ಲೋಲಾರ್ಕ್ ಕುಂಡ್

ವಾರಣಾಸಿ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ದರ್ಶನ ಪಡೆಯಲು ವಿಶ್ವನಾಥ ಮಂದಿರ ಮಾತ್ರವಲ್ಲದೆ ಇನ್ನೂ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಇಲ್ಲಿರುವ ಹಲವಾರು ಪವಿತ್ರ ಕುಂಡಗಳಲ್ಲಿ ಈ #ಲೋಲಾರ್ಕ್_ಕುಂಡ್ ಕೂಡಾ ಒಂದು. ಇದೊಂದು ಪ್ರಾಚೀನ ನೀರಿನ ಕೊಳವಾಗಿದ್ದು, ಅಸಿ ಮತ್ತು ಗಂಗಾ ನದಿಗಳ ಸಂಗಮಕ್ಕೆ ಹತ್ತಿರದಲ್ಲಿದೆ. ಇದರ ನೀರಿನ ಮೂಲ ಗಂಗಾ ನದಿ. ವಸಂತ ಗಣೇಶ್ ಅವರು ಲೋಲಾರ್ಕ್ ಕುಂಡ್ ದ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಲೋಲಾರ್ಕ್ ಕುಂಡದ ಹಿಂದಿನ ಕಥೆ:

ಪುರಾಣಗಳ ಪ್ರಕಕಾರ ಸೂರ್ಯ ದೇವನು ಇಲ್ಲಿ ನೂರಾರು ವರ್ಷಗಳ ಕಾಲ ತಪಸ್ಸು ಮಾಡಿ ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಅದನ್ನು ಲೋಲಕೇಶ್ವರ ಮಹಾದೇವ ಎಂದು ಕರೆಯಲಾಗುತ್ತದೆ. ಜೊತೆಗೆ ಇಲ್ಲಿ ಸೂರ್ಯನ ರಥದ ಚಕ್ರವು ಬೀಳುತ್ತದೆ, ಹಾಗಾಗಿ ಈ ಕೊಳವು ರೂಪುಗೊಂಡಿತು ಎನ್ನುವ ಕಥೆಗೂ ಚಾಲ್ತಿಯಲ್ಲಿದೆ.
ಇದು ಇರುವುದು ಉತ್ತರ ಪ್ರದೇಶದ ಪ್ರಾಚೀನ ನಗರವಾದ ಬನಾರಸ್‌ನಲ್ಲಿರುವ ತುಳಸಿಘಾಟ್ ಬಳಿ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ, ಇದು ಬಹಳ ಪ್ರಾಚೀನವಾದುದು ಮತ್ತು ಈ ಕೊಳದ ಉಲ್ಲೇಖವು ಮಹಾಭಾರತದಲ್ಲಿಯೂ ಕಂಡುಬರುತ್ತದೆ .

ನಂತರದ ದಿನಗಳಲ್ಲಿ ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಈ ಕೊಳದ ಬದಿಗಳಲ್ಲಿ ಕಲ್ಲುಗಳಿಂದ ಮೆಟ್ಟಿಲುಗಳನ್ನು ನಿರ್ಮಿಸಿದರು. ಮೂರು ಕಡೆಯಿಂದ ಮೆಟ್ಟಿಲುಗಳು ಕುಂಡಕ್ಕೆ ಇಳಿಯುವಂತಿದೆ. ನಾಲ್ಕನೇ ಭಾಗದಲ್ಲಿ, ಕುಂಡವು ಉದ್ದವಾದ, ಕಮಾನಿನ ಬಾವಿಯ ಆಕಾರವನ್ನು ಹೊಂದಿದ್ದು, ಇದು ಪೂರ್ವ ದಿಕ್ಕಿಗೆ ಗಂಗಾನದಿಯ ಕಡೆಗೆ ಇದೆ.

ಇಲ್ಲಿ ದೊರೆತಿರುವ ಎರಡು ತಾಮ್ರ ಶಾಸನಗಳ ಪ್ರಕಾರ ಗೋಹಡವಾಲ ರಾಜರು ಇಲ್ಲಿ ಸ್ನಾನಮಾಡಿದ್ದರು ಹಾಗೂ ಇಲ್ಲಿಗೆ ದತ್ತಿಗಳನ್ನು ಸಲ್ಲಿಸಿದ್ದನ್ನು ತಿಳಿಸುತ್ತವೆ. (ಗೊಹಡವಾಲಾ ರಾಜವಂಶವು 1089 – 1197 AD ವರೆಗೆ ಆಳ್ವಿಕೆ ನಡೆಸಿತು.

ಇದರ ಸಮೀಪದಲ್ಲಿ ಲೋಲಕೇಶ್ವರನ ದೇವಾಲಯವಿದೆ. ಈ ದೇವಾಲಯ ಸೂರ್ಯನಿಗೆ ಸಮರ್ಪಿತವಾಗಿದೆ. ಇಲ್ಲಿ ಲೋಲಾರ್ಕ ಪಷ್ಠಿ ಅಥವಾ ಸೂರ್ಯ ಷಷ್ಠಿಯ ದಿನದಂದು ಅಂದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಆರನೇ ದಿನ (ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ) ಜಾತ್ರೆ ನಡೆಯುತ್ತದೆ. ಆ ಸಮಯದಲ್ಲಿ ಕಾಶಿಯ ಈ ಲೋಲಾರ್ಕ್ ಕೊಳದಲ್ಲಿ ಸ್ನಾನ ಮಾಡಲು ಸಹಸ್ರಾರು ಜನರು ಸೇರುತ್ತಾರೆ. ಇಲ್ಲಿ ಮಕ್ಕಳಿಲ್ಲದ ದಂಪತಿಗಳು ಸ್ನಾನವನ್ನು ಮಾಡಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆಯಿದೆ. ಅಂದು ಇಲ್ಲಿ ಸ್ನಾನ ಮಾಡಿದರೆ ಸೂರ್ಯ ದೇವನು ಮಕ್ಕಳನ್ನು ಅನುಗ್ರಹಿಸುತ್ತಾನೆ ಎನ್ನುವುದು ಇಲ್ಲಿನ ಪ್ರತೀತಿ. ಇಲ್ಲಿ ಮೂರು ಬಾರಿ ಮುಳುಗು ಹಾಕಿದ ನಂತರ ತಮ್ಮ ಇಷ್ಟದ ಒಂದು ಹಣ್ಣನ್ನು ಇಲ್ಲಿ ಅರ್ಪಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿ ಆಗುವವರೆಗೆ ಮತ್ತೆ ಆ ಹಣ್ಣನ್ನು ಅವರು ತಿನ್ನುವಂತಿಲ್ಲ. ತಮ್ಮ ಇಷ್ಟಾರ್ಥ ಸಿದ್ದಿಸಿದ ನಂತರ ಮಕ್ಕಳೊಂದಿಗೆ ಬಂದು ಹರಕೆ ತೀರಿಸುತ್ತಾರಂತೆ. ಹಾಗೆ ಹರಕೆ ಸಲ್ಲಿಸುವ ಭಕ್ತರು ಚಿನ್ನಾಭರಣಗಳನ್ನು ಕೊಳಕ್ಕೆ ಎಸೆಯುತ್ತಾರಂತೆ.

ಸುಮಾರು 1000 ವರ್ಷಗಳ ಹಿಂದಿನದು ಎನ್ನಲಾಗಿರುವ ಲೋಲಾರ್ಕ್ ಕುಂಡ್‌ನ ಮೂಲವು ಅದಕ್ಕಿಂತ ಬಹಳ ಹಿಂದಿನದು ಮತ್ತು ವಾರಣಾಸಿಯ ಅತ್ಯಂತ ಹಳೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಸಾಧ್ಯತೆಯೂ ಇದೆ. ಲೋಲಾರ್ಕ್ ಕುಂಡದ ಮಾಹಿತಿ ಸ್ಕಂದ ಪುರಾಣದ ಕಾಶಿ ಖಂಡದಲ್ಲಿದೆ ಎನ್ನಲಾಗುತ್ತದೆ.

ಶತಮಾನಗಳಿಂದಲೂ ನಗರ ಅಭಿವೃದ್ಧಿ ಹೊಂದಿದರೂ ಲೋಲಾರ್ಕ್ ಕುಂಡ್ ಹಾಗೆಯೇ ಉಳಿದುಕೊಂಡಿದೆ. ತುಳಸಿ ಘಾಟ್‌ನಿಂದ ಕೇವಲ 5 ನಿಮಿಷಗಳ ನಡಿಗೆಯ ದೂರಲ್ಲಿರುವ ಇದು ನಗರದ ಎಲ್ಲಾ ಪವಿತ್ರ ಸ್ಥಳಗಳಲ್ಲಿ ಅತ್ಯಂತ ಹಳೆಯದಾದುದು ಮತ್ತು ಈ ಸ್ಮಾರಕವನ್ನು ನೋಡಲು ಬಹಳಷ್ಟು ಜನರು ಬರುತ್ತಾರೆ.


  • ವಸಂತ ಗಣೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading