏಕೆಂದರೆ ನನ್ನ ಮೇಲೆ ಆ ಕಾಲದವರು ಅಷ್ಟು ಗೌರವವನ್ನು ಇಟ್ಟಿದ್ದರು.. ನಾನು ಸಂತೋಷದಿಂದ ಕಾಲ ಕಾಲಕ್ಕೆ ಬೇಕಾದ್ದು ಪೂರೈಸುತ್ತಿದ್ದೆ.. ಸಮೃದ್ಧಿಯನ್ನು ನೀಡುತ್ತಿದ್ದೆ..

ಪೀಳಿಗೆಯಿಂದ ಪೀಳಿಗೆ ಮುಂದುವರೆಯುತ್ತಿದ್ದಂತೆ ಆಲೋಚನೆ ಬದಲಾಗುತ್ತಾ ಹೋಯಿತು. ಎಲ್ಲರೂ ಅವರವರ ಸ್ವಾರ್ಥಕ್ಕಾಗಿ ಬದುಕನ್ನು ಮುನ್ನಡೆಸಲು ಆರಂಭಿಸಿದಾಗ ನನಗೆ ಬಹಳ ಬೇಸರವಾಗುತ್ತಿತ್ತು. ಆದರೂ ನಾನು ಸುಮ್ಮನೆ ಇರುತ್ತಿದ್ದೆ.. ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ಅದನ್ನು ಉಪಯೋಗಿಸುವ ಪರಿಯನ್ನು ಮರೆತು ಎಲ್ಲೆಂದರಲ್ಲಿ ಎಸೆದು ನನ್ನ ಫಲವತ್ತತೆಯನ್ನು ಕಸಿದುಕೊಂಡರು.. ನನ್ನ ಮೇಲೆ ಬೆಳೆಸಲಾಗುವ ಹಣ್ಣು ತರಕಾರಿ ಹಾಗು ಮರಗಿಡಗಳಿಗೆ ವಿಷ ಗೊಬ್ಬರಗಳನ್ನು ಬಳಸಿ ಬೆಳೆಸಲಾರಂಬಿಸಿದರು‌.ಆ ಉರಿ ಆ ಸಂಕಟ ತಡೆಯಲಾಗದೆ ಒದ್ದಾಡಿದೆ..ಆದರೂ ಮೌನವಾಗಿ ಸಹಿಸಿಕೊಂಡೆ..ಯಾವಾಗ ನನ್ನ ಮೇಲಿನ ಕಾಳಜಿಯನ್ನು ಸಂಪೂರ್ಣವಾಗಿ ಮರೆತರೋ ಅಂದಿಗೆ ನನ್ನ ಸಹನೆಯ ಕಟ್ಟೆ ಒಡೆದು ಹೋಯಿತು.

ಫೋಟೋ ಕೃಪೆ : google

ಈ ಮಾನವರ ಹುಚ್ಚಾಟ ಅತಿಯಾಗುತ್ತಿದೆ ಎಂದನಿಸಿ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದೆ. ಅತಿಯಾದ ಮಳೆಯನ್ನು ಸುರಿಸಿದೆ .ಅಲ್ಲಲ್ಲಿ ಕೆರೆಕಟ್ಟೆಗಳನ್ನು ಒಡೆದು ಎಲ್ಲವನ್ನು ಹಾಳು ಮಾಡುವಂತೆ ವರುಣನಲ್ಲಿ ಕೇಳಿದೆ. ಸುನಾಮಿಯಂತಹ ಅಲೆಗಳನ್ನು ಎಬ್ಬಿಸಿ ಒಂದಿಷ್ಟು ಸ್ವಚ್ಛ ಮಾಡಿದೆ.ಸಮಯದಲ್ಲಿ ನಾನು ರಾಕ್ಷಸಿಯಂತೆ ಕಂಡೆ ಅಲ್ಲವೇ…?

ಹೌದು ನಾನು ರಕ್ಕಸಿಯಾಗಬೇಕಾಯಿತು.. ಶಾಂತವಾಗಿದ್ದ ನನ್ನನು ಕೆರಳಿಸಿದರು.ಬುದ್ಧಿ ಕಲಿಸಲೆಂದು ಒಂದಿಷ್ಟು ಅಮಾಯಕ ಜೀವಿಗಳನ್ನು ಕಸಿದುಕೊಳ್ಳದೆ ನನ್ನ ಬಳಿ ಬೇರೆ ದಾರಿ ಇರಲಿಲ್ಲ.. ಹಾಗಾಗಿ ಪ್ರಕೃತಿಯ ವಿನಾಶಕ್ಕೆ ಹೆಜ್ಜೆ ಇಟ್ಟೆ.ಅದು ಕೇವಲ ಬೆದರಿಸಲು ಮಾಡಿದ ನನ್ನ ತಂತ್ರವಾಗಿತ್ತು.. ಹಾಗಾದರೂ ಎಚ್ಚೆತ್ತುಕೊಳ್ಳಬಹುದೆಂದು ಭಾವಿಸಿದ್ದೆ.. .ಛಲ ಬಿಡದೇ ಬುದ್ಧಿ ಕಲಿಸಿಯೇ ಕಲಿಸುತ್ತೇನೆ ಎಂದು ನಿರ್ಧರಿಸಿ ಅತಿವೃಷ್ಟಿ ಸುರಿಸಿದೆ..ಅನಾವೃಷ್ಟಿಯಿಂದ ಹೆದರಿಸಲು ಪ್ರಯತ್ನಿಸಿದೆ.ಬದಲಗಾಬಹುದು ಎಂದು ಯೋಚಿಸಿದೆ .ಆದರೆ ನಾನಂದುಕೊಂಡಂತೆ ಏನೂ ನಡೆಯಲಿಲ್ಲ

ದಿನ ಕಳೆದಂತೆ ಮಾಲಿನ್ಯಗಳು ಹೆಚ್ಚಾಗುತ್ತಾ ಹೋಯಿತು. ನನ್ನ ಪರಿಸರ ಸಂಪೂರ್ಣವಾಗಿ ಮಾಲಿನ್ಯದಿಂದ ತುಂಬಿ ಹೋಯಿತು.ಇದನ್ನು ತಡೆಗಟ್ಟಲು ಮಹಾಮಾರಿ ಕಾಯಿಲೆಗಳನ್ನು ಸೃಷ್ಟಿಸಿದೆ.ಆದರೂ ಮಾನವ ಜನಾಂಗ ಎಚ್ಚೆತ್ತುಕೊಳ್ಳದೆ ಹೋಯಿತು. ಇನ್ನು ಬೇರೆ ದಾರಿ ಕಾಣದೆ ಬರಗಾಲದ ಛಾಯೆಯನ್ನು ಸೃಷ್ಟಿಸಿದೆ.ಈ ಮಾನವರು ಮಾಡಿದ ಪಾಪಕ್ಕಾಗಿ ಅಮಾಯಕ ಪ್ರಾಣಿ ಪಕ್ಷಿಗಳನ್ನು ಬಲಿಪಡೆಯಬೇಕಾಯಿತು.. ಏನು ಮಾಡಲಿ ತಾಯಿಯಾಗಿ ತಪ್ಪು ದಾರಿಗೆ ಹೆಜ್ಜೆ ಇಡುತ್ತಿರುವ ನನ್ನ ಮಕ್ಕಳನ್ನು ಸರಿಪಡಿಸಬೇಕಾದದ್ದು ನನ್ನ ಕರ್ತವ್ಯವನಿಸಿ ಗಟ್ಟಿ ಮನಸ್ಸು ಮಾಡಿ ನಾಶ ಮಾಡುವ ನಾಟಕ ಮಾಡಲು ನಿರ್ಧರಿಸಿದೆ ಆಗಲು ಏನೋ ಬದಲಾಗಲಿಲ್ಲ.

ಫೋಟೋ ಕೃಪೆ : google

ದೊಡ್ಡ ದೊಡ್ಡ ಕಟ್ಟಡಗಳ ಹೆಸರಿನಲ್ಲಿ ನನ್ನಲ್ಲಿ ಆಳವಾಗಿ ಬೇರೂರಿ ಬೆಳೆದ ಮರಗಳನ್ನು ಕತ್ತರಿಸಿ ಹಾಕಿದರು. ನೀರಿನ ಬಳಕೆ ಹೆಚ್ಚಾಗುತ್ತಿದ್ದಂತೆ ಹರಿಯುವ ಹೊಳೆ, ಕಾಲುವೆಗಳ ನೀರು ಸಾಕಾಗದೆ ಬೋರ್ವೆಲ್ ಹೆಸರಿನಲ್ಲಿ ಅಂತರ್ಜಲಕ್ಕೆ ಲಗ್ಗೆ ಇಟ್ಟರು.. ದೊಡ್ಡ ದೊಡ್ಡ ಮಿಶನ್ ಗಳಿಂದ ನಾನು ಸಂರಕ್ಷಿಸಿ ಇಟ್ಟಿದ್ದ ನೀರನ್ನು ತಲುಪಿ ಸಂಪೂರ್ಣವಾಗಿ ಹೀರಿದರು..

ಪ್ರಕೃತಿಯಲ್ಲಿನ ಮಾಲಿನ್ಯದಿಂದ ಬೇಸರಗೊಂಡಿರುವ ವರುಣರಾಜ ಮಳೆ ಸುರಿಸಲು ನಿರಾಕರಿಸಿದ್ದಾನೆ.. ನಾನು ನೀರಿಲ್ಲದೆ ಬಳಲಿದ್ದೇನೆ..ನನ್ನಲ್ಲಿಯೇ ನೀರಿಲ್ಲದೆ ನನ್ನನ್ನು ನಂಬಿರುವ ಸಕಲ ಜೀವರಾಶಿಗಳನ್ನು ನಾ ಹೇಗೆ ತಣಿಸಲಿ? ಪ್ರತಿ ಬಾರಿ ನಾನು ಎಚ್ಚರಿಕೆ ಕೊಟ್ಟಾಗ ಅರಿತು ಹೆಜ್ಜೆ ಇಟ್ಟಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ.. ನಿಮ್ಮ ತಪ್ಪಿಗಾಗಿ ನಾನು ಬೆಲೆ ತೆರಬೇಕಾಗಿದೆ. ನನಗೂ ಎಲ್ಲವನ್ನು ಸಹಿಸಿ ಸಾಕಾಗಿದೆ..ಎಂದಿಗೆ ಎಚ್ಚೆತ್ತು ನನ್ನನು ಉಳಿಸಿಕೊಳ್ಳುತೀರಿ…!


  • ಆಶ್ರಿತಾ ಕಿರಣ್ (ಆಕೆ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading