ಪುರಾತನ ಇತಿಹಾಸವಿರುವ ಗಂಡು ಕಲೆಯಾದ ಯಕ್ಷಗಾನವನ್ನು ಮನೆ ಮನಗಳಿಗೆ ತಲುಪಿಸುವ ಪ್ರಯತ್ನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಈ ಚಿಕ್ಕಮೇಳವು ಮಾಡುತ್ತಿದೆ.ಇದರಿಂದಾಗಿ ಅಳಿವಿನ ಅಂಚಿನಲ್ಲಿರುವ ಯಕ್ಷಗಾನದ ಕಲೆ,ಸಂಸ್ಕೃತಿಯು ಉಳಿಯುತ್ತದೆ, ಬಾಲು ದೇರಾಜೆ ಅವರು ಬರೆದ ಲೇಖನವನ್ನು ತಪ್ಪದೆ ಓದಿ…
ಪ್ರಾಚೀನ ಕಾಲದಿಂದಲೂ ಕಲಾಪರಂಪರೆಗಳಲ್ಲಿ ಯಕ್ಷಗಾನಕ್ಕೆ ವಿಶಿಷ್ಟ ಸ್ಥಾನ. ಆ ಕಾಲದಲ್ಲಿಯೇ ಚಿಕ್ಕ ತಂಡದವರ ಚಿಕ್ಕಮೇಳ ಇತ್ತೆಂಬ ಮಾತಿದೆ. ಕಾಲಬದಲಾದಂತೆ ಈ ಕಾಲ ಘಟ್ಟದಲ್ಲಿ ಅಳಿಯುತ್ತಿರುವ ಗಂಡುಕಲೆಯಾದ ಯಕ್ಷಗಾನ ಸಂಸ್ಕೃತಿಯನ್ನು ಪುನರುಜ್ಜೀವನ ಗೊಳಿಸಬೇಕೆಂದು ಆತ್ಮ ವಿಶ್ವಾಸ ದಿಂದ ಕಾರ್ಯರೂಪೇನ ಮನೆ – ಮನಗಳಿಗೆ ತಲುಪಿಸಬೇಕೆನ್ನುವ ಆಶಯ ಹೊಂದಿರುವ ಚಿಕ್ಕಮೇಳ ,ಮನೆ-ಮನ ಯಕ್ಷಗಾನ ತಂಡವಾದ “ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ(ರಿ) ಶ್ರೀ ದೇವಿ ನಿಲಯ ಅಂಗ್ರಿ ಕನ್ಯಾನ” ಇದರ ಅಧ್ಯಕ್ಷರು ಶ್ರೀ ಜಗದೀಶ್ ಕನ್ಯಾನ , ಸಂಚಾಲಕರು ಶ್ರೀ ಸುಬ್ರಹ್ಮಣ್ಯ ಭಟ್ ದೇವಸ್ಯ, ಹಾಗೂ ಶ್ರೀ ಮಿಥುನ್ ಸೋನ ಆಮಂತ್ರಣ ವಿತಕರಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಈ ಚಿಕ್ಕಮೇಳವು ಕಳೆದ 6 ವರ್ಷಗಳಿಂದ 4 ತಂಡಗಳಾಗಿ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ಮೊದಲಾದ ತಾಲೂಕುಗಳ ಮನೆಗಳಿಗೆ ಹೋಗಿ ತಮ್ಮ ಜಗಮಗಿಸುವ ವೇಷಭೂಷಣಗಳು ,ವಾಕ್ ಚಾತುರ್ಯಗಳಲ್ಲದೆ ,ನಾಟ್ಯಾಭಿನಯಗಳ ಜೊತೆಗೆ ಉತ್ತಮ ಹಿಮ್ಮೇಳದೊಂದಿಗೆ ಮನೆಯ ಜನರ ಮನದಲ್ಲಿ ಉಳಿಯುವಂತೆ ಯಕ್ಷಗಾನದ ಹಲವು ಕಥಾ ಪ್ರಸಂಗಗಳನ್ನು ಆಯ್ದುಕೊಂಡು, ಪ್ರದರ್ಶನವನ್ನು ನೀಡಿ ಹಲವಾರು ಕಡೆಗಳಿಂದ ಪ್ರಶಂಸೆಗೊಳಗಾಗಿ ಜನ ಮನ್ನಣೆ ಗಳಿಸಿ ,ಸಂಗ್ರಹವಾದ ಮೊತ್ತದಲ್ಲಿ ಕಲಾವಿದರ ಸಂಬಳ ,ಖರ್ಚು ವೆಚ್ಚಗಳನ್ನು ಕಳೆದು ಉಳಿದ ಹಣವನ್ನು ಅಜೀರ್ಣಾವಸ್ಥೆಯಲ್ಲಿರುವ ದೇವಾಲಯ, ಮಂದಿರ ,ಅಂಗವಿಕಲರಿಗೆ, ಅಲ್ಲದೆ ಅನಾರೋಗ್ಯ ಪೀಡಿತರಿಗೆ, ಇತರ ಅಶಕ್ತರಿಗೆ ದಾನ ಹಾಗೂ ಸಹಕಾರ ನೀಡುತ್ತಿರುವ ಚಿಕ್ಕಮೇಳಕ್ಕೆ ಚೊಕ್ಕವಾಗಿ ತನು,ಮನ ,ಧನಗಳನ್ನು ನೀಡಿ, ಪುರಾತನ ಇತಿಹಾಸವಿರುವ ಗಂಡುಕಲೆಯಾದ ಯಕ್ಷಗಾನವನ್ನು ಮನೆ ಮನಗಳಿಗೆ ತಲುಪಿಸಲು ಸಾಧನೆಯ ದಾರಿಯಲ್ಲಿ ಹೊರಟ ಈ ಸಾಧಕರಿಗೆ ಸಾವಿರ- ಸಾವಿರ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದಾಗಿ ಯಕ್ಷಗಾನದ ಕಲೆ,ಸಂಸ್ಕೃತಿಯ ಉಳಿವು ಅಳಿವಿನ ಅಂಚಿನಿಂದ , ಉಳಿವು, ಬೆಳೆಯುವ ಅಂಚನ್ನು ದಾಟುವುದರಲ್ಲಿ ಸಂಶಯವಿಲ್ಲ…
ಇತ್ತೀಚಿನ ದಿನಗಳಲ್ಲಿ ಈ ಚಿಕ್ಕಮೇಳದ ಸುಳ್ಯ ತಾಲೂಕಿನ 1 ತಂಡ ನಮ್ಮ ದೇರಾಜೆ ಸುತ್ತಮುತ್ತ ಯಕ್ಷಗಾನ ಪ್ರದರ್ಶನವನ್ನು ನೀಡಿತ್ತು. ಸಾಮಾನ್ಯವಾಗಿ ಸಂಜೆ ಗಂಟೆ 6 ರಿಂದ ರಾತ್ರಿ 11 ಗಂಟೆಯ ಒಳಗಾಗಿ ಕಲಾಸೇವೆಗಾಗಿ ತಂಡದ ಜೊತೆಯಲ್ಲಿ ಶ್ರೀ ದೇವಿಯ ಪ್ರತಿಷ್ಟಾ ಮೂರ್ತಿ ಇದ್ದು ,ಮನೆಯ ಅಂಗಳದಲ್ಲಿ ಕುಣಿಯುವ ಸಂಪ್ರದಾಯವಿಲ್ಲದೆ,ಎದುರಿನ ಚಾವಡಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ,ದಿವಸದಲ್ಲಿ 10-12 ಮನೆಗಳಲ್ಲಿ ಕಲಾಸೇವೆ ನಡೆಯುತ್ತದೆ.
ಕಳೆದ ದಿನಾಂಕ 12-09-2022ಸೋಮವಾರದಂದು ಈ ತಂಡವು ಹಲವು ಮನೆಗಳಿಗೆ ತೆರಳಿ ಬಂದ ನಂತರ ನಮ್ಮ ಮನೆಯಲ್ಲಿ ನಡೆದ ಆ ದಿವಸದ ಕೊನೆಯ ಪ್ರದರ್ಶನವಾಗಿತ್ತು. ನಮ್ಮ ಅಪೇಕ್ಷೆ ಮೇರೆಗೆ ಸುಮಾರು 1 ಗಂಟೆಗಳ ಕಾಲಾವಧಿಯಲ್ಲಿ ಉತ್ತಮ ಮಾತು, ನಾಟ್ಯಾಭಿನಯಗಳಿಂದ ಕೂಡಿದ ಕಾರ್ಯಕ್ರಮ. ಅಲ್ಲದೆ ಆ ದಿವಸ ಹಿಮ್ಮೇಳದಲ್ಲಿ ಗುತ್ತಿಗಾರಿನ ದೇವಸ್ಯ ಮನೆಯ ಸಹೋದರರು ಪಾಲ್ಗೊಂಡದ್ದು ವಿಶೇಷವಾಗಿತ್ತು. ಆರಂಭದಲ್ಲಿ ಶ್ರೀ ದೇವಿಯ ಜೊತೆಯಲ್ಲಿ ಶ್ರೀ ಗಣಪತಿ ದೇವರಿಗೆ ಸ್ವಸ್ತಿಕವಿರಿಸಿ ,ದೀಪ ಬೆಳಗುವುದರ ಮೂಲಕ ಆರಂಭಗೊಂಡ ಕಾರ್ಯಕ್ರಮವು ಮುಂದುವರಿದು ಕೊನೆಗೆ ಶ್ರೀ ದೇವಿಗೆ ಮಂಗಳಾರತಿಯೊಂದಿಗೆ ,ಮಂಗಳಕರವಾಗಿ, ಆ ದಿವಸ ಇಲ್ಲಿ ನಡೆದ ನರಕಾಸುರ ವಧೆ ಕಥಾ ಭಾಗವಾಗಿದ್ದು ಕೃಷ್ಣನಾಗಿ ಶ್ರೀ ದುಷ್ಯಂತ ದೇರಾಜೆ, ಸತ್ಯಭಾಮೆಯಾಗಿ ಶ್ರೀ ಮಿಥುಲ್ ಕುಮಾರ್ ಪಂಜ, ಭಾಗವಹಿಸಿ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗೋಪಾಲಕೃಷ್ಣ ಭಟ್ ದೇವಸ್ಯ, ಮದ್ದಳೆ ಹಾಗೂ ಚೆಂಡೆವಾದನದಲ್ಲಿ , ಶ್ರೀ ಗಳಾದ ಬಾಲಸುಬ್ರಹ್ಮಣ್ಯ ಭಟ್ ಹಾಗೂ ವೆಂಕಟೇಶ್ ಭಟ್ ದೇವಸ್ಯ ನಡೆಸಿಕೊಟ್ಟುದಲ್ಲದೆ ಶ್ರೀ ಗಳಾದ ಮಿಥುನ್ ಕುಮಾರ್ ಸೋನ,ಕಾರ್ತಿಕ ದೇರಾಜೆ
ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದು, ಈ ತಂಡಕ್ಕೆ ಸಾರಥಿಯಾಗಿ (ಜೀಪು) ಶ್ರೀ ಚಂದ್ರಶೇಖರ ಕಾನಾವು ರವರು ವಹಿಸಿಕೊಂಡು ಜೊತೆಗೂಡಿದ್ದಾರೆ.
ಆ ದಿನದ ಕಾರ್ಯಕ್ರಮ ರಾತ್ರಿ ಭೋಜನ ಕೂಟದ ಜೊತೆಯಲ್ಲಿ ಸೌಹಾರ್ದಯುತ ಮಾತುಕತೆಗಳೊಂದಿಗೆ ಮುಕ್ತಾಯವಾಗಿ ಮರಳಿ ಬಿಡದಿಯತ್ತ ತೆರಳಿದರು.
ಯಕ್ಷಗಾನದ ಕಲಾಪರಂಪರೆಗೆ
ದೇರಾಜೆಯ “ದೇಸೀ” ಪರಂಪರೆ…..
- ಬಾಲು ದೇರಾಜೆ, ಸುಳ್ಯ